ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಅವರ ಕಾಲದ ಸಮಾಜೋಧಾರ್ಮಿಕ ಸ್ಥಿತಿಯೊಂದಿಗೆ ಅರ್ಥೈಸಿಕೊಳ್ಳಬೇಕು

ಮೂರನೇ ಕಣ್ಣು : ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಅವರ ಕಾಲದ ಸಮಾಜೋಧಾರ್ಮಿಕ ಸ್ಥಿತಿಯೊಂದಿಗೆ ಅರ್ಥೈಸಿಕೊಳ್ಳಬೇಕು : ಮುಕ್ಕಣ್ಣ ಕರಿಗಾರ

‘ ಬಸವೋಪನಿಷತ್ತು’ ಲೇಖನ ಮಾಲೆಯನ್ನು ಪ್ರತಿದಿನವೂ ಓದಿ,ಆನಂದಿಸಿ,ಪ್ರತಿಕ್ರಿಯಿಸುತ್ತಿರುವ ಹಿರಿಯ ಕವಿ,ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮಹಾಂತೇಶ ಮಲ್ಲನಗೌಡರ ಅವರು ಇಂದು ಒಂದು ಮಹತ್ವದ ಪ್ರಶ್ನೆಯನ್ನು ಎತ್ತಿದ್ದಾರೆ –‘ …ಲೋಕದಲ್ಲಿ ಹಲವಾರು ದೇವರು ಹಾಗೂ ಅವುಗಳ ಆರಾಧಕರು ಇದ್ದಾರೆ.ಎಲ್ಲರನ್ನೂ ಗೌರವಿಸುವುದು ನಮ್ಮ ಕರ್ತವ್ಯ ಅಲ್ಲವೇ ಸರ್ ? ಬಹು ಮೌಲಿಕವಾದ,ಪ್ರಸ್ತುತ ದಿನಮಾನಗಳ ವಿದ್ಯಮಾನವಿಪರೀತಗಳ ಬಗ್ಗೆ ಬೆಳಕು ಚೆಲ್ಲುವ ಪ್ರಶ್ನೆಯನ್ನು ಕೇಳಿದ್ದಾರೆ ಹಿರಿಯಚೇತನ ಡಾ.ಮಹಾಂತೇಶ ಮಲ್ಲನಗೌಡರ ಅವರು.

‌ ಫೆಬ್ರುವರಿ ೧೯ ರಂದು ನಾನು ಬರೆದ ‘ ಎನಿಸುಕಾಲ ಕಲ್ಲು ನೀರೊಳಗಿರ್ದರೇನು ,ನೆನೆದು ಮೃದುವಾಗಬಲ್ಲುದೆ ? ‘ ಎನ್ನುವ ಬಸವ ವಚನ ವ್ಯಾಖ್ಯಾನದಲ್ಲಿ ‘ ಮನದಲ್ಲಿ ದೃಢವಿಲ್ಲದನ್ನಕ್ಕ? ಎನ್ನುವ ವಚನವಾಕ್ಯದ ದೃಢಭಕ್ತಿ ಕುರಿತಾದ ನನ್ನ ವಿವರಣೆಯು ಅವರಲ್ಲಿ ಸಂದೇಹವನ್ನುಂಟು ಮಾಡಿದೆ.ಶಿವನಲ್ಲದೆ ಅನ್ಯ ದೇವರು ದೈವಗಳಿಗೆ ತಲೆಬಾಗದ,ಬದುಕಿದರೂ ಸತ್ತರೂ ಶಿವನಲ್ಲಿಯೇ ಗಟ್ಟಿಭಕ್ತಿಯನ್ನಿಡುವುದೇ ದೃಢಭಕ್ತಿ ಎನಿಸಿಕೊಳ್ಳುವುದು’ ಎಂದು ನಾನು ವ್ಯಾಖ್ಯಾನಿಸಿದ್ದೆ.ಬಸವಣ್ಣನವರ ಭಾವನೆಯೂ ಅದೇ ಆಗಿತ್ತು ಎನ್ನುವುದನ್ನು ಇಂತಹ ಹಲವಾರು ವಚನಗಳನ್ನು ಹಾಡಿರುವ ಬಸವಣ್ಣನವರ ಶಿವಪಾರಮ್ಯವನ್ನು ಪ್ರತಿಷ್ಠಾಪಿಸಲೆತ್ನಿಸಿದ್ದ ಇಂದಿನ ನಮಗೆ ಮತಾವೇಶವಾಗಿ ಕಾಣಬಹುದಾದ ಬಸವಣ್ಣನವರ ಮುಗ್ಧಶಿವಭಕ್ತಿಯ ಸಾಕಷ್ಟು ವಚನಗಳನ್ನು ಓದಿರುವೆನಾದ್ದರಿಂದ ಈ ಅರ್ಥ ಗ್ರಹಿಸಿಕೊಳ್ಳಲು ಸಾಧ್ಯವಾಗಿದೆ.ಈ ವಿವರಣ ಲೇಖನಕ್ಕೆ ಪೂರಕವಾಗಿ ಒಂದು ಸ್ವಾರಸ್ಯಕರ ಸಂಗತಿಯನ್ನು ಪ್ರಸ್ತಾಪಿಸುವುದೊಳಿತು.ಬಸವಣ್ಣನವರ ಬಗ್ಗೆ ಗೌರವ ಉಳ್ಳ ಆದರೆ ಬಾಯ್ಮಾತಿನ ಬಸವಾಭಿಮಾನಿಗಳ ಬಗ್ಗೆ ತಿರಸ್ಕಾರ ಭಾವನೆಯನ್ನು ಹೊಂದಿರುವ ವೀರಶೈವ ಪರಂಪರೆಯ ಸ್ವಾಮೀಜಿಗಳೊಬ್ಬರು ‘ ನಿಜವಾಗಿಯೂ ಬಸವಣ್ಣನವರು ಇಷ್ಟೊಂದು ಶಿವಪರವಾದ ವಚನಗಳನ್ನು ರಚಿಸಿದ್ದಾರೆಯೆ ? ಎಂದು ಆಶ್ಚರ್ಯಗೊಂಡು ಮೆಸೇಜ್ ಮಾಡಿದ್ದಾರೆ.ಆ ಸ್ವಾಮೀಜಿಯವರ ಕುತೂಹಲ ಮತ್ತು ಡಾ.ಮಹಾಂತೇಶ ಮಲ್ಲನಗೌಡರ ಅವರ ಸಂದೇಹ —ಬಸವಣ್ಣನವರ ವಚನಗಳ ಪರಿಪೂರ್ಣ ಪರಿಚಯ ನಮ್ಮ ನಾಡಿನಲ್ಲಿ ನಡೆದಿಲ್ಲ — ಎನ್ನುವ ಒಂದು ವಾಸ್ತವದತ್ತ ನಮ್ಮ ಗಮನಸೆಳೆಯುತ್ತದೆ.ಕರ್ನಾಟಕ ಸರಕಾರವು ಇತ್ತೀಚಿನ ವರ್ಷಗಳಲ್ಲಿ ವಚನಸಾಹಿತ್ಯವನ್ನು ಸಂಪುಟಗಳಲ್ಲಿ ಮುದ್ರಿಸಿ,ಪ್ರಕಟಿಸಿರುವ ಸಾರ್ಥಕಕಾರ್ಯ ಮಾಡಿದೆಯಲ್ಲದೆ ಹತ್ತಿಪ್ಪತ್ತು ವರ್ಷಗಳ ಹಿಂದೆ ಬಸವಣ್ಣನವರ ಸಮಗ್ರ ವಚನಗಳು ಓದಲು ಸಾಧ್ಯವಿರಲಿಲ್ಲ.ವೀರಶೈವ ಲಿಂಗಾಯತ ಮಠ ಪೀಠಗಳವರು ಪ್ರಕಟಿಸಿದ್ದ ಬಸವಣ್ಣನವರ ವಚನಗಳೇ ‘ಬಸವಣ್ಣನವರ ವಚನಗಳು’ ಎನ್ನುವ ಭಾವನೆ ಇತ್ತು. ಮಠ ಪೀಠಗಳ ಸ್ವಾಮಿಗಳು ಅವರ ಪರಂಪರೆಗೆ ಒಗ್ಗುವ ,ಬಸವಣ್ಣ ಜಂಗಮ ಭಕ್ತ ಎನ್ನುವುದನ್ನೇ ಸಾರುವ ಕೆಲವು ವಚನಗಳನ್ನಷ್ಟೇ ಪ್ರಕಟಿಸಿದ್ದರು.ಧಾರವಾಡ,ಹುಬ್ಬಳ್ಳಿ ಮತ್ತು ಗದಗಗಳಲ್ಲಿ ಪ್ರಕಟಗೊಂಡಿರುವ ಇಂತಹ ಪುಸ್ತಕಗಳನ್ನು ನಾನು ಓದಿದ್ದೇನೆ. ಇಂತಹ ಪುಸ್ತಕಗಳಲ್ಲಿ ಬಸವಣ್ಣನವರ ಇನ್ನೂರೈವತ್ತು ಮುನ್ನೂರು ವಚನಗಳಷ್ಟೇ ಇರುತ್ತವೆ.ಇವುಗಳಷ್ಟೇ ಬಸವಣ್ಣನವರ ವಚನಗಳು ಎಂಬ ಭಾವನೆಗೆ ಒಳಗಾದರೆ ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ.ಬಸವಣ್ಣನವರು ‘ ಮಾದಾರ ಚೆನ್ನಯ್ಯ ನನ್ನ ತಂದೆ,ಡೋಹಾರ ಕಕ್ಕಯ್ಯ ಚಿಕ್ಕಪ್ಪ ‘ ಆನು ಕಾಳಿದಾಸನ ಕುಲದವನು ‘ ಎಂದು ರಚಿಸಿರುವ ಇವೇ ಮೊದಲಾದ ವಚನಗಳು ವೀರಶೈವ ಲಿಂಗಾಯತ ಮಠಗಳು ಪ್ರಕಟಿಸಿರುವ ಬಸವಣ್ಣನವರ ವಚನಗಳ ಪುಸ್ತಕಗಳಲ್ಲಿ ಇಲ್ಲ ! ಹಾಗೆಂದು ಈ ವಚನಗಳನ್ನು ಬಸವಣ್ಣನವರು ಬರೆದಿಲ್ಲ ಎನ್ನಲಾದೀತೆ ? ವೀರಶೈವ ಮಠ ಪೀಠಗಳ ಸ್ವಾಮಿಗಳು ತಮಗೆ ಎಷ್ಟುಬೇಕೋ ಅಷ್ಟು ಬಸವಣ್ಣನವರ ವಚನಗಳನ್ನು ಪ್ರಕಟಿಸಿದರು.ನನಗೆ ಸಂದೇಶ ಕಳಿಸಿದ ಸ್ವಾಮಿಗಳು ಕೂಡ ಅಂತಹ ಮಠಪರಂಪರೆಗಳಲ್ಲಿ ಪ್ರಕಟಗೊಂಡ ಬಸವಣ್ಣನವರ ವಚನಗಳು ಪುಸ್ತಕವನ್ನು ಓದಿದವರು.’ ಸರ್ವಪುರಾತನರ ವಚನಕಟ್ಟುಗಳು’ ಸೇರಿದಂತೆ ಹಲವು ತಾಳೆಯೋಲೆ ಗ್ರಂಥಗಳನ್ನು ಪರಿಶೀಲಿಸಿ ವಚನಸಂಪಾದಕರುಗಳು ಬಸವಣ್ಣನವರ ಸಮಗ್ರವಚನಗಳನ್ನು ಹೊರತಂದಿದ್ದಾರೆ.ನಾನು ‘ಬಸವೋಪನಿಷತ್ತಿ’ ನ ಆಧಾರವಾಗಿ ತೆಗೆದುಕೊಂಡಿರುವ ಪ್ರೊ.ಬಸವನಾಳ ಶಿವಲಿಂಗಪ್ಪನವರು ಸಂಪಾದಿಸಿರುವ ‘ ಬಸವಣ್ಣನವರ ಷಟ್ ಸ್ಥಳದ ವಚನಗಳು’ ಕೃತಿಯಲ್ಲಿ ಬಸವಣ್ಣನವರ 961 ವಚನಗಳಿವೆ.ಬಸವಲಿಂಗಪ್ಪನವರು ಹೆಚ್ಚಿಗೆ ದೊರೆತ ವಚನಗಳು ಎಂದು ಕೆಲವು ಕಾವ್ಯ ಕೃತಿಗಳಿಂದಾಯ್ದ ವಚನಗಳನ್ನು ಕೊಟ್ಟಿರುವರಾದರೂ ಬಸವಣ್ಣನವರ ಮೂಲ ವಚನಗಳ ಭಾಷೆಗೂ ಹೆಚ್ಚಿಗೆ ದೊರೆತ ವಚನಗಳ ಭಾಷೆಗೂ ವ್ಯತ್ಯಾಸ ಇರುವುದರಿಂದ ನಾನು ಹೆಚ್ಚಿಗೆ ದೊರೆತ ಬಸವಣ್ಣನವರ ವಚನಗಳು ಪ್ರಮಾಣ ಎಂದು ಸ್ವೀಕರಿಸಿಲ್ಲ.

ವೀರಶೈವ ಲಿಂಗಾಯತ ಮಠಗಳ ಸ್ವಾಮಿಗಳು ಪ್ರಕಟಿಸಿದ ಬಸವಣ್ಣನವರ ವಚನಗಳ ಕಥೆ ಒಂದು ತೆರನಾದರೆ ಬಸವಾನುಯಾಯಿಗಳು,ಬಸವಾಭಿಮಾನಿಗಳು ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಗಳು,ಸಂಸ್ಥೆಗಳು ಪ್ರಕಟಿಸಿರುವ,ಪ್ರಕಟಿಸುತ್ತಿರುವ ಬಸವಣ್ಣನವರ ವಚನಗಳ ಕಥೆ ಮತ್ತೊಂದು ತೆರನಾದುದು.ಬಸವಣ್ಣನವರನ್ನು ‘ ಲಿಂಗಾಯತ ಧರ್ಮಸ್ಥಾಪಕ’ರನ್ನಾಗಿ ನೊಡ ಹೊರಟವರು ಬಸವಣ್ಣನವರ ವಚನಗಳಲ್ಲಿರುವ ಶಿವಪರ ವಚನಗಳನ್ನು ತೆಗೆದು ಕೇವಲ ಲಿಂಗಪರ ವಚನಗಳನ್ನು ಮುದ್ರಿಸಿ ಬಸವಣ್ಣನವರ ಕೆಲವು ಪ್ರಸಿದ್ಧ ವಚನಗಳನ್ನು ಸೇರಿಸಿ ಬಸವಣ್ಣನವರ ವಚನಗಳನ್ನು ಪ್ರಕಟಿಸಿದ್ದಾರೆ.ಲಿಂಗಾಯತ ಸ್ವತಂತ್ರ ಧರ್ಮಸ್ಥಾಪನೆಗಾಗಿ ಹೋರಾಡುತ್ತಿರುವ ಕೆಲವರು ಆಡುತ್ತಿರುವ ” ನಾವು ಶಿವನನ್ನು ಪೂಜಿಸುವುದಿಲ್ಲ,ಶಿವನು ವೈದಿಕರ ದೇವರು’ ಎನ್ನುವ ಅಜ್ಞಾನದ ಪರಾಕಾಷ್ಠೆಯ ಮಾತುಗಳಿಗೆ ಪ್ರೇರಣೆಯಾದದ್ದು ಬಸವಾಭಿಮಾನಿಗಳು ಪ್ರಕಟಿಸಿರುವ ಇಂಥಹ ಬಸವಣ್ಣನವರ ನೂರಿನ್ನೂರು ವಚನಗಳನ್ನುಳ್ಳ ಪುಸ್ತಕಗಳು.ಬಸವಣ್ಣನವರೇ ತಮ್ಮ ವಚನಗಳಲ್ಲಿ ತಾವು ಶಿವಭಕ್ತರೆಂದೂ ‘ಏಳೇಳು ಜನ್ಮಗಳಲ್ಲಿ ಶಿವಭಕ್ತನಾಗಿ ಹುಟ್ಟಿ ಬರದಿರ್ದರೆ ನಿಮ್ಮಾಣೆ,ನಿಮ್ಮ‌ಪ್ರಮಥರಾಣೆ’ ಎಂದು ಘೋಷಿಸಿಕೊಂಡಿರುವುರಲ್ಲದೆ ಬಸವಣ್ಣ ಎನ್ನುವುದು ತಮ್ಮ ಏಳನೆಯ ಅವತಾರವೆಂದು ತಮ್ಮ ಭವಭವಾಂತರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಬಸವಣ್ಣನವರನ್ನು ಹತ್ತಿರದಿಂದ ಕಂಡುಬಲ್ಲ ಅಲ್ಲಮಪ್ರಭುದೇವರು,ಚೆನ್ನಬಸವಣ್ಣ,ಅಕ್ಕಮಹಾದೇವಿ,ಸಿದ್ಧರಾಮ,ಮಡಿವಾಳ ಮಾಚಿದೇವ ಮೊದಲಾದ ವಚನಕಾರರು ಬಸವಣ್ಣನವರು ಶಿವಭಕ್ತರು,ಶಿವಧರ್ಮಸ್ಥಾಪನೆಗಾಗಿ ಅವತರಿಸಿದ ‘ಶಿವಕಾರಣ ಸಂಭವರು’ ಎನ್ನುವುದನ್ನು ಹೇಳಿದ್ದಾರೆ ಅವರ ವಚನಗಳಲ್ಲಿ.ಇಂತಹ ಸತ್ಯ ಸಂಗತಿಗಳು ಬಸವಾಭಿಮಾನಿಗಳು ಪ್ರಕಟಿಸಿರುವ ‘ ಲಿಂಗಮತಾಭಿಮಾನ’ ದ ಪುಸ್ತಕಗಳಲ್ಲಿ ಕಾಣಸಿಗದ ಸಂಗತಿಗಳು.ವೀರಶೈವ ಮಠಗಳು ಪ್ರಕಟಿಸಿದ ಪುಸ್ತಕಗಳಲ್ಲಿ ‘ ಜಂಗಮಪ್ರೇಮಿ ಬಸವಣ್ಣ’ ನನ್ನು ಕಂಡರೆ ಲಿಂಗಾಯತಧರ್ಮ ಸ್ಥಾಪನೆ ಮಾಡುವವರ ಪುಸ್ತಕಗಳಲ್ಲಿ ‘ ಲಿಂಗಪ್ರೇಮಿ ಬಸವಣ್ಣ’ ನವರನ್ನು ಮಾತ್ರ ಕಾಣಬಹುದು.ಇವರೆಡೂ ಅಪಕ್ವ,ಅಪೂರ್ಣ ಮತ್ತು ಅಪಸವ್ಯಗಳೆಂದೇ ನಾನು ಬಸವಣ್ಣನವರ ಸಮಗ್ರವಚನಗಳಿಂದ ವಚನಗಳನ್ನೆತ್ತಿಕೊಂಡು ‘ ಬಸವೋಪನಿಷತ್ತು’ ಬರೆಯುತ್ತಿದ್ದೇನೆ.

‌‌‌ ಹಿರಿಯ ಕವಿ ಡಾ.ಮಹಾಂತೇಶ ಮಲ್ಲನಗೌಡರು ಬಸವಣ್ಣನವರ ಸಮಗ್ರ ವಚನಗಳನ್ನು ಓದಿಲ್ಲವಾದ್ದರಿಂದ ಬಸವಣ್ಣನವರ ವ್ಯಕ್ತಿತ್ವದ ಪೂರ್ಣಪರಿಚಯ ಅವರಿಗೆ ಆಗಿಲ್ಲ.ಬಸವಣ್ಣನವರು‌ ವಿಶ್ವಮಾನವರು,ಮಹಾನ್ ಮಾನವತಾವಾದಿಗಳು ಎನ್ನುವುದು ಎಷ್ಟು ನಿಜವೋ ಅವರು ಶಿವಸರ್ವೋತ್ತಮ ತತ್ತ್ವಪ್ರತಿಪಾದನೆಯ ಒಬ್ಬ ಶೈವಮತಾವೇಶದ ಅಪ್ಪಟ ಶಿವಭಕ್ತರಾಗಿದ್ದರು ಎನ್ನುವುದೂ ಅಷ್ಟೇ ನಿಜ.ಬಸವಣ್ಣನವರು ಶಿವಸರ್ವೋತ್ತಮ ತತ್ತ್ವ ಎತ್ತಿ ಹಿಡಿಯಬೇಕಾಗಿದ್ದರಿಂದ ಇತರ ದೇವ ದೇವಿಯರನ್ನು ಟೀಕಿಸುವುದು ಅನಿವಾರ್ಯವಾಗಿತ್ತು.ಬಸವಣ್ಣನವರ ಅತ್ಯುತ್ತಮ ವಚನಗಳನ್ನು ಓದಿರುವವರಿಗೆ ಬಸವಣ್ಣನವರು ವಿಷ್ಣು,ಕೇಶವ,ನಾರಾಯಣ,ಇಂದ್ರ ಮೊದಲಾದ ದೇವರುಗಳನ್ನು ಅತ್ಯಂತ ಕಟುವಾದ ಶಬ್ದಗಳಲ್ಲಿ ನಿಂದಿಸಿದ್ದಾರೆ ಎಂದರೆ ಆಶ್ಚರ್ಯವಾಗಬಹುದು.ವೇದದ ಪ್ರಾಮಾಣ್ಯವನ್ನು ಕಟುವಾಗಿ ಕೆಡೆನುಡಿಯುವ ಬಸವಣ್ಣನವರು ಶಿವನೇ ಗಾಯತ್ರಿ ಮಂತ್ರಾರ್ಥ ಮತ್ತು ತತ್ತ್ವ ಎಂದು ಹೇಳಿರುವುದನ್ನು ಎಷ್ಟು ಜನ ಬಲ್ಲರು ?ಬಸವಣ್ಣನವರು ಅನ್ಯಮತ ಧರ್ಮಗಳ ದೇವರನ್ನು ಟೀಕಿಸಿದ್ದಾರೆ ಎಂದ ಮಾತ್ರಕ್ಕೆ ಅವರ ಮಹೋನ್ನತ ವ್ಯಕ್ತಿತ್ವಕ್ಕೆ ಕುಂದೇನೂ ಆಗದು.ಜಗತ್ತಿನ ಎಲ್ಲ ಮಹಾಪುರುಷರುಗಳು,ಮತಸ್ಥಾಪಕರುಗಳ ಪ್ರಾರಂಭಿಕ ಜೀವನದಲ್ಲಿ ಸಹಜವೆ ಈ ಮತಾವೇಶ.ಅದಕ್ಕೆ ಬುದ್ಧನೂ ಹೊರತಲ್ಲ,ಏಸು ಕ್ರಿಸ್ತನೂ ಹೊರತಲ್ಲ,ಮಹಮ್ಮದ ಪೈಗಂಬರರು ಹೊರತಲ್ಲ.

ಪ್ರಬುದ್ಧ ಸಂವಿಧಾನದ ಜಾತ್ಯಾತೀತ ಭಾರತದಲ್ಲಿ ಬದುಕುತ್ತಿರುವ ನಮಗೆ ಸರ್ವಧರ್ಮಸಮನ್ವಯಭಾವವು ಅನಿವಾರ್ಯ,ಅಗತ್ಯ.ಆದರೆ ಜಗತ್ತಿನ ಎಲ್ಲಿಯೂ ಯಾವ ರಾಷ್ಟ್ರದಲ್ಲಿಯೂ ನಿಜವಾದ ಜಾತ್ಯಾತೀತ ತತ್ತ್ವವು ಅನುಷ್ಠಾನಗೊಳ್ಳುತ್ತಿಲ್ಲ ಎನ್ನುವುದು ವಾಸ್ತವವೆ ! ನಮ್ಮ ಕಾಲದ ರಾಜಕೀಯ ದೃಷ್ಟಿಕೋನವನ್ನಿಟ್ಟುಕೊಂಡು ನಾವು ಬಸವಣ್ಣನವರನ್ನು ಅರ್ಥೈಸಲು ಪ್ರಯತ್ನಿಸಬಾರದು ; ಬಸವಣ್ಣನವರನ್ನು ಅವರ ಸಮಕಾಲೀನ ಸಾಮಾಜಿಕ,ಧಾರ್ಮಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು.ಬಸವಣ್ಣನವರ ಆಗಮನ ಪೂರ್ವದಲ್ಲಿ ನಾಸ್ತಿಕಮತಗಳೆನ್ನಿಸಿದ್ದ ಜೈನ ಬೌದ್ಧ ಧರ್ಮಗಳ ಪ್ರಾಬಲ್ಯವಿತ್ತು.ಶೈವರಲ್ಲಿಯೇ ಕಾಪಾಲಿಕರು,ಕಾಳಾಮುಖರು,ಅಘೋರಿಗಳು,ಭೈರವೋಪಾಸಕರು ಎನ್ನುವ ಹತ್ತು ಹಲವು ಬಗೆಯ ಶೈವಗಳಿದ್ದವು.ಮಾರಿ ಮಸಣಿಯರಂತಹ ಕ್ಷುದ್ರದೈವಗಳ ಹೆಸರಿನಲ್ಲಿ ಅಮಾನುಷ ಆಚರಣೆಗಳು ನಡೆಯುತ್ತಿದ್ದವು.ಆದರ್ಶ ಸಮಾಜ ಒಂದನ್ನು ಕಟ್ಟಬಯಸಿದ್ದ ಬಸವಣ್ಣನವರಿಗೆ ಸಮಾಜಕ್ಕೆ ಅಂಟಿದ್ದ ಇಂತಹ ಪಿಡುಗಳನ್ನು ತೊಡೆದು ಹಾಕುವುದು ಅನಿವಾರ್ಯವಾಗಿತ್ತು.ಹಾಗಾಗಿ ಆರೋಗ್ಯವಂತ ಸಮಾಜವನ್ನು ಅವರು ‘ ಶಿವಸಮಾಜ’ ಎಂದರು,ಸರ್ವೋದಯ ಕಲ್ಪನೆಯನ್ನು ‘ ಕಲ್ಯಾಣ’ ‘ ದಾಸೋಹ’ ಎಂದರು.ಬಸವಣ್ಣನವರು ‘ ಸರ್ವಜೀವದಯಾಪರಿಗಳು ಆಗಿದ್ದರೂ ಶಿವಭಕ್ತರಲ್ಲದವರುಗಳನ್ನು ‘ ಭವಿಗಳು’ ಎಂದು ನಿಂದಿಸುತ್ತಿದ್ದರು.ಬಸವಣ್ಣನವರು ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದ ಮಹಾಮಹಿಮರು,ಧೀಮಂತರು ಎನ್ನುವುದು ನಿಜವಾದರೂ ಬಸವಣ್ಣನವರ ಆ ಕರ್ತಾರನು ಪರಶಿವನು ಮತ್ತು ಆ ಕಮ್ಮಟವು ಕೈಲಾಸವೇ ಆಗಿತ್ತು ಎನ್ನುವುದನ್ನು ಅರ್ಥೈಸಿಕೊಂಡರೆ ಸಂದೇಹಕ್ಕೆ ಆಸ್ಪದವಿಲ್ಲ.

ಜಾತ್ಯಾತೀತ ಭಾರತದಲ್ಲಿ ಬದುಕುತ್ತಿರುವ ನಾವು ಸರ್ವಧರ್ಮಸಹಿಷ್ಣುಗಳಾಗಿರಬೇಕು.ಶಿವಭಕ್ತರು ಶಿವನನ್ನು ,ಲಿಂಗವನ್ನು ಪರಮಪ್ರಮಾಣವೆಂದು ಒಪ್ಪಿಇತರ ದೇವದೇವತೆಗಳು ಶಿವನ,ಲಿಂಗದ ವಿಭೂತಿಗಳು ಎಂದು ತಿಳಿದುಕೊಳ್ಳಬಹುದು.ನಮ್ಮ ಮಹಾಶೈವ ಧರ್ಮಪೀಠವು ಶಿವಸರ್ವೋತ್ತಮ ತತ್ತ್ವವನ್ನು ಪ್ರತಿಪಾದಿಸುವ ಧಾರ್ಮಿಕ ಕೇಂದ್ರವೇ ಆಗಿದ್ದರೂ ನಮ್ಮ ಮಠಕ್ಕೆ ಬ್ರಾಹ್ಮಣರೂ ಬರುತ್ತಾರೆ ಮುಸ್ಲಿಮರೂ ಬರುತ್ತಾರೆ,ಹಿಂದುಳಿದ ಸಮುದಾಯಗಳ ಜನರೂ ಬರುತ್ತಾರೆ,ದಲಿತರೂ ಬರುತ್ತಾರೆ.ನಾವು ಯಾರಲ್ಲಿಯೂ ಭೇದವನ್ನೆಣಿಸದೆ ಸರ್ವರಲ್ಲಿಯೂ ಶಿವನನ್ನೇ ಕಾಣುತ್ತವೆ.ನಮ್ಮ ಶಿವ ಸರ್ವೋತ್ತಮ ತತ್ತ್ವಕ್ಕೆ ಧಕ್ಕೆ ಬಾರದಂತೆ ಅವರವರ ಮತಾಚಾರಣೆಗಳನ್ನು ಗೌರವಿಸುತ್ತೇವೆ.ವಿಶ್ವೇಶ್ವರ ಶಿವನಲ್ಲಿ ಸಮಸ್ಯೆಗಳ ಪರಿಹಾರ ಕೇಳಬರುವ ವೈಷ್ಣವರು,ಮಾಧ್ವರುಗಳಿಗೆ ನಾವು ‘ ನರಸಿಂಹ’ ಮಹಾಲಕ್ಷ್ಮೀ ಮೊದಲಾದ ದೇವರುಗಳ ಪೂಜೆ ಉಪಾಸನೆಯನ್ನು ಹೇಳುತ್ತೇವೆಯೇ ಹೊರತು ಶಿವನನ್ನೇ ಪೂಜಿಸಿ ಎನ್ನುವುದಿಲ್ಲ.ಮುಸ್ಲಿಂ ಸಮುದಾಯದ ಭಕ್ತರುಗಳಿಗೆ ಅವರ ಕುಲದೇವರಿಗೆ ನಡೆದುಕೊಳ್ಳಿ,ಐದು ಜನ ಫಕೀರರಿಗೆ ಉಣ್ಣಿಸಿ ಎನ್ನುತ್ತೇವೆಯೇ ಹೊರತು ನಮ್ಮ ಶಿವನನ್ನು ಪೂಜಿಸಿ ಎನ್ನುವುದಿಲ್ಲ.ವಿಶ್ವೇಶ್ವರ ಶಿವನನ್ನು ಪರಮಾತ್ಮ,ಪರಬ್ರಹ್ಮ ವಿಶ್ವನಿಯಾಮಕ ಎಂದು ನಂಬಿರುವ ನಾವು ಇತರ ಮತ ಧರ್ಮಗಳ ದೇವ ದೇವಿಯರುಗಳನ್ನು ಆ ವಿಶ್ವೇಶ್ವರ ಶಿವನ ವಿಭೂತಿಗಳು,ಪ್ರತಿನಿಧಿಗಳು ಎಂದು ತಿಳಿದು,ಗೌರವಿಸುತ್ತೇವೆ.ಸಾಕಲ್ಲವೆ ಈ ಧರ್ಮ ಸಮನ್ವಯ ಭಾವ ?

೧೯.೦೨.೨೦೨೪

About The Author