ಶಿವಪಥಕ್ಕೆ ಗುರುಪಥವೇ ಮೂಲ 

ಬಸವೋಪನಿಷತ್ತು ೨೬ : ಶಿವಪಥಕ್ಕೆ ಗುರುಪಥವೇ ಮೂಲ : ಮುಕ್ಕಣ್ಣ ಕರಿಗಾರ

ಮಡಕೆಯ ಮಾಡುವರೆ ಮಣ್ಣೇ ಮೊದಲು ;
ತೊಡುಗೆಯ ಮಾಡುವರೆ ಹೊನ್ನೇ ಮೊದಲು ;
ಶಿವಪಥವನರಿವರೆ ಗುರುಪಥವೇ ಮೊದಲು ;
ಕೂಡಲ ಸಂಗಮದೇವರನರಿವರೆ ಶರಣರ ಸಂಗವೇ ಮೊದಲು.

ಬಸವಣ್ಣನವರು ಶರಣರ ಸಂಗದ ಮಹತ್ವವನ್ನು ತಿಳಿಸುತ್ತ ಈ ವಚನದಲ್ಲಿ ಗುರುಮಹಿಮೆಯನ್ನು ಪ್ರತಿಪಾದಿಸಿದ್ದಾರೆ.ಶಿವನ ಅನುಗ್ರಹವನ್ನು ಪಡೆಯಬೇಕಾದರೆ ಮೊದಲು ಗುರುವಾನುಗ್ರಹವನ್ನು ಪಡೆಯಬೇಕು ಎನ್ನುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ.ಕುಂಬಾರನು ಮಡಕೆ ಕುಡಿಕೆ,ಕೊಡ- ಗಡಿಗೆಗಳನ್ನು ಮಾಡಬೇಕಾದರೆ ಮೊದಲ ಅವಶ್ಯಕತೆ ಮಣ್ಣು.ಮಣ್ಣು ಇಲ್ಲದೆ ಮಡಕೆಗಳನ್ನು ಮಾಡಲು ಸಾಧ್ಯವಿಲ್ಲ.ಆಭರಣಗಳನ್ನು ಮಾಡಬೇಕಾದರೆ ಮೊದಲು ಬಂಗಾರವು ಬೇಕು.ಹಾಗೆಯೇ ಶಿವಪಥದಿ ನಡೆಯಬೇಕಾದರೆ ಮೊದಲು ಗುರುಪಥವನ್ನು ಹಿಡಿದಿರಬೇಕು.ಶಿವನ ಮಹಿಮಾಧಿಕ್ಯವನ್ನರಿತುಕೊಳ್ಳಬೇಕಾದರೆ ಶರಣರ ಒಡನಾಟದಲ್ಲಿರಬೇಕು,ಸತ್ಸಂಗದಲ್ಲಿರಬೇಕು.

ಅಧ್ಯಾತ್ಮಪಥದಲ್ಲಿ,ಯೋಗಮಾರ್ಗದಲ್ಲಿ ಗುರುವಿಗೆ ಅತ್ಯಧಿಕ ಪ್ರಾಶಸ್ತ್ಯವಿದೆ.ಶಿವನೇನೋ ದೊಡ್ಡವನು, ಭವನಿವಾರಕನಾದ ಪರಬ್ರಹ್ಮನು ನಿಜ.ಆದರೆ ಶಿವನು ದೊಡ್ಡವನು,ಪರಬ್ರಹ್ಮನು ಎನ್ನುವುದು ಶ್ರೀಗುರುವು ತೋರಿಸಿಕೊಟ್ಟಾಗಲೆ ಅನುಭವವೇದ್ಯವಾಗುವುದು.ಗುರುವಿಲ್ಲದೆ,ಗುರುವಾನುಗ್ರಹವಿಲ್ಲದೆ ಪರತತ್ತ್ವವು ಅಳವಡದು.ಗುರುವಿಲ್ಲದೆ ಹರಪಥದಿ ನಡೆಯುವ ಪ್ರಯಾಣವು ಪ್ರಯಾಸದಾಯಕ,ಗುರಿ ತಲುಪುವ ಖಚಿತತೆಯೂ ಇಲ್ಲ.ಗುರುವಿನ ಮೂಲಕ ಹೋದರೆ ಸುಲಭವಾಗಿ ತಲುಪಬಹುದು ಹರನನ್ನು,ಪರವಸ್ತುವನ್ನು.ಗುರುವು ಈ ಮೊದಲೆ ತಾನು ಶಿವನಸಾಕ್ಷಾತ್ಕಾರವನ್ನು ಅನುಭವಿಸಿರುವುದರಿಂದ ತನ್ನ ಶಿಷ್ಯನಿಗೆ ಸುಲಭವಾಗಿ ಶಿವನ ಎಡೆಯನ್ನು,ಶಿವಬೆಡಗನ್ನು ತೋರಬಲ್ಲನು.ಗುರು ಮತ್ತು ಶಿಷ್ಯರಿಬ್ಬರದು ಶಿವಪಥದ ಖಾಸಗಿ ನಡೆಯಾದರೆ ಶರಣರ ಸಂಗದಲ್ಲಿ ಶಿವನ ಲೋಕಬೆಡಗು ಅನುಭವವಾಗುತ್ತದೆ.ಒಬ್ಬ ವ್ಯಕ್ತಿಯು ಗುರುವಿಲ್ಲದೆಯೂ ಶರಣರ ಸಂಗದಿಂದ ಶಿವಪಥವನ್ನು ಅರಿಯಬಲ್ಲನು.ಗುರುವು ವ್ಯಷ್ಟಿಶಕ್ತಿಯಾದರೆ ಶರಣಸಮೂಹವು ಸಮಷ್ಟಿತತ್ತ್ವವಾಗುತ್ತದೆ.ಶರಣರ ಅನುಭಾವಮಥನದಿ ಶಿವತತ್ತ್ವವು ನಿಚ್ಚಳವಾಗಿ ಗೋಚರಿಸುತ್ತದೆ.ಶರಣಸಂದೋಹವಿದ್ದಲ್ಲಿ ಶಿವನ ಸಾನ್ನಿಧ್ಯವಿರುವುದರಿಂದ ಭಕ್ತರ ಶರಣರ ಬಳಗವು ನಡೆಸುವ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು.

ಬಸವಣ್ಣನವರು ಈ ವಚನದಲ್ಲಿ ‘ಗುರುತತ್ತ್ವ’ ‘ ಶರಣತತ್ತ್ವ’ಗಳೆರಡರ ಮಹತಿಯನ್ನು ಪ್ರತಿಪಾದಿಸಿದ್ದಾರೆ.ಗುರುವು ತನ್ನ ಅಂತರಂಗದ ಶಿಷ್ಯನಿಗೆ ಮಾತ್ರ ಶಿವನನ್ನು ತೋರಬಲ್ಲನು ಆದರೆ ಶಿವಶರಣರು ಶಿವಾನುಗ್ರಹವನ್ನು ಲೋಕಸಮಸ್ತರಿಗೆ ಕರುಣಿಸಬಲ್ಲರು.ಶರಣರು ಶಿವನ ಲೋಕಕಾರುಣ್ಯಗುಣವನ್ನೇ ಬಿತ್ತಿಬೆಳೆಯುವ ಶಿವತತ್ತ್ವಕೃಷಿಕರಾದ್ದರಿಂದ ಅವರು ಲೋಕದ ಜನರೆಲ್ಲರಿಗೂ ಶಿವಪಥವನ್ನು ತೆರೆದಿಡುವರು.ಶಿವಶರಣರು ತಮ್ಮ ನಡೆನುಡಿಗಳಿಂದ ಶಿವಮಯಬಾಳನ್ನು ಬಾಳುತ್ತ ತಮ್ಮ ಬಳಿ ಬಂದವರನ್ನೂ ಕರೆದೊಯ್ಯುತ್ತಾರೆ ಶಿವಪಥದಿ.

೨೮.೦೧.೨೦೨೪

About The Author