ಕಕ್ಕಸಗೇರಾ ಸರಕಾರಿ ಪ್ರೌಢ ಶಾಲೆಗೆ ಭೇಟಿ : ಬಾಲ್ಯವಿವಾಹದಿಂದ ತಾಯಿ, ಶಿಶುಮರಣ ಪ್ರಮಾಣ ಹೆಚ್ಚಳ : ಸೋಮಶೇಖರ ಬಿರಾದಾರ

ಶಹಾಪುರ: ದೈಹಿಕ, ಮಾನಸಿಕವಾಗಿ ಸದೃಢಗೊಳ್ಳದ 18 ವರ್ಷದೊಳಗಿನ ಹೆಣ್ಣು ಮಕ್ಕಳ ಬಾಲ್ಯವಿವಾಹದಿಂದ ಅಶಕ್ತ ತಾಯಿಗೆ ಜನಿಸುವ ಮಗು ಹೆರಿಗೆ ಸಮಯದಲ್ಲಿ ತೀವೃ ನೋವಿನಿಂದ ತಾಯಿ ಮತ್ತು ಮಗು ಬದುಕುಳಿಯುವದು ಕಷ್ಟ. ಇದರಿಂದ ತಾಯಿ ಮತ್ತು ಶಿಶುಮರಣ ಪ್ರಮಾಣ ಹೆಚ್ಚಳವಾಗುತ್ತದೆ ಎಂದು ಶಹಾಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ  ಸೋಮಶೇಖರ ಬಿರಾದಾರ ಹೇಳಿದರು.

  ಕಕ್ಕಸಗೇರಾ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ದಿಢೀರ್ ಭೇಟಿ ನೀಡಿ,ಶಾಲೆಯ ಅಗತ್ಯ ಮೂಲಭೂತ ಸೌಲಭ್ಯ ಕುರಿತು ಪರಿಶೀಲಿಸಿದರು. ಶಾಲಾ ಮಕ್ಕಳೊಂದಿಗೆ ಸಂವಾದ ಮಾಡಿ ಮಾತನಾಡಿದರು.

 ಮಹಿಳೆ 18, ಪುರುಷ 21ವರ್ಷ ವಿವಾಹದ ವಯೋಮಿತಿ ಗುರುತಿಸಿದ್ದು, ನಿಗದಿತ ವಯೋಮಿತಿ ಪೂರ್ವದಲ್ಲಿ ಪೋಷಕರು ಮದುವೆ ಮಾಡಿದರೆ ಬಾಲ್ಯವಿವಾಹ ಎಂದು ಪ್ರಕರಣ ದಾಖಲಿಸಿ, ಹೆಣ್ಣು ಹಾಗೂ ಗಂಡಿನ ಪೋಷಕರಿಗೆ ಜೈಲು ಶಿಕ್ಷೆ ನೀಡಿ, ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ತಾಯಂದಿರ, ಶಿಶುವಿನ ಮರಣ ಪ್ರಮಾಣ ನಿಯಂತ್ರಿಸಲು ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಅಗತ್ಯವಿದೆ.ದೈಹಿಕ, ಮಾನಸಿಕವಾಗಿ ದುರ್ಬಲವಾದ 18ವರ್ಷದೊಳಗಿನ ಹೆಣ್ಣು ಮಗುವಿಗೆ ಮದುವೆ ಮಾಡಿದರೆ, ಬಹುಪೋಷಕಾಂಶಗಳ ಕೊರತೆ, ಅಪೌಷ್ಟಿಕತೆ, ರಕ್ತ ಹೀನತೆ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹುಟ್ಟುವ ಮಗು ಅನಾರೋಗ್ಯದಿಂದ ಜನಿಸುತ್ತದೆ ಎಂದು ಹೇಳಿದರು.

ವಿಧ್ಯಾರ್ಥಿಗಳ ಜೀವನದಲ್ಲಿ ಕಾಲಹರಣ ಮಾಡದೆ, ನಿರ್ಧಿಷ್ಟ ಗುರಿಯೊಂದಿಗೆ ನಿರಂತರ ಅಧ್ಯಯನ ಮಾಡಿದರೆ, ಯಶಸ್ಸು ಕಂಡಿತ ನಿಮ್ಮದಾಗುತ್ತದೆ. ಅದರಲ್ಲಿ ಯಾವುದೇ ಕೀಳರಿಮೆ ಬೇಡ.ವಿಧ್ಯೆ ಯಾರ ಸ್ವತ್ತಲ್ಲ, ಗುರಿ ಸಾಧಿಸಲು ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿ ಛಲವಿರಬೇಕು ಅಂದಾಗ, ಬಯಸಿದ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಲವು ವಿದ್ಯಾರ್ಥಿನಿಯರಲ್ಲಿ ರಕ್ತ ಹೀನತೆ ಹಾಗೂ ಅಪೌಷ್ಟಿಕತೆಯಿಂದ ತಲೆ ಸುತ್ತು, ಜ್ವರ, ನೆಗಡಿ ಕೆಮ್ಮು ಸೇರಿ ಇತರೆ ಸಣ್ಣ ಪುಟ್ಟ ಕಾಯಿಲೆಗಳು ಕಂಡು ಬರುತ್ತವೆ. ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ರಕ್ತ ಹೀನತೆ, ಅಪೌಷ್ಟಿಕತೆ ತಡೆಯಲು ಸಾಮಾನ್ಯವಾಗಿ ಮನೆಯಲ್ಲೆ ಸಿಗುವ ಬೆಲ್ಲ, ಶೇಂಗಾ, ಮೊಟ್ಟೆ, ಹಾಲು, ಹಣ್ಣು, ತರಕಾರಿ ಸೇವಿಸಬೇಕು ಎಂದು ತಿಳಿಸಿದರು.

ಶಾಲೆಯಲ್ಲಿ ನರೇಗಾ ಯೋಜನೆ ಒಗ್ಗೂಡಿಕೆ ಕಾಮಗಾರಿಗಳಡಿ ನಿರ್ಮಿಸಿದ ಬಾಲಕ-ಬಾಲಕೀಯರ ಶೌಚಾಲಯ ವೀಕ್ಷಿಸಿದ ಬಳಿಕ, ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ದಾಸ್ತಾನು ಕೋಣೆಗೆ ತೆರಳಿ ಅಕ್ಕಿ, ಬೆಳೆ, ಮೊಟ್ಟೆ, ಹಾಲಿನ ಪುಡಿ, ಅಡುಗೆ ಎಣ್ಣೆ ಪ್ಯಾಕೆಟ್ ಹಾಗೂ ತರಕಾರಿ ಗುಣಮಟ್ಟ ಪರಿಶೀಲಿಸಿ, ಶುದ್ಧ ಕುಡಿಯುವ ನೀರಿನ ಘಟಕದ ಕಾರ್ಯಚರಣೆ ವೀಕ್ಷಿಸಿದರು.

ಶಾಲೆಯ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಕುರಿತು ಮುಖ್ಯಗುರುಗಳಿಂದ ಮಾಹಿತಿ ಪಡೆದು ದಾಖಲಾತಿಗೆ ಅನುಸಾರ ಮಕ್ಕಳ ಹಾಜರಾತಿ ಇರಬೇಕು. ಮಕ್ಕಳು ಶಾಲೆ ಬಿಡುತ್ತಿರುವ ಕುರಿತು ಪೋಷಕರ ಮನೆಗೆ ಭೇಟಿ ನೀಡಿ, ಇಲ್ಲವೇ ಪೋಷಕರ ಸಭೆ ಕರೆದು ಚರ್ಚಿಸಿ, ಮಕ್ಕಳು ಶಾಲೆ ಬಿಡದಂತೆ ಪೋಷಕರ ಮನವೂಲಿಸಲು ಕ್ರಮಕೈಗೊಳ್ಳಿ, ಈ ಬಾರಿ 10ನೇ ತರಗತಿ ಪಲಿತಾಂಶದಲ್ಲಿ ಏರಿಕೆ ಕಂಡುಬರಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

ಶಹಾಪುರ ತಾಲೂಕ ಪಂಚಾಯಿತಿ ಸಹಾಯಕ ನಿರ್ದೇಶಕರಾದ ಭೀಮಣ್ಣಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಣ್ಣ ಹೈಯಾಳ, ಶಾಲಾ ಮುಖ್ಯಗುರು ಶ್ರೀ ಬಾಬು ಪೂಜಾರಿ, ಸೇರಿದಂತೆ ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.

About The Author