ಜೋಡು ಪಲ್ಲಕ್ಕಿ ಉತ್ಸವ : ಮುಂಗಾರಿ ಕೆರೆ ಗಂಗೆ ಕಟ್ಯಾಳ, ಒಕ್ಕಲು ಮಗ ಬಿಳಿ ಬಟ್ಟೆ ಧರಿಸಿ ನಡುಗಡ್ಡೆಗೆ ಬಿಳಿ ನಿಶಾನೆ ಹಾಕ್ಯಾನ, ಮಲ್ಲಯ್ಯ ಕೊಕ್ಕರೆ ಕುಂತು ನೋಡ್ಯಾನ

ರಾಯಚೂರು: ಸಂಕ್ರಾಂತಿ ಹಬ್ಬದಂದು ಗ್ರಾಮೀಣ ಪ್ರದೇಶದ ಹಲವು ಗ್ರಾಮಗಳಲ್ಲಿ ಮಲ್ಲಯ್ಯನ ಪಲ್ಲಕ್ಕಿ ಜಾತ್ರೆಗಳು ಅದ್ದೂರಿಯಾಗಿ ನಡೆಯುತ್ತವೆ.ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಗುಡ್ಡದ ಮಲ್ಲಯ್ಯನ ಜಾತ್ರೆಯ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸೋಮವಾರದಂದು ಜೋಡಿ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು. ಗ್ರಾಮದ ಮೇಲಿನ ಮನೆಯಿಂದ ಮಲ್ಲಯ್ಯನ ಪಲ್ಲಕ್ಕಿ ಮತ್ತು ಗುಡ್ಡದ ಮಲ್ಲಯ್ಯನ ಉತ್ಸವ ಮೂರ್ತಿ ಪಲ್ಲಕ್ಕಿಗಳು ಸೇರಿ ಗ್ರಾಮದ ಕೆರೆಯಲ್ಲಿನ ಗಂಗಾ ಸ್ನಾನಕ್ಕೆ ಹೋಗಿ ನಂತರ ಗುಡ್ಡದ ಮಲ್ಲಯ್ಯನ ದೇವಸ್ಥಾನಕ್ಕೆ ಜೋಡು ಪಲ್ಲಕ್ಕಿ ಸಮೇತ ಸಕಲ ವಾದ್ಯ ಡೊಳ್ಳು ಸಮೇತ ಬರಲಾಯಿತು. ಸಕಲ ಮುತ್ತೈದೆಯರು ಕಳಸದ ಜೊತೆಗೆ ಆಗಮಿಸಿದ ಪಲ್ಲಕ್ಕಿ ಉತ್ಸವದಲ್ಲಿ ದೇವಸ್ಥಾನದಲ್ಲಿ ದೇವರಿಗೆ ಮಹಾಪೂಜೆಯ ನಂತರ ಮಲ್ಲಯ್ಯನ ಆಳುಗಳಿಂದ ಮುಂದಿನ ವರ್ಷದ ಬಗ್ಗೆ ಹೇಳಿಕೆ ಆಗುತ್ತದೆ.

ಮುಂಗಾರಿ ಕೆರೆ ಗಂಗೆ ಕಟ್ಯಾಳ, ಒಕ್ಕಲು ಮಗ ಬಿಳಿ ಬಟ್ಟೆ ಧರಿಸಿ ನಡುಗಡ್ಡೆಗೆ ಬಿಳಿ ನಿಶಾನೆ ಹಾಕ್ಯಾನ,ಮಲ್ಲಯ್ಯ ಕೊಕ್ಕರೆ ಕುಂತು ನೋಡ್ಯಾನ.ಅಂದರೆ ಮುಂದಿನ ವರ್ಷ ಮುಂಗಾರಿನ ಮಳೆ ಚೆನ್ನಾಗಿ ಆಗಲಿದ್ದು,ರೈತರು ಕೆರೆ ಬಾವಿಗಳನ್ನು ಅವಲಂಬಿಸಬೇಕಾಗುತ್ತದೆ.ಹತ್ತಿ ಮತ್ತು ಜೋಳ ಬೆಲೆ ಇರುತ್ತದೆ.ಮಲ್ಲಯ್ಯ ಎಲ್ಲರನ್ನೂ ಒಂದೇ ಸಮಾನತೆಯಿಂದ ನೋಡುತ್ತಾನೆ.ಈ ವರ್ಷದ ಹೇಳಿಕೆಯಾಗಿದೆ. ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ನೂರಾರು ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಉಸುಕಿನ ಚೀಲ, ಗುಂಡು ಎತ್ತುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ದೇವಸ್ಥಾನ ಕಮಿಟಿ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಗ್ರಾಮ ಪಂಚಾಯಿತಿ ವತಿಯಿಂದ ದೇವಸ್ಥಾನದಲ್ಲಿ ನಿರ್ಮಿಸಲ್ಪಟ್ಟ ಸಂಜೀವಿನಿ ಯೋಜನೆಯ 17 ಲಕ್ಷ ಅನುದಾನದ ಮನರೇಗಾ ಅನುದಾನದಲ್ಲಿ ನಿರ್ಮಿಸಲ್ಪಟ್ಟ ಕಟ್ಟಡವನ್ನು ರಾಜ್ಯ ಜೆಡಿಎಸ್ ಉಪಾಧ್ಯಕ್ಷರ ಸಮ್ಮುಖದಲ್ಲಿ ಸಾಂಪ್ರದಾಯಕವಾಗಿ ಲೋಕಾರ್ಪಣೆ ಮಾಡಲಾಯಿತು.

ಗ್ರಾಮದ ಮುಖಂಡರಾದ ಈರಣ್ಣ ಮಮತಾಪುರ, ದುರುಗಣ್ಣ, ಗೂಳಪ್ಪ ಶಿಕ್ಷಕರು, ರಾಜ್ಯ ಮಲ್ಲಿಕಾರ್ಜುನ ಬಾಯಿದೊಡ್ಡಿ,ಹುಷೇನಭಾಷಾ,ಚಾಂದಪಾಷಾ,ಇರುಪಾನ್, ದೊಡ್ಡ ವಿರೇಶ ಪೂಜಾರಿ, ವೀರೇಶ ಪೂಜಾರಿ, ಸಣ್ಣ ಬೆಟ್ಟಪ್ಪ, ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಪರ ವೀರಭದ್ರಯ್ಯ ಸ್ವಾಮಿ, ಶಿವುಶಂಕರ, ಅಂಬರೀಶ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಅಪಾರ ಭಕ್ತಸ್ತೋಮ ಪಾಲ್ಗೊಂಡಿದ್ದರು.

About The Author