ಶಿವಪೂಜೆ,ಲಿಂಗಾರ್ಚನೆಯನ್ನು ಸ್ವಯಂ ಮಾಡಬೇಕಲ್ಲದೆ ಅನ್ಯರಿಂದ ಮಾಡಿಸಬಾರದು

ಬಸವೋಪನಿಷತ್ತು ೧೪ : ಶಿವಪೂಜೆ,ಲಿಂಗಾರ್ಚನೆಯನ್ನು ಸ್ವಯಂ ಮಾಡಬೇಕಲ್ಲದೆ ಅನ್ಯರಿಂದ ಮಾಡಿಸಬಾರದು : ಮುಕ್ಕಣ್ಣ ಕರಿಗಾರ

ತನ್ನಾಶ್ರಯದ ರತಿಸುಖವನು,ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ,
ನಿಮ್ಮನೆತ್ತಬಲ್ಲರು ಕೂಡಲ ಸಂಗಮದೇವಾ ?

ಶಿವಪೂಜೆ,ಇಷ್ಟಾಲಿಂಗಾರ್ಚನೆಯನ್ನು ಸ್ವಯಂ ತಾವೇ ಮಾಡಬೇಕಲ್ಲದೆ ಅದನ್ನು ಬೇರೆಯವರಿಂದ ಮಾಡಿಸಲಾಗದು ಎನ್ನುವುದನ್ನು ಬಸವಣ್ಣನವರು ಸಹಜ ಸುಂದರ ನಿದರ್ಶನಗಳಿಂದ ಮನಮುಟ್ಟುವಂತೆ ವಿವರಿಸಿದ್ದಾರೆ ಈ ವಚನದಲ್ಲಿ.ತನ್ನ ಹೆಂಡತಿಯಲ್ಲಿ ತಾನು ರತಿಸುಖವನ್ನನುಭವಿಸಬೇಕೇ ಹೊರತು ಪರಪುರುಷ ತನ್ನ ಹೆಂಡತಿಯ ಸುಖವನ್ನನುಭವಿಸಲಿ ಎನ್ನಲಾಗದು.ತನಗೆ ಹಸಿವಾದಾಗ ತಾನೇ ಉಣ್ಣಬೇಕಲ್ಲದೆ ನನ್ನ‌ಪರವಾಗಿ ನೀವು ಊಟ ಮಾಡಿ ಎಂದು ಪರರಿಗೆ ಹೇಳಲಾಗದು.ಹಾಗೆಯೇ ಲಿಂಗಧಾರಿಗಳಾದವರು ತಮ್ಮ‌ಲಿಂಗಾರ್ಚನೆಯನ್ನು ಸ್ವತಃ ತಾವೇ ಮಾಡಬೇಕಲ್ಲದೆ ಬೇರೆಯವರ ಕೈಯಲ್ಲಿ ಮಾಡಿಸಲಾಗದು.ಸುಮ್ಮನೆ ತೋರಿಕೆಗಾಗಿ,ಕಾಟಾಚಾರಕ್ಕಾಗಿ ಪೂಜಿಸುವವರು ಶಿವಾನುಗ್ರಹವನ್ನು ಪಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಬಸವಣ್ಣನವರು.

ಬಸವಣ್ಣನವರ ಈ ವಚನ ಬಹುಮಾರ್ಮಿಕವಾಗಿದೆ,ಉಪಚಾರಕ್ಕೆ ಪೂಜೆಮಾಡುವವರು,ಆಡಂಬರದ ಪೂಜೆಮಾಡುವವರು ಮುಟ್ಟಿನೋಡಿಕೊಳ್ಳುವಂತೆ ಇದೆ.ಇಷ್ಟಲಿಂಗಧಾರಿಗಳಾಗಿ ನಿತ್ಯಲಿಂಗಾರ್ಚನೆಯ ವ್ರತಿಗಳಾಗಬೇಕಾದವರಿಗೆ ಐದು ಹತ್ತು ನಿಮಿಷಗಳ ಕಾಲ ಇಷ್ಟಲಿಂಗಪೂಜೆಗೆ ಸಮಯಸಿಗುತ್ತಿಲ್ಲ ! ಶ್ರೀಮಂತರುಗಳು ತಮ್ಮ ಮನೆಯಲ್ಲಿ ದೇವರ ಪೂಜೆಗೆ ಅರ್ಚಕರು,ಪೂಜಾರಿಗಳನ್ನು ನೇಮಿಸಿಕೊಂಡಿದ್ದಾರೆ.ಇದೆಂತಹ ಅರ್ಥಹೀನಕಾರ್ಯ,ದುರಾಚಾರ ಎನ್ನುವುದನ್ನು ಬಸವಣ್ಣನವರು ತುಸು ಮೊನಚು ಮಾತಿನಲ್ಲಿಯೇ ಪ್ರಶ್ನಿಸಿದ್ದಾರೆ ಈ ವಚನದಲ್ಲಿ.’ತನ್ನಾಶ್ರಯದ ರತಿಸುಖ’ಎಂದರೆ ಧರ್ಮಸಮ್ಮತವಾಗಿ ತನ್ನ ಪತ್ನಿಯಾದವಳು ಎಂದರ್ಥ.ಗಂಡನಾದವನು ತನ್ನ ಹೆಂಡತಿಯಲ್ಲಿ ತಾನು ರತಿಸುಖವನ್ನು ಉಣ್ಣಬೇಕು,ಸಂಭೋಗ ಸುಖವನ್ನು ಅನುಭೋಗಿಸಬೇಕು.ಅದು ನ್ಯಾಯ,ಧರ್ಮಸಮ್ಮತ.ಪರಪುರುಷನು ತನ್ನ ಹೆಂಡತಿಯಲ್ಲಿ ರತಿಸುಖವನ್ನು ಅನುಭವಿಸಲಿ ಎನ್ನುವವನು ನಿರ್ವೀರ್ಯನಾದ ಷಂಡನೇ ಹೊರತು ಗಂಡಸುತನ ಉಳ್ಳ ಪುರುಷನಲ್ಲ.ತನ್ನ ಹೆಂಡತಿಯು ಅನ್ಯರ ಸ್ವತ್ತಾಗಬಾರದು, ತೊತ್ತಾಗಬಾರದು ಎಂದು ಬಯಸುವುದು ಪುರುಷತ್ವ ಉಳ್ಳವರ ಲಕ್ಷಣವು ಹೇಗೋ ಹಾಗೆಯೇ ತನಗೆ‌ ಗುರುವು ಅನುಗ್ರಹಿಸಿದ ಲಿಂಗವನ್ನು ತಾನೇ ಪೂಜಿಸಬೇಕು ಎನ್ನುತ್ತಾರೆ ಬಸವಣ್ಣನವರು.ವೀರಶೈವ- ಲಿಂಗಾಯತರೆನ್ನಿಸಿಕೊಳ್ಳುವ ಕೆಲವರು ಶಿವಪೂಜೆ,ಲಿಂಗಾರ್ಚನೆಗಳಲ್ಲಿಯೂ ಸಲ್ಲದ ಉದಾಸೀನ ಭಾವವನ್ನು ಹೊಂದಿದ್ದಾರೆ.ಮನೆಯಲ್ಲಿ ಎಲ್ಲರೂ ಶಿವಪೂಜೆ,ಲಿಂಗಪೂಜೆಯನ್ನೇಕೆ ಮಾಡಬೇಕು ? ಮನೆಯಲ್ಲಿ ಯಾರಾದರೂ ಒಬ್ಬರು ಮಾಡಿದರಾಯಿತಲ್ಲ ಎಂದು ಮನೆಯಲ್ಲಿ ಮಕ್ಕಳಿಗೋ ಮುದುಕರಿಗೋ ಶಿವಪೂಜೆ,ಲಿಂಗಾರ್ಚನೆಯ ಹೊಣೆಹೊರಿಸಿ ತಾವು ಮನೆಯ‌ಂಗಳದಲ್ಲಿ ಹರಟೆಹೊಡೆಯುತ್ತ,ಅವರಿವರೊಡನೆ ಲೋಕಾಭಿರಾಮದ ಮಾತುಗಳನ್ನಾಡುತ್ತ ಕಾಲ ತಳ್ಳುತ್ತಿದ್ದಾರೆ.ತನ್ನ ಹೊಟ್ಟೆಗೆ ಹಸಿವಾದಾಗ ತಾನು ಉಂಡರೆ ಮಾತ್ರ ತನ್ನ ಹೊಟ್ಟೆಯ ಹಸಿವು ಅಡಗುತ್ತದೆ.’ನನಗೆ ಹಸಿವಾಗಿದೆ ನೀವು ಊಟ ಮಾಡಿ’ ಎಂದು ಬೇರೆಯವರಿಗೆ ಹೇಳುವವರು ಹುಚ್ಚರೇ ಸರಿ ! ಬೇರೆಯವರು ಊಟಮಾಡಿದರೆ ತನ್ನ ಹೊಟ್ಟೆ ತುಂಬುವುದೆ ? ಕಾಟಾಚಾರಕ್ಕಾಗಿ,ತೋರಿಕೆಗಾಗಿ ನಟನೆಗಾಗಿ ಶಿವಪೂಜೆ,ಲಿಂಗಾರ್ಚನೆ ಮಾಡುವವರ ಕುಟಿಲಭಕ್ತಿಯನ್ನು ಶಿವನೊಪ್ಪಲಾರ ಎನ್ನುತ್ತಾರೆ ಬಸವಣ್ಣನವರು.

ಬಸವಣ್ಣನವರ ಈ ವಚನವನ್ನು ಓದಿಯಾದ ಬಳಿಕವಾದರೂ ಲಿಂಗವಂತರು ನಿಜನಿಷ್ಠೆಯಿಂದ ಲಿಂಗಪೂಜೆ ಮಾಡುವಂತಾಗಲಿ.ಬೇರೆಯವರ ಕೈಯ್ಗಳಲ್ಲಿ ಲಿಂಗಪೂಜೆ ಮಾಡುವವರನ್ನು ಬಸವಣ್ಣನವರು ಶಿಖಂಡಿಗಳು,ಷಂಡರು ಎಂದು ಬೈದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.ಇದು ಲಿಂಗಾಯತರಿಗಷ್ಟೇ ಅಲ್ಲ ಶಿವಭಕ್ತರೂ ಸೇರಿದಂತೆ ದೇವರನ್ನು ಒಪ್ಪಿ,ಪೂಜಿಸುವ ಎಲ್ಲ ಮತ ಧರ್ಮೀಯರಿಗೂ ಅನ್ವಯವಾಗುವ ಮಾತು.ಹೊಟ್ಟೆಹೊರೆಯುವ ಜೋಯಿಸರು,ಶಾಸ್ತ್ರಿಗಳು ಗೃಹಪ್ರವೇಶ,ಗೃಹಶಾಂತಿ ಮತ್ತು ಗ್ರಹದೋಷ ಪರಿಹಾರಕ್ಕೆಂದು ‘ ಮೃತ್ಯುಂಜಯಹೋಮ’ ಮಾಡಿ, ಗಿರಿಜಾಕಲ್ಯಾಣ ಕಥೆ ಓದಿಸಿ,ವರಶಂಕರ ಕಥೆ ಓದಿಸಿ,ಸತ್ಯನಾರಾಯಣನ ಪೂಜೆ ಮಾಡಿಸಿ ಎಂದು ಹೇಳುತ್ತಾರೆ.ಮತಿಮರುಳರಾದವರು ಜೋತಿಷಿ,ಶಾಸ್ತ್ರಿ ಮಹಾನುಭಾವರುಗಳನ್ನು ಮನೆಗೆ ಕರೆಯಿಸಿ ಅವರ ಕೈಯಲ್ಲಿ ‘ ಶಾಸ್ತ್ರದಪೂಜೆ’ ಮಾಡಿಸುತ್ತಾರೆ.ಇಂತಹ ‘ ಉಪಚಾರದಪೂಜೆ’ ಯು ಸಲ್ಲದು ಎನ್ನುವ ಬಸವಣ್ಣನವರು ಜೋತಿಷಿಗಳು,ಶಾಸ್ತ್ರಿಗಳ ಕೈಯಲ್ಲಿ ಪೂಜೆ ಮಾಡಿಸುವ ನೀವು ಗಂಡಸರೆ ಎಂದು ಕಟುವಾಗಿ ನಿಂದಿಸಿದ್ದಾರೆ.ಹಸಿವು ಮತ್ತು ಮೈಥುನಾಸಕ್ತಿ ಶರೀರಧರ್ಮವಾಗಿದ್ದು ಅವುಗಳನ್ನು ಸ್ವಂತಃ ತಾವೇ ಅನುಭವಿಸಿ ತೃಪ್ತರಾಗಬೇಕು.ಅದು ಪ್ರಕೃತಿನಿಯಮ,ಧರ್ಮಸಮ್ಮತ.ಹೆಂಡತಿಯನ್ನು ಪರಪುರುಷರಿಗೊಪ್ಪಿಸುವ ಷಂಡತನವನ್ನು ಒಪ್ಪಲಾಗದು.ತಮ್ಮ ಹಸಿವೆಯನ್ನು ತಣಿಸಲು ಮತ್ತೊಬ್ಬರನ್ನು ಉಣ್ಣಿ ಎನ್ನಲಾಗದು.ಹಸಿವು ಮತ್ತು ಮೈಥುನಗಳು ಶರೀರಧರ್ಮವಾಗಿರುವಷ್ಟೇ ಸಹಜವಾಗಿರಲಿ,ಶರೀರಧರ್ಮವಾಗಿರಲಿ ಶಿವಪೂಜೆ,ಲಿಂಗಾರ್ಚನೆಗಳು.ಭಕ್ತಿ ಎನ್ನುವುದು ಖಾಸಗಿ ವಿಷಯ,ತಾನೇ ಆಚರಿಸಬೇಕಾದ ಧಾರ್ಮಿಕ ವಿಧಿ,ನಿಯಮ.ಹಾಗೆಯೇ ಪರಮಾತ್ಮನ ದರ್ಶನ- ಸಾಕ್ಷಾತ್ಕಾರ ಕೂಡ ಭಜಿಸಿ,ಪೂಜಿಸುವವರಿಗೆ ಮಾತ್ರವೇ ಹೊರತು ಎಲ್ಲರಿಗೂ ಅಲ್ಲ.ಪರಮಾತ್ಮನು ಜಗತ್ತನ್ನು ಸೃಷ್ಟಿಸಿದ್ದಾನೆ,ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನ ಪ್ರೇರಣೆಯಂತೆ ನಡೆಯುತ್ತದೆ ಎನ್ನುವುದೇನೋ ನಿಜ.ಆದರೆ ಸರ್ವಶಕ್ತನಾದ ಪರಮಾತ್ಮನು ತನ್ನ ಧ್ಯಾನ ತಪಸ್ಸುಗಳಲ್ಲಿ ತೊಡಗಿಕೊಂಡವರಿಗೆ ಮಾತ್ರ ತನ್ನ ದರ್ಶನ ನೀಡುತ್ತಾನೆಯೇ ಹೊರತು ಸರ್ವರಿಗೂ ಅಲ್ಲ ಎನ್ನುವುದೂ ಅಷ್ಟೇ ನಿಜ.ಮುಕ್ತಿಯು ಸಹಜಹಕ್ಕಾಗಬೇಕಾದರೆ ಭಕ್ತಿಯೂ ಶರೀರಸಹಜ ಧರ್ಮವಾಗಬೇಕು ಎಂದು ಉಪದೇಶಿಸಿದ್ದಾರೆ ಬಸವಣ್ಣನವರು ಮಂದಬುದ್ಧಿಯ ಜನರಿಗೆ ಈ ವಚನದಲ್ಲಿ.

೧೪.೦೧.೨೦೨೪

About The Author