ಬಸವೋಪನಿಷತ್ತು : ಸರ್ವರಲ್ಲಿಯೂ ಶಿವಚೈತನ್ಯವನ್ನರಸಬೇಕು

ಬಸವೋಪನಿಷತ್ತು ೧೩ : ಸರ್ವರಲ್ಲಿಯೂ ಶಿವಚೈತನ್ಯವನ್ನರಸಬೇಕು : ಮುಕ್ಕಣ್ಣ ಕರಿಗಾರ

 ಇವನಾರವ,ಇವನಾರವ,ಇವನಾರವ’ನೆಂದೆನಿಸದಿರಯ್ಯಾ,
‘ ಇವ ನಮ್ಮವ,ಇವ ನಮ್ಮವ,ಇವನಮ್ಮವ’ ನೆಂದೆನಿಸಯ್ಯಾ,
ಕೂಡಲ ಸಂಗಮದೇವಾ,
ನಿಮ್ಮ ಮನೆಯ ಮಗನೆನಿಸಯ್ಯಾ.

ಬಸವಣ್ಣನವರು ಈ ವಚನದಲ್ಲಿ ಶಿವನು ಭಕ್ತನಾದ ತನ್ನನ್ನು ಬೇರೆ ಯಾರೋ ಎಂದು ಬಗೆಯದೆ ತನ್ನ ಮನೆಯ ಮಗನೆಂದು ತಿಳಿದು ಉದ್ಧರಿಸಲು ಪ್ರಾರ್ಥಿಸಿದ್ದಾರೆ.ಆದರೆ ಈ ವಚನವನ್ನು ಬಸವಣ್ಣನವರು ತಮ್ಮ ಉದ್ಧಾರಕ್ಕೆ ಶಿವನನ್ನು ಮೊರೆದ ವಚನ ಎಂದು ಮಾತ್ರ ಪರಿಭಾವಿಸದೆ ಈ ವಚನವು ಹೊರಹೊಮ್ಮಿಸುವ ಹಲವು ಮಹತ್ವದ ಸಂದೇಶಗಳನ್ನು ಗ್ರಹಿಸಿಕೊಳ್ಳಬೇಕು.ನಮ್ಮ ಬಳಿ ಬರುವ ಯಾರನ್ನೇ ಆಗಲಿ ಇವನು ಯಾರು? ಯಾವ ಕುಲದವನು ಎಂಬಿತ್ಯಾದಿ ಕೃತಕಬುದ್ಧಿಯಿಂದ ನೋಡದೆ ಇವನು ನಮ್ಮವನು,ನಮ್ಮ ಬಂಧು- ಸಂಬಂಧಿ ಎನ್ನುವ ಭಾವನೆಯಿಂದ ನೋಡಬೇಕಲ್ಲದೆ ಶಿವಪುತ್ರನೇ ನನ್ನ ಬಳಿ ಬಂದಿದ್ದಾನೆ ಎಂದು ತಿಳಿದು ಆದರಿಸಬೇಕು ಎನ್ನುವ ಮಾನವತೆಯ ಮಹೌದಾರ್ಯದ ಭಾವವು ಈ ವಚನದ ಅಂತರಾರ್ಥ,ಮೂಲಸತ್ತ್ವ‌

ಬಸವಣ್ಣನವರು ಈ ವಚನದಲ್ಲಿ ವಿಶ್ವಬಂಧುತ್ವವನ್ನು ಪ್ರತಿಪಾದಿಸಿದ್ದಾರೆ,ಮಾನವತೆಯನ್ನು ಎತ್ತಿಹಿಡಿದಿದ್ದಾರೆ.ಋಗ್ವೇದದ ಆಶಯವಾದ ‘ ವಸುದೈವ ಕುಟುಂಬಕಂ’ ತತ್ತ್ವವು ಈ ವಚನದಲ್ಲಿ ಅಭಿವ್ಯಕ್ತಗೊಂಡಿದೆ.ಮನುಷ್ಯರು ತಮ್ಮತಮ್ಮಲ್ಲಿ ಭೇದವನ್ನೆಣಿಸಿಕೊಳ್ಳುತ್ತ,ಒಬ್ಬರು ಮತ್ತೊಬ್ಬರನ್ನು ಅನ್ಯರು ಎಂದು ಬಗೆಯುತ್ತ ಸಾಗಿರುವುದರಿಂದ ಜಗತ್ತಿನಲ್ಲಿ ದ್ವೇಷಾಸೂಯೆಗಳಿವೆ,ವೈರತ್ವ- ಸಂಘರ್ಷಗಳಿವೆ.ಈ ತಪ್ಪು ತಿಳಿವಳಿಕೆಯ ಕಾರಣದಿಂದಲೇ ಜಗತ್ತಿನಲ್ಲಿ ಯುದ್ಧಗಳು ಸಂಭವಿಸುತ್ತಿವೆ,ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಆಕ್ರಮಣ ಮಾಡುತ್ತದೆ.ಆದರೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ಇರುವವರೆಲ್ಲ ಮನುಷ್ಯರೇ,ಎಲ್ಲರೂ ಸಹೋದರರೆ ಎನ್ನುವ ಭಾವ ಬಲಿತರೆ ವಿಶ್ವದಲ್ಲಿ ಶಾಂತಿಯು ನೆಲೆಸುತ್ತದೆ ; ಬಂಧುತ್ವ ಭಾವವು ಅಳವಟ್ಟರೆ ವಿಶ್ವವು ಆನಂದದಿಂದಿರುವ ನಂದನವನವಾಗುತ್ತದೆ.ವಿಶ್ವದಲ್ಲಿ ಆ ದೇಶವಾಸಿ- ಈ ದೇಶದ ಪ್ರಜೆ,ಕರಿಯ- ಬಿಳಿಯ,ಶ್ರೀಮಂತ – ಬಡವ,ಅಕ್ಷರಸ್ಥ- ಅನಕ್ಷರಸ್ಥ,ಗಂಡು- ಹೆಣ್ಣು,ಮೇಲು-ಕೀಳು ಎನ್ನುವ ಕೃತಕಭೇದಬುದ್ಧಿಯು ಅಳಿದರೆ ವಿಶ್ವವೇ ಒಂದುಸದನವಾಗುತ್ತದೆ,ವಿಶ್ವದ ಪ್ರಜೆಗಳೆಲ್ಲರು ಒಂದೇ ಕುಟುಂಬದಲ್ಲಿ ವಾಸಿಸುವ ಸಹಕುಟುಂಬಿಗಳಾಗುತ್ತಾರೆ.ವಿಶ್ವವು ಪರಮಾತ್ಮನ ಸೃಷ್ಟಿಯೆಂದೂ ಈ ವಿಶ್ವದ ಪ್ರಜೆಗಳೆಲ್ಲರೂ ಒಬ್ಬನೇ ಪರಮಾತ್ಮನ ಮಕ್ಕಳು ಎಂದು ತಿಳಿದರೆ ಭೇದವೆಲ್ಲಿಯದು ? ದ್ವೇಷವೆಲ್ಲಿಯದು ? ಬಸವಣ್ಣನವರು ಈ ವಚನದಲ್ಲಿ ಅದೇ ಮಹಾತತ್ತ್ವವನ್ನು,ವಿಶ್ವಮಾನವತತ್ತ್ವವನ್ನು ಉಪದೇಶಿಸಿದ್ದಾರೆ.

ವಿಶ್ವಮಾನವತತ್ತ್ವದ ಪ್ರತಿಪಾದನೆಯೊಂದಿಗೆ ಸರ್ವಾತ್ಮರಂತರಾತ್ಮನಾಗಿರುವ ಪರಶಿವನ ಆತ್ಮತತ್ತ್ವವನ್ನೂ ಎತ್ತಿಹಿಡಿದಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ಮನುಷ್ಯರಲ್ಲಿ ಅಜ್ಞಾನದಿಂದ ಭೇದಭಾವ ಉಂಟಾಗಿದೆ.ಒಬ್ಬರು ಶ್ರೇಷ್ಠರು ಮತ್ತೊಬ್ಬರು ಕನಿಷ್ಟರು,ಒಬ್ಬರು ಬುದ್ಧಿವಂತರು ಮತ್ತೊಬ್ಬರು ದಡ್ಡರು,ಒಬ್ಬರು ಉಳ್ಳವರು ಮತ್ತೊಬ್ಬರು ಇಲ್ಲದವರು,ಒಬ್ಬರು ಆಳು ಮತ್ತೊಬ್ಬರು ಅರಸರು ಎನ್ನುವ ಈ ಭೇದಬುದ್ಧಿಯು ದೇಹಬುದ್ಧಿಯೇ ಹೊರತು ಆತ್ಮತತ್ತ್ವವಲ್ಲ.ಎಲ್ಲರೂ ಮೂಲತಃ ಆತ್ಮಸ್ವರೂಪರೇ,ಪರಮಾತ್ಮಸ್ವರೂಪರೇ.ಆದರೆ ಜೀವರುಗಳು ಅಜ್ಞಾನವಶರಾಗಿ ತಮ್ಮೊಳಗಣ ಪೂರ್ಣತ್ವವನ್ನು ಅರಿತುಕೊಳ್ಳದೆ,ಅಳವಡಿಸಿಕೊಳ್ಳದೆ ಬಳಲುತ್ತಿದ್ದಾರೆ.ಜೀವಸಮಸ್ತರ ದೇಹಗಳಲ್ಲಿಯೂ ಜೀವೇಶ್ವರನಾದ ಶಿವನೇ ಇದ್ದಾನೆ ಎನ್ನುವ ಹೊಳೆಹು ಮೂಡಿದಲ್ಲಿ ಯಾರು ಯಾರಿಗೆ ಭಿನ್ನರಾಗಲು ಸಾಧ್ಯ? ವಿಶ್ವದ ಪ್ರತಿಯೊಬ್ಬರಲ್ಲಿಯೂ ಪರಮಾತ್ಮನ ಅಂಶವಿದೆ ಮಾತ್ರವಲ್ಲ, ವಿಶ್ವದ ಎಲ್ಲರೂ ಪರಮಾತ್ಮನ ವಂಶಿಕರೆ ಎನ್ನುವ ಉದಾತ್ತ,ಲೋಕೋತ್ತರ ಭಾವನೆಯು ಅಳವಟ್ಟರೆ ವಿಶ್ವದಲ್ಲಿ,ಸೃಷ್ಟಿಯಲ್ಲಿ ದೋಷಕಾಣಿಸದು,ಯಾರೂ ಅನ್ಯರೆನ್ನಿಸರು ನಮಗೆ.ವಿಶ್ವದ ಪ್ರಜೆಗಳೆಲ್ಲರೂ — ಜಾತಿ,ಮತ,ಧರ್ಮ,ಪಥ- ನಾಡು,ನುಡಿ,ಗಡಿಗಳೆಂಬ ಕೃತ್ರಿಮಭೇದದಾಚೆಯ–ವಿಶ್ವದ ಏಕೈಕ ಕಾರಣನೂ ವಿಶ್ವದ ಏಕೈಕ ಒಡೆಯನೂ ಆಗಿರುವ ವಿಶ್ವೇಶ್ವರ ಶಿವನ ಮಕ್ಕಳು ಎನ್ನುವ ವಿಶ್ವಾತ್ಮತತ್ತ್ವ,ಮನುಷ್ಯಮೂಲಮಹಾತತ್ತ್ವವನ್ನರ್ಥೈಸಿಕೊಂಡು ವಿಶ್ವವನ್ನೇ ವಿಶ್ವೇಶ್ವರಶಿವನ ಸದನವನ್ನಾಗಿಸಬೇಕು,ಶಿವನ‌ನೆಲೆಯನ್ನಾಗಿಸಬೇಕು.

೧೩.೦೧.೨೦೨೪

About The Author