ಗ್ಯಾರಂಟಿ ಯೋಜನೆಗಳ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ನೇಮಿಸುವುದು ಸರಕಾರಿ ಆಡಳಿತಯಂತ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ

ಮೂರನೇ ಕಣ್ಣು : ಗ್ಯಾರಂಟಿ ಯೋಜನೆಗಳ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ನೇಮಿಸುವುದು ಸರಕಾರಿ ಆಡಳಿತಯಂತ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ : ಮುಕ್ಕಣ್ಣ ಕರಿಗಾರ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂಗ್ರೆಸ್ ಸರಕಾರದ ‘ ಪಂಚ ಗ್ಯಾರಂಟಿ’ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದಿಂದ ತಾಲೂಕಾ ಮಟ್ಟದವರೆಗೆ ಸಮಿತಿಗಳನ್ನು ರಚಿಸುವುದಾಗಿ ತಿಳಿಸಿದ್ದಲ್ಲದೆ ಈ ಸಮಿತಿಗಳ ಕಾರ್ಯವ್ಯಾಪ್ತಿ,ಸಂಬಳ- ಸವಲತ್ತುಗಳ ಬಗ್ಗೆಯೂ ಮಾತನಾಡಿದ್ದಾರೆ.ಸಮಿತಿಯ ರಾಜ್ಯ ಅಧ್ಯಕ್ಷರಿಗೆ ಸಂಪುಟ ದರ್ಜೆಯಸಚಿವರ ಸ್ಥಾನ ಮಾನ,ಉಪಾಧ್ಯಕ್ಷರಿಗೆ ರಾಜ್ಯಸಚಿವ ಸ್ಥಾನಮಾನದೊಂದಿಗೆ ಅವರುಗಳು ಪಡೆಯಲಿರುವ ಗೌರವಧನ,ಸವಲತ್ತುಗಳ ಬಗ್ಗೆಯೂ ವಿವರಿಸಿದ್ದಾರೆ.ಮುಖ್ಯಮಂತ್ರಿಯವರ ಸಚಿವಾಲಯದ ಅಧಿಕಾರಿಗಳು ಸಮಿತಿಗಳ ಕಾರ್ಯನಿರ್ವಹಣೆಗೆ ಸುಮಾರು ಇಪ್ಪತ್ತುಕೋಟಿ ಖರ್ಚಾಗಬಹುದು ಎಂದಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿತ್ತು. ಸಮಿತಿಗಳಿಗಾಗಿ ಇಪ್ಪತ್ತು ಕೋಟಿಗಳಷ್ಟು ಖರ್ಚಾಗುವುದಿಲ್ಲ ಎನ್ನುವ ಮುಖ್ಯಮಂತ್ರಿಯವರು ಈ ಉದ್ದೇಶಕ್ಕಾಗಿ ಆರುಕೋಟಿ ಖರ್ಚಾಗಲಿದ್ದು,ಅಷ್ಟುಹಣ ಖರ್ಚು ಮಾಡದಿದ್ದರೆ ಹೇಗೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹಿಂದೆಲ್ಲ ‘ ಆರ್ಥಿಕ ತಜ್ಞ’ ‘ ಉಳಿತಾಯ ಬಜೆಟ್’ ಮಂಡಿಸಿ ರಾಜ್ಯದ ಆರ್ಥಿಕಸ್ಥಿತಿಯನ್ನು ಕಾಪಾಡುವ ‘ಆರ್ಥಿಕ ಮುತ್ಸದ್ದಿ’ ಎನ್ನುವ ಹೊಗಳಿಕೆಗೆ ಪಾತ್ರರಾಗಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈಗ ಆರ್ಥಿಕ ಔಚಿತ್ಯದ ಸೂತ್ರ ( Canons of Financial Proproity )ಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪಂಚಗ್ಯಾರಂಟಿ ಯೋಜನೆಗಳಿಂದ ಸದ್ಯಕ್ಕೆ ತುಸು ಒಳಿತಾಗುತ್ತಿದೆ ಎನ್ನುವುದು ನಿಜವಾದರೂ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಮುಂಬರುವ ದಿನಗಳಲ್ಲಿ ಕೆಟ್ಟಪರಿಣಾಮ ಬೀರಲಿದೆ.ಮುಂಬರುವ ದಿನಗಳಲ್ಲಿ ಸರಕಾರಿ ನೌಕರರಿಗೆ ಸಂಬಳ ಕೊಡಲು ಸರಕಾರಿ ಆಸ್ತಿಗಳನ್ನು ಮಾರಬೇಕಾದ ಅನಿವಾರ್ಯತೆಗೆ ರಾಜ್ಯಸರಕಾರ ಸಿಲುಕಬಹುದು.ಕೇವಲ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠಸ್ಥಾನಗಳನ್ನು ಗೆಲ್ಲುವುದೊಂದನ್ನೇ ಗುರಿಯಾಗಿರಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೂರದೃಷ್ಟಿಯ ರಾಜಕಾರಣ,ರಾಜ್ಯದ ಹಿತವನ್ನು ಕಡೆಗಣಿಸಿ ರಾಜ್ಯಭಾರವನ್ನು ಮಾಡುತ್ತಿದ್ದಾರೆ.ಸರಕಾರದ ಸಾಲದ ಭಾರ ಗರಿಷ್ಠಮಟ್ಟಕ್ಕೆ ತಲುಪಿದೆ,ಬಡ್ಡಿಯ ಹೊಣೆಗಾರಿಕೆ ಅಧಿಕವಾಗಿದೆ.ಪಂಚಗ್ಯಾರಂಟಿಗಳ ಅನುಷ್ಠಾನಕ್ಕಾಗಿ ಬ್ಯಾಂಕುಗಳು,ಖಾಸಗಿವಲಯದ ಹಣಕಾಸು ಸಂಸ್ಥೆಗಳಿಂದಲೂ ಸಾಲಪಡೆಯಲಾಗುತ್ತಿದೆ.ಮತ್ತೊಂದೆಡೆ ಸರಕಾರದ ಕೆಲವು ಇಲಾಖೆಗಳಲ್ಲಿ ನಿಯತವಾಗಿ ಸಂಬಳ ಬಟಾವಡೆ ಆಗುತ್ತಿಲ್ಲ,ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸಂಬಳ ಕೊಡಲು ಆಗದ ಪರಿಸ್ಥಿತಿ ಇದೆ.ಅತಿಥಿ ಉಪನ್ಯಾಸಕರುಗಳ ಗೌರವಧನ ಹೆಚ್ಚಳ ಪಾವತಿಗೆ ಆಲೋಚಿಸಬೇಕಾದ ಪರಿಸ್ಥಿತಿ ಇದೆ.ಹೀಗಿದ್ದೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗ್ಯಾರಂಟಿಯೋಜನೆಗಳಿಗೆ ಅನುಷ್ಠಾನ ಸಮಿತಿಗಳನ್ನು ರಚಿಸಹೊರಟಿರುವುದು ‘ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆಯನ್ನಿಟ್ಟ’ ಸ್ಥಿತಿಯಾಗಿದೆ.

ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯದ ಹಿರಿಯ ಕಾಂಗ್ರೆಸ್ ಶಾಸಕರುಗಳಾದ ಆರ್ ವಿ ದೇಶಪಾಂಡೆ,ಬಿ ಆರ್ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿಯವರ ಅತೃಪ್ತಿಶಮನಕ್ಕಾಗಿ ಅವರುಗಳಿಗೆ ಸಂಪುಟದರ್ಜೆಯ ಸ್ಥಾನಮಾನ ನೀಡಲಾಗಿದೆ.ಮುಖ್ಯಮಂತ್ರಿಗಳ ಇಬ್ಬರು ರಾಜಕೀಯ ಕಾರ್ಯದರ್ಶಿಗಳು ಸಂಪುಟ ದರ್ಜೆಯ ಸ್ಥಾನಮಾನ ಪಡೆದಿದ್ದಾರೆ.ಕಾಂಗ್ರೆಸ್ ಪಕ್ಷದ ಗೆಲುವಿನ ರೂವಾರಿ ಎಂದೇ ಬಿಂಬಿಸಲ್ಪಟ್ಟಿರುವ ಸುನೀಲ್ ಕನಿಮೋಲ್ ಮತ್ತು ಮುಖ್ಯಮಂತ್ರಿಯವರ ಮಾಧ್ಯಮಕಾರ್ಯದರ್ಶಿ ಪ್ರಭಾಕರ ಅವರಿಬ್ಬರೂ ಸಂಪುಟದರ್ಜೆಯ ಸಚಿವ ಸ್ಥಾನಮಾನವನ್ನು ಅನುಭವಿಸುತ್ತಿದ್ದಾರೆ.ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿದ್ದನ್ನು ‘ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪ್ರಾತಿನಿಧ್ಯ’ ಎಂದು ಆಕ್ಷೇಪಿಸಿ ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಉದಾರವಾಗಿ ಪರಿಶೀಲಿಸಿ ‘ ಕ್ಯಾಬಿನೆಟ್ ಸಚಿವರ ಸ್ಥಾನಮಾನವೇ ಬೇರೆ,ಕ್ಯಾಬಿನೆಟ್ ದರ್ಜೆಯ ಇತರರ ಸ್ಥಾನಮಾನವೇ ಬೇರೆ’ ಎಂದು ತೀರ್ಪು ನೀಡಿ ಮುಖ್ಯಮಂತ್ರಿಯವರನ್ನು ನಿರಾಳ ಮಾಡಿತ್ತು.ಹೈಕೋರ್ಟಿನ ಈ ಔದಾರ್ಯವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ರಾಜಕೀಯ ತಂತ್ರಗಾರಿಕೆಗೆ ಅದನ್ನು ಉಪಯೋಗಿಸಿಕೊಂಡು ಕಾಂಗ್ರೆಸಪಕ್ಷದ ಅತೃಪ್ತರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವ ಮೂಲಕ ‘ಸೀಮೋಲ್ಲಂಘನ’ ಮಾಡುತ್ತಿದ್ದಾರೆ.ಸಚಿವರುಗಳಿಗೆ ಅವರು ಆಯಾ ಇಲಾಖೆಯ ಮುಖ್ಯಸ್ಥರುಗಳಾಗಿರುವುದರಿಂದ ಕ್ಯಾಬಿನೆಟ್ ದರ್ಜೆ ನೀಡುವುದು ಸಮರ್ಥನೀಯವಾದುದು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಿಗೆ,ಸಲಹೆಗಾರರುಗಳಿಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ನೀಡುವುದು ಎಷ್ಟುಸರಿ ? ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು,ಸಲಹೆಗಾರರುಗಳು ಕ್ಯಾಬಿನೆಟ್ ಸಚಿವರ ಸ್ಥಾನಮಾನವನ್ನು ಪಡೆದು ಸಾಧಿಸುವ ‘ಘನಕಾರ್ಯ’ ವಾದರೂ ಏನು? ಕನಿಮೋಲ್ ಮತ್ತು ಪ್ರಭಾಕರ ಅವರಿಬ್ಬರಿಗೆ ಕ್ಯಾಬಿನೆಟ್ ಸ್ಥಾನ ಮಾನ ನೀಡಿರುವ ಔಚಿತ್ಯವೇನು ? ಕರ್ನಾಟಕ ಹೈಕೋರ್ಟಿನ ಅಭಿಪ್ರಾಯದಂತೆ ಇವರು ಕ್ಯಾಬಿನೆಟ್ ಸಚಿವರಷ್ಟು ಪ್ರಭಾವಶಾಲಿ ಅಧಿಕಾರಹೊಂದಿಲ್ಲದೆ ಇರಬಹುದು ಆದರೆ ಕ್ಯಾಬಿನೆಟ್ ಸಚಿವರುಗಳಿಗೆ ನಿಗದಿಯಾದ ಸಂಬಳ – ಸಾರಿಗೆ-ಸವಲತ್ತು – ಸಿಬ್ಬಂದಿ ಯವರನ್ನು ಪಡೆಯುತ್ತಾರೆ.ಅದಕ್ಕಾಗಿ ಹಣವ್ಯಯಿಸಲೇಬೇಕು.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತರು,ಸಲಹೆಗಾರರು ಹೊಂದಿರುವ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಾರ್ವಜನಿಕರ ತೆರಿಗೆಯ ಹಣಕ್ಕೆ ವ್ಯರ್ಥಭಾರ,ಅನಗತ್ಯ ಹೊರೆ.ಅಂತಹದ್ದರಲ್ಲಿ ಗ್ಯಾರಂಟಿಗಳ ರಾಜ್ಯ ಸಮಿತಿಯ ಅಧ್ಯಕ್ಷರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನವನ್ನು,ಉಪಾಧ್ಯಕ್ಷರಿಗೆ ರಾಜ್ಯಸಚಿವ ಸ್ಥಾನಮಾನವನ್ನು ‘ದಯಪಾಲಿಸುತ್ತಿ’ರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಮಿತಿಗಳ ಪದಾಧಿಕಾರಿಗಳು,ಸದಸ್ಯರುಗಳಿಗೆ ₹50,000,₹25000 ಗಳ ಸಂಬಳದೊಂದಿಗೆ ಮತ್ತಿತರ ಸವಲತ್ತುಗಳನ್ನು ‘ ಅನುಗ್ರಹಿಸಲು’ ಹೊರಟಿದ್ದಾರೆ.ಮುಖ್ಯಮಂತ್ರಿಯವರ ಲೆಕ್ಕಾಚಾರದಂತೆ ಆದರೂ ಆರುಕೋಟಿ ಹಣವೇನು ಕಡಿಮೆ ಮೊತ್ತವಲ್ಲವಲ್ಲ.ರಾಜ್ಯವು ಬರಗಾಲದ ಬವಣೆಯನ್ನು ಅನುಭವಿಸುತ್ತಿರುವಾಗ,ರೈತರು ತಲೆಯಮೇಲೆ ಕೈಹೊತ್ತು ಕುಳಿತಿರುವಾಗ ಆರುಕೋಟಿಹಣ ಸಣ್ಣಮೊತ್ತವಲ್ಲ ಎನ್ನಿಸುವುದಿಲ್ಲವೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ?

ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳನ್ನು ಪದಾಧಿಕಾರಿಗಳು ಮತ್ತು ಸದಸ್ಯರುಗಳನ್ನಾಗಿ ನೇಮಿಸುವುದರಿಂದ ಸರಕಾರಿ ಆಡಳಿತ ಯಂತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.ಗ್ಯಾರಂಟಿ ಯೋಜನೆಗಳ ಸಮಿತಿಗಳು ಆಶ್ರಯ,ಆರಾಧನಾ ಮೊದಲಾದ ಸಮಿತಿಗಳಂತಲ್ಲ,ಗ್ಯಾರಂಟಿಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಲೋಕಸಭಾ ಚುನಾವಣೆಯನ್ನು ಲಕ್ಷ್ಯದಲ್ಲಿರಿಸಿಕೊಂಡು ಜನ್ಮತಳೆಯಲಿರುವ ಗ್ಯಾರಂಟಿ ಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರುಗಳಿಗೆ ಸ್ವಲ್ಪ ‘ ವಿಶೇಷ’ ಎನ್ನಬಹುದಾದ ಅಧಿಕಾರ ನೀಡಲಾಗುತ್ತದೆ.ಪಕ್ಷ ಯಾವುದೇ ಇರಲಿ ಅದರ ಚುನಾವಣಾ ಪ್ರಣಾಳಿಕೆಯಲ್ಲಿರುವ ಅಂಶಗಳು ಜನಪರ ಯೋಜನೆಗಳಾಗಿ,ಅಭಿವೃದ್ಧಿ ಯೋಜನೆ,ಕಾರ್ಯಕ್ರಮಗಳಾಗಿ ರೂಪುಗೊಳ್ಳುತ್ತವೆ.ಅವುಗಳ ಅನುಷ್ಠಾನದ ಹೊಣೆಗಾರಿಕೆ ಸರಕಾರಿ ಅಧಿಕಾರಿಗಳು ಮತ್ತು ನೌಕರರವರ್ಗದ್ದು.ಸಾರ್ವಜನಿಕ ಸೇವಕರ ಕರ್ತವ್ಯವನ್ನು ಕಾಂಗ್ರೆಸ್ ಕಾರ್ಯಕರ್ತರುಗಳಿಗೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಉದ್ದೇಶವೇನು ? ರಾಜ್ಯಸರಕಾರದ,ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿ ಸಾರ್ವಜನಿಕ ಸೇವಕರುಗಳಾದ ಸರಕಾರಿ ಅಧಿಕಾರಿಗಳು,ನೌಕರರುಗಳ ಸ್ಥೈರ್ಯಕುಗ್ಗಿಸುವ,ಕುಂದಿಸುವ ಕೆಲಸವನ್ನು ಅವರು ಮಾಡಬಾರದಿತ್ತು.ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲುಸ್ತುವಾರಿಗಾಗಿ ಸಚಿವರುಗಳಿದ್ದಾರೆ,ಹಿರಿಯ ಐಎಎಸ್ ಅಧಿಕಾರಿಗಳಿದ್ದಾರೆ,ಜಿಲ್ಲಾ ಮಟ್ಟದ ಮತ್ತು ತಾಲೂಕಾ ಮಟ್ಟದ ಅನುಷ್ಠಾನಾಧಿಕಾರಿಗಳಿದ್ದಾರೆ.ಇಂತಹ ಬಹುದೊಡ್ಡ ಸರಕಾರಿ ಆಡಳಿತ ಯಂತ್ರವನ್ನು ಹೊಂದಿಯೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ಗ್ಯಾರಂಟಿ ಯೋಜನೆಗಳಲ್ಲಿ ಅಧಿಕಾರಕೊಡ ಹೊರಟಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಲೋಚನೆ ಸರಿಯಾದುದಲ್ಲ,ಜನಪರವಾದುದಲ್ಲ,ಆಡಳಿತನೀತಿಗನುಗುಣವಾದುದಲ್ಲ.ಗ್ಯಾರಂಟಿ ಯೋಜನೆಗಳ ಸಮಿತಿಗಳಿಗೆ ಪದಾಧಿಕಾರಿಗಳು,ಸದಸ್ಯರುಗಳು ಆಗಿ ನೇಮಕಗೊಳ್ಳುವವರು ಉತ್ತಮ ವಿದ್ಯಾಭ್ಯಾಸ ಹೊಂದಿರುವ ಬಗ್ಗೆ ಖಚಿತತೆ ಏನು? ಸರಕಾರಿ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡುವ ನೈಪುಣ್ಯ ಸಿದ್ಧಿಸಿರುತ್ತದೆಯೆ ಸಮಿತಿಗಳಿಗೆ ನೇಮಕಗೊಳ್ಳುವವರಿಗೆ?ಆಡಳಿತವು ಸಾರ್ವಜನಿಕರಿಗೆ ಸಂಬಂಧಿಸಿದ್ದು ಸಾರ್ವಜನಿಕ ಸೇವಕರುಗಳಾದ ಸರಕಾರಿ ನೌಕರರುಗಳಿಂದಲೇ ನಿರ್ವಹಿಸಲ್ಪಡಬೇಕು.ಪಂಚಗ್ಯಾರಂಟಿ ಯೋಜನೆಗಳಿಂದ ರಾಜ್ಯದಬೊಕ್ಕಸದ ಮೇಲೆ ದೂರಗಾಮಿ ಪರಿಣಾಮಗಳಾಗುವಂತೆಯೇ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ಗ್ಯಾರಂಟಿ ಸಮಿತಿಗಳಿಗೆ ನೇಮಿಸುವುದು ಆಡಳಿತಯಂತ್ರದ ಮೇಲೆ ದುಷ್ಪರಿಣಾಮ ಬೀರುತ್ತದೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗರಿಷ್ಠಸ್ಥಾನಗಳನ್ನು ತಂದುಕೊಡುವುದೊಂದೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೊದಲ ಆದ್ಯತೆಯಾಗಿರುವಾಗ ಆರ್ಥಿಕ ಔಚಿತ್ಯಸೂತ್ರಗಳಾಗಲಿ,ಜನಸ್ನೇಹಿ ಉತ್ತಮ ಆಡಳಿತ ತತ್ತ್ವಗಳಾಗಲಿ ಅವರಿಗೆ ಹಿಡಿಸುವುದಿಲ್ಲ.

೧೨.೦೧.೨೦೨೪

About The Author