ಬಸವೋಪನಿಷತ್ತು ೧೦ : ಜನಕಲ್ಯಾಣಕ್ಕೆ ಬಳಸದ ಸಂಪತ್ತು ವ್ಯರ್ಥ

ಬಸವೋಪನಿಷತ್ತು ೧೦ : ಜನಕಲ್ಯಾಣಕ್ಕೆ ಬಳಸದ ಸಂಪತ್ತು ವ್ಯರ್ಥ : ಮುಕ್ಕಣ್ಣ ಕರಿಗಾರ

ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ ಪಾತ್ರಕ್ಕೆ ಸಲ್ಲದಯ್ಯಾ !
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ !
ನಮ್ಮ ಕೂಡಲ ಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ,ಕಂಡಯ್ಯಾ !

ಬಸವಣ್ಣನವರು ಸಂಪತ್ತಿನ ಸದ್ವಿನಿಯೋಗ,ಸದ್ಬಳಕೆಯ ಬಗ್ಗೆ ಮಾರ್ಮಿಕವಾದ ಮಾತುಗಳನ್ನಾಡಿದ್ದಾರೆ ಈ ವಚನದಲ್ಲಿ.ನೀಚಜನರ ಸಂಪತ್ತು ಅವರ ದುಷ್ಕಾರ್ಯಗಳ ಫಲವಾದ ಪ್ರಾಯಶ್ಚಿತ್ತಕ್ಕೆ ದುರ್ವಿನಿಯೋಗವಾಗುವುದಲ್ಲದೆ ಅದು ಒಳ್ಳೆಯ ಕಾರ್ಯಗಳಿಗೆ ಬಳಕೆಯಾಗುವುದಿಲ್ಲ.ನಾಯಿಯ ಹಾಲನ್ನು ನಾಯಿಮರಿಯೇ ಕುಡಿಯಬೇಕಲ್ಲದೆ ಅದು ಶಿವಾರ್ಚನೆಯ ಪಂಚಾಮೃತದಲ್ಲಿ ಸಲ್ಲದು.ಶಿವಭಕ್ತರಿಗಾಗಿ ಮಾಡದೆ ಬೇರೆಯ ಜನರಿಗೆ,ಕೆಲಸ ಕಾರ್ಯಗಳಿಗೆ ಹಣ ಖರ್ಚು ಮಾಡಿದರೆ ಅದು ವ್ಯರ್ಥವಲ್ಲದೆ ಅದರಿಂದ ಯಾವ ಫಲವೂ ಸಿಗದು ಎನ್ನುವ ಬಸವಣ್ಣನವರು ಸಂಪತ್ತು ಸಮಾಜದ ಕಲ್ಯಾಣಕ್ಕಾಗಿ,ದುರ್ಬಲರ ಏಳಿಗೆಗಾಗಿ ವಿನಿಯೋಗವಾದರೆ ಮಾತ್ರ ಅದು ಸಾರ್ಥಕತೆಯನ್ನು ಪಡೆಯುತ್ತದೆ ಎನ್ನುತ್ತಾರೆ.

ಬಸವಣ್ಣನವರು ಈ ವಚನಾರಂಭದಲ್ಲಿ ‘ ಪಾಪಿಯ ಧನ’ ಎನ್ನುತ್ತಾರೆ ಎನ್ನುವುದು ಗಮನಿಸಬೇಕಾದುದು.ಸಂಪತ್ತನ್ನು ವಾಮಮಾರ್ಗದಿಂದ ಗಳಿಸುವವರೇ ಪಾಪಿಗಳು.ಸತ್ಯಶುದ್ಧ ಕಾಯಕದಿಂದ ಸಂಪಾದಿಸಿದುದು ಪುಣ್ಯಾರ್ಜನೆ ಎನ್ನಿಸಿಕೊಳ್ಳುತ್ತಿದ್ದು ಅದು ಸತ್ಕಾರ್ಯಕ್ಕೆ ಸಲ್ಲುತ್ತದೆ.ಜೂಜು,ಪಂದ್ಯ, ಮಟ್ಕಾ,ಬಡ್ಡಿಯಿಂದ ಗಳಿಸುವ ಹಣವು ವಾಮಮಾರ್ಗದ ಗಳಿಕೆಯಾಗಿದ್ದು ಅದು ಪಾಪಿಯಧನವಾಗಿದ್ದು ಅದು ಸತ್ಕಾರ್ಯಕ್ಕೆ ಬಳಸಲ್ಪಡದು.ಶಿವನು ಹುಟ್ಟಿಸಿದ ಜೀವರುಗಳಿಗೆ ತಲೆ,ಕೈಕಾಲುಗಳನ್ನು ಕೊಟ್ಟಿದ್ದಾನೆ.ನಿಮ್ಮ‌ಕೈಕಾಲುಗಳ ಪರಿಶ್ರಮದಿಂದ ಇಲ್ಲವೆ ನಿಮ್ಮ ಬುದ್ಧಿಯ ಬಲದಿಂದ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಿ,ನಿಮ್ಮನ್ನು ಆಶ್ರಯಿಸಿದವರ ಹೊಟ್ಟೆಗಳನ್ನು ಹೊರೆಯಿರಿ ಎನ್ನುವುದು ವಿಶ್ವೇಶ್ವರನಾದ ಶಿವನ ಸಂಕಲ್ಪ.ಅದನ್ನು ಬಿಟ್ಟು ದುಡಿಯದೆ ಮೈಗಳ್ಳರಾಗಿ ಮತ್ತೊಬ್ಬರ ಹೊಟ್ಟೆಯ ಅನ್ನ ಕಸಿದುಕೊಂಡು ಬದುಕುವ ಕುನ್ನಿ ಜೀವಿಗಳಿಗೆಲ್ಲಿ ಸದ್ಗತಿ? ಜೂಜು,ಪಂದ್ಯ, ಇಸ್ಪೀಟ್, ಮಟ್ಕಾಗಳು ಮೈಗಳ್ಳರ ಸಂಪಾದನಾ ಮಾರ್ಗ.ಅದರಿಂದ ಕುಟುಂಬಗಳು ಹಾಳಾಗುತ್ತವೆ.ಬಡ್ಡಿ ವ್ಯವಹಾರವಂತೂ ಶಿವದ್ರೋಹ,ಮಹಾಮೋಸ.ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವುದು ಧರ್ಮ.ಅದನ್ನು ಬಿಟ್ಟು ಬಡ್ಡಿಗೆ ಸಾಲ ನೀಡಿ,ಆ ಬಡ್ಡಿಗೆ ಚಕ್ರಬಡ್ಡಿ ಸೇರಿಸುತ್ತ ಬಡವರ ರಕ್ತಹಿಂಡುವುದು ಅತ್ಯಂತ ಹೀನವಾದ ಪಾಪಕಾರ್ಯ.ಹಿಂದೆ ಹತ್ತು ರೂಪಾಯಿ ಸಾಲಕೊಟ್ಟು ಬಡವರ ಹೊಲ ಮನೆಗಳನ್ನು ನುಂಗಿ ಭೂಮಾಲೀಕರುಗಳಾಗಿದ್ದಾರೆ,ನೂರು ಸಾವಿರ ಎಕರೆಯ ಭೂಮಿಯ ಒಡೆಯರಾಗಿದ್ದಾರೆ ಭೂಮಾಲೀಕರುಗಳು.ಭೂಮಿಯು ಎಲ್ಲರಿಗೂ ಸೇರಿದ್ದು.ಭೂಮಿಯನ್ನು ಅನುಭವಿಸುವ ಹಕ್ಕು ಎಲ್ಲರಿಗೂ ಇದೆ.ಆದರೆ ಇಂದಿಗೂ ಕೆಲವರು ನೂರು,ಸಾವಿರ ಎಕರೆಗಳ ಲೆಕ್ಕದಲ್ಲಿ ಭೂಮಿಯನ್ನು ಹೊಂದಿದ್ದರೆ ಮತ್ತೆ ಕೆಲವರಿಗೆ ಅಂಗೈಯಗಲ ಭೂಮಿಯೂ ಇಲ್ಲ.ಉಳ್ಳವರು ಭೂಮಿಯನ್ನು ಅನ್ಯಾಯದಿಂದ,ವಾಮಮಾರ್ಗದಿಂದ ಸಂಪಾದಿಸಿದ್ದಾರೆ.ಇದೇ ಪಾಪಿಯ ಆಸ್ತಿ.ಬಡ್ಡಿಗೆ ಚಕ್ರಬಡ್ಡಿ ಹಾಕಿ ಬಡವರ ಹೊಲಮನೆಗಳನ್ನು ಕಸಿದುಕೊಂಡು ಸಂಪಾದಿಸಿರುವುದೇ ಪಾಪಿಯಧನ.ಆಧುನಿಕ ಜಗತ್ತಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಭ್ರಷ್ಟಾಚಾರದಿಂದ ಸಂಪಾದಿಸುವ ಹಣವು ಪಾಪಿಯಧನ ! ಸರಕಾರವು ತನ್ನ ಅಧಿಕಾರಿ,ನೌಕರರುಗಳಿಗೆ ಕೈತುಂಬ ಅಂದರೆ ಅವರು ಉತ್ತಮ ಜೀವನ ನಿರ್ವಹಣೆಮಾಡಿಯೂ ಮಿಕ್ಕುವಷ್ಟು ಸಂಬಳ,ಸೌಲತ್ತುಗಳನ್ನು ನೀಡುತ್ತಿದೆ.ಆದರೂ ಹಣಕೊಡದೆ ಸರಕಾರಿ ಕಛೇರಿಗಳಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ಆಗದಂತಹ ಪರಿಸ್ಥಿತಿ ಉಂಟಾಗಿದೆ.ಸರಕಾರಿ ಅಧಿಕಾರಿಗಳು,ನೌಕರರುಗಳ ಹಣದಾಹದಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.ಪ್ರಾಮಾಣಿಕ ಸರಕಾರಿ ನೌಕರರು ಹೊಟ್ಟೆಬಟ್ಟೆಯ ಚಿಂತೆಯಿಲ್ಲದೆ ನೆಮ್ಮದಿಯ ಜೀವನ ನಡೆಸುತ್ತಾರೆ.ಪ್ರಾಮಾಣಿಕ ಅಧಿಕಾರಿಗಳಿಗೆ ಉಂಡದ್ದು ಜೀರ್ಣವಾಗುತ್ತದೆ,ರಾತ್ರಿ ಮಲಗಿದೊಡನೆ ಸುಖನಿದ್ದೆ ಬರುತ್ತದೆ.ಆದರೆ ಲಂಚಕೋರರಾಗಿ ಕೋಟಿ ಕೋಟಿಗಳನ್ನು ಸಂಪಾದಿಸಿ ಅರಮನೆಯಂತಹ ಮನೆಗಳನ್ನು ಕಟ್ಟಿಸಿದವರಿಗೆ,ಕಂಡಕಂಡಲ್ಲಿ ಭೂಮಿ ಖರೀದಿಸಿದವರಿಗೆ,ಮನೆಯಲ್ಲಿ ಬಂಗಾರದ ಬಿಸ್ಕಿತ್ತುಗಳು,ನಗ ನಾಣ್ಯಗಳನ್ನು ಸಂಗ್ರಹಿಸಿಟ್ಟುಕೊಂಡವರಿಗೆ ನಿದ್ದೆಯೇ ಬರುವುದಿಲ್ಲ.ರಕ್ತದೊತ್ತಡ ( ಬಿ.ಪಿ) ಮಧುಮೇಹ ( ಸಕ್ಕರೆ ಕಾಯಿಲೆ) ಗಳಂತಹ ಹತ್ತಾರು ರೋಗಗಳು ಅವರನ್ನು ಕಾಡುತ್ತಿರುತ್ತವೆ.ಉಂಡದ್ದು ಜೀರ್ಣವಾಗದೆ ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಮಾತ್ರೆಗಳನ್ನು ನುಂಗಬೇಕಾದ ದಯನೀಯ ಸ್ಥಿತಿ.ರಾತ್ರಿ ಹಾಸಿಗೆಯಲ್ಲಿ ಮಲಗಿದರೆ ನಿದ್ದೆ ಬರುವುದಿಲ್ಲ, ಏನೇನೋ ಕೆಟ್ಟ ಕಲ್ಪನೆಗಳು,ಯಾವುದೋ ಭಯ ಆತಂಕ ಕಾಡುತ್ತಿರುತ್ತದೆ.ಲೋಕಾಯುಕ್ತ ಅಧಿಕಾರಿಗಳು ಬಂದಾರು,ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿಯಾರು ಎನ್ನುವ ಚಿಂತೆಯಲ್ಲಿ ನಿದ್ದೆಗಾಣದೆ ಒದ್ದಾಡುತ್ತಿರುತ್ತಾರೆ ಭ್ರಷ್ಟ ಅಧಿಕಾರಿ,ನೌಕರರುಗಳು.ಕೆಲವರ ಭ್ರಷ್ಟಾಚಾರ ವಿಪರೀತವಾಗಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಅವರ ಆಸ್ತಿಯನ್ನು ಜಪ್ತಿ ಮಾಡುತ್ತಾರೆ.ಇದೇ ಪ್ರಾಯಶ್ಚಿತ್ತ.ಪಾಪಿಯ ಧನಕ್ಕೆ ಸಿಗುವ ಗೌರವ !ವಿಪರೀತ ಬಡ್ಡಿ ವಸೂಲಿ ಮಾಡಿ ಬದುಕುವವರು ಭವ್ಯ ಬಂಗಲೆ ಕಟ್ಟಿಸಿರಬಹುದು,ಒಂದಲ್ಲ,ಹತ್ತಾರು ಕಾರುಗಳನ್ನು ಹೊಂದಿರಬಹುದು; ಮೈತುಂಬ ಬಂಗಾರದ ಆಭರಣಗಳನ್ನು ಧರಿಸಿರಬಹುದು.ಆದರೆ ಅವರ ವೈಯಕ್ತಿಕ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ.ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡುತ್ತಲೇ ಇರುತ್ತದೆ,ಯಾವುದಾದರೂ ಸಮಸ್ಯೆಗಳು ಬರುತ್ತಲೇ ಇರುತ್ತವೆ.ಬಡ್ಡಿಯಿಂದ ಹಣ ಸಂಪಾದಿಸಿದವರು,ಸಾರ್ವಜನಿಕರಿಂದ ಲಂಚಪಡೆಯುವ,ಸಾರ್ವಜನಿಕ ಸಂಪತ್ತನ್ನು ಕೊಳ್ಳೆ ಹೊಡೆಯುವ ಭ್ರಷ್ಟ ಸಾರ್ವಜನಿಕ ಸೇವಕರುಗಳು ದೊಡ್ಡ ದೊಡ್ಡ ದೇವರುಗಳೆಂದು ಆ ಪೂಜೆ- ಈ ಸೇವೆ ಮಾಡಿಸಿದರೆ ಬಂಗಾರ- ವಜ್ರದ ಕಿರೀಟಗಳನ್ನು ದೇವರಿಗೆ ಅರ್ಪಿಸಿದರೆ ಗೈದ ಪಾಪದಿಂದ ಪಾರಾಗಲು ಸಾಧ್ಯವೆ ? ಖಂಡಿತ ಸಾಧ್ಯವಿಲ್ಲ.ದೇವಸ್ಥಾನಗಳ ಹುಂಡಿಗೆ ಸಾವಿರ ಲಕ್ಷಗಟ್ಟಲೆ ಕಾಣಿಕೆ ಸಲ್ಲಿಸಬಹುದು,ದೇವರುಗಳಿಗೆ ಬಂಗಾರ ಬೆಳ್ಳಿಯ ಆಭರಣ,ಅಲಂಕಾರ ಸಾಮಗ್ರಿಗಳನ್ನು ಸಲ್ಲಿಸಬಹುದು .ಅದರಿಂದ ಪ್ರತಿಷ್ಠೆ ಪಡೆಯಬಹುದೇ ಹೊರತು ಪಾಪಮುಕ್ತರಾಗಲು ಸಾಧ್ಯವಿಲ್ಲ.ನಾಯಿಯ ಹಾಲನ್ನು ನಾಯಿ ಮರಿಯೇ ಕುಡಿಯಬೇಕಲ್ಲದೆ ಅದನ್ನು ಶಿವಲಿಂಗ ಇಲ್ಲವೆ ಮೂರ್ತಿಗಳ ಪಂಚಾಮೃತ ಸೇವೆಯಲ್ಲಿ ಬಳಸುವುದಿಲ್ಲ.ಶಿವನು ‘ಅಭಿಷೇಕಪ್ರಿಯ’ ನಾದ್ದರಿಂದ ಶಿವನ ಲಿಂಗ ಅಥವಾ ಮೂರ್ತಿಯನ್ನು ಹಾಲು,ಮೊಸರು,ತುಪ್ಪ,ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣದಿಂದ ಅಭಿಷೇಕ ಮಾಡುವುದು ಪಂಚಾಮೃತಪೂಜೆ ಎನ್ನಿಸಿಕೊಳ್ಳುತ್ತದೆ.ಈ ಪಂಚಾಮೃತದಲ್ಲಿ ಆಕಳ ಹಾಲನ್ನು ಬಳಸುತ್ತಾರೆಯೇ ಹೊರತು ನಾಯಿ ಮರಿಹಾಕಿದೆ ಅದರ ಹಾಲನ್ನು ಕರೆದು ಅಭಿಷೇಕ ಮಾಡಿ ಎನ್ನುವುದಿಲ್ಲ ! ಹಸು ಒಣ ಹುಲ್ಲನ್ನು ತಿಂದು ಅಮೃತಸಮಾನ ಹಾಲನ್ನು ಕೊಡುವ ಸಾಧುಸ್ವಭಾವದ ಪರೋಪಕಾರ ಜೀವಿಯಾದುದರಿಂದ ಅದರ ಹಾಲು ಶಿವನಿಗೆ ಪ್ರಿಯವೆನ್ನಿಸಿ ಪಂಚಾಮೃತಕ್ಕೆ ಸಲ್ಲಿತು.ಆದರೆ ನಾಯಿ ಸತ್ತಪ್ರಾಣಿಗಳ ಮಾಂಸ ತಿನ್ನುತ್ತ,ಕಂಡವರಿಗೆಲ್ಲ ಬೊಗಳುತ್ತ ಕಚ್ಚುತ್ತ ತಿರುಗುವ ಪರೋಪದ್ರವಜೀವಿಯಾದದ್ದರಿಂದ ಅದರ ಹಾಲು ಪಂಚಾಮೃತಕ್ಕೆ ಸಲ್ಲಲಿಲ್ಲ.

ವಚನದ ಕೊನೆಯ ಎರಡು ಸಾಲುಗಳಲ್ಲಿ ಬಸವಣ್ಣನವರು ಶಿವಶರಣರ ಸೇವೆಗಾಗಿ ಬಳಸದ ಸಂಪತ್ತು ವ್ಯರ್ಥ ಎನ್ನುತ್ತಾ ಒಂದು ಮಹತ್ವದ ಸಂದೇಶವನ್ನು ಸಾರಿದ್ದಾರೆ ಲೋಕಕ್ಕೆ.ಶಿವಶರಣರು ಸತ್ಯಶುದ್ಧ ಕಾಯಕನಿಷ್ಠೆಯುಳ್ಳವರಾಗಿದ್ದುದರಿಂದ ಅವರಲ್ಲಿ ಧನಸಂಪಾದನೆ ಆಗುವುದಿಲ್ಲ.ಸಮಾಜದ ಉಳ್ಳವರು ಶಿವಶರಣರ ಮನೆಗಳು- ಬದುಕುಗಳ ಹೊಣೆ ಹೊತ್ತು ನಿರ್ವಹಿಸಬೇಕು,ಶಿವಶರಣರ ಬದುಕುಗಳಿಗೆ ಆಶ್ರಯ ಕಲ್ಪಿಸಿಕೊಡಬೇಕು.ಕೇವಲ ಸಾಧು- ಶರಣರು ಮಾತ್ರ ಇಲ್ಲಿ ‘ ಕೂಡಲ ಸಂಗನ ಶರಣರ’ಲ್ಲ ; ಸಮಾಜದ ದುರ್ಬಲರು,ಬಡವರು,ಶೋಷಿತರುಗಳೆಲ್ಲ ಕೂಡಲಸಂಗನ ಶರಣರೆ ! ಅಂತಹ ಪದದುಳಿತರ ಉನ್ನತಿಗಾಗಿ,ಬೆಂದವರ ಬೇಗುದಿ ಶಮನಕ್ಕಾಗಿ,ನೊಂದವರ ನಿಟ್ಟುಸಿರು ಕಡಿಮೆ ಮಾಡಲು,ಬಡವರ ಕಣ್ಣೀರು ಒರೆಸಲು ಸಂಪತ್ತಿನ ವಿನಿಯೋಗವಾದರೆ ಅದು ಸತ್ಕಾರ್ಯ,ಶಿವಕಾರ್ಯ.ಇಂತಹ ಪರೋಪಕಾರಿಗಳಲ್ಲಿ ಪ್ರಸನ್ನನಾಗುತ್ತಾನೆ ಶಿವನು.ಧನ ಕನಕವನ್ನು ಮನೆಯಲ್ಲಿ ಪೇರಿಸಿಟ್ಟರೆ ಅದರಿಂದ ಪ್ರಯೋಜನವಿಲ್ಲ,ತನಗೆ ತನ್ನ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟು ಹಣ,ಬಂಗಾರವನ್ನಿಟ್ಟುಕೊಂಡು ಉಳಿದುದನ್ನು ಸಮಾಜದ ಬಡವರು,ದುರ್ಬಲರು,ನಿರ್ಗತಿಕರು,ನಿರಾಶ್ರಿತರ ಕಲ್ಯಾಣಕ್ಕೆ ಬಳಸಬೇಕು.ಮಠ ಪೀಠಾಧೀಶರುಗಳು,ಸ್ವಾಮಿಗಳಿಗೆ ಲಕ್ಷ ಲಕ್ಷ ಕಾಣಿಕೆ ಕೊಡುವುದು,ಅವರುಗಳಿಗೆ ಕಾರುಗಳನ್ನು ಕೊಡಿಸುವುದು, ಅವರನ್ನು ತಕ್ಕಡಿಯಲ್ಲಿಟ್ಟು ತುಲಾಭಾರ ಮಾಡುವುದು,ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕೂಡಿಸಿ ಮೆರೆಸುವುದು,ಅವರಿಗಾಗಿ ಒಡ್ಡೋಲಗ ಏರ್ಪಡಿಸುವುದು ಶಿವಕಾರ್ಯಗಳಲ್ಲದ ಪ್ರಾಯಶ್ಚಿತ್ತರೂಪದ ಪಾಪಕೃತ್ಯಗಳೆ ! ಇಂತಹ ಒಣಪ್ರತಿಷ್ಠೆ ಮೆರೆಯುವವರು ಪಾಪಿಗಳೇ ಹೊರತು ಪುಣ್ಯಾತ್ಮರಲ್ಲ!ದೇವರುಗಳಿಗೆ ರೇಷ್ಮೆಯ ವಸ್ತ್ರ,ಬಂಗಾರ ವಜ್ರದ ಆಭರಣಗಳನ್ನು ನೀಡುವುದರಿಂದ ಪ್ರಯೋಜನವಿಲ್ಲ.ಅದೇ ಹಣವನ್ನು ಸಮಾಜದಲ್ಲಿ ಸೂರಿಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟರೆ,ಹಸಿದ ಹೊಟ್ಟೆಗಳಿಗೆ ಅನ್ನವನ್ನು ನೀಡಿದರೆ,ಉಡಲು ತೊಡಲು ಇಲ್ಲದವರಿಗೆ ವಸ್ತ್ರ ಒಡವೆಗಳನ್ನಿತ್ತರೆ ಅದು ಸತ್ಕಾರ್ಯವಾಗುತ್ತದೆ,ಪುಣ್ಯಕಾರ್ಯ ಎನ್ನಿಸಿಕೊಳ್ಳುತ್ತದೆ.ಪರಶಿವನು ಇಂತಹ ಸತ್ಕಾರ್ಯಗಳನ್ನು ಮಾತ್ರ ಮೆಚ್ಚುತ್ತಾನೆ.ಅಗತ್ಯಕ್ಕಿಂತ ಹೆಚ್ಚಿಗೆ ಸಂಪಾದಿಸದೆ,ನ್ಯಾಯೋಚಿತ ಸಂಪಾದನೆಯಲ್ಲಿ ಒಂದು ಪಾಲನ್ನು ಸಮಾಜದ ದೀನ ದುರ್ಬಲರ ಏಳಿಗೆಗೆ ಬಳಸಿದರೆ ಅದುವೇ ಸೇವಾಯೋಗ.ಇಂತಹ ಸೇವಾಯೋಗಿಗಳನ್ನು ಬಹುಬೇಗನೆ ಒಲಿದು ಉದ್ಧರಿಸುತ್ತಾನೆ ಶಿವನು.

೧೦.೦೧.೨೦೨೪

About The Author