ತಾಲ್ಲೂಕ ಪಂಚಾಯತ ಸಾಮಾನ್ಯ ಸಭೆ : ಪ್ರಸ್ತುತ ಆರ್ಥಿಕ ವರ್ಷ ಮುಗಿಯುವ ಮುನ್ನ   ಕಾಮಗಾರಿಗಳನ್ನು ಪೂರ್ಣಗೊಳಿಸಿ : ಗುರುನಾಥ ಗೌಡಪ್ಪನೋರ

ಶಹಾಪುರ :ಪ್ರಸ್ತುತ ಆರ್ಥಿಕ ವರ್ಷ ಮುಗಿಯುವ ಮುನ್ನ   ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಶಹಾಪುರ ತಾಲ್ಲೂಕ ಪಂಚಾಯಿತಿ ಆಡಳಿತಾಧಿಕಾರಿ ಗುರುನಾಥ ಗೌಡಪ್ಪನೋರ  ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

 ಶಹಾಪುರ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ತಾಲ್ಲೂಕ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.ಕಾಮಗಾರಿಗಳ ನಿರ್ವಹಣೆಗೆ ನೀಡಿದ ಅನುದಾನ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಬಾರದು, ಆರ್ಥಿಕ ವರ್ಷ ಮುಗಿಯಲು ಇನ್ನೂ ಮೂರು ತಿಂಗಳಿದ್ದು,ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸಿ, ಯಾವುದೇ ಕಾಮಗಾರಿಗಳು ಬಾಕಿ ಉಳಿಯಬಾರದು ಎಂದು ಹೇಳಿದರು.

ತಾಲೂಕಿನ ಶೌಚಾಲಯಗಳ ನಿರ್ಮಾಣದ ಬಗ್ಗೆ ಶಾಲಾ ಶಿಕ್ಷಕರಿಗೆ ತಿಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜೀಲಿಯನ್ ಅವರಿಗೆ ಸೂಚಿಸಿದರು.
ಬಿಸಿಎಂ, ಅಲ್ಪ ಸಂಖ್ಯಾತರ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಡಿ ವಸತಿ ನಿಲಯಗಳಲ್ಲಿ ಮೇನುವಿನ ಪ್ರಕಾರ ಮಕ್ಕಳಿಗೆ ಆಹಾರ ಶುದ್ಧ ಕುಡಿಯುವ ನೀರು ಒದಗಿಸಿ. ಸ್ವಚ್ಛತೆ ಕಾಪಾಡಿ ಎಲ್ಲ ವಸತಿ ನಿಲಯಗಳಿಗೂ ಭೇಟಿ ನೀಡಿ ಸ್ವಚ್ಛತೆ ಕುರಿತು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ನಂತರ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಕರ ಬಿರಾದಾರ,ವಸತಿ ನಿಲಯದ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಗುಣಮಟ್ಟದ ಆಹಾರ ವಿತರಣೆ, ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಕಾಳಜಿ ವಹಿಸಿ, ಅಗತ್ಯ ಮೂಲ ಸೌಲಭ್ಯಗಳ ಲಭ್ಯತೆ ಹಾಗೂ ಕೊರತೆಗಳ ಕುರಿತು ವಸತಿ ನಿಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ ಎಂದು ಬಿಸಿಎಂ, ಅಲ್ಪ ಸಂಖ್ಯಾತರ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೋಬ್ಬರ ಕೊರತೆ ಇಲ್ಲ, ಅಗತ್ಯಕ್ಕೆ ಅನುಸಾರ ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ವರದಿ ಸಲ್ಲಿಸಿದರು. ಅನ್ಯ ಬೆಳೆಗಳನ್ನು ಬೆಳೆಯುವದರಿಂದ ರೈತರಿಗೆ ಸಿಗುವ ದುಪ್ಪಟ್ಟು ಲಾಭದ ಬಗ್ಗೆ ಗೊತ್ತಿರುವುದಿಲ್ಲ, ಹೀಗಾಗಿ ರೈತರಗೆ ಬೇರೆ,  ಬೇರೆ ಬೆಳೆಗಳ ಕುರಿತು ಮಾಹಿತಿ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾಮಾಜಿಕ ಅರಣ್ಯ, ಮೀನುಗಾರಿಕೆ, ರೇಷ್ಮೆ, ನಿರ್ಮಿತಿ, ಗ್ರಾಮೀಣ ಕುಡಿಯುವ ನೀರು, ಕೆಆರ್‌ಐಡಿಎಲ್, ಅಕ್ಷರ ಧಾಸೋಹ ತೋಟಗಾರಿಕೆ ಸೇರಿದಂತೆ ತಾಲ್ಲೂಕ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು.

ಸಹಾಯಕ ನಿರ್ದೇಶಕರಾದ ಭೀಮಣ್ಣಗೌಡ ಬಿರಾದಾರ, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ರಮೇಶ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶಿಬಾ ಜಿಲಿಯನ್, ಅಕ್ಷರ ಧಾಸೋಹ ಇಲಾಖೆ ಸಹಾಯಕ ನಿರ್ದೇಶಕರಾದ ಸೂರ್ಯವಂಶಿ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತ ಅಧಿಕಾರಿಗಳು, ಸಿಬ್ಬಂಧಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *