ಶಹಾಪುರ,,
ವೈದ್ಯರ ದಿನಾಚರಣೆಯ ಅಂಗವಾಗಿ ಯಾದಗಿರಿ ನಗರದ ಆಶೀರ್ವಾದ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಆಶೀರ್ವಾದ ಆಸ್ಪತ್ರೆಯಲ್ಲಿ ನಡೆಯಲಿರುವ ಶಿಬಿರದಲ್ಲಿ ಹಿರಿಯ ವೈದ್ಯರಾದ ಡಾ. ಸಿ.ಎಂ. ಪಾಟೀಲ ಅವರು ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಲಿದ್ದಾರೆ. ರಕ್ತ ಪರೀಕ್ಷೆ, ಬಿಪಿ, ಇಸಿಜಿ ಸೇರಿದಂತೆ ಅಗತ್ಯ ಮೂಲಭೂತ ಪರೀಕ್ಷೆಗಳನ್ನು ಉಚಿತವಾಗಿ ಮಾಡಿಕೊಡಲಾಗುವುದು.
ಇದೇ ವೇಳೆ ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ. ಎಚ್. ಭೀಮರೆಡ್ಡಿ ಪಾಟೀಲ ಅವರ ನೇತೃತ್ವದಲ್ಲಿ ನೇತ್ರ ತಪಾಸಣೆ ನಡೆಯಲಿದ್ದು, ಅಗತ್ಯವಿರುವ ಫಲಾನುಭವಿಗಳಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಯನ್ನೂ ಮುಂದಿನ ದಿನಗಳಲ್ಲಿ ನಡೆಸಲಾಗುವುದು.
ಸಮಾಜದ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದು ಡಾ. ಸಿ.ಎಂ. ಪಾಟೀಲ ತಿಳಿಸಿದ್ದಾರೆ.
ಶಿಬಿರದಲ್ಲಿ ಭಾಗವಹಿಸುವ ಪತ್ರಕರ್ತರಿಗೆ ಮಧ್ಯಾಹ್ನ ಭೋಜನ ವ್ಯವಸ್ಥೆ ಹಾಗೂ ವೈದ್ಯರೊಂದಿಗೆ ವೈಯಕ್ತಿಕ ಆರೋಗ್ಯ ಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದೆ.
ಯಾದಗಿರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪತ್ರಕರ್ತರು ತಮ್ಮ ಸಂಸ್ಥೆಯ ಅಧಿಕೃತ ಗುರುತಿನ ಚೀಟಿ ಅಥವಾ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಗುರುತಿನ ಚೀಟಿಯೊಂದಿಗೆ ಆಗಮಿಸಿ ಶಿಬಿರದ ಸದುಪಯೋಗ ಪಡೆಯುವಂತೆ ಸಂಘ ಮನವಿ ಮಾಡಿದೆ.
ಡಾ.ಎಚ್. ಭೀಮರೆಡ್ಡಿ ಪಾಟೀಲ, ನೇತ್ರ ತಜ್ಞ.
ಪತ್ರಕರ್ತರು ಸಮಾಜದ ಕಣ್ಣು ಮತ್ತು ಧ್ವನಿಯಾಗಿದ್ದಾರೆ. ಅವರ ದೃಷ್ಟಿ ಹಾಗೂ ಆರೋಗ್ಯ ಉತ್ತಮವಾಗಿದ್ದರೆ ಸಮಾಜಕ್ಕೂ ಉತ್ತಮ ಸೇವೆ ನೀಡಲು ಸಾಧ್ಯ. ಈ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪ್ರತಿಯೊಬ್ಬ ಪತ್ರಕರ್ತರೂ ಪಡೆದುಕೊಳ್ಳಬೇಕು.
– ಡಾ. ಎಚ್. ಭೀಮರೆಡ್ಡಿ ಪಾಟೀಲ, ನೇತ್ರ ತಜ್ಞ.
