ಬಸವರಾಜ ಕರೇಗಾರ
ಮೂಲಸೌಕರ್ಯ ಕೊರತೆಗೆ ಸಾರ್ವಜನಿಕರ ಆಕ್ರೋಶ
ಮುಖ್ಯಾಂಶಗಳು.
ವಡಗೇರಾ,,
ತಾಲೂಕು ಕೇಂದ್ರದಲ್ಲಿರುವ ಬಸ್ ನಿಲ್ದಾಣವು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಮಸ್ಯೆಗಳ ಕೂಪವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಬಸ್ ನಿಲ್ದಾಣಕ್ಕೆ ಅಗತ್ಯ ಸೌಲಭ್ಯಗಳು ಸಿಗದೇ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ನಿಲ್ದಾಣದಲ್ಲಿ ಬಸ್‌ಗಳ ನಿಯಮಿತ ನಿಲುಗಡೆ ಇಲ್ಲದಿರುವುದು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಲಭ್ಯವಾಗದಿರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುತ್ತಿವೆ.
ನಿಲ್ದಾಣದ ಶೌಚಾಲಯಗಳು ಸಂಪೂರ್ಣ ಹಾಳಾಗಿದ್ದು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣದ ಒಳಗಿರುವ ಬೋರ್‌ವೆಲ್ ಕೆಟ್ಟು ಹೋಗಿದ್ದು, ನೆಲಮಾಳಿಗೆಯ ನೀರಿನ ಟ್ಯಾಂಕ್ ತೆರೆದ ಸ್ಥಿತಿಯಲ್ಲೇ ಇರುವುದರಿಂದ ಮಕ್ಕಳು ಹಾಗೂ ವೃದ್ಧರಿಗೆ ಅಪಾಯದ ಭೀತಿ ಎದುರಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿ ಜಾಲಿ ಗಿಡಗಳು ಮತ್ತು ಮುಳ್ಳು ಕಂಟಿಗಳು ಬೆಳೆದು ನಿಂತಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಫ್ಯಾನ್ ಮತ್ತು ವಿದ್ಯುತ್ ದೀಪಗಳ ಕೊರತೆ, ಶೌಚಾಲಯಗಳ ಮೇಲ್ಚಾವಣಿ ಹಾಳಾಗಿರುವುದು ಹಾಗೂ ಸ್ವಚ್ಛತೆಯ ಅಭಾವದಿಂದ ಪ್ರಯಾಣಿಕರಿಗೆ ತೊಂದರೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರತಿದಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ಓಡಾಡುತ್ತಾರೆ. ಆದರೆ ಒಳಗಿರುವ ದುಸ್ಥಿತಿಯನ್ನು ಗಮನಿಸಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ.

ತಕ್ಷಣವೇ ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ದುರಸ್ತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಬಸ್ ನಿಲ್ದಾಣದಲ್ಲಿ ಭದ್ರತೆ ಕಾಪಾಡಲು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ರುದ್ರಾಂಭಿಕ ಆರ್. ಪಾಟೀಲ್ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಬಸ್ ನಿಲ್ದಾಣಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
