ಬಡವರ ಪಾಲಿನ ಸಂಜೀವಿನಿ: ಡಾ. ಯಲ್ಲಪ್ಪ ಹುಲ್ಕಲ್

ಬಸವರಾಜ ಕರೇಗಾರ 

ಸರ್ಕಾರಿ ಆಸ್ಪತ್ರೆಯನ್ನೇ ಹೈಟೆಕ್ ಕೇಂದ್ರವನ್ನಾಗಿ ರೂಪಿಸಿದ ಸರಳ ವೈದ್ಯ.
ಡಾ.ಯಲ್ಲಪ್ಪ ಪಾಟೀಲ್ ಹುಲ್ಕಲ್
ಆಡಳಿತ ವೈದ್ಯಾಧಿಕಾರಿ ಶಹಾಪುರ ಜಿ.ಯಾದಗಿರಿ

ಶಹಾಪುರ:
ಬಡತನದ ನಡುವೆ ಬೆಳೆದು, ಕಠಿಣ ಪರಿಶ್ರಮದಿಂದ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ, ಇಂದು ಸಾವಿರಾರು ಬಡವರ ಬದುಕಿಗೆ ಆಶಾಕಿರಣವಾಗಿರುವ ಹೆಸರು ಡಾ.ಯಲ್ಲಪ್ಪ ಹುಲ್ಕಲ್. ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅವರು ಮಾನವೀಯತೆ, ಸರಳತೆ ಮತ್ತು ಸೇವಾ ಮನೋಭಾವದಿಂದ ಜನಮನ ಗೆದ್ದಿದ್ದಾರೆ.
2018ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಡಾ. ಯಲ್ಲಪ್ಪ ಹುಲ್ಕಲ್ ಅವರು ಕಳೆದ ಏಳು ವರ್ಷಗಳಿಂದ ಯಶಸ್ವಿ ಶಸ್ತ್ರಚಿಕಿತ್ಸಕರಾಗಿ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಪ್ರಸ್ತುತ ಶಹಾಪುರ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಆಸ್ಪತ್ರೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳ ಕೊರತೆಯಿದ್ದ ಶಹಾಪುರ ಸರ್ಕಾರಿ ಆಸ್ಪತ್ರೆಯನ್ನು ಹಂತ ಹಂತವಾಗಿ ಸುಧಾರಿಸಿ, ಜನರ ವಿಶ್ವಾಸ ಗಳಿಸಿದ ಆರೋಗ್ಯ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಈ ಅಭಿವೃದ್ಧಿಗೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಸಹಕಾರವೂ ಪ್ರಮುಖವಾಗಿದೆ.
ವೈದ್ಯಕೀಯ ಸೇವೆಯಲ್ಲಿ ಅವರ ಮಾನವೀಯತೆ ಎಲ್ಲರ ಗಮನ ಸೆಳೆದಿದೆ. ಹಣವಿಲ್ಲದ ರೋಗಿಗಳಿಗೂ ಚಿಕಿತ್ಸೆ ನೀಡುವ ಮೂಲಕ “ವೈದ್ಯಕೀಯವೇ ಸೇವೆ” ಎಂಬ ಧ್ಯೇಯವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಡಾ.ಯಲ್ಲಪ್ಪ ಹುಲ್ಕಲ್ ಆಡಳಿತ ವೈದ್ಯಾಧಿಕಾರಿಯಾದ ನಂತರ ಬದಲಾದ ಸರ್ಕಾರಿ ಆಸ್ಪತ್ರೆ..
* ಆಸ್ಪತ್ರೆಯನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದರು.
* ವೈದ್ಯರಿಗೆ ಪ್ರತ್ಯೇಕ ಕೊಠಡಿಗಳ ನಿರ್ಮಾಣ.
* ನರ್ಸಿಂಗ್ ಸಿಬ್ಬಂದಿ ನೇಮಕಕ್ಕೆ ಒತ್ತು.
* ಡಯಾಲಿಸಿಸ್ ಕೇಂದ್ರ ಆರಂಭ.
* ಸಿಟಿ ಸ್ಕ್ಯಾನ್ ಹಾಗೂ ಅಲ್ಟ್ರಾಸೌಂಡ್ ಸೇರಿದಂತೆ ಆಧುನಿಕ ಪರೀಕ್ಷಾ ಸೌಲಭ್ಯ.
* ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆಸ್ಪತ್ರೆ ಆವರಣದಲ್ಲಿ ಉದ್ಯಾನವನ ನಿರ್ಮಾಣ.
* ರೋಗಿ ಸ್ನೇಹಿ ವಾತಾವರಣಕ್ಕೆ ಆದ್ಯತೆ.
ಯಶಸ್ವಿ ಶಸ್ತ್ರಚಿಕಿತ್ಸೆಗಳ ಸಾಧನೆ
* 60 ವರ್ಷದ ಮಹಿಳೆಯ ಹೊಟ್ಟೆಯಲ್ಲಿದ್ದ 3 ಕೆ.ಜಿ. ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಿದರು.
* 14 ವರ್ಷದ ಬಾಲಕಿಯ ದೇಹದಲ್ಲಿದ್ದ 5 ಕೆ.ಜಿ. ಗಡ್ಡೆಯನ್ನು ಯಶಸ್ವಿಯಾಗಿ ತೆಗೆದು ಜೀವ ಉಳಿಸಿದರು.
* ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ ದಂಪತಿಗಳಿಗೆ ಮರು ಸಂತಾನ ಪ್ರಾಪ್ತಿಯಾಗುವಂತೆ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದರು.
* ರಾತ್ರಿ 2 ಗಂಟೆಗೆ ತುರ್ತು ಪರಿಸ್ಥಿತಿಯಲ್ಲಿ ಗ್ಯಾಂಗ್ರಿನ್‌ನಿಂದ ಜೀವ–ಸಾವಿನ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದರು.

 

ಅಭಿನಂದನೆ ಸಲ್ಲಿಸಿದ ಮಾಜಿ CM

ಸರ್ಕಾರಿ ಸೇವೆಯಲ್ಲಿನ ಸಾಧನೆಯನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಅಭಿನಂದನೆ ಪಡೆದಿದ್ದಾರೆ.

ಸರ್ಕಾರಿ ಆಸ್ಪತ್ರೆಯೂ ಖಾಸಗಿ ಆಸ್ಪತ್ರೆಗಳಿಗೆ ಸಮಾನ ಸೇವೆ ನೀಡಬಹುದು ಎಂಬುದನ್ನು ಡಾ. ಯಲ್ಲಪ್ಪ ಹುಲ್ಕಲ್ ಅವರು ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಬಡವರ ನೋವಿಗೆ ಸ್ಪಂದಿಸಿ, ನೂರಾರು ಜನರಿಗೆ ಹೊಸ ಬದುಕು ನೀಡಿರುವ ಅವರ ಸೇವೆ ವೈದ್ಯಕೀಯ ಕ್ಷೇತ್ರಕ್ಕೆ ಮಾದರಿಯಾಗಿದೆ.
 ಬಸವರಾಜ ಅತ್ನೂರು.

ವೈದ್ಯಕೀಯ ವೃತ್ತಿಯನ್ನು ಉದ್ಯೋಗವಾಗಿ ಅಲ್ಲ, ಸೇವೆಯಾಗಿ ಕಂಡ ಕೆಲವೇ ವೈದ್ಯರಲ್ಲಿ ಡಾ.ಯಲ್ಲಪ್ಪ ಹುಲ್ಕಲ್ ಒಬ್ಬರು. ಶಹಾಪುರ ಸರ್ಕಾರಿ ಆಸ್ಪತ್ರೆಯನ್ನು ಜನರ ಭರವಸೆಯ ಆರೋಗ್ಯ ಕೇಂದ್ರವನ್ನಾಗಿ ರೂಪಿಸಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ.
ನಿಂಗಣ್ಣ ನಾಟೇಕರ್

“ವೈದ್ಯಕೀಯ ವೃತ್ತಿ ನನಗೆ ಉದ್ಯೋಗವಲ್ಲ, ಅದು ಸೇವೆ. ಬಡವರು ಆರ್ಥಿಕ ಕಾರಣದಿಂದ ಚಿಕಿತ್ಸೆ ವಂಚಿತರಾಗಬಾರದು ಎಂಬುದು ನನ್ನ ಜೀವನದ ಧ್ಯೇಯ.

ಡಾ.ಯಲ್ಲಪ್ಪ ಹುಲ್ಕಲ್ ಆಡಳಿತ ವೈದ್ಯಾಧಿಕಾರಿ ಶಹಪುರ.

Leave a Reply

Your email address will not be published. Required fields are marked *