ಪತ್ರಕರ್ತರಿಗಾಗಿ ಉಚಿತ ಆರೋಗ್ಯ–ನೇತ್ರ ತಪಾಸಣಾ ಶಿಬಿರ ನಾಳೆ

ಜೀವನಶೈಲಿ ಕುರಿತು ವೈದ್ಯರೊಂದಿಗೆ ಸಂವಾದ; ಮಲ್ಲಪ್ಪ ಸಂಕೀನ್ ಕರೆ

ಯಾದಗಿರಿ,

ವೈದ್ಯರ ದಿನಾಚರಣೆಯ ಅಂಗವಾಗಿ ನಗರದ ಆಶೀರ್ವಾದ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ರಕರ್ತರಿಗಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಜೂನ್ 28ರಂದು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.

ನಗರದ ತಹಸೀಲ್ದಾರರ ಕಚೇರಿ ಎದುರಿನ ಆಶೀರ್ವಾದ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಶಿಬಿರ ಆರಂಭವಾಗಲಿದೆ. ಆಸ್ಪತ್ರೆಯ ಮುಖ್ಯಸ್ಥ ಹಿರಿಯ ವೈದ್ಯ ಡಾ. ಸಿ.ಎಂ. ಪಾಟೀಲ ಅವರು ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ.ಶಿಬಿರದಲ್ಲಿ ರಕ್ತ ಪರೀಕ್ಷೆ, ಸಕ್ಕರೆ ಪರೀಕ್ಷೆ, ಬಿಪಿ, ಇಸಿಜಿ ಸೇರಿದಂತೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ.

ಶಹಾಪುರದ ದೃಷ್ಟಿ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಹಾಗೂ ನೇತ್ರ ತಜ್ಞ ಡಾ. ಎಚ್. ಭೀಮರೆಡ್ಡಿ ಪಾಟೀಲ ಅವರ ನೇತೃತ್ವದಲ್ಲಿ ನೇತ್ರ ತಪಾಸಣೆ ನಡೆಯಲಿದ್ದು, ಅಗತ್ಯವಿರುವವರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆಗೂ ಅವಕಾಶ ಕಲ್ಪಿಸಲಾಗಿದೆ. ಶಸ್ತ್ರಚಿಕಿತ್ಸೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.

ಶಿಬಿರದ ನಂತರ ವೈದ್ಯರೊಂದಿಗೆ ಜೀವನಶೈಲಿ, ಆಹಾರ ಪದ್ಧತಿ, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ, ಬಿಪಿ ನಿಯಂತ್ರಣ, ಕಣ್ಣಿನ ಆರೈಕೆ ಹಾಗೂ ಆರೋಗ್ಯಕರ ಜೀವನ ಕುರಿತು ಸಂವಾದ ಕಾರ್ಯಕ್ರಮವೂ ನಡೆಯಲಿದೆ ಎಂದು ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.

ಯಾದಗಿರಿ, ಶಹಾಪುರ, ಸುರಪುರ, ಹುಣಸಗಿ, ವಡಗೇರಾ ಹಾಗೂ ಗುರುಮಠಕಲ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪತ್ರಕರ್ತರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಶಿಬಿರಕ್ಕೆ ಆಗಮಿಸುವ ಪತ್ರಕರ್ತರು ಕಡ್ಡಾಯವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2026ರ ಸದಸ್ಯತ್ವ ಗುರುತಿನ ಚೀಟಿಯನ್ನು ತರಬೇಕು. ಗುರುತಿನ ಚೀಟಿ ಇಲ್ಲದವರಿಗೆ ಶಿಬಿರದ ಸೌಲಭ್ಯ ದೊರೆಯುವುದಿಲ್ಲ ಎಂದು ತಿಳಿಸಿದ್ದಾರೆ.


ಉಚಿತ ನೇತ್ರ ಶಸ್ತ್ರಚಿಕಿತ್ಸೆ ನೇತ್ರ ತಪಾಸಣೆಯ ಬಳಿಕ ಅಗತ್ಯವಿರುವ ಪತ್ರಕರ್ತರಿಗೆ ಸಂಪೂರ್ಣ ಉಚಿತವಾಗಿ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಸಾಮಾನ್ಯವಾಗಿ ಸಾವಿರಾರು ರೂಪಾಯಿ ವೆಚ್ಚವಾಗುವ ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸುತ್ತಿರುವುದು ವಿಶೇಷವಾಗಿದೆ.


ಖಾಲಿ ಹೊಟ್ಟೆಯಲ್ಲಿ ಬನ್ನಿ ಬೆಳಿಗ್ಗೆ 8 ಗಂಟೆಯೊಳಗೆ ಖಾಲಿ ಹೊಟ್ಟೆಯಲ್ಲಿ ಆಗಮಿಸಿದರೆ ಸಕ್ಕರೆ, ರಕ್ತ, ಮೂತ್ರ, ಬಿಪಿ, ಇಸಿಜಿ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


ಆರೋಗ್ಯಕರ ಜೀವನಕ್ಕೆ ವೈದ್ಯರ ಸಲಹೆ
ಆಹಾರ ಪದ್ಧತಿ, ವ್ಯಾಯಾಮ, ಹೃದಯದ ಆರೈಕೆ, ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣ, ನೇತ್ರ ಸಂರಕ್ಷಣೆ ಸೇರಿದಂತೆ ಆರೋಗ್ಯಕರ ಜೀವನಶೈಲಿಯ ಕುರಿತು ವೈದ್ಯರೊಂದಿಗೆ ನೇರ ಸಂವಾದ ನಡೆಸಿ ಸಂದೇಹಗಳಿಗೆ ಉತ್ತರ ಪಡೆಯುವ ಅವಕಾಶವೂ ಶಿಬಿರದಲ್ಲಿ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *