ಬಸವೋಪನಿಷತ್ತು ೦೮ : ಬೆಂಕಿಯನ್ನು ಬೆಳಕಾಗಿಸುವುದೇ ಶಿವಯೋಗ

ಬಸವೋಪನಿಷತ್ತು ೦೮ : ಬೆಂಕಿಯನ್ನು ಬೆಳಕಾಗಿಸುವುದೇ ಶಿವಯೋಗ : ಮುಕ್ಕಣ್ಣ ಕರಿಗಾರ

ತನಗೆ ಮುನಿವವರಿಗೆ ತಾ ಮುನಿಯಲೇಕಯ್ಯಾ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು ;
ಮನದ ಕೋಪ ತನ್ನರಹುಹಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡುವುದೆ,ಕೂಡಲ ಸಂಗಮದೇವಾ ?

ಬಸವಣ್ಣನವರು ಕೋಪದಿಂದ ವ್ಯಕ್ತಿತ್ವಹಾನಿಯಲ್ಲದೆ ಅದರಿಂದ ಪ್ರಯೋಜನವೇನೂ ಇಲ್ಲವಾದ್ದರಿಂದ ಕೋಪಿಸಿಕೊಳ್ಳದೆ ಇರುವ ಶಾಂತ ವ್ಯಕ್ತಿತ್ವವನ್ನು,ಪ್ರಶಾಂತ ಚಿತ್ತವನ್ನು ಮೈಗೂಡಿಸಿಕೊಳ್ಳಬೇಕು ಎಂದು ಈ ವಚನದಲ್ಲಿ ಉಪದೇಶಿಸಿದ್ದಾರೆ.ಯಾರಾದರೂ ತನ್ನ ಬಗ್ಗೆ ಸಿಟ್ಟಾದರೆ ತಾನೇಕೆ ಅವರ ಬಗ್ಗೆ ಸಿಟ್ಟಾಗಬೇಕು ? ತನ್ನನ್ನು ದೂಷಿಸುವವರನ್ನು ತಾನು ಪ್ರತಿಯಾಗಿ ದೂಷಿಸುವುದರಿಂದ ತನಗೆ ಆಗುವ ಲಾಭವೇನು? ಅವರಿಗೆ ಆಗುವ ನಷ್ಟವೇನು ?ದೇಹದಲ್ಲುಂಟಾಗುವ ಕೋಪವು ತನ್ನ ವ್ಯಕ್ತಿತ್ವಕ್ಕೆ,ಹಿರಿಮೆಗೆ ಧಕ್ಕೆಯನ್ನುಂಟು ಮಾಡುತ್ತದೆ.ಮನಸ್ಸಿನಲ್ಲಿ ಉದಿಸುವ ಕೋಪವು ಅರಿವಿನ ಕೊರತೆಯನ್ನುಂಟು ಮಾಡುತ್ತದೆ,ಯಥಾರ್ಥ ಜ್ಞಾನವಿಮುಖರನ್ನಾಗಿಸುತ್ತದೆ.ಮನೆಯಲ್ಲಿ ಬಿದ್ದ ಬೆಂಕಿಯು ಆ ಮನೆಯನ್ನೇ ಸುಡುವುದಲ್ಲದೆ ಪಕ್ಕದ ಮನೆಯನ್ನು ಸುಡುವುದಿಲ್ಲ ಎನ್ನುವ ವಾಸ್ತವವನ್ನರಿತು ಮನುಷ್ಯರು ವ್ಯರ್ಥಕೋಪಿಗಳಾಗದೆ,ಕೋಪದಿಂದುಂಟಾಗುವ ಅನರ್ಥ ಪರಂಪರೆಗೆ ಸಿಕ್ಕು ಆತ್ಮಜ್ಞಾನದೂರರಾಗದೆ ಕೋಪವನ್ನು ಗೆಲ್ಲುವ ಮೂಲಕ ಉನ್ನತಿಯನ್ನು ಪಡೆಯಬಹುದು ಎನ್ನುತ್ತಾರೆ ಬಸವಣ್ಣನವರು.

ಮನುಷ್ಯ ಸಮಾಜದಲ್ಲಿ ಶಿವಯೋಗಿಯಾದವನು,ಸಾಧಕನಾದವನು,ಯಶಸ್ವಿ ವ್ಯಕ್ತಿಯಾಗಬೇಕು ಎನ್ನುವವನು ಹೇಗಿರಬೇಕು ಎನ್ನುವ ಯಶೋಬಾಳಿನ ಸೂತ್ರವನ್ನು ಬೋಧಿಸಿದ್ದಾರೆ ಬಸವಣ್ಣನವರು ಈ ವಚನದಲ್ಲಿ.ಮನುಷ್ಯರ ಸ್ವಭಾವವೆ ಹಾಗೆ,ಅವರು ತಾವು ಮಾಡರು,ಮಾಡುವವರನ್ನು ಆಡಿಕೊಳ್ಳದೆ ಬಿಡರು !ಒಬ್ಬ ಮನುಷ್ಯ ಏನಾದರೂ ಮಹಾನ್ ಸಾಧನೆ ಮಾಡಲುಪಕ್ರಮಿಸಿದ್ದರೆ ಅದನ್ನು ಸಹಿಸಿಕೊಳ್ಳಲು ಆಗದ ಕೆಲವರು ಸುಮ್ಮಸುಮ್ಮನೆ ಸಾಧಕವ್ಯಕ್ತಿಯ ಬಗ್ಗೆ ಕೆಟ್ಟಮಾತುಗಳನ್ನಾಡುತ್ತಾರೆ,ಅವನ ತೇಜೋವಧೆ ಮಾಡುತ್ತಾರೆ.ಆದರೆ ಮಹಾನ್ ಕಾರ್ಯಸಾಧನಾಸಕ್ತರು ಮನುಷ್ಯರ ಇಂತಹ ದುರಭ್ಯಾಸದ ಬಗ್ಗೆ ತಲೆಕೆಡಿಸಿಕೊಳ್ಳಬಾರದು.ಕೆಟ್ಟಜನರ ಕೀಳು ಪ್ರವೃತ್ತಿಯ ಬಗ್ಗೆ ಗಮನಕೊಟ್ಟರೆ ಅವರು ಆಡಿದ ಮಾತಿಗೆ ಪ್ರತಿಮಾತನ್ನಾಡುತ್ತ ಹೋದರೆ,ತನ್ನ ಮೇಲೆ ಮುನಿಸಿಕೊಂಡವರ ವಿರುದ್ಧ ತಾನೂ ಮುನಿಸಿಕೊಂಡರೆ ಕೋಪ ಇಮ್ಮಡಿಯಾಗುತ್ತದೆ,ಮನಸ್ಸು ಕೋಪತಾಪಗಳ ಮಡುವಾಗುತ್ತದೆ.ಇದರಿಂದ ಕೈಹಿಡಿದ ಕಾರ್ಯಕ್ಕೆ ಹಾನಿಯೊದಗುತ್ತದೆ.ಸಾಧಕರ ಲಕ್ಷ್ಯ ತನ್ನ ಗುರಿಯತ್ತಲೇ ಕೇಂದ್ರೀಕೃತವಾಗಿರಬೇಕಲ್ಲದೆ ತನ್ನನ್ನು ಟೀಕಿಸುವವರು,ತನ್ನ ಬಗ್ಗೆ ಕೆಟ್ಟಮಾತುಗಳನ್ನಾಡುವವರತ್ತ ಲಕ್ಷ್ಯಹರಿಸಬಾರದು.ನಾವು ಸಾಧಿಸಿ ದೊಡ್ಡವರಾದಾಗ ನಮ್ಮನ್ನು ವಂದಿಸುವ ಜನರು ನಮ್ಮ ಸಾಧನಾರಂಭದ ದಿನಗಳಲ್ಲಿ ನಮ್ಮನ್ನು ನಿಂದಿಸುವುದು ಜಗತ್ತಿನ ಸಹಜವಿದ್ಯಮಾನ,ಸಹಜದೋಷ ಎಂದು ತಿಳಿದುಕೊಂಡು ಸಾಧಕರು ತಮ್ಮ ಪಾಡಿಗೆ ತಾವು ಸಾಧನಾ ನಿರತರಾಗಿರಬೇಕು.ಇದನ್ನು ಬಿಟ್ಟು ತನ್ನ ಮೇಲೆ ಸಿಟ್ಟಾದವರ ವಿರುದ್ಧ ತಾನೂ ಸಿಟ್ಟಾಗುತ್ತ,ತನ್ನ ಬಗ್ಗೆ ಕೆಟ್ಟ ಮಾತುಗಳನ್ನಾಡುವವರ ವಿರುದ್ಧ ತಾನು ಕೆಟ್ಟಮಾತುಗಳನ್ನಾಡಿದರೆ ತನಗಾಗುವ ಲಾಭವೇನು? ತನ್ನನ್ನು ವಿರೋಧಿಸಿದವರಿಗೆ ಆಗುವ ನಷ್ಟವೇನು ? ಆಗುಚೇಗು ಎಂದರೆ ಲಾಭನಷ್ಟವೆಂದರ್ಥ.ದೇಹದಲ್ಲಿ ಹುಟ್ಟುವ ಕೋಪವು ತನ್ನ ವ್ಯಕ್ತಿತ್ವವನ್ನು ಕೆಡಿಸುತ್ತದೆ.ಮನಸ್ಸಿನಲ್ಲಿ ಹುಟ್ಟುವ ಕೋಪವು ಅರಿವಿಗೆ ಭಂಗವನ್ನುಂಟು ಮಾಡಿ ಮರೆವು ಇಲ್ಲವೆ ಅಜ್ಞಾನವನ್ನುಂಟು ಮಾಡುತ್ತದೆ.ತಮ್ಮ ಮನೆಯಲ್ಲಿ ಬಿದ್ದ ಬೆಂಕಿಯು ತಮ್ಮ ಮನೆಯನ್ನೇ ಸುಡುತ್ತದಲ್ಲದೆ ಪಕ್ಕದ ಮನೆಗಳನ್ನು ಸುಡುವುದಿಲ್ಲ.

ಶಿವಪಥದಲ್ಲಿ ಸಾಗುತ್ತಿರುವವರು,ಉನ್ನತ ಸಾಧನೆ ಮಾಡಬೇಕೆಂದಾಪೇಕ್ಷಿಸುವವರು,ಲೋಕೋತ್ತರ ವ್ಯಕ್ತಿಗಳಾಗಬೇಕೆಂದು ಬಯಸುವವರು ತಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.ಕೋಪವೆಂಬುದು ಅನರ್ಥಸಾಧನವು.ಕೋಪಕ್ಕೆ ಪ್ರತಿಕ್ರಿಯೆಯಾಗಿ ತೋರುವ ಪ್ರತಿಕೋಪದಿಂದ ವಿಪತ್ಪರಂಪರೆಗಳುಂಟಾಗುತ್ತವೆ.ಕೋಪದಿಂದ ದೇಹ ಮತ್ತು ಮನಸ್ಸುಗಳ ಆರೋಗ್ಯವು ಹಾಳಾಗುತ್ತದೆ.ಕೋಪವನ್ನು ತ್ಯಜಿಸಿ ಶಾಂತಚಿತ್ತವನ್ನು ಅಳವಡಿಸಿಕೊಂಡು ಪ್ರಶಾಂತಚಿತ್ತರಾಗಬೇಕು.ಕೋಪವನ್ನು ಗೆಲ್ಲುತ್ತೇವೆ ಎನ್ನುವುದೇನೋ ಸುಲಭ ಆದರೆ ತನುವಿನ ಸಹಜಗುಣ,ಮೂಲದೌರ್ಬಲ್ಯವಾಗಿರುವ ಕೋಪವನ್ನು ಗೆಲ್ಲುವುದು ಸುಲಭಸಂಗತಿಯಲ್ಲ.ಕಾಶಿಯಾತ್ರಿಕನ ಕಥೆಯು ಕೋಪವನ್ನು ಗೆಲ್ಲುವುದು ಕಷ್ಟಸಾಧ್ಯದ ಸಂಗತಿ,ಸಾಮಾನ್ಯರಿಂದ ಅದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸುತ್ತದೆ.ಒಬ್ಬ ವ್ಯಕ್ತಿ ಕಾಶಿ ಯಾತ್ರೆಗೆ ಹೊರಟನಂತೆ.ಕಾಶಿಯನ್ನು ತಲುಪಿ , ಗಂಗಾನದಿಯಲ್ಲಿ ಮಿಂದು ಮಡಿಯಾಗಿ ವಿಶ್ವೇಶ್ವರನ ದರ್ಶನ ಪಡೆದನಂತೆ.ಕಾಶಿಗೆ ಹೋದವರು ಏನಾದರು ಒಂದನ್ನು ಬಿಟ್ಟು ಬರಬೇಕಂತೆ.ಏನಾದರು ಒಂದು ಅಂದರೆ ಮನೆ ಮಠ,ಹಣ- ಆಸ್ತಿಯನ್ನಲ್ಲ,ಅವಗುಣಗಳಲ್ಲಿ ಅಂದರೆ ತಮ್ಮ ಕೆಟ್ಟಗುಣಗಳಲ್ಲಿ ಯಾವುದಾದರೂ ಒಂದನ್ನು ಬಿಡಬೇಕಂತೆ.ಈ ಮನುಷ್ಯನು ಸಹ ಏನೋ ಒಂದನ್ನು ಬಿಡಲು ಸಂಕಲ್ಪಿಸಿ,ಗಂಗಾನದಿಯಲ್ಲಿ ಮಿಂದು ‘ ಅದನ್ನು ಬಿಟ್ಟೆ’ ಎಂದುಕೊಂಡನಂತೆ.ಕಾಶಿಯಾತ್ರೆಯಿಂದ ಹಿಂದಿರುಗಿದ ಬಳಿಕ ಆ ಮನುಷ್ಯನ ಸ್ನೇಹಿತ ‘ ಕಾಶಿಯಲ್ಲಿ ಏನು ಬಿಟ್ಟು ಬಂದೆ?’ ಎಂದು ಕೇಳಿದನಂತೆ.’ ನಾನು ಕೋಪ ಬಿಟ್ಟು ಬಂದೆ’ ಎಂದು ಎದೆಯುಬ್ಬಿಸಿ ಉತ್ತರಿಸಿದನಂತೆ ಕಾಶಿ ಯಾತ್ರೆ ಕೈಗೊಂಡವನು.ಸ್ನೇಹಿತನಿಗೆ ಈತನ ಸ್ವಭಾವ ಚೆನ್ನಾಗಿ ಗೊತ್ತಿತ್ತು.ಮತ್ತೆ ಕೇಳಿದನಂತೆ ‘ ಏನು ಬಿಟ್ಟುಬಂದೆಯಪ್ಪ ಕಾಶಿಯಲ್ಲಿ ?. ಈತ ಉತ್ತರಿಸುತ್ತಾನೆ ‘ ಕೋಪವನ್ನು ಬಿಟ್ಟು ಬಂದೆ’. ಸ್ನೇಹಿತ ಮತ್ತೆ ಕೇಳುತ್ತಾನೆ ‘ ಏನು ಬಿಟ್ಟು ಬಂದೆ?’. ಈತ ಉತ್ತರಿಸುತ್ತಾನೆ ‘ಕೋಪಬಿಟ್ಟುಬಂದೆ’. ಸ್ನೇಹಿತ ಮತ್ತೆ ಕೇಳುತ್ತಾನೆ ‘ ಏನು ಬಿಟ್ಟು ಬಂದೆಯಪ್ಪ ಕಾಶಿಯಲ್ಲಿ ?’ ಇವನಿಗೆ ತಡೆದುಕೊಳ್ಳಲು ಆಗಲಿಲ್ಲ ; ‘ ನೀನೆಂಥ ಮೂರ್ಖ.ಕೋಪ ಬಿಟ್ಟು ಬಂದೆ ಎಂದರೆ ಅರ್ಥವಾಗುವುದಿಲ್ಲವೆ?’ ಎಂದು ಕೋಪಿಸಿಕೊಂಡನಂತೆ ! ಆತನ ಸ್ನೇಹಿತ ಜೋರಾಗಿ ನಕ್ಕು ಹೇಳಿದನಂತೆ ‘ ಕಾಶಿಯಲ್ಲಿ ಬಿಟ್ಟ ಕೋಪ ಈಗ ಎರಡರಷ್ಟಾಗಿ ಸಂಪಾದಿಸಿದ್ದಿ!’ ಅಂತ.ಇದು ಜನರ ಮನೋಭಾವ,ದೌರ್ಬಲ್ಯ.ಕೋಪವನ್ನು ಗೆದ್ದೆ ಎಂದರೆ ಅದು ಮತ್ತಾವುದೋ ರೂಪದಲ್ಲಿ ಹೊರಹೊಮ್ಮುತ್ತದೆ,ಅದುಮಿಟ್ಟ ಕೋಪ ಬೃಹದಾಕಾರದ ರೋಷ,ತಾಪವಾಗಿ ಪರಿವರ್ತನೆ ಆಗುತ್ತದೆ.ಕೋಪವನ್ನು ಹಂತಹಂತವಾಗಿ ಗೆಲ್ಲುತ್ತ ಹೋಗಿ ಕೋಪದ ಮೇಲೆ ವಿಜಯ ಸಾಧಿಸಬೇಕು.ಒಮ್ಮೆಲೆ ಕೋಪಗೆಲ್ಲುತ್ತೇವೆ ಎನ್ನುವುದು ಕಾಶಿಯಾತ್ರಿಕನಂತೆ ವ್ಯರ್ಥ ಪ್ರಯತ್ನ.ಕೋಪದಿಂದ ತಾಪ ಉಂಟಾಗುತ್ತದೆ,ತಾಪವು ಶಾಪಪ್ರವೃತ್ತಿಯಾಗಿ ಪರಿಣಮಿಸುತ್ತದೆ.ಕೋಪ ಶಾಪಸ್ವಭಾವಗಳಿಗೆ ಒಳಗಾಗುವ ಶಿವಯೋಗಿಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ,ಶಿವಪಥದಿಂದ ದೂರವಾಗುತ್ತಾನೆ,ಮೋಕ್ಷಕ್ಕೆ ಎರವಾಗುತ್ತಾನೆ.ಮನೆಗೆ ಬಿದ್ದ ಬೆಂಕಿ ಮನೆಯನ್ನು ಸುಡುವಂತೆ ತನ್ನ‌ ಒಡಲ ಕಿಚ್ಚು ತನ್ನನ್ನೇ ಸುಡುತ್ತದೆ.ಒಡಲೊಳಗಣ ಬೆಂಕಿಯನ್ನು ಬೆಳಕಾಗಿ ಪರಿವರ್ತಿಸಿಕೊಂಡು ಆ ಬೆಳಕಿನಿಂದ ಜನರಿಗೆ,ಜಗತ್ತಿಗೆ ಆದರ್ಶರಾಗಬೇಕು.ಬೆಂಕಿಗೆ ಹೆದರುವ ಜನರು ಬೆಳಕನ್ನು ಗೌರವಿಸುತ್ತಾರೆ,ಪೂಜಿಸುತ್ತಾರೆ.ಆದ್ದರಿಂದ ಶಿವಶರಣರು,ಶಿವಯೋಗಿಗಳು ಬೆಂಕಿಯನ್ನು ಬೆಳಕನ್ನಾಗಿ ಪರಿವರ್ತಿಸಿಕೊಳ್ಳುವುದೇ ಯೋಗಸಿದ್ಧಿ ಎಂದರಿತು ,ಬೆಂಕಿಯನ್ನು ಬೆಳಕಾಗಿಸುವ ಪರಿವರ್ತನಾಸಿದ್ಧಿಯನ್ನು ಸಂಪಾದಿಸಿಕೊಳ್ಳಬೇಕು.

೦೮.೦೧.೨೦೨೪

About The Author