ಸ್ವತಂತ್ರ ನೇಮಕಾತಿ ಪ್ರಾಧಿಕಾರ’ ಇಂದಿನ ತುರ್ತು ಅಗತ್ಯ:ಮುಕ್ಕಣ್ಣ ಕರಿಗಾರ

ಪಿಎಸ್ಐ ಪರೀಕ್ಷೆಗಳ ಅಕ್ರಮ ಹೊರಬಂದಾಗಿನಿಂದ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಿಂದ ಇತ್ತೀಚಿನ ವರ್ಷಗಳಲ್ಲಿ ನಡೆದ ನೇಮಕಾತಿಗಳ ಅಕ್ರಮಗಳ ಬಗ್ಗೆ ಪತ್ರಿಕೆಗಳಲ್ಲಿ ಬಗೆಬಗೆಯ ಸುದ್ದಿಗಳು ಪ್ರಕಟವಾಗುತ್ತಿವೆ.ಹುದ್ದೆವಾರು ನಿಗದಿಪಡಿಸಿದ ಹಣದ ಮೊತ್ತದ ಬಗ್ಗೆಯೂ ವರದಿಗಳು ಪ್ರಕಟಗೊಳ್ಳುತ್ತಿವೆ.ಪ್ರಜಾವಾಣಿ ದಿನಪತ್ರಿಕೆಯ ಇಂದಿನ ( ಮೇ 08,2022) ಸಂಚಿಕೆಯ ಮುಖಪುಟದಲ್ಲಿ ” ಕಾಸಿದ್ದರಷ್ಟೇ ಸರ್ಕಾರಿ ಕೆಲಸ” ಎನ್ನುವ ರಾಜೇಶ್ ರೈ ಚಟ್ಲ ಅವರ ಅಗ್ರವರದಿ ಪ್ರಕಟಗೊಂಡಿದ್ದು ಆ ವರದಿಯಲ್ಲಿ ವಿವಿಧ ಹುದ್ದೆಗಳಿಗೆ ನಿಗದಿಪಡಿಸಿದ ಲಂಚದ ವಿವರಗಳುಳ್ಳ ಸರ್ಕಾರಿ ಹುದ್ದೆ ಅಂದಾಜು ‘ ಹರಾಜು’ ‘ ದರ’ ಎನ್ನುವ ಬಾಕ್ಸ್ ಕಾಲಂನಲ್ಲಿ ವಿವಿಧ ಹುದ್ದೆಗಳಿಗೆ ಉದ್ಯೋಗಾಂಕ್ಷಿಗಳು ನೀಡಬೇಕಾದ ಲಂಚದ ಹಣದ ವಿವರಗಳಿವೆ.ಇದು ಸುಳ್ಳುವರದಿ,ಉತ್ಪ್ರೇಕ್ಷೆಯ ಸಂಗತಿ ಎಂದು ನಿರಾಕರಿಸುವಂತಿಲ್ಲ.ಪ್ರಜಾವಾಣಿಯು ವಿವಿಧ ಅಕ್ರಮಗಳ ಪ್ರಕರಣಗಳಲ್ಲಿ ತನಿಖೆ ನಡೆಸಿದ ಸಿಐಡಿ ವರದಿಯಲ್ಲಿನ ಮಾಹಿತಿಯನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಿದೆ.ಕರ್ನಾಟಕ ಲೋಕಸೇವಾ ಆಯೋಗವಾಗಲಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರವಾಗಲಿ ಪ್ರಜಾವಾಣಿಯ ಈ ವರದಿಯೂ ಸೇರಿದಂತೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳು ಪ್ರಕಟಿಸಿದ ವರದಿಗಳನ್ನು ಅಲ್ಲಗಳೆಯುವ,ನಿರಾಕರಿಸುವ ಪ್ರಯತ್ನ ಮಾಡಿಲ್ಲ.ಪ್ರಜಾವಾಣಿಯ ವರದಿಯಲ್ಲಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿಗಳಾಗಿರುವ ಟಿ ಎಂ ವಿಜಯಭಾಸ್ಕರ್ ಮತ್ತು ಎಂ ಆರ್ ಶ್ರೀನಿವಾಸ ಮೂರ್ತಿ ಅವರ ಸಲಹೆಗಳು ಪ್ರಕಟಗೊಂಡಿವೆ.ಕರ್ನಾಟಕದ ನಿವೃತ್ತ ಮುಖ್ಯಕಾರ್ಯದರ್ಶಿ ಮತ್ತು ಪ್ರಸ್ತುತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಟಿ ಎಂ ವಿಜಯಭಾಸ್ಕರ್ ಅವರು ಕೇಂದ್ರಸರ್ಕಾರವು ಸರಕಾರಿ ನೌಕರರ ನೇಮಕಾತಿಗಾಗಿ ‘ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ ಯನ್ನು ಸ್ಥಾಪಿಸಿರುವ ಮಾದರಿಯಲ್ಲಿ ಸ್ವತಂತ್ರ ನೇಮಕಾತಿ ಸಂಸ್ಥೆ ಒಂದನ್ನು ಸ್ಥಾಪಿಸಬೇಕು ಎಂದರೆ ಎಂ ಆರ್ ಶ್ರೀನಿವಾಸ ಮೂರ್ತಿಯವರು ಸ್ವತಂತ್ರ ನೇಮಕಾತಿ ಪ್ರಾಧಿಕಾರದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಸರಕಾರಿ ಹುದ್ದೆಗಳ ನೇಮಕಾತಿಗಾಗಿ ನಮ್ಮ ಸಂವಿಧಾನವು ಕೇಂದ್ರದಲ್ಲಿ ಕೇಂದ್ರಲೋಕಸೇವಾ ಆಯೋಗ ಹಾಗೂ ರಾಜ್ಯಗಳಿಗೆ ರಾಜ್ಯಗಳ ಲೋಕಸೇವಾ ಆಯೋಗಗಳ ರಚನೆಯ ವಿಧಿ- ವಿಧಾನಗಳನ್ನು ನಿರ್ದಿಷ್ಟಪಡಿಸಿದೆ.ಕೇಂದ್ರಲೋಕಸೇವಾ ಆಯೋಗದ ಜೊತೆಗೆ ಕೇಂದ್ರದಲ್ಲಿ ಸಿಬ್ಬಂದಿ ನೇಮಕಾತಿ ಆಯೋಗ ( Staff selection commission) ಕೂಡ ಇದೆ.ಜೊತೆಗೆ ವಿವಿಧ ಸಚಿವಾಲಯಗಳ ಮಟ್ಟದ ಇಲಾಖಾ ನೇಮಕಾತಿ ಪ್ರಾಧಿಕಾರಗಳೂ ಇವೆ.ಕರ್ನಾಟಕದಲ್ಲಿ ಸರಕಾರಿ ಹುದ್ದೆಗಳಿಗೆ ನೇಮಕಾತಿಗಳನ್ನು ೧. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ,೨ ವಿವಿಧ ಇಲಾಖೆಗಳು ಇಲಾಖಾ ನೇಮಕಾತಿ ಪ್ರಾಧಿಕಾರಗಳ ಮೂಲಕ ಹಾಗೂ ೩ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಮಾಡಲಾಗುತ್ತದೆ.ಇಲಾಖಾ ನೇಮಕಾತಿಗಳಲ್ಲಿ ಈ ಮುಂಚೆ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳ ನೆರವು ಪಡೆಯಲಾಗುತ್ತಿತ್ತು,ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಹುಮಟ್ಟಿಗೆ ಆ ಕಾರ್ಯನಿರ್ವಹಿಸುತ್ತಿದೆ.ಇಲಾಖಾ ನೇಮಕಾತಿ ಪ್ರಕ್ರಿಯೆಯಾಗಲಿ,ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸುವ ನೇಮಕಾತಿಯಾಗಲಿ ಸರ್ವಮಾನ್ಯ ಪ್ರಕ್ರಿಯೆಗಳಲ್ಲ,ಈ ಎರಡೂ ವಿಧಾನಗಳು ಸಂವಿಧಾನೇತರ ಆಡಳಿತ ಪ್ರಕ್ರಿಯೆಗಳಾಗಿರುವುದರಿಂದ.ಕರ್ನಾಟಕ ಲೋಕಸೇವಾ ಆಯೋಗ ಒಂದೇ ಸಂವಿಧಾನ ಬದ್ಧ ಸಂಸ್ಥೆ ಆಗಿರುವುದರಿಂದ ಅದನ್ನು ಸುಧಾರಿಸಿ,ಸರಿದಾರಿಗೆ ತಂದು ಎಲ್ಲ ನೇಮಕಾತಿಗಳನ್ನು ಕೆ ಪಿ ಎಸ್ ಸಿಯ ಮೂಲಕವೇ ಮಾಡಬೇಕು.ಆದರೆ ಈಗ ಕೆ ಪಿ ಎಸ್ ಸಿ ಯು ಹಗರಣಗಳು,ಅಕ್ರಮಗಳಿಂದಾಗಿ ತನ್ನ ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಕೆ ಪಿ ಎಸ್ ಸಿ ಗೆ ಬದಲಾಗಿ ಪರ್ಯಾಯ ಸ್ವತಂತ್ರ ನೇಮಕಾತಿ ಪ್ರಾಧಿಕಾರದ ಸ್ಥಾಪನೆಯ ಬಗ್ಗೆ ಆಲೋಚಿಸುವ ಪರಿಸ್ಥಿತಿ ಬಂದಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆ ಇ ಎ) ಯನ್ನು ಕೆ ಪಿ ಎಸ್ ಸಿ ಗೆ ಪರ್ಯಾಯ ಸಂಸ್ಥೆ ಎಂದು ನಾನಂತೂ ಒಪ್ಪುವುದಿಲ್ಲ.

ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿ ಪ್ರಕ್ರಿಯೆಗಾಗಿ ಕರ್ನಾಟಕ ಲೋಕಸೇವಾ ಆಯೋಗದ ಪುನರ್ ರಚನೆ ಒಂದು ಮಾರ್ಗವಾದರೆ ಸರಕಾರದ ಆಡಳಿತಾತ್ಮಕ ಹಿಡಿತದಿಂದ ಮುಕ್ತಗೊಂಡ ಸ್ವತಂತ್ರ ನೇಮಕಾತಿ ಪ್ರಾಧಿಕಾರ ರಚಿಸುವುದು ಎರಡನೇ ಮಾರ್ಗ.ಕರ್ನಾಟಕ ಲೋಕಸೇವಾ ಆಯೋಗವನ್ನು ಬಲಪಡಿಸುವುದು ಎಂದರೆ ಅದರ ಅಧ್ಯಕ್ಷರು,ಸದಸ್ಯರುಗಳ ನೇಮಕ ಪ್ರಕ್ರಿಯೆ ಬದಲಾಗಬೇಕು.ಈಗ ಇರುವ ಅಧ್ಯಕ್ಷರು,ಸದಸ್ಯರುಗಳ ರಾಜೀನಾಮೆ ಪಡೆದು ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತರುಗಳನ್ನು ಮಾತ್ರ ಅಧ್ಯಕ್ಷರು,ಸದಸ್ಯರುಗಳನ್ನಾಗಿ ನೇಮಿಸಬೇಕು.ಆದರೆ ಹೀಗೆ ಕೆಪಿಎಸ್ಸಿಗೆ ಅಧ್ಯಕ್ಷರು,ಸದಸ್ಯರು ಆಗಿ ನೇಮಕಗೊಳ್ಳುವವರು ಪರಿಶುದ್ಧಹಸ್ತರಾಗಿರಬೇಕು,ಪ್ರಾಮಾಣಿಕತೆಗೆ ಹೆಸರಾಗಿರಬೇಕು,ಅವರ ವ್ಯಕ್ತಿತ್ವದಲ್ಲಿ ಒಂದೇ ಒಂದು ಕಪ್ಪುಕಲೆಯಾಗಲಿ,ಕಳಂಕವಾಗಲಿ ಇರಬಾರದು.ಜಾತಿ- ಜನಾಂಗಗಳಿಗೆ ಒಬ್ಬ ಸದಸ್ಯರು ಎಂದು ಆಯ್ಕೆ ಮಾಡದೆ ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ‌ನ ಪರಿಣತರೂ ಪರಿಶುದ್ಧರೂ ಆದವರನ್ನೇ ಸದಸ್ಯರನ್ನಾಗಿ ನೇಮಿಸಬೇಕು.ವಿರಳಾತಿವಿರಳ,ವಿಶಿಷ್ಟ ವ್ಯಕ್ತಿತ್ವದವರನ್ನು ಕೆ ಪಿ ಎಸ್ ಸಿ ಯ ಅಧ್ಯಕ್ಷರನ್ನಾಗಿ ನೇಮಿಸಬೇಕು.ಕೆ ಪಿ ಎಸ್ ಸಿ ಯನ್ನು ರಾಜಕೀಯ ಹಸ್ತಕ್ಷೇಪಮುಕ್ತ ಸಂಸ್ಥೆಯನ್ನಾಗಿಸಬೇಕು.ಕೆ ಪಿ ಎಸ್ ಸಿ ಯ ಕಾರ್ಯದರ್ಶಿಗಳಾಗಿ ನೇಮಕಗೊಳ್ಳುವ ಅಧಿಕಾರಿಗಳು ಭಾರತೀಯ ಆಡಳಿತ ಸೇವೆಗೆ ಸೇರಿದವರೇ ಆಗಬೇಕೆಂದಿಲ್ಲ,ರಾಜ್ಯ ಸೇವೆಗೆ ಸೇರಿರುವ ಅತ್ಯಂತ ಪ್ರಾಮಾಣಿಕ,ಪ್ರತಿಭಾವಂತ ಹಿರಿಯ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಿದರೂ ನಡೆಯುತ್ತದೆ.ಕೆ ಪಿ ಎಸ್ ಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ವಿವಿಧ ಇಲಾಖೆಗಳಲ್ಲಿರುವ ಪ್ರಾಮಾಣಿಕ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಪಡೆದು ನೇಮಿಸಿಕೊಳ್ಳಬೇಕು. ಒಂದೇ ಹುದ್ದೆಯಲ್ಲಿ ಯಾವುದೇ ಅಧಿಕಾರಿ,ಸಿಬ್ಬಂದಿ ದೀರ್ಘಕಾಲ ಇರಬಾರದು.ಪರೀಕ್ಷಾ ವಿಭಾಗ,ಸಂದರ್ಶನ ವಿಭಾಗದ ಅಧಿಕಾರಿ ಸಿಬ್ಬಂದಿಗಳು ಸಚ್ಚಾರಿತ್ರ್ಯಕ್ಕೆ ಹೆಸರಾದವರು ಆಗಿರಬೇಕು.ನಮ್ಮಲ್ಲಿ ಇಂಥವರು ಇಲ್ಲವೆಂದಿಲ್ಲ; ಆದರೆ ಅಂಥವರನ್ನು ಹುಡುಕಿ ತಂದು, ಕೆ ಪಿ ಎಸ್ ಸಿ ಯ ಶುದ್ಧೀಕರಣಕ್ಕೆ ಮುಂದಾಗಬೇಕು.

ಸ್ವತಂತ್ರ ನೇಮಕಾತಿ ಪ್ರಾಧಿಕಾರ

ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪರ್ಯಾಯವಾಗಿ ಸ್ವತಂತ್ರ ನೇಮಕಾತಿ ಪ್ರಾಧಿಕಾರ ಒಂದನ್ನು ಸ್ಥಾಪಿಸುವಂತಿದ್ದರೆ ಆ ಬಗ್ಗೆ ಸಾಕಷ್ಟು ಆಲೋಚಿಸಬೇಕು.ಸರ್ಕಾರದ ಆಡಳಿತದ ವ್ಯಾಪ್ತಿಯಿಂದ ಹೊರಗೆ ಇರುವಂತಹ ಸ್ವತಂತ್ರ ನೇಮಕಾತಿ ಸಂಸ್ಥೆ ಆದರೆ ಮಾತ್ರ ನೇಮಕಾತಿಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟಬಹುದು.ಕೇಂದ್ರಸರ್ಕಾರದ ನ್ಯಾಷನಲ್ ಟೆಸ್ಟಿಂಗ ಏಜೆನ್ಸಿಯು ಸ್ವತಂತ್ರ ಪ್ರಾಧಿಕಾರವೇ ಆದರೂ ಅದು ಕೇಂದ್ರ ಶಿಕ್ಷಣ ಇಲಾಖೆಯಡಿ ಬರುತ್ತದೆ.ಶಿಕ್ಷಣ ಇಲಾಖೆಯ ಮುಖ್ಯಸ್ಥರು ಆಗಿ ಶಿಕ್ಷಣ ಸಚಿವರು ಇರುತ್ತಾರೆ.ಕ್ವಚಿತ್ ಆಗಿ ಆದರೂ ಕೇಂದ್ರ ಶಿಕ್ಷಣ ಸಚಿವರು ಎನ್ ಟಿ ಎ ಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.

ಕರ್ನಾಟಕದಲ್ಲಿ ಸ್ವತಂತ್ರ ನೇಮಕಾತಿ ಪ್ರಾಧಿಕಾರವನ್ನು ರಾಜ್ಯಪಾಲರ ಅಧ್ಯಕ್ಷತೆಯಲ್ಲಿ,ಹೈಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ,ವಿವಿಧ ಕ್ಷೇತ್ರಗಳ ವಿಶೇಷ ಪರಿಣತರುಗಳನ್ನು ಸದಸ್ಯರುಗಳನ್ನಾಗಿ ಹೊಂದಿರುವಂತೆ ಸ್ಥಾಪಿಸಬಹುದು.ಚುನಾವಣಾ ಆಯೋಗದಂತೆ ಈ ಪ್ರಾಧಿಕಾರವು ಸರಕಾರದ ನಿಯಂತ್ರಣ ಮತ್ತು ಹಸ್ತಕ್ಷೇಪಗಳಿಂದ ಹೊರತಾಗಿರಬೇಕು.ಸರಕಾರವು ಸ್ವತಂತ್ರ ನೇಮಕಾತಿ ಪ್ರಾಧಿಕಾರಕ್ಕೆ ಬೇಕಾದ ಹಣಕಾಸು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕಷ್ಟೇ ತನ್ನ ಪಾತ್ರ ಸೀಮಿತಗೊಳಿಸಿಕೊಳ್ಳಬೇಕು.ಸ್ವತಂತ್ರ ನೇಮಕಾತಿ ಪ್ರಾಧಿಕಾರವು ತನ್ನ ಸಿಬ್ಬಂದಿ ವರ್ಗವನ್ನು ನೇಮಕಾತಿ ಇಲ್ಲವೆ ಎರವಲು ಸೇವೆಯ ಆಧಾರದ ಮೇಲೆ ನೇಮಿಸಿಕೊಳ್ಳುವ ಸಶಕ್ತ ಪ್ರಾಧಿಕಾರವಾಗಿರಬೇಕು.ಸ್ವತಂತ್ರ ನೇಮಕಾತಿ ಪ್ರಾಧಿಕಾರವು ಪಾರದರ್ಶಕ ನೇಮಕಾತಿ ವ್ಯವಸ್ಥೆ ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಆಗಿರಲಿ.ಇಂತಹ ಸ್ವತಂತ್ರ ನೇಮಕಾತಿ ಪ್ರಾಧಿಕಾರ ಒಂದರಿಂದ ಮಾತ್ರ ಎಲ್ಲ ಹುದ್ದೆಗಳಿಗೆ ನಡೆಯುವ ಪರೀಕ್ಷೆ,ಸಂದರ್ಶನ,ಅರ್ಹ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿ,ವಿವಾದರಹಿತವಾಗಿ ನಡೆಯಲು ಸಾಧ್ಯ.

‌08.05.2022

About The Author