ಶಿವಭಕ್ತಿ,ಗುರುವಾಜ್ಞೆಯ ಫಲವಾಗಿ ಉದಿಸಿದ ‘ ಬಸವಗೌರವ’ ಮತ್ತು ‘ ಬಸವಧರ್ಮ’ ದ ಅಗತ್ಯದ ಪ್ರತಿಪಾದನೆ

ಶಿವಭಕ್ತಿ,ಗುರುವಾಜ್ಞೆಯ ಫಲವಾಗಿ ಉದಿಸಿದ ‘ ಬಸವಗೌರವ’ ಮತ್ತು ‘ ಬಸವಧರ್ಮ’ ದ ಅಗತ್ಯದ ಪ್ರತಿಪಾದನೆ : ಮುಕ್ಕಣ್ಣ ಕರಿಗಾರ

ಇಂದು ಮಧ್ಯಾಹ್ನ ಒಂದು ಘಂಟೆಯ ಸುಮಾರು ನನ್ನ ಹಳೆಯ ವಿದ್ಯಾರ್ಥಿ,ಶಿಷ್ಯ ಚೆನ್ನಪ್ಪ ಬೂದಿನಾಳ ಅವರು ಮಹಾಶೈವ ಧರ್ಮಪೀಠಕ್ಕೆ ಬಂದಿದ್ದರು.ಕಳೆದ ಮೂರ್ನಾಲ್ಕು ದಿನಗಳಿಂದ ನನ್ನ ಬಳಿ ಬರುವ ಅಪೇಕ್ಷೆ ಉಂಟಾಗಿತ್ತಂತೆ ಅವರಲ್ಲಿ.ನಿನ್ನೆ ಕೂಡ ಭೇಟಿಗಾಗಿ ಅವಕಾಶ ಕೇಳಿದ್ದರು.ಕಾರಣಾಂತರಗಳಿಂದ ನಿನ್ನೆ ಭೇಟಿ ಸಾಧ್ಯವಾಗಿರಲಿಲ್ಲ.ಚೆನ್ನಪ್ಪ ಬೂದಿನಾಳ ಗಬ್ಬೂರಿನಲ್ಲಿ ‘ವಿದ್ಯಾಜ್ಯೋತಿ’ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ರಾಜ್ಯದಾದ್ಯಂತ ಹೆಸರಾಗಿರುವ ನನ್ನ ಪ್ರತಿಭಾವಂತ ಶಿಷ್ಯರುಗಳಲ್ಲೊಬ್ಬರು.ಸತಿಪತಿಗಳಿಬ್ಬರು ಸ್ನಾತಕೋತ್ತರಪದವಿ ಪಡೆದಿದ್ದು ಅವರ ಇಡೀ ಕುಟುಂಬವೇ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆಗಾಗಿ ಸಮರ್ಪಿಸಿಕೊಂಡು ದುಡಿಯುತ್ತಿದೆ.ನಮ್ಮೂರು ಗಬ್ಬೂರಿನಲ್ಲಿ ಇಪ್ಪತ್ತು ವರ್ಷಗಳಿಂದಲೂ ವಿದ್ಯಾಜ್ಯೋತಿ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದಾರೆ.ನನ್ನ ಮಗಳು ವಿಂಧ್ಯಾಳು ಕೂಡ ಚೆನ್ನಪ್ಪನವರ ವಿದ್ಯಾಜ್ಯೋತಿ ಶಾಲೆಯಲ್ಲಿಯೇ ಓದುತ್ತಿದ್ದಾಳೆ.

ಶಿಷ್ಯಸಹಜ ಸಲುಗೆ,ಪ್ರೀತಿಯಿಂದ ಆಗಾಗ ಚೆನ್ನಪ್ಪ ಬೂದಿನಾಳ ಅವರು ಗುರುವಾದ ನನ್ನ ಬಳಿ ಬರುತ್ತಿರುತ್ತಾರೆ.ನನ್ನ ಇತ್ತೀಚಿನ ವಾಟ್ಸಾಪ್ ಲೇಖನಗಳನ್ನು ಓದಿ,ಭೇಟಿಯಾಗುವ ತವಕ ಇತ್ತಂತೆ.ಅದರಲ್ಲೂ ನನ್ನ ಆತ್ಮೀಯರಾಗಿರುವ ಆರ್ .ಎಸ್. ಪಾಟೀಲ್ ಅವರ ಸಂದೇಹಕ್ಕೆ ಉತ್ತರರೂಪವಾಗಿ ನಾನು ನೀಡಿದ ‘ ಶಿವೋಪಶಮನ’ ಕುರಿತ ಲೇಖನ ಮತ್ತು ಬಸವಣ್ಣನವರನ್ನು ಕುರಿತಾದ ಲೇಖನ ಅವರ ಮೇಲೆ ಪ್ರಭಾವವನ್ನು ಬೀರಿವೆ. ಚೆನ್ನಪ್ಪ ಬೂದಿನಾಳ ಅವರು ಪ್ರಗತಿಪರ ವಿಚಾರವನ್ನುಳ್ಳವರು,ಬಸವಣ್ಣನವರಲ್ಲಿ ಭಕ್ತಿ,ಗೌರವಗಳನ್ನುಳ್ಳವರು.ಬಸವಣ್ಣನವರನ್ನು ಕುರಿತ ಕಳೆದ ವಾರ ನಾನು ಬರೆದ ಎರಡು ಲೇಖನಗಳು ರಾಜ್ಯದಾದ್ಯಂತ ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆಗಿವೆ.’ ಬಸವಣ್ಣನವರನ್ನು ವೈಭವೀಕರಿಸದೆ ರಂಭಾಪುರಿ ಶ್ರೀಗಳನ್ನು ವೈಭವೀಕರಿಸಬೇಕಿತ್ತೆ?’ ಎನ್ನುವ ಲೇಖನ ಅತಿಹೆಚ್ಚು ಪ್ರಸಾರಗೊಂಡಿದೆ,ಅತಿಹೆಚ್ಚು ಚರ್ಚೆಯಾಗುತ್ತಿದೆ.ಕವಿಮಿತ್ರ ವಿಶ್ವಾರಾಧ್ಯ ಸತ್ಯಂಪೇಟೆಯವರು ವೈರಲ್ ಆದ ಆ ಲೇಖನವನ್ನು ಒಂದು ದಿನಪತ್ರಿಕೆಗೆ ಕಳುಹಿಸಿ ಅದರಲ್ಲಿ ಪ್ರಕಟಗೊಳ್ಳುವಂತೆ ನೋಡಿಕೊಂಡಿದ್ದಾರಲ್ಲದೆ ಸಮಾನಮನಸ್ಕ ಗೆಳೆಯರೊಂದಿಗೆ ಅದನ್ನು ಚರ್ಚಿಸಿದ್ದಾರೆ.ರಂಜಾನ್ ದರ್ಗಾ ಅವರು ಕೂಡ ಆ ಲೇಖನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರಂತೆ.ಈ ವಿಷಯ ನನ್ನ ಆತ್ಮೀಯರಲ್ಲೊಬ್ಬರಾಗಿರುವ ಶಹಾಪುರದ ಕವಿ,ಸ್ನೇಹಿತ ಬಸವರಾಜ ಸಿನ್ನೂರ ಅವರು ನನಗೆ ತಿಳಿಸಿದರು.ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ರಂಜಾನ್ ದರ್ಗಾ ಅವರಿಬ್ಬರು ಕಲ್ಯಾಣಕರ್ನಾಟಕದಲ್ಲಿ ಬಸವ ತತ್ತ್ವದ ಹೊನ್ನಬೀಜಗಳನ್ನು ಬಿತ್ತಿಬೆಳೆಯುತ್ತಿರುವ ಪುಣ್ಯಜೀವಿಗಳು.ವಿಶ್ವರಾಧ್ಯ ಸತ್ಯಂಪೇಟೆಯವರು ನನಗೆ ಪರಿಚಿತರು,ನಮ್ಮ ಮಹಾಶೈವ ಧರ್ಮಪೀಠದಲ್ಲಿ ಹಿಂದೆ ಪ್ರತಿ ತಿಂಗಳು ಹುಣ್ಣಿಮೆಯಂದು ನಡೆಯುತ್ತಿದ್ದ ‘ ತಿಂಗಳ ಅನುಭಾವ ಕವಿಗೋಷ್ಠಿ’ ಯಲ್ಲಿ ಬಸವಣ್ಣನವರನ್ನು ಕುರಿತಾದ ಅನುಭಾವಕವಿಗೋಷ್ಠಿಯಲ್ಲಿ ಬಸವಣ್ಣನವರನ್ನು‌ ಕುರಿತ ತಮ್ಮ ಕವನ ಒಂದನ್ನು ಓದಿದ್ದರು.ವಿಶ್ವಾರಾಧ್ಯ ಸತ್ಯಂಪೇಟೆಯವರ ತಂದೆಯವರಾದ ಲಿಂಗಣ್ಣ ಸತ್ಯಂಪೇಟೆ ಅವರೊಂದಿಗೆ ನನಗೆ ಹೆಚ್ಚು ಒಡನಾಟವಿತ್ತು,ಆತ್ಮೀಯತೆ ಇತ್ತು. ನಮ್ಮೂರು ಗಬ್ಬೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ದಿನಗಳಲ್ಲಿಯೇ ನಾನು ಲಂಕೇಶ್ ಪತ್ರಿಕೆಗೆ ಕಥೆ,ಕವನಗಳನ್ನು ಬರೆಯುತ್ತಿದ್ದೆ.ಲಂಕೇಶ್ ಪತ್ರಿಕೆಯಲ್ಲಿ ನನ್ನ ಕಥೆ,ಕವನಗಳು ಪ್ರಕಟಗೊಳ್ಳುತ್ತಿದ್ದರಿಂದ ಬಿ.ಟಿ.ಲಲಿತಾ ನಾಯಕ್,ಲಿಂಗಣ್ಣ ಸತ್ಯಂಪೇಟೆ ಮೊದಲಾದ ಕನ್ನಡದ ಹಿರಿಯ ಲೇಖಕರುಗಳು,ಪತ್ರಕರ್ತರುಗಳನೇಕರ ಪರಿಚಯವಾಗಿತ್ತು.ಸಿದ್ಧೇಶ್ವರ ಸ್ವಾಮಿಗಳೊಂದಿಗಿನ ನನ್ನ ಹತ್ತಿರದ ಒಡನಾಟವು ಲಿಂಗಣ್ಣ ಸತ್ಯಂಪೇಟೆಯವರು ನನ್ನ ಬಗ್ಗೆ ವಿಶೇಷ ಒಲವು ತೋರಲು ಕಾರಣವಾಗಿತ್ತು.ಲಿಂಗಣ್ಣ ಸತ್ಯಂಪೇಟೆಯವರ ‘ ಬಸವಮಾರ್ಗ’ ವನ್ನು ವಿಶ್ವಾರಾಧ್ಯ ಸತ್ಯಂಪೇಟೆಯವರು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದರಿಂದ ಅವರ ಬಗ್ಗೆ ನನ್ನಲ್ಲಿ ಪ್ರೀತಿ,ಗೌರವಗಳುಂಟು.ರಂಜಾನ್ ದರ್ಗಾ ಅವರು ಈ ಹಿಂದೆ ಅವರು ‘ ಪ್ರಜಾವಾಣಿ’ ಯಲ್ಲಿದ್ದ ದಿನದಿಂದಲೂ ಅವರನ್ನು ಬಲ್ಲೆ,ಬಸವಣ್ಣನವರನ್ನು ಕುರಿತಾದ ಅವರ ನಿಷ್ಠೆ,ಬದ್ಧತೆಗಳು ನನ್ನಲ್ಲಿ ವಿಸ್ಮಯವನ್ನುಂಟು ಮಾಡಿವೆ.ಬಸವಣ್ಣನವರ ವಿಶ್ವ ವಿಭೂತಿ ವ್ಯಕ್ತಿತ್ವದ ಮೇಲೆ ಬೆಳಕುಚೆಲ್ಲುವ ರಂಜಾನ್ ದರ್ಗಾ ಅವರು ಬರೆದ ಪುಸ್ತಕಗಳನ್ನು ಓದಿದ್ದೇನೆ ಆದರೆ ಅವರನ್ನು ಮುಖತಃ ಭೇಟಿ ಮಾಡಿದುದಿಲ್ಲ.

ವಿಶ್ವಾರಾಧ್ಯ ಸತ್ಯಂಪೇಟೆ,ರಂಜಾನ್ ದರ್ಗಾ ಅವರಿಬ್ಬರಂತೆ ಬಹಳಷ್ಟು ಜನ ಸಾಹಿತಿ,ಪತ್ರಕರ್ತರುಗಳು ಬಸವಣ್ಣನವರನ್ನು ಕುರಿತಾದ ನನ್ನ ಲೇಖನ ಓದಿ,ಮೆಚ್ಚುಗೆಯ ಮಾತುಗಳ ವಾಟ್ಸಾಪ್ ಮೆಸೇಜ್ ಗಳನ್ನು ಕಳಿಸಿದ್ದಾರೆ.ಹಾಗೆಯೇ ನಾಲ್ಕೈದು ಜನ ಪ್ರಗತಿಪರ ನಿಲುವಿನ ಸ್ವಾಮಿಗಳು ಕೂಡ ನನ್ನ ಅಭಿಪ್ರಾಯವನ್ನು ಒಪ್ಪಿ,ಶ್ಲಾಘಿಸಿ ಮೆಸೇಜ್ ಮಾಡಿದ್ದಾರೆ.ಆದರೆ ಬಹಳಷ್ಟು ಜನರಿಗೆ ಗೊತ್ತಿಲ್ಲ,ನಾನು ಈ ಹಿಂದಿನಿಂದಲೂ ಬಸವಣ್ಣನವರನ್ನು ಕುರಿತು ಬರೆಯುತ್ತಲೇ ಬಂದಿದ್ದೇನೆ.ನಾನು ರಾಯಚೂರಿನ ಎಲ್ ವಿ ಡಿ ಕಾಲೇಜಿನಲ್ಲಿ ಬಿ.ಎ. ಓದುತ್ತಿದ್ದ ಮೂರುವರ್ಷಗಳಲ್ಲಿ ಎಂ ಬಿ ಪಾಟೀಲರು ಹೊರತರುತ್ತಿದ್ದ ‘ ನಿತ್ಯನೂತನ’ ದಿನಪತ್ರಿಕೆಗೆ ನಿಯತವಾಗಿ ಲೇಖನಗಳನ್ನು ಬರೆಯುತ್ತಿದ್ದೆ,ವಿದ್ಯಾರ್ಥಿ ದೆಸೆಯಲ್ಲಿಯೇ ಆ ಪತ್ರಿಕೆಯ ಅಂಕಣಬರಹಗಾರನಾಗಿದ್ದೆ.ಬಸವಣ್ಣನವರನ್ನು ಕುರಿತು ಆಗಿನಿಂದಲೇ ಬರೆಯುತ್ತಿದ್ದೆ.ಎಂ ಬಿ ಪಾಟೀಲರು ಬಸವಭಕ್ತರಾಗಿದ್ದರಿಂದ ನನ್ನ ಲೇಖನಗಳನ್ನು ಮೆಚ್ಚಿಕೊಂಡು ಅವರ ಗೆಳೆಯರ ಬಳಗದಲ್ಲಿ ಪ್ರಸ್ತಾಪಿಸುತ್ತಿದ್ದರು.ಆಂಜನೇಯ ಜಾಲಿಬೆಂಚಿ,ಅಬ್ದುಲ್ ರಹೀಮ್ ಗೋನಾಳ,ರಘುನಾಥರೆಡ್ಡಿ ಮನ್ಸಲಾಪುರ ಮತ್ತು ದಸ್ತಗಿರಿ ಸಾಬ್ ದಿನ್ನಿ( ಇಂದು ಅವರು ಡಾ.ದಸ್ತಗಿರಿ ಸಾಬ್ ದಿನ್ನಿ ಎಂದು ಪ್ರಸಿದ್ಧರಾಗಿದ್ದಾರೆ)ಮೃತ್ಯುಂಜಯ ಕಪಗಲ್ ಮತ್ತಿತತರು ಗೆಳೆಯರಾಗಿದ್ದೆವು,ನಮ್ಮದೆ ಗೆಳೆಯರ ಬಳಗ ಕಟ್ಟಿಕೊಂಡಿದ್ದೆವು.ನಿತ್ಯನೂತನ ಪತ್ರಿಕೆಯಲ್ಲಿಯೇ ಬಸವಣ್ಣನವರನ್ನು ಕುರಿತ ಹತ್ತಕ್ಕೂ ಹೆಚ್ಚು ನನ್ನ ಲೇಖನಗಳು ಪ್ರಕಟಗೊಂಡಿದ್ದವು.’ಕಲ್ಯಾಣ ಅರ್ಥಶಾಸ್ತ್ರ( welfare economics) ಕ್ಕೆ ಬಸವಣ್ಣನವರ ಕೊಡುಗೆ’ ಎನ್ನುವ ಸುದೀರ್ಘ ಲೇಖನವನ್ನು ಬರೆದು’ ಬಸವಪಥ ‘ ಪತ್ರಿಕೆಗೆ ಕಳುಹಿಸಿದ್ದೆ,’ಬಸವಪಥ’ ದಲ್ಲಿ ಆ ಲೇಖನವು ಪ್ರಕಟಗೊಂಡು ಬಹಳಷ್ಟು ಜನರ ಗಮನಸೆಳೆದಿತ್ತು.ಎಲ್ ವಿ ಡಿ ಕಾಲೇಜಿನಲ್ಲಿ ನಾನು ಪದವಿಯಲ್ಲಿ ಅರ್ಥಶಾಸ್ತ್ರ( ಅದರೊಂದಿಗೆ ಇತಿಹಾಸ ಮತ್ತು ರಾಜ್ಯಶಾಸ್ತ್ರ) ವನ್ನು ಓದುತ್ತಿದ್ದುದರಿಂದ ಬಸವಣ್ಣನವರೇ welfare economics ನ ಪಿತಾಮಹರು ಎಂದು ಆಗಲೇ ಬರೆದು ಬಸವಣ್ಣನವರ ಕಲ್ಯಾಣ ಅರ್ಥಶಾಸ್ತ್ರದ ಬಗ್ಗೆ ವಿಶ್ಲೇಷಿಸಿದ್ದೆ.

ನನ್ನ ಗುರುಗಳಾದ ತಪೋವನದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಬಸವಣ್ಣನವರ ಬಗ್ಗೆ ಎಲ್ಲಿಲ್ಲದ ಭಕ್ತಿ,ಗೌರವಗಳನ್ನು ಹೊಂದಿದ್ದ ಮಹಾಯೋಗಿಗಳು,ಮಹರ್ಷಿಗಳು.ಕರ್ನಾಟಕದಲ್ಲಿ ಇಂದು ಕೆಲವು ಜನ ವೀರಶೈವ ಲಿಂಗಾಯತ ಮಠ ಪೀಠಗಳ ಸ್ವಾಮಿಗಳವರು ಹೊರದೇಶಗಳಿಗೆ ಹೋಗಿ ಬಸವತತ್ತ್ವ ಪ್ರಚಾರ ಮಾಡಿದೆವು ಎಂದು ಹೇಳಿಕೊಳ್ಳುತ್ತಾರೆ. ಆದರೆ ವಿದೇಶಗಳಲ್ಲಿ ಬಸವತತ್ತ್ವದ ಸತ್ತ್ವ ಕಸುವು,ಹಿರಿಮೆ ಗರಿಮೆಗಳು ಪ್ರಸಾರವಾದದ್ದು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರಿಂದಲೇ.ಮೊದಲು ದೇಶದುದ್ದಗಲಕ್ಕೂ ಬಸವ ತತ್ತ್ವ,ವೀರಶೈವ ಧರ್ಮದ ಬಗ್ಗೆ ಉದ್ಬೋಧಕ ಭಾಷಣ,ಪ್ರವಚನಗಳಿಂದ ಜನಮನಸೂರೆಗೊಂಡ ಮಹಾತಪಸ್ವಿಗಳು ಹಲವು ಬಾರಿ ವಿದೇಶಯಾತ್ರೆ ಕೈಗೊಂಡು ಬಸವತತ್ತ್ವದ ವಿಶೇಷತೆ,ವೀರಶೈವ ಧರ್ಮದ ಅನನ್ಯತೆಯನ್ನು ಸಾರಿದರು.ಆದರೆ ಇಂದಿನ ವೀರಶೈವ ಮಠ ಪೀಠಾಧೀಶರುಗಳು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರನ್ನು ಸ್ಮರಿಸದಷ್ಟು ಕುಬ್ಜರಾಗಿದ್ದಾರೆ.ಬಸವಣ್ಣನವರ ಅನುಯಾಯಿಗಳು ಎಂದು ಹೇಳಿಕೊಂಡು ತಿರುಗುತ್ತಿರುವವರಿಗೂ ಬಸವಧರ್ಮ ಮತ್ತು ವೀರಶೈವ ಧರ್ಮಕ್ಕೆ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಅನನ್ಯ,ಅದ್ವಿತೀಯ ಕೊಡುಗೆಯ ಬಗ್ಗೆ ಅಜ್ಞಾನ ಎನ್ನುವಷ್ಟು ತಿಳಿವಳಿಕೆಯ ಕೊರತೆ ಇದೆ.ಕನ್ನಡ ಮತ್ತು ಇಂಗ್ಲೀಷಿನಲ್ಲಿ ಸುಮಾರು ಮುವ್ವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಬಹಳಷ್ಟು ಸಾಹಿತ್ಯ ವೀರಶೈವ ಧರ್ಮ ಮತ್ತು ಬಸವ ಧರ್ಮದ ಕುರಿತಾಗಿಯೇ ಇದೆ.ಅವರು 1940 ರಲ್ಲಿ ಮದ್ರಾಸಿನಲ್ಲಿ ನಡೆದ ‘ ಅಖಿಲ ಭಾರತ ತತ್ತ್ವಜ್ಞಾನ ಸಮ್ಮೇಳನ’ ದಲ್ಲಿ ವೀರಶೈವ ತತ್ತ್ವಜ್ಞಾನದ ಕುರಿತು ಮಾಡಿದ ‘ ವೀರಶೈವ ವೆಲ್ಟನ್ ಶಾಂಗ್’ ಭಾಷಣವು ದೇಶದ ತತ್ತ್ವಜ್ಞಾನಿಗಳೆಲ್ಲರೂ ವೀರಶೈವ ಧರ್ಮದತ್ತ ತಿರುಗಿ ನೋಡುವಂತಾಯಿತಲ್ಲದೆ ಆ ಭಾಷಣವನ್ನು ವಿಸ್ತರಿಸಿ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಇಂಗ್ಲಿಷಿನಲ್ಲಿ ಬರೆದ’ ವೀರಶೈವ ವೆಲ್ಟನ್ ಶಾಂಗ್’ ಗ್ರಂಥವು ದೇಶ ವಿದೇಶಗಳ ಕವಿ,ಸಾಹಿತಿಗಳು,ತತ್ತ್ವಜ್ಞಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.೧೯೫೩ ರ ಎಪ್ರಿಲ್ ನಲ್ಲಿ ಹೃಷಿಕೇಶದಲ್ಲಿ ನಡೆದ ಜಾಗತಿಕ ಸರ್ವಧರ್ಮ ಸಮ್ಮೇಳನದ ಎರಡನೇ ದಿನದ ಅಧ್ಯಕ್ಷತೆಯನ್ನು ವಹಿಸಿಕೊಂಡು ‘ವೀರಶೈವ ತತ್ತ್ವಜ್ಞಾನ’ ದ ಕುರಿತು ಅದ್ಭುತವಾದ,ಸರಸ್ವತಿಯೇ ನಿಂತು ಮಾತನಾಡುತ್ತಿದ್ದಾಳೆಯೋ ಎನ್ನುವಂತಹ ಅಮೋಘ ಉಪನ್ಯಾಸ ನೀಡಿದ್ದರು .ಆ ಸಂದರ್ಭದ ವಿಶೇಷತೆಯನ್ನು ಇಲ್ಲಿ ಸ್ಮರಿಸಲೇಬೇಕು.ಆ ಸಮ್ಮೇಳನದಲ್ಲಿದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಭಾರತದ ಪ್ರಧಾನ ಮಂತ್ರಿ ಪಂಡಿತ ಜವಾಹರ ಲಾಲ್ ನೆಹರೂ ಅವರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ವಾಗ್ಭೈವ ವಿಲಾಸವನ್ನು ಕಂಡು ‘ ನಾನೆಷ್ಟು ಭಾಗ್ಯಶಾಲಿ ! ನಿಮ್ಮನ್ನು ಕಂಡೊಡನೆ,ನಿಮ್ಮ ಭಾಷಣ ಕೇಳುವಾಗ ನಾನು ದ್ವಿತೀಯ ವಿವೇಕಾನಂದರನ್ನು ಕಂಡತಾಯಿತಲ್ಲ? ‘ ಎಂದು ಪ್ರಶಂಸಿಸಿ,ಅಭಿನಂದಿಸಿದರು.ಅದಕ್ಕೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಉತ್ತರಿಸಿದ್ದು ‘ ನಾನು ಸಾಮಾನ್ಯ ಸಾಧಕನು.ಅಕಸ್ಮಾತ್ ಬಸವನಾಡಿನ ಭೂಮಿಯ ಮೇಲೆ ಕಳಚಿಬಿದ್ದ ಒಂದು ಆಣೆಕಲ್ಲು’.ಕುಮಾರಸ್ವಾಮಿಗಳವರ ಈ ವಿನಯಪೂರ್ಣ ನುಡಿ ಪಂಡಿತ ನೆಹರೂ ಸೇರಿದಂತೆ ಅಲ್ಲಿದ್ದ ವಿದ್ವಾಂಸರ ಬೆರಗಿನ ಕಾರಣವಾಗಿತ್ತು.

ಮಹಾಯೋಗಿಗಳೂ ಭಾರತೀಯ ಯೋಗ ಪರಂಪರೆಗಳನ್ನೆಲ್ಲ ಅನುಷ್ಠಾನಬಲದಿಂದ ಅರಗಿಸಿಕೊಂಡವರೂ ಆಗಿದ್ದ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರಿಗೆ ಬಸವಣ್ಣನವರ ಬಗ್ಗೆ ಎಲ್ಲಿಲ್ಲದ ಗೌರವಾಭಿಮಾನಗಳು.Buddha and Basav ಎನ್ನುವ ಅವರ ಇಂಗ್ಲಿಷ್ ಪುಸ್ತಕವನ್ನು ವಿಶ್ವಪ್ರಸಿದ್ಧ ವಿದ್ವಾಂಸರುಗಳು ಮೆಚ್ಚಿ,ಮುಕ್ತಮನಸ್ಸಿನಿಂದ ಹೊಗಳಿದ್ದಾರೆ.’ Mirror of Veerashaivism’ ಮತ್ತು ‘Prophets of Veerashaivism’ ಅವರ ಮಹತ್ವದ ಇಂಗ್ಲಿಷ್ ಕೃತಿಗಳು.೧೯೭೨,೧೯೭೫,೧೯೭೬,೧೯೭೭ ಮತ್ತು ೧೯೮೧ , ೧೯೮೩ ಹೀಗೆ ಒಟ್ಟು ಆರು ಬಾರಿ ವಿದೇಶ ಪ್ರವಾಸ ಕೈಗೊಂಡು ಯುರೋಪಿನ ರಾಷ್ಟ್ರಗಳು ಸೇರಿದಂತೆ ಪಶ್ಚಿಮದ ಬಹುತೇಕ ರಾಷ್ಟ್ರಗಳಲ್ಲಿ ಸಂಚರಿಸಿ ಬಸವಧರ್ಮದ ಬಗೆಗೆ ವಿಶೇಷ ಉಪನ್ಯಾಸ,ಉಪದೇಶಗಳ ಮೂಲಕ ಬಸವಣ್ಣನವರನ್ನು ವಿಶ್ವದ ತತ್ತ್ವಜ್ಞಾನ ಲೋಕಕ್ಕೆ,ಧಾರ್ಮಿಕ ಲೋಕಕ್ಕೆ ಪರಿಚಯಿಸಿದರು.ಕ್ರೈಸ್ತಜಗದ್ಗುರು ಜಾನ್ ಪೋಪ್ ಪಾಲ್ ಅವರು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಅದ್ಭುತಯೌಗಿಕ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಅವರನ್ನು ವ್ಯಾಟಿಕನ್ ಸಿಟಿಗೆ ಆಹ್ವಾನಿಸಿ,ಗೌರವಿಸಿದರು.ಶ್ರೀ ಕುಮಾರಸ್ವಾಮಿಗಳು ಈ ಭೇಟಿಯ ಸ್ಮರಣಾರ್ಥವಾಗಿ ಜಾನ್ ಪೋಪ್ ಪಾಲರಿಗೆ ಇಷ್ಟಲಿಂಗವನ್ನು ಕಾಣಿಕೆಯನ್ನಾಗಿ ನೀಡಿದರು.ಪೋಪ್ ಪಾಲರು ‘ What is this ?’ ಎಂದು ಪ್ರಶ್ನಿಸಲಾಗಿ ತಪಸ್ವಿಗಳು ಜಾನ್ ಪೋಪ್ ಪಾಲ್ ಅವರ ಕೈಯಲ್ಲಿಟ್ಟಿದ್ದ ಇಷ್ಟಲಿಂಗವನ್ನೊಮ್ಮೆ ದೃಷ್ಟಿಸಿ ನೋಡಲು ಇಷ್ಟಲಿಂಗದಿಂದ ನೀಲಕಾಂತಿಯು ಹೊರಹೊಮ್ಮಿತು.’ Oh,What a wonder!’ ಎಂದು ಉದ್ಗರಿಸಿದ ಜಾನ್ ಪೋಪ್ ಪಾಲರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ಇಷ್ಟಲಿಂಗದ ಮಹತ್ವವನ್ನು,ಇಷ್ಟಲಿಂಗೋಪಾಸನೆಯ ರಹಸ್ಯವನ್ನು ಬಸವಣ್ಣನವರ ಕೊಡುಗೆಯನ್ನು ವಿವರಿಸಿ ಹೇಳಿದರು.ಪಶ್ಚಿಮದ ದೇಶಗಳ ಸಾವಿರಾರು ಜನರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಅವರನ್ನು ಉದ್ಧರಿಸಿದ್ದಾರೆ.ನಾನು ಅವರ ಸನ್ನಿಧಿಯಲ್ಲಿದ್ದ ಮೂರು ವರ್ಷಗಳಲ್ಲಿ ಅವರು ಇಷ್ಟಲಿಂಗದಲ್ಲಿ ದೃಷ್ಟಿಯನ್ನಿಟ್ಟು ಅದರಿಂದ ನೀಲಕಾಂತಿ ಹೊರಬರುವಂತೆ ಮಾಡುತ್ತಿದ್ದ ಅವರ ಅನಿಮಿಷದೃಷ್ಟಿಯ ಯೌಗಿಕಸಾಮರ್ಥ್ಯದ ಬೆಡಗನ್ನು ಬೆರಗುಗಣ್ಣುಗಳಿಂದ ಹತ್ತಾರುಬಾರಿ ಕಂಡು ಧನ್ಯನಾಗಿದ್ದೇನೆ.ಇಂದು ವೀರಶೈವಮತದ ಗುರುಗಳು,ಜಗದ್ಗುರುಗಳು ಎಂದು ಹೇಳಿಕೊಂಡು ತಿರುಗುವವರು ಬರಿ ಇಷ್ಟಲಿಂಗಪೂಜೆಯ ‘ಶಾಸ್ತ್ರ’ವಾದ ಉಪಚಾರದ ಪೂಜಾವಿಧಾನವನ್ನಷ್ಟೇ ಉಪದೇಶಿಸುತ್ತಾರೆಯೇ ಹೊರತು ಯಾರೊಬ್ಬರಲ್ಲಿಯೂ ಅನಿಮಿಷದೃಷ್ಟಿ ಅಳವಟ್ಟಿಲ್ಲ,ಯಾರೊಬ್ಬರೂ ಇಷ್ಟಲಿಂಗದಲ್ಲಿ ನೀಲಕಾಂತಿಯನ್ನು ಹೊಮ್ಮಿಸುವ ಯೋಗಸಾಮರ್ಥ್ಯ ಪಡೆದಿಲ್ಲ !

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ನನಗೆ ಅಷ್ಟಾಂಗಯೋಗದ ಮೂಲಕ ಶಿವದೀಕ್ಷೆಯನ್ನಿತ್ತು ಅನುಗ್ರಹಿಸಿ ಉದ್ಧರಿಸಿದರು.ಅದಾಗಲೆ ಬಸವಣ್ಣನವರ ಬಗ್ಗೆ ಗೌರವಾದರಗಳನ್ನು ಹೊಂದಿದ್ದ ನನಗೆ’ ಬಸವಣ್ಣನವರನ್ನು,ವಚನ ಸಾಹಿತ್ಯವನ್ನು ಓದು’ ಎಂದು ಸೂಚಿಸಿದ್ದರು.ಆ ಕಾರಣದಿಂದ ನಾನು ೧೯೯೧ ರಿಂದಲೇ ಬಸವಣ್ಣನವರನ್ನು,ವಚನ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ.ಎಲ್ಲಕ್ಕಿಂತ ಹೆಚ್ಚಾಗಿ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಒಂದು ಸಂದರ್ಭದಲ್ಲಿ ನನ್ನನ್ನು ಆಶೀರ್ವದಿಸಿ,ಅನುಗ್ರಹಿಸಿದ ಒಂದು ಮಾತು ನನ್ನ ಬಾಳಿನ ಪಥವನ್ನೇ ಬದಲಿಸಿತು–” ಅಂದು ಬಸವಣ್ಣ,ಇಂದು ಮುಕ್ಕಣ್ಣ ” ಎಂದು ಆಶೀರ್ವದಿಸಿದ್ದರಂದು ಗುರುದೇವ.ಗುರುದೇವನ ಈ ಆಶೀರ್ವಾದ ವಾಕ್ಕೇ ನಾನು ‘ ಮಹಾಶೈವ ಧರ್ಮ’ ಎನ್ನುವ ಪ್ರತ್ಯೇಕ ಧರ್ಮ ಮತ್ತು ‘ ಮಹಾಶೈವ ಧರ್ಮಪೀಠ’ ಎನ್ನುವ ಧರ್ಮಪೀಠವನ್ನು ಸ್ಥಾಪಿಸಲು ಕಾರಣ.ಮಹಾಶೈವ ಧರ್ಮಪೀಠವು ‘ ಎರಡನೆಯ ಕಲ್ಯಾಣ’ ಎನ್ನುವಷ್ಟು ಹಿರಿಮೆಯ ‘ಶಿವಸಮಾಜ ನಿರ್ಮಾಣ’ ಕಾರ್ಯವನ್ನು ಪ್ರಾರಂಭದ ದಿನಗಳಿಂದಲೂ ನಡೆಸಿಕೊಂಡು ಬಂದಿದೆ. ‘ಕಲ್ಯಾಣ ಕರ್ನಾಟಕದ ಅತ್ಯರೂಪದ ಸಾಹಿತ್ಯಕ -ಸಾಂಸ್ಕೃತಿಕ ಕೇಂದ್ರ’ ಎನ್ನುವ ಅಗ್ಗಳಿಕೆಗೂ ಪಾತ್ರವಾಗಿದೆ.೨೦೦೧ ರಿಂದಲೂ ಮಹಾಶೈವ ಧರ್ಮಪೀಠದಲ್ಲಿ ವಚನಸಾಹಿತ್ಯ,ಶಿವ ಸಾಹಿತ್ಯದ ಕುರಿತು,ಸ್ವಸ್ಥಸಮಾಜ ನಿರ್ಮಾಣದ ಕುರಿತು ನಿಯತವಾಗಿ,ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ವಚನಕಾರರನ್ನು ರಾಯಚೂರು ಜಿಲ್ಲೆಯಲ್ಲಿ ಪರಿಚಯಿಸುವ ಕಾರ್ಯಕ್ರಮ ಮೊದಲಾದದ್ದೇ ಮಹಾಶೈವ ಧರ್ಮಪೀಠದಿಂದ.ಶಿವೈಕ್ಯರಾದ ನಾಡಿನ ಮಹಾನ್ ಅಧ್ಯಾತ್ಮಿಕ ಚೇತನರಾದ ವಿಜಯಪುರದ ಜ್ಞಾನಯೋಗಾಶ್ರಮದ ಯುಗಸಂತ ಶ್ರೀ ಸಿದ್ಧೇಶ್ವರಸ್ವಾಮಿಗಳು ಮೂರುಬಾರಿ ನಮ್ಮ‌ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ನಮ್ಮ ಗುರುಸೇವೆ,ಶರಣಸೇವೆ,ಶಿವಸೇವೆ ಎನ್ನುವ ‘ಮುಪ್ಪುರಿಸೇವಾಯೋಗ’ದ ಕುರಿತು ಪ್ರಶಂಸಿದ್ದರು.

ಬಸವಣ್ಣನವರು ವಿಶ್ವಕಂಡ ಅದ್ಭುತ ಸಮಾಜೋಧಾರ್ಮಿಕ ಸುಧಾರಕರು ಎನ್ನುವ ಕಾರಣದಿಂದ ಅವರಲ್ಲಿ ನನಗೆ ಗೌರವಾದರಗಳುಂಟು.ಬಸವಣ್ಣನವರ ಮಹಿಮೋನ್ನತ ವ್ಯಕ್ತಿತ್ವವನ್ನು ಸಮಯಸಿಕ್ಕಾಗಲೆಲ್ಲ ಎತ್ತಿಹಿಡಿಯುತ್ತಿದ್ದೇನೆ,ಪ್ರತಿಪಾದಿಸುತ್ತಿದ್ದೇನೆ.ಮಾತೆಮಹಾದೇವಿಯರವರು ಬಸವಣ್ಣನವರ ‘ ಕೂಡಲಸಂಗಮದೇವ’ ವಚನಾಂಕಿತವನ್ನು ‘ ಲಿಂಗದೇವ’ ಎಂದು ಬದಲಿಸಿದಾಗ ಮೊದಲು ವಿರೋಧಿಸಿ, ಲೇಖನ ಬರೆದವನು ನಾನು.ಕೋರ್ಟಿಗೆ ಹೋದರೆ ಮಾತೆಮಹಾದೇವಿಯವರಿಗೆ ಸೋಲಾಗುತ್ತದೆ ಎಂದು ಆಗಲೇ ಹೇಳಿದ್ದೆ ನಾನು.ಹೈಕೋರ್ಟಿನಲ್ಲಿ ಮಾತೆಮಹಾದೇವಿಯರು ಸೋತರು ಮಾತ್ರವಲ್ಲ,ಹೈಕೋರ್ಟ್ ಮಾತೆಮಹಾದೇವಿಯವರನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಿದೆ.ಲಿಂಗಾಯತಸ್ವತಂತ್ರ ಧರ್ಮ ಹೋರಾಟ ಪ್ರಾರಂಭವಾದಾಗ ನಾನು ಅದನ್ನು ಬೆಂಬಲಿಸಿಯೂ ‘ ಅದು ಕಷ್ಟಸಾಧ್ಯ’ ಎನ್ನುವುದನ್ನು ೨೦೧೭ ರಲ್ಲಿಯೇ ಹೇಳಿದ್ದೆ.ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆಗಿಂತ ‘ಬಸವಧರ್ಮ’ ಸ್ಥಾಪಿಸುವುದು ಉತ್ತಮ ಎನ್ನುವುದು ೧೯೯೧ ರಿಂದಲೂ ನನ್ನ ಅಭಿಪ್ರಾಯ.ಬುದ್ಧನ ಹೆಸರಿನಲ್ಲಿ ಅವನ ಅನುಯಾಯಿಗಳು ಬೌದ್ಧಧರ್ಮ ಸ್ಥಾಪಿಸಿದಂತೆ ಬಸವಣ್ಣನವರ ಹೆಸರಿನಲ್ಲಿ ಬಸವಧರ್ಮಸ್ಥಾಪಿಸಬೇಕು; ಶಿವನು ಬಸವ ಧರ್ಮದ ಪರಮಾತ್ಮನಾಗಬೇಕು,ಬಸವಣ್ಣನವರು ಆ ಧರ್ಮದ ಸ್ಥಾಪಕರಾಗಬೇಕು; ಬಸವಣ್ಣನವರ ವಚನಗಳು ಬಸವಧರ್ಮದ ಧರ್ಮಗ್ರಂಥವಾಗಬೇಕು ಮತ್ತು ಇಷ್ಟಲಿಂಗಧಾರಣೆಯು ಬಸವಧರ್ಮದ ಕುರುಹು ಇಲ್ಲವೆ ಆಚರಣೆಯಾಗಬೇಕು– ಎನ್ನುವ ನನ್ನ ನಿಲುವಿನಲ್ಲಿ ಇಂದಿಗೂ ಬದಲಾವಣೆ ಇಲ್ಲ.ಆದರೂ ಬಸವಣ್ಣನವರ ಮೇಲಿನ ಪ್ರೀತಿ,ಗೌರವಗಳಿಂದ ಲಿಂಗಾಯತ ಸ್ವತಂತ್ರ ಧರ್ಮವನ್ನು ಬೆಂಬಲಿಸುತ್ತಿದ್ದೇನೆ.

About The Author