ಕಲ್ಯಾಣ ಕಾವ್ಯ : ಕಾರವಾರದ ಕಡಲು : ಮುಕ್ಕಣ್ಣ ಕರಿಗಾರ

ಕಲ್ಯಾಣ ಕಾವ್ಯ : ಕಾರವಾರದ ಕಡಲು : ಮುಕ್ಕಣ್ಣ ಕರಿಗಾರ

ಕಾರವಾರದಲ್ಲಿದ್ದ ಅಷ್ಟೂ ದಿನಗಳ ಕಾಲ
ನಿಖರವಾಗಿ ಹೇಳಬೇಕೆಂದರೆ
ನಾಲ್ಕುವರೆ ವರ್ಷಗಳ ಕಾಲ
ನನಗೆ ಎಲ್ಲವೂ ಆಗಿತ್ತು
ಕಾರವಾರದ ಕಡಲು!
ಈಗ ನನ್ನೂರು ಗಬ್ಬೂರಿನಲ್ಲಿ
ಕುಳಿತು ಯೋಚಿಸುತ್ತಿಹೆನಾದರೂ
ಕಾರವಾರದ ಕಡಲಿಂದ
ದೂರವಾಗಿ ಹನ್ನೆರಡು ವರ್ಷಗಳಾಗಿಯೂ
ಕಡಲು ನನ್ನ ಕಣ್ಣಮುಂದೆ
ಅಂದು ಕಂಡಂತೆ
ಹಾಗೆಯೇ ಕಾಣಿಸುತ್ತಿದೆ!
ಕಡಲಿಂದ ಬಹುದೂರದ ಬಯಲುನಾಡಿನ
ಅಲ್ಲಲ್ಲ, ಬಿಸಿಲನಾಡಿನ
ನನ್ನೂರಿನಲ್ಲಿದ್ದರೂ
ಕಡಲು ನನ್ನೆದುರು
ತನ್ನ ನಿಸ್ಸೀಮತೆಯ ಹರಡಿ ನಿಂತಂತೆ
ತನ್ನ ಎಂದಿನ ಸೃಷ್ಟಿಗುಟ್ಟಿನ ಕಥೆಯ
ಹೇಳುತ್ತ ನಿಂತಂತೆ ಭಾಸವಾಗುತ್ತದೆ.
ಕಾರವಾರದಲ್ಲಿದಷ್ಟು ದಿನಗಳು
ಬೆಳಿಗ್ಗೆ ಸಂಜೆಯ ಹೊತ್ತಲ್ಲಿ
ಕಾರವಾರದ ಕಡಲ ತಟದಿ ಇರುತ್ತಿದ್ದೆ
ಕಾರವಾರದ ಕಡಲು ನನಗೆ ಒಗಟು
ಆಗಿತ್ತು,ಬೆಡಗು ಆಗಿತ್ತು
ಎಷ್ಟೊಂದು ಅರ್ಥಗಳಿದ್ದವು ಆ ಕಡಲಿಗೆ?
ಶಬ್ದ ಒಂದು,ಅರ್ಥ ನೂರು
ಕಡಲು ಒಂದೆ,ಭಾವ ಸಾಸಿರ !
ಕಡಲ ಒಂದು ತಟದಿ ನಿಂತು
ಕಣ್ಣುಹಾಯಿಸಿದಷ್ಟು ದೂರ
ನೀರೇ ನೀರು.
ಕಣ್ಣು ಸೋಲುತ್ತಿತ್ತೇ ವಿನಹ
ಸೋಲುತ್ತಿರಲಿಲ್ಲ ಕಡಲು !
ಎಷ್ಟು ಸಾವಿರ ಲಕ್ಷ ವರ್ಷಗಳಾಗಿಯೊ
ಭೂಮಿಗೆ ಆಧಾರವಾದ ಈ ಕಡಲು ಹುಟ್ಟಿ ?
ಇದೆ ಈಗ ಹುಟ್ಟಿ ಮೇಲೆದ್ದು ಬಂದಂತೆ ಕಾಣುತ್ತದೆ ಕಡಲು.
ಅಬ್ಬರಿಸಿ ಕುಣಿಯುವ ಅಲೆಗಳು
ಮರುಕ್ಷಣದಲ್ಲೆ ನೀರಲ್ಲಿ ಲೀನವಾಗುವ
ಅಡಗಿದ ಎಡೆಯಲ್ಲೆ ಮತ್ತೊಂದು
ದೈತ್ಯಾಕಾರದ ಅಲೆಯು ಸದ್ದು
ಮಾಡುತ್ತ ಎದ್ದು ಬರುತ್ತಿದ್ದುದನು
ಸೃಷ್ಟಿವ್ಯಾಪಾರ,ಜೀವರಾಶಿಗಳ ಕಥೆ ಎಂದು ಎಣಿಸುತ್ತಿದ್ದೆ
ನೀರಲ್ಲಿ ಬರೆದ ಮನುಷ್ಯರ ಇತಿಹಾಸವೆಂದು
ನೀರಲ್ಲಡಗಿ ನೀರಾಗುವ
ಸೃಷ್ಟಿತತ್ತ್ವ,ಜೀವಕ್ಕಾಧಾರ ಜಲತತ್ತ್ವ
ನೆಲವರೂಪಿಸುವ ಜಲಸತ್ತ್ವದ ನಿಗೂಢವೆನ್ನುತ್ತ
ನಿರ್ಭೇದ್ಯ ನಿರಂಜನ ನೀಲತತ್ತ್ವವನು
ಕಾಣುತ್ತ ,ತರ್ಕಿಸುತ್ತಿದ್ದ
ನನ್ನ ಲೆಕ್ಕಕ್ಕೆ,ತರ್ಕಕ್ಕೆ ಸಿಕ್ಕಲೇ ಇಲ್ಲ
ಕಾರವಾರದ ಕಡಲು!

ಲೆಕ್ಕಕ್ಕೆ ಸಿಕ್ಕದಷ್ಟು ಸಾವಿರ
ವರ್ಷಗಳಾದರೂ
ನನ್ನಂತಹ ಅದೆಷ್ಟೊ ಲಕ್ಷಕೋಟಿಗಳ
ಜನರೆದುರು ಒಗಟಾಗಿ ನಿಂತ
ಈ ಪಶ್ಚಿಮಾಂಬುಧಿ
ಈಗ ತಾನೆ ಹುಟ್ಟಿದಷ್ಟು ಹೊಸತಾಗಿದೆ
ನಿತ್ಯವೂ ಕ್ಷಣಕ್ಷಣಕ್ಕು
ಹೊಸತೆನಿಸುತ್ತದೆ
ಕಡಲತಟದಿ ನಿಂತು ನೋಡುವ
ನಾವು ಹಳಬರಾದರು
ಹುಡುಗತನದಿಂದ ಮುಪ್ಪಡರುವ ತನಕವೂ
ನಿತ್ಯನೋಡುತ್ತಿದ್ದರೂ
ಹೊಸತಾಗಿಯೆ ಕ್ಷಣಕ್ಷಣಕ್ಕು
ಹೊಸತಾಗುವ ಕಡಲ ಒಡಲ ರಹಸ್ಯವೇನು?
ಭೇದಿಸಬಲ್ಲರು ಯಾರು?
ನನ್ನಂತೆ ಎಷ್ಟೋ ಜನರು
ಕಡಲನ್ನು ಅರಿಯುವ ಅದಮ್ಯ ಉತ್ಸಾಹದಲಿ
ಬಂದು ಹಿಂದಿರುಗಿದ್ದಾರೆ
ಆದರೆ ಕಡಲು ಮಾತ್ರ
ನಿತ್ಯವೂ ಹೊಸತಾಗುತ್ತ
ಚಿರಯೌವ್ವನವನ್ನನುಭವಿಸುತ್ತ
ಬಾಲ್ಯ ಯೌವ್ವನ ಮುಪ್ಪು ಮರಣಗಳಿಗೆ
ಒಳಗಾಗುವ ಮನುಷ್ಯರನ್ನು ಕಂಡು,
ಕಾಣುತ್ತ ಹಾಗೆಯೇ ಅಲೆಗಳಬ್ಬರದಿ
ನಗುತ್ತ ನಿಂತಿದೆ.

೩೦.೧೨.೨೦೨೩

About The Author