ಮಹಾಶೈವ ಪರಂಪರೆ : ಶಿವನ ಲೋಕಾನುಗ್ರಹ ಸಂಕಲ್ಪ ವಿಶೇಷವೇ ‘ ಶಿವೋಪಶಮನ ಕಾರ್ಯ’ :

ಮಹಾಶೈವ ಪರಂಪರೆ : ಶಿವನ ಲೋಕಾನುಗ್ರಹ ಸಂಕಲ್ಪ ವಿಶೇಷವೇ ‘ ಶಿವೋಪಶಮನ ಕಾರ್ಯ’ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಪಶಮನ ಕಾರ್ಯ’ ದಿಂದ ಇದುವರೆಗೆ ಸಾವಿರಾರು ಜನರು ಸಂಕಟಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.ಇಲ್ಲಿಯವರೆಗೆ 74 ‘ಶಿವೋಪಶಮನ ಕಾರ್ಯ’ ಗಳಾಗಿವೆ.ಈ ಎಪ್ಪತ್ನಾಲ್ಕು ವಾರಗಳಲ್ಲಿಯೇ ಮಹಾಶೈವ ಧರ್ಮಪೀಠವು ರಾಜ್ಯ- ಹೊರರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ.ಎಲ್ಲೆಲ್ಲಿಯೂ ಎಂತೆಂಥವರಲ್ಲಿಯೂ ಪರಿಹಾರವಾಗದ ಸಮಸ್ಯೆಗಳು ಶ್ರೀಕ್ಷೇತ್ರ ಕೈಲಾಸದಲ್ಲಿ ಪರಿಹಾರವಾಗುತ್ತಿವೆ; ವೈದ್ಯರುಗಳು ಅಸಹಾಯಕತೆಯಿಂದ ಕೈಚೆಲ್ಲಿದ ಅಸಾಧ್ಯರೋಗಗಳನ್ನು ಗುಣಪಡಿಸುತ್ತಿದ್ದಾನೆ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರಶಿವ.ಇಷ್ಟು ಕಡಿಮೆ ಅವಧಿಯಲ್ಲಿಯೇ ಮಹಾಶೈವ ಧರ್ಮಪೀಠವು ಪ್ರಸಿದ್ಧಿಯಾದುದನ್ನು ಕಂಡು ಕೆಲವರಿಗೆ ಕುತೂಹಲ,ಕೆಲವರಿಗೆ ಆಶ್ಚರ್ಯ.ಕೆಲವರು ಸಂತುಷ್ಟರಾದರೆ ಅಸಂತುಷ್ಟರಾದವರೂ ಹಲವರಿದ್ದಾರೆ.ನನ್ನ ಹಳೆಯ ಕಾಲದ ಆತ್ಮೀಯರೂ,ಪ್ರಗತಿಪರ ಚಿಂತಕರೂ ಸಮಾಜಪರಕಾಳಜಿಯುಳ್ಳ ರೈತಸಂಘಟನೆಯ ಮುಖಂಡರೂ ಆಗಿರುವ ನಮ್ಮೂರು ಗಬ್ಬೂರಿನ ಸಮೀಪವೇ ಇರುವ ನಾಗಡದಿನ್ನಿಯ ಆರ್ ಎಸ್ ಪಾಟೀಲ್ ಅವರಿಗೆ ‘ ಶಿವೋಪಶಮನ ಕಾರ್ಯ’ದ ಬಗ್ಗೆ ಮೆಚ್ಚುಗೆ,ಆನಂದವಿದ್ದರೂ ಒಂದು ಸಂದೇಹವು ಅವರನ್ನು ಕಾಡುತ್ತಿದೆ.ಆರ್ ಎಸ್ ಪಾಟೀಲ್ ಅವರು ಸಂನ್ಯಾಸಿಗಳ ಭಾಷೆಯಲ್ಲಿ ಹೇಳುವ ನನ್ನ ‘ ಪೂರ್ವಾಶ್ರಮ’ ವಾದ ಸರಕಾರಿ ಅಧಿಕಾರಿ ಜೀವನದ ಆರಂಭದ ವರ್ಷಗಳಿಂದಲೂ ಪರಿಚಿತರಾಗಿರುವ,ಆತ್ಮೀಯರಾಗಿರುವ ಇದುವರೆಗೂ ಅದೇ ಆತ್ಮೀಯತೆಯನ್ನು ಉಳಿಸಿಕೊಂಡ ವಿಶಿಷ್ಟ ವ್ಯಕ್ತಿತ್ವ ಸಂಪನ್ನರು,ನಾನು ಆಗಾಗ ಮಾತನಾಡುವ ,ಸಂಪರ್ಕಿಸುವ ಕೆಲವೇ ಜನರಲ್ಲಿ ಅವರೂ ಒಬ್ಬರು.ನಾನು ಈ ಹಿಂದೆ ದೇವದುರ್ಗ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ಆರ್ ಎಸ್ ಪಾಟೀಲ್ ಅವರು ತಾಲೂಕಾ ಪಂಚಾಯತಿಯ ಸದಸ್ಯರಾಗಿದ್ದರು,ತಮ್ಮ ಚಿಂತನಶೀಲ ವ್ಯಕ್ತಿತ್ವ,ಜನಪರಕಾಳಜಿ,ಜನಮುಖಿಧೋರಣೆಗಳಿಂದ ಎಲ್ಲರಿಗೂ ಬೇಕಾದವರು ಆಗಿದ್ದರು.ಅಧಿಕಾರಿಯಾಗಿದ್ದಾಗ ಯಾರ ಮನೆಗಳಿಗೂ ಹೊಗದಿದ್ದ ನಾನು ಆರ್ ಎಸ್ ಪಾಟೀಲ್ ಅವರ ಮನೆಗೆ ಹೋಗುತ್ತಿದ್ದೆ,ದೇವದುರ್ಗದ ನನ್ನ ಸರಕಾರಿ ವಸತಿಗೃಹ ಮತ್ತು ನಮ್ಮೂರಿನ ನನ್ನ ತೋಟದ ಆಶ್ರಮಕ್ಕೆ ಅವರು ಬರುತ್ತಿದ್ದರು.ಗಂಟೆಗಟ್ಟಲೆ ನಾನು ಅವರು ಮತ್ತಿತರ ಸಮಾನ ಮನಸ್ಕ ಗೆಳೆಯರುಗಳೊಂದಿಗೆ ಚರ್ಚಿಸುತ್ತಿದ್ದೆ.

ಸುಮಾರು ಇಪ್ಪತ್ತು ವರ್ಷಗಳಿಂದಲೂ ನನ್ನನ್ನು ಚೆನ್ನಾಗಿ ಬಲ್ಲ ಆರ್ ಎಸ್ ಪಾಟೀಲ್ ಅವರಲ್ಲಿ ನಾನು ‘ ಶಿವೋಪಶಮನ ಕಾರ್ಯ’ ಮಾಡುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ,ಸಂದೇಹವನ್ನುಂಟು ಮಾಡಿದೆ.ಮೊದಲಿನಿಂದಲೂ ಪ್ರಗತಿಶೀಲಮನೋಭಾವದವನಾದ ನಾನು ಮೂಢನಂಬಿಕೆ,ವ್ಯಕ್ತಿಪೂಜೆ,ಹುಸಿಪ್ರತಿಷ್ಠೆಗಳನ್ನು ವಿರೋಧಿಸುತ್ತ ಬಂದವನು.ಅಲ್ಲದೆ ಇಂದಿಗೂ ಪ್ರಖರವೈಚಾರಿಕತೆಯ ಸಾಹಿತ್ಯದ ಮೂಲಕ ನನ್ನದೆ ಆದ ಓದುಗರ ಬಳಗ,ಮಿತ್ರರನ್ನು– ಹಾಗೆಯೇ ಶತ್ರುಗಳನ್ನು ಕೂಡ– ಸಂಪಾದಿಸಿದವನು.ಹೀಗಿದ್ದೂ ನಾನು ಜನರಿಗೆ ವಿಭೂತಿ ಮಂತ್ರಿಸಿಕೊಡುವುದು,ಲೋಬಾನ ಮಂತ್ರಿಸಿಕೊಡುವುದು,ದಾರಕಟ್ಟುವುದು,ಕೆಲವರಿಗೆ ತಾಯತ ಕಟ್ಟುವುದು ಆರ್ ಎಸ್ ಪಾಟೀಲ್ ಅವರ ಸಂದೇಹದ ಕಾರಣ– ಇದು ಮೂಢನಂಬಿಕೆಯಲ್ಲವೆ? ಇದನ್ನು ಏನೆಂದು ಅರ್ಥೈಸಬೇಕು? ಎನ್ನುವ ಸಮಸ್ಯೆ ಅವರನ್ನು ಕಾಡುತ್ತಿದೆ.ನಮ್ಮ ಶಿವೋಪಶಮನ ಕಾರ್ಯವನ್ನು ಮುಕ್ತಮನಸ್ಸಿನಿಂದ ಸ್ವಾಗತಿಸಿ,ಪ್ರಶಂಸಿಸುತ್ತಿರುವವರಲ್ಲಿ ಅವರೂ ಒಬ್ಬರು.ಆರ್ ಎಸ್ ಪಾಟೀಲ್ ಅವರಂತೆಯೇ ಈ ಪ್ರಶ್ನೆ ಇತರರನ್ನು ಕಾಡುತ್ತಿರುವುದನ್ನು ನಾನು ಬಲ್ಲೆ.ಆರ್ ಎಸ್ ಪಾಟೀಲ್ ಅವರು ಈದಿನ ( 26.12.2023) ನನ್ನೊಂದಿಗೆ ಮೊಬೈಲ್ ನಲ್ಲಿ ಮಾತನಾಡುವಾಗ ಪ್ರಸ್ತಾಪಿಸಿದ ಅವರ ಪ್ರಾಮಾಣಿಕ ಸಂದೇಹವು ಹಲವರ ಪ್ರಶ್ನೆಗಳಿಗೆ ಉತ್ತರವಾಗಬಲ್ಲದು . ನಮ್ಮ ‘ ಶಿವೋಪಶಮನ ಕಾರ್ಯ’ ಸ್ವರೂಪದ ಬಗೆಗೆ ಜನರಿಗೆ ಮಾಹಿತಿ ನೀಡಬಲ್ಲದುದು ಆಗಿರುವುದರಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ. ಎಂದಾದರೊಂದು ದಿನ ನಾನು ‘ ಶಿವೋಪಶಮನ ಕಾರ್ಯ’ ದ ಬಗ್ಗೆ ಬರೆಯಲೇಬೇಕಿತ್ತು;ಆರ್ ಎಸ್ ಪಾಟೀಲ್ ಅವರನ್ನು ಸ್ಫೂರ್ತಿ,ಪ್ರೇರಣೆಯಾಗಿಟ್ಟುಕೊಂಡು ಇಂದು ಬರೆಯುತ್ತಿದ್ದೇನೆ.

ಮೊದಲೇ ಹೇಳಿಬಿಡುವೆ,ನಮ್ಮ‌ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರತಿ ಆದಿತ್ಯವಾರದಂದು ನಡೆಯುವ ‘ ಶಿವೋಪಶಮನ ಕಾರ್ಯ’ ವು ವಿಶ್ವನಿಯಾಮಕ ಪರಶಿವನ ಸಂಕಲ್ಪ ಮತ್ತು ಪ್ರೇರಣೆಯೇ ಹೊರತು ಇದರಲ್ಲಿ ನನ್ನ ವಿಶೇಷವೇನೂ ಇಲ್ಲ.ನಾನು ನಿಮಿತ್ತ ಮಾತ್ರ.ವಿಶ್ವೇಶ್ವರ ಶಿವನ ಲೋಕಕಾರುಣ್ಯಗುಣವೇ ‘ಶಿವೋಪಶಮನ ಕಾರ್ಯ’ ವಾಗಿ ಕಾರ್ಯನಿರ್ವಹಿಸುತ್ತಿದೆ.ನಾನು ನಮ್ಮ ಮಠದಲ್ಲಿ ಜನರನ್ನು ನೋಡುತ್ತೇನೆ,ಜನರ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ.ನಾವು ಮಹಾಶೈವ ಧರ್ಮಪೀಠವನ್ನು ಅಧಿಕೃತವಾಗಿ ಕಾರ್ಯೋನ್ಮುಖವಾಗಿಸಿದ್ದು 2013 ರಲ್ಲಿ.ಆಗ ಕೇವಲ ಸಾಹಿತ್ಯಕ ,ವೈಚಾರಿಕ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸುತ್ತಿದ್ದೆವು.ನಾನು 1991 ರಿಂದ ಅಧ್ಯಾತ್ಮಿಕ ಸಾಧನೆ,ಯೋಗಸಾಧನೆ ಮಾಡುತ್ತಾ ಹಲವಾರು ಸಿದ್ಧಿಗಳನ್ನು ಸಂಪಾದಿಸಿದ್ದೆನಾದರೂ ‘ಜನರನ್ನು ನೋಡುವ’ ಇಂತಹ ಕ್ರಿಯೆಯನ್ನು ಕೈಗೊಂಡಿರಲಿಲ್ಲ,ಆ ಬಗ್ಗೆ ನನಗೆ ಆಸಕ್ತಿಯೂ ಇರಲಿಲ್ಲ.ಮಹಾಯೋಗಿಯಾಗಿದ್ದ ನನ್ನ ತಂದೆ ನಾಗಪ್ಪ ಕರಿಗಾರ ಅವರು ಜನರನ್ನು ನೋಡುವುದು,ದಾರ ತಾಯತ ಕಟ್ಟುವುದನ್ನು ಮಾಡುತ್ತಿದ್ದರು.ನಾನು ಅವರಿಗೆ ಬಯ್ಯುತ್ತಿದೆ ‘ಇದು ಮೂಢನಂಬಿಕೆ,ಇದು ಸರಿಯಲ್ಲ.ನಾವು ವೈಜ್ಞಾನಿಕ ಯುಗದಲ್ಲಿದ್ದೇವೆ ,ಹಾಗೆ ಹೀಗೆ’. ಅಂತಹ ನಾನೇ ಇಂದು ಜನರನ್ನು ನೋಡುತ್ತಿದ್ದೇನೆ,ದಾರ- ತಾಯತ ಕಟ್ಟುತ್ತಿದ್ದೇನೆ! ಇದಲ್ಲವೆ ಶಿವ ವಿಶ್ವೇಶ್ವರನ ಲೀಲೆ! ಅದು ಪ್ರಾರಂಭವಾಗಿದ್ದು ತೀರ ಅನಿರೀಕ್ಷಿತವಾಗಿ.ಒಂದು ಸರಕಾರಿ ರಜಾದಿನ ( ಆಗ ನಾನಿನ್ನು ಸರಕಾರಿ ಸೇವೆಯಲ್ಲಿದ್ದೆ) ನಾನು ನಮ್ಮ ಮಹಾಶೈವ ಧರ್ಮಪೀಠದಲ್ಲಿ ಸುತ್ತಾಡುತ್ತಿದ್ದೆ.ಇಂದು ನಮ್ಮ‌ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತ ಭಕ್ತರೂ ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರಲ್ಲಿ ಒಬ್ಬರೂ ಆಗಿರುವ ವಿದ್ಯಾರ್ಥಿದೆಸೆಯ ನನ್ನ ಬಾಲ್ಯದ ಗೆಳೆಯ ಬಾಬುಗೌಡ ಯಾದವ ಸುಲ್ತಾನಪುರ ಅವರು ನನ್ನ ಬಳಿ ಬಂದರು.ಅದು ಇದು ಮಾತನಾಡುತ್ತ ಅವರು ತಮ್ಮ ಕುಟುಂಬದ ಸಮಸ್ಯೆಗಳನ್ನು ನನ್ನೆದುರು ಪ್ರಸ್ತಾಪಿಸಿದರು.ಆಶ್ಚರ್ಯ! ನನ್ನಲ್ಲಿ ಏನೋ ಬದಲಾವಣೆ ಆಯಿತು.ಯಾವುದೋ ಪ್ರಬಲಶಕ್ತಿಯೊಂದು ನನ್ನ ಮೈಯಲ್ಲಿ ಪ್ರವಹಿಸಿದ ಅನುಭವ.ಬಾಬುಗೌಡ ಯಾದವ ಅವರು ಮಾತನಾಡುತ್ತಲೇ ಇದ್ದಾರೆ ‘ ಈತನಿಗೆ ಮಾಡಿಸಿದ್ದಾರೆ ಅಂತ ಹೇಳು’ ಎಂದು ಅಂತರ್ವಾಣಿಯು ನುಡಿಯಿತು.ನಾನು ಸುಮ್ಮನಿದ್ದೆ.ಮತ್ತೊಮ್ಮೆ ಅದೇ ಅಂತರ್ವಾಣಿ.ನಾನು ಗೊಂದಲಕ್ಕೆ ಸಿಲುಕಿದೆ.’ ಏನಿದು? ಯಾರು ಹೇಳುತ್ತಿದ್ದಾರೆ? ಏನು ಹೇಳಬೇಕು? ಅಂತ.’ ನಾನು ಶಿವ ಹೇಳುತ್ತಿದ್ದೇನಪ್ಪ,ಈ ನಿನ್ನ ಸ್ನೇಹಿತನಿಗೆ ಮಾಟ ಮಾಡಿಸಿದ್ದಾರೆ ಅಂತ ಹೇಳು’ ಎನ್ನುವ ಸ್ಪಷ್ಟವಾದ ಅಂತರ್ವಾಣಿ! ಕೂಡಲೆ ನಾನು ಶಿವ ವಿಶ್ವೇಶ್ವರನ ಸನ್ನಿಧಿಗೆ ಹೋದೆ.ನೋಡುತ್ತೇನೆ ವಿಶ್ವೇಶ್ವರಲಿಂಗದ ತುಟಿಗಳು ಮಾತನಾಡಿದಂತೆ ಅದುರುತ್ತಿವೆ,ಚಲಿಸುತ್ತಿವೆ! ಭಕ್ತಿಯಿಂದ ಕೈ ಮುಗಿದು ‘ ಸರಿ ತಂದೆ ನೀನು ಆಜ್ಞಾಪಿಸಿದಂತೆ ಹೇಳುವೆ,ಆದರೆ ಅದರ ಪರಿಹಾರವನ್ನೂ ನೀನೇ ಹೇಳಬೇಕು’ ಎಂದು ಪ್ರಾರ್ಥಿಸಿದೆ.ವಿಶ್ವೇಶ್ವರ ಶಿವ ಮುಗುಳುನಗೆ ಬೀರಿದ.ಸ್ನೇಹಿತ ಬಾಬುಗೌಡರ ಬಳಿ ಬಂದು ‘ ಬಾಬು ನಿಮಗೆ ಮಾಟ ಮಾಡಿಸಿದ್ದಾರಂತೆ,ಶಿವ ಹೇಳುತ್ತಿದ್ದಾನೆ’ ಎಂದು ಹೇಳುತ್ತಿರುವಷ್ಟರಲ್ಲಿಯೇ ನನಗರಿಯದಂತೆ ಅವರ ಸಮಸ್ಯೆಯ ಎಲ್ಲ ಸಂಗತಿಗಳು ಕಣ್ಣಮುಂದೆ ಗೋಚರಿಸಿ,ಬಾಬು ಅವರಿಗೆ ಹೇಳಿದೆ.ನಾನು ಹೇಳಿದುದೆಲ್ಲವೂ ಸತ್ಯ ಎಂದರು ಬಾಬು ಯಾದವ.ಶಿವನು ಹೇಳಿದಂತೆ ಪರಿಹಾರವನ್ನೂ ಹೇಳಿದೆ,ಸಂಕಟಮುಕ್ತರಾದ ಬಾಬು ಗೌಡ ಯಾದವ ಮರುದಿನ ಅವರ ಪತ್ನಿಯವರನ್ನು ಕರೆದುಕೊಂಡು ಬಂದರು,ಅವರ ಸಮಸ್ಯೆಗೂ ನಿಖರ ಕಾರಣ ಮತ್ತು ಪರಿಹಾರ ಹೇಳಿದೆ.ಅದಾದ ಬಳಿಕ ಮೆಲ್ಲನೆ ಪ್ರಾರಂಭವಾಯಿತು ಜನರಿಗೆ ಹೇಳುವುದು.ಐದು ಜನರಾದರು,ಐವತ್ತು ಜನರಾದರು ಎರಡು ಮೂರುವಾರಗಳಲ್ಲಿ.ಸರಕಾರಿ ಸೇವೆಯಲ್ಲಿದ್ದ ನಾನು ಇದನ್ನು ಮುಂದುವರೆಸಬೇಕು ಎಂದು ಸಂಕಲ್ಪಿಸಿ ನನಗೆ ಅನುಕೂಲವಾಗಿದ್ದ,ಸರಕಾರಿ ರಜಾದಿನವಾಗಿದ್ದ ಆದಿತ್ಯವಾರದಂದು ಜನರನ್ನು ನೋಡತೋಡಗಿದೆ‌.ನಾಲ್ಕೈದು ವಾರಗಳ ಬಳಿಕ ‘ ಶಿವೋಪಶಮನ ಕಾರ್ಯ’ ಎಂದು ಅದನ್ನು ಅಧಿಕೃತವಾಗಿ ಪ್ರಾರಂಭಿಸಿದೆವು.ಮಹಾಶೈವ ಧರ್ಮಪೀಠದಲ್ಲಿ ‘ಶಿವೋಪಶಮನ ಕಾರ್ಯ’ ಎನ್ನುವ ವಿಶಿಷ್ಟ ಆಧ್ಯಾತ್ಮಿಕ ಉಪಶಮನ ಕಾರ್ಯವು ಅಧಿಕೃತವಾಗಿ ಪ್ರಾರಂಭಗೊಂಡಿದ್ದು 22.06.2022 ರ ರವಿವಾರದಂದು.ಪ್ರತಿ ರವಿವಾರ ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುತ್ತಿರುವ ಭಕ್ತರುಗಳ ಸಂಖ್ಯೆ ಹೆಚ್ಚುತ್ತಿದ್ದುದರಿಂದ ಮತ್ತು ಬಹುದೂರದ ಸ್ಥಳಗಳಿಂದ ಭಕ್ತರುಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸುತ್ತಿದ್ದುದರಿಂದ ಭಕ್ತರುಗಳ ನೆರವಿನೊಂದಿಗೆ ಮಧ್ಯಾಹ್ನ ಪ್ರಸಾದ– ದಾಸೋಹವ್ಯವಸ್ಥೆಯನ್ನು ಕಲ್ಪಿಸಲಾಯಿತು.ಬೆಳಿಗ್ಗೆ ತಿಂಡಿ ಚಹಾ ಮತ್ತು ಮಧ್ಯಾಹ್ನದ ಪ್ರಸಾದದೊಂದಿಗೆ ಎರಡು ಬಾರಿ ಚಹಾದ ಏರ್ಪಾಟು ಮಾಡಲಾಯಿತು.ಎಲ್ಲಿ ಎಲ್ಲಿಂದಲೋ ಜನರು ಬರತೊಡಗಿದರು.ಪ್ರಾರಂಭದ ಹತ್ತಿಪ್ಪತ್ತು ವಾರಗಳ ಅವಧಿಯಲ್ಲಿ ಒಮ್ಮೆಮ್ಮೆ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ಹನ್ನೆರಡು ಘಂಟೆಯವರೆಗೂ ಜನರನ್ನು ನೋಡುತ್ತಿದ್ದೆ.ತನ್ನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವನು ನಿಖರ ಪರಿಹಾರ ಸೂಚಿಸಿ ಅವರನ್ನು ಸಂಕಟಮುಕ್ತರನ್ನಾಗಿಸುತ್ತಿದ್ದುದರಿಂದ ಪ್ರತಿ ರವಿವಾರ ಐದಾರುನೂರು ಜನರು ನೆರೆಯತೊಡಗಿದರು.ಇದು ನಮ್ಮೂರ ಕೆಲವರ ಅಸಹನೆಗೆ ಕಾರಣವಾಯಿತು.ವಿಶ್ವನಿಯಾಮಕ ವಿಶ್ವೇಶ್ವರ ಶಿವನ ಆಣತಿಯಂತೆ ನಾನು ಶಿವಸೇವೆ ಎಂದು ಇದನ್ನು ಪ್ರಾರಂಭಿಸಿದ್ದರೆ ಕೆಲವರು ಅಪಾರ್ಥ ಕಲ್ಪಿಸಿದರು,ಏನು ಏನೋ ಆಡಿಕೊಂಡರು,ಏನು ಏನೋ ಮಾಡಿದರು.ಆದರೆ ಅವರ ಯಾವ ದುರಾಲೋಚನೆಗಳೂ ಫಲಿಸಲಿಲ್ಲ.ಈ ಹಿಂದೆ ಅಂತಹ ಮಹಾನುಭಾವರುಗಳು ನನ್ನ ಮೇಲೆ ಅಭಿಚಾರ ಕರ್ಮಪ್ರಯೋಗಿಸಿ ಯಶಸ್ವಿಯಾಗಿದ್ದರು.ಈಗ ಅವರ ಅಸ್ತ್ರ ಶಸ್ತ್ರಗಳು ನಿಷ್ಪ್ರಯೋಜಕವಾದವು.ನಮ್ಮೂರು ಗಬ್ಬೂರಿನಲ್ಲಿ ನೂರಕ್ಕೆ 95ರಷ್ಟು ಜನರಿಗೆ ನನ್ನಲ್ಲಿ ಪ್ರೀತಿ,ವಿಶ್ವಾಸ,ಗೌರವಗಳಿವೆ.ಆದರೆ ಕೆಲವರಿದ್ದಾರೆ ಮಹಾನುಭಾವರುಗಳು ನನ್ನ ಮುಂದೆ ಏನೇನೂ ಅಲ್ಲದ,ನನಗೆ ಯಾವುದಕ್ಕೂ ಸಮರಲ್ಲದ ತಮ್ಮದೆ ನಡೆಯಬೇಕು ಎನ್ನುವ ಒಣಪೊಗರಿನ, ಹುಸಿಪ್ರತಿಷ್ಠೆಯ ಮಂದಿ.ಹಿಂದೆ ನಾನು ಊರಲ್ಲಿದ್ದರೆ ಅವರ‌ ಪ್ರತಿಷ್ಠೆಗೆ ಧಕ್ಕೆ ಎಂದು ಅವರಿವರ ಪ್ರಭಾವ ಬಳಸಿ,ಕುಯುಕ್ತಿ ಕುತಂತ್ರಗಳಿಂದ ಸರಕಾರಿ ಅಧಿಕಾರಿ ಆಗಿದ್ದ ನನ್ನನ್ನು ಊರಿಗೆ ಬರಲೇ ಹನ್ನೆರಡರಿಂದ ಹದಿನೆಂಟು ತಾಸುಗಳಾಗುವಷ್ಟು ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಿಸುತ್ತಿದ್ದರು,ಮಹಾಶೈವ ಧರ್ಮಪೀಠ ಪ್ರಸಿದ್ಧಿಗೆ ಬರದಂತೆ ನೋಡಿಕೊಳ್ಳುತ್ತಿದ್ದರು.ಸರಕಾರಿ ಅಧಿಕಾರದ ಪೊಗರು ಪ್ರತಿಷ್ಠೆಗಳಿಗೆ ಅಂಟಿಕೊಂಡಿದ್ದ ನಾನು ಕೂಡ ಅಧಿಕಾರಿಯ ಗತ್ತು ಗೈರತ್ತುಗಳಿಗೆ ಮನಸೋತಿದ್ದೆನಾದ್ದರಿಂದ ಮಹಾಶೈವ ಧರ್ಮಪೀಠದತ್ತ ಗಮನಿಸುತ್ತಲೂ ಇರಲಿಲ್ಲ. ಇದು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನಲ್ಲಿ ಬೇಸರವನ್ನುಂಟು ಮಾಡಿರಬೇಕು.ನನ್ನ ಗುರುದೇವ ಧಾರವಾಡದ ತಪೋವನದ ಮಹಾತಪಸ್ವಿ,ಯುಗಯೋಗಿ ಶ್ರೀಕುಮಾರಸ್ವಾಮಿಗಳವರು ಕರುಣಿಸಿದ್ದ ‘ ಶಿವಾನುಗ್ರಹ’ ದ ಪರಿಣಾಮವಾಗಿ ಲೀಲೆ ನಟಿಸಿ,ಕಾಶಿಗೆ ನನ್ನನ್ನು ಕರೆಯಿಸಿಕೊಂಡು ಕಾಶಿಯಿಂದ ನಮ್ಮ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಕುಳಿತ ವಿಶ್ವೇಶ್ವರ ಶಿವನಿಗೆ ನನ್ನ ಉದಾಸೀನ ಮನೋಭಾವ ಹಿಡಿಸಲಿಲ್ಲ ಎಂದು ಕಾಣಿಸುತ್ತದೆ.ನನ್ನ ಸರಕಾರಿ ಅಧಿಕಾರಿ ಜೀವನದಲ್ಲಿ ಹಲವು ಅಹಿತಕರ- ಅಪಮಾನಕರ,ಸಹಿಸಲಸಾಧ್ಯ ನೋವುಗಳ ಪ್ರಸಂಗಗಳನ್ನುಂಟು ಮಾಡಿ ಸರಕಾರಿ ಸೇವೆಯಲ್ಲಿ ನಿರಾಸಕ್ತಿ ಉಂಟಾಗುವಂತೆ ಮಾಡಿದ.ಶಿವಯೋಗಿಯಾಗಿ ಆಧ್ಯಾತ್ಮಿಕ ಸಾಧನೆಯಲ್ಲಿ ಹಲವು ಮಹತ್ವದ ಸಿದ್ಧಿಗಳನ್ನು ಪಡೆದಿದ್ದ ನನಗೂ ನನಗಿಂತ ವಯಸ್ಸು ಮತ್ತು ಸೇವಾ ಅನುಭವದಲ್ಲಿ ಕಿರಿಯರಾದ ಐಎಎಸ್ ಅಧಿಕಾರಿಗಳು ಮತ್ತು ದುರಂಹಕಾರಿ ರಾಜಕಾರಣಿಗಳಿಗೆ ನಮಿಸುವುದು ತರವಲ್ಲ ಎನ್ನುವ ಭಾವನೆ ಮೇಲಿಂದ ಮೇಲೆ ಕಾಡತೊಡಗಿತು.’ ನನ್ನ ಸೇವೆ ಮಾಡು. ಇದಕ್ಕು ಸಹಸ್ರಪಟ್ಟು ಮಿಗಿಲಾದ ಭೋಗ ಭಾಗ್ಯ ಐಶ್ವರ್ಯವನ್ನಿತ್ತು ನಿನ್ನನ್ನು ಪೊರೆಯುತ್ತೇನೆ.ಯಾಕೆ ಸರಕಾರಿ ಗುಲಾಮನಾಗಿ ತೊಳಲಾಡುತ್ತಿ? ಎಂದು ವಿಶ್ವೇಶ್ವರ ಶಿವನು ಮೇಲಿಂದ ಮೇಲೆ ಆಜ್ಞಾಪಿಸತೊಡಗಿದ.ಕೊನೆಗೊಂದು ದಿನ ವಿಶ್ವೇಶ್ವರ ಶಿವನಲ್ಲಿ ಪ್ರಾರ್ಥಿಸಿದೆ’ ಆಯಿತು ತಂದೆ,ನೀನು ಹೇಳಿದಂತೆ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವೆ ಮಾಡಿಕೊಂಡಿರುವೆ,ಆದರೆ ನನಗೆ ಕೆಲವು ವರ ನೀಡಬೇಕು– ನಾನು ನುಡಿದದ್ದು ನಡೆಯಬೇಕು,ನಾನು ಹಿಡಿದ ಕಾರ್ಯ ಯಶಸ್ವಿಯಾಗಬೇಕು ,ನಾನು ಬಯಸಿದ ಫಲ ಪದವಿಗಳು ನನಗೆ ಪ್ರಾಪ್ತವಾಗಬೇಕು’.ದಯಾಸಾಗರನಾದ ಶಿವನು ‘ ತಥಾಸ್ತು’ ಎಂದು ಆಶೀರ್ವದಿಸಿದ.ಆ ಬಳಿಕವಷ್ಟೇ ನಾನು ಸರಕಾರಿ ಸೇವೆಗೆ ತಿಲಾಂಜಲಿಯನ್ನಿತ್ತು ವಿಶ್ವೇಶ್ವರ ಶಿವನ‌ಪೂರ್ಣಾವಧಿ ಸೇವಕನಾದೆ.ಇದು ಮಹಾಶೈವ ಧರ್ಮಪೀಠದಲ್ಲಿ ‘ ಶಿವೋಪಶಮನ ಕಾರ್ಯ’ ಎನ್ನುವ ಪರಶಿವನ ಲೋಕಾನುಕಂಪೆಯ ಲೀಲೆಯು ಪ್ರವಹಿಸುತ್ತ ಬಂದಿರುವ ಪರಿ,ಸೊಬಗು- ಸೊಗಸು.

ಸ್ವಯಂ ವಿಶ್ವೇಶ್ವರ ಶಿವನೇ ನನಗೆ ಮೂರು ಮಹಾಮಂತ್ರಗಳನ್ನು ಅನುಗ್ರಹಿಸಿದ ಶ್ರೀಕ್ಷೇತ್ರ ಕೈಲಾಸಕ್ಕೆ ಬರುವ ಭಕ್ತರ ಸರ್ವವಿಧ ಸಂಕಟಗಳ ನಿವಾರಣೆಗಾಗಿ.ಆ ಮೂರು ಮಹಾಮಂತ್ರಗಳ ಅನುಷ್ಠಾನದ ಬಲದಿಂದ ನಮ್ಮ ಮಹಾಶೈವ ಧರ್ಮಪೀಠಕ್ಕೆ ಬರುವ ಭಕ್ತರ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗಿದೆ.ಪಾರ್ಶ್ವವಾಯು,ಕ್ಯಾನ್ಸರ್ ನಂತಹ ಮಹಾರೋಗಗಳಿಂದ ಪೀಡಿತರಾದವರು ಭವರೋಗ ವೈದ್ಯ ಶಿವನ ಅನುಗ್ರಹದಿಂದ ಗುಣಮುಖರಾಗಿದ್ದಾರೆ.ಮದುವೆಯಾಗಿ ಹತ್ತೊಂಬತ್ತು ಇಪ್ಪತ್ತು ವರ್ಷಗಳಾಗಿಯೂ ಮಕ್ಕಳನ್ನು ಕಾಣದವರು ಸಂತಾನ ಭಾಗ್ಯಪಡೆದಿದ್ದಾರೆ.ಮದುವೆಯಾಗದವರಿಗೆ ಕಂಕಣಭಾಗ್ಯಕೂಡಿ ಬಂದಿದೆ.ಭಯಂಕರ ಸಂಕಷ್ಟ ಪೀಡಿತರ ಸಮಸ್ಯೆಗಳು ಪರಿಹಾರವಾಗಿವೆ.ಕಾಲಿಲ್ಲದವರು ನಡೆದಾಡಿದ್ದಾರೆ,ಮಾತಿಲ್ಲದವರು ಮಾತನಾಡುತ್ತಿದ್ದಾರೆ.ಒಂದೇ ಎರಡೇ ಶಿವ ವಿಶ್ವೇಶ್ವರನ ಲೀಲೆಗಳು! ಅಘಟಿತಘಟಿತಮಹಿಮನೂ ಅಪರಾಂಪರ ಲೀಲಾ ಲೋಲನೂ ಆಗಿರುವ ವಿಶ್ವೇಶ್ವರ ಶಿವನ ಲೀಲಾಮಾಲೆಯನ್ನು ಬಣ್ಣಿಸಲಾಗದು.ಶಿವನ ಅನುಗ್ರಹವಿಶೇಷವೇ ಶಿವೋಪಶಮನ ಕಾರ್ಯವಾಗಿದೆ ಎಂಬುದು ಈಗ ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು ಎಂದುಕೊಳ್ಳುವೆ.

ಅಷ್ಟಾಗಿಯೂ ಇನ್ನು ಒಂದೆರಡು ಸಂಗತಿಗಳನ್ನು ನಾನಿಲ್ಲಿ ಹೇಳಲೇಬೇಕು.’ಶಿವೋಪಶಮನ ಕಾರ್ಯ’ ಆಧ್ಯಾತ್ಮಿಕ ಶಕ್ತಿಯಿಂದ ನೀಡುವ ಪರಿಹಾರವೇ ಹೊರತು ಅದು ಮೂಢನಂಬಿಕೆಯಲ್ಲ.ನಾನು ಸುದೀರ್ಘ ಮುವ್ವತ್ತುವರ್ಷಗಳ ಕಾಲ ಯೋಗಸಾಧನೆ ಮಾಡಿದ್ದೇನೆ.ಕುಂಡಲಿನಿಯೋಗ ಸೇರಿದಂತೆ ಹಲವು ಯೋಗಗಳಲ್ಲಿ ಸಿದ್ಧಿಪಡೆದಿದ್ದೇನೆ.ಪದ್ಮಾಸನದಲ್ಲಿ ಹತ್ತಾರು ಘಂಟೆಗಳ ಕಾಲ ಕುಳಿತು ಧ್ಯಾನಿಸಿ,ಸಮಾಧಿ ಸ್ಥಿತಿಯನ್ನು ಅನುಭವಿಸಿದ್ದೇನೆ.ನೆಲದಿಂದ ಹನ್ನೆರಡು ಅಂಗುಲಪ್ರಮಾಣ ಮೇಲೆ ಏರಿದ್ದೇನೆ‌.ನನ್ನ ತಾಯಿ ದುರ್ಗಾದೇವಿಯೊಂದಿಗೆ ಜನರೊಂದಿಗೆ ಮಾತನಾಡುವಂತೆ ಮಾತನಾಡಿದ್ದೇನೆ.ಈ ಎಲ್ಲ ಯೋಗಸಿದ್ಧಿ,ದೈವಾನುಗ್ರಹವು ಕೂಡಿ ಕಾಲಪಕ್ವವಾಗಿ ಶಿವನ ಲೋಕಕಾರುಣ್ಯಗುಣವಿಶೇಷವು ‘ ಶಿವೋಪಶಮನ ಕಾರ್ಯ’ ವಾಗಿ ಪರಿವರ್ತನೆಗೊಂಡಿದೆ.ಕೆಲವರು ಬೆರಗಾಗುತ್ತಾರೆ ನಾನು ಎಲ್ಲರಂತೆ ಢರ್ರನೆ ತೇಗುವುದಿಲ್ಲ,ಟಾಂ ಟೂಂ ಟುಸ್ ಮಾಡಿ ದೇವರನ್ನು ಆಹ್ವಾನಿಸಿಕೊಂಡು ಹುಚ್ಚರಂತೆ ಕುಣಿದು ಕುಪ್ಪಳಿಸಿ,ಕೇಕೆ ಹಾಕುವುದಿಲ್ಲ.ನನ್ನೆದುರು ಕುಳಿತ ವ್ಯಕ್ತಿಯ ಸಮಸ್ಯೆಯನ್ನು ಕೇಳಿ ವಿಶ್ವೇಶ್ವರ ಶಿವನತ್ತ ನೋಡುತ್ತೇನಷ್ಟೆ.ಲೋಕಪ್ರಭು,ನಿಗ್ರಹಾನುಗ್ರಹ ಸಮರ್ಥ ವಿಶ್ವೇಶ್ವರ ಶಿವ ಏನು ತೋರಿಸುತ್ತಾನೋ ಅದನ್ನೇ ಹೇಳುತ್ತೇನೆ,ಏನು ಪರಿಹಾರ ಸೂಚಿಸುತ್ತಾನೆಯೋ ಅದನ್ನೇ ಭಕ್ತರಿಗೆ ಹೇಳುತ್ತೇನೆ.ಇತರರು ದೇವರು ಹೇಳುವಂತಲ್ಲ ನನ್ನದು,ಆಧ್ಯಾತ್ಮಿಕ ಸಿದ್ಧಿಯ ಅನುಭೂತಿಯೋಗದ,ಶಿವಾನುಭೂತಿಸಿದ್ಧಿಯ ಫಲವದು.

ಕುಂಡಲಿನಿ ಯೋಗಸಾಧಕನಾಗಿರುವ ನನಗೆ ಷಟ್ ಚಕ್ರಗಳು ಮತ್ತು ಸಹಸ್ರಾರ ಚಕ್ರಬೇಧನ ವಿದ್ಯೆಯನ್ನು ಉಪದೇಶಿಸಿ ಅನುಗ್ರಹಿಸಿದ್ದಾರೆ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು.ಹಾಗಾಗಿ ವಿಶ್ವೇಶ್ವರ ಶಿವನ ಸನ್ನಿಧಿಗೆ ಬರುವ ಭಕ್ತರ ಸಮಸ್ಯೆಗಳು ಮತ್ತು ಅದರ ಪರಿಹಾರ ನನಗೆ ತಕ್ಷಣವೇ ಗೋಚರಿಸುತ್ತದೆ.ಅನಾಹತ ಚಕ್ರಬೇಧನದಿಂದ ತ್ರಿಕಾಲಜ್ಞಾನ ಪ್ರಾಪ್ತಿಯಾಗುತ್ತದೆ,ಆಜ್ಞಾಚಕ್ರಭೇದನದಿಂದ ಜಗತ್ತಿನ ಕಾರ್ಯಕಾರಣ ಸಂಬಂಧ ಜ್ಞಾನ ಉಂಟಾಗುತ್ತದೆ.ಅನಾಹತ ಚಕ್ರಭೇದನ ಸಿದ್ಧಿಯಿಂದ ನಾನು ಶಿವ ವಿಶ್ವೇಶ್ವರನ ಸನ್ನಿಧಿಗೆ ಬರುವವರ ಸಮಸ್ಯೆಗಳನ್ನು ಅರಿಯುತ್ತೇನೆ,ಆಜ್ಞಾಚಕ್ರಭೇದನಸಿದ್ಧಿಯಿಂದ ಅವರ ಹಣೆಬರಹವನ್ನು ಓದಿ,ಸಮಸ್ಯೆಯ ಕಾರಣ ಮತ್ತು ಪರಿಹಾರ ಕಂಡು ಹಿಡಿದು ವಿಶ್ವೇಶ್ವರ ಶಿವನಲ್ಲಿ ನಿವೇದಿಸುತ್ತೇನೆ.ಶಿವ ‘ ಹೌದು’ ಎಂದರೆ ಮುಂದುವರೆಯುತ್ತೇನೆ.ಮನುಷ್ಯರ ಶರೀರದಲ್ಲಿ ಒಟ್ಟು ಮೂರುವರೆ ಲಕ್ಷ ನಾಡಿಗಳಿದ್ದು ಅವುಗಳಲ್ಲಿ 72000 ನಾಡಿಗಳು ಗುರುತಿಸಲ್ಪಟ್ಟಿವೆ.ಅವುಗಳಲ್ಲಿ ಹದಿನಾಲ್ಕು ಮುಖ್ಯ ಯೋಗನಾಡಿಗಳಿದ್ದು ಅವುಗಳಲ್ಲಿಯೂ‌ ಇಡಾ,ಪಿಂಗಳ ಮತ್ತು ಸುಷುಮ್ನಾ ಎನ್ನುವ ಮೂರು ನಾಡಿಗಳು ಅತಿಶಯ ಮಹತ್ವದ ನಾಡಿಗಳು.ಕುಂಡಲಿನಿ ಯೋಗಸಿದ್ಧಿಯ ಮೂಲವಾದ ಸುಷುಮ್ನಾ ನಾಡಿ ಮತ್ತು ಅದರ ಎಡಬಲದಲ್ಲಿರುವ ಇಡಾ ಪಿಂಗಳ ನಾಡಿಗಳು ಜಾಗೃತವಾದರೆ ಯೋಗಿಯು ಎಲ್ಲವನ್ನೂ ಅರಿಯಬಲ್ಲ.ವಾತ ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳು ಮನುಷ್ಯರ ಸರ್ವರೋಗಗಳ ಮೂಲವಾಗಿದ್ದು ಆಧ್ಯಾತ್ಮಿಕ,ಆಧಿಭೌತಿಕ ಮತ್ತು ಆದಿದೈವಿಕ ಎನ್ನುವ ‘ ತಾಪತ್ರಯಗಳು’ ಎಲ್ಲ ಸಮಸ್ಯೆಗಳ ಕಾರಣವಾಗಿದ್ದು ಯೋಗಸಿದ್ಧಿಯ ಬಲದಿಂದ ಅವುಗಳನ್ನರಿತು ಜನರ ಸಮಸ್ಯೆಗಳಿಗೆ ಪರಿಹಾರಸೂಚಿಸುವೆ.ಇದು ನಮ್ಮ ‘ ಶಿವೋಪಶಮನ ಕಾರ್ಯ’ ದ ರಹಸ್ಯ.

ವಿಶ್ವೇಶ್ವರ ಶಿವನ ಅನುಗ್ರಹದಿಂದ ನಾನು ಜನರ ಸಮಸ್ಯೆಗಳಿಗೆ‌ ಕಾರಣ ಮತ್ತು ಸಮಸ್ಯೆಯನ್ನುಂಟು ಮಾಡಿದ ವ್ಯಕ್ತಿ,ದೈವ,ಕ್ಷುದ್ರಶಕ್ತಿ,ಕ್ಷುದ್ರವಿದ್ಯೆಗಳ ಬಗ್ಗೆ ನಿಖರವಾಗಿ ಹೇಳುತ್ತಿದ್ದುದರಿಂದ ನನ್ನನ್ನು ಸಹಿಸದ ಕೆಲವರು ‘ ಬೇತಾಳ ವಶಮಾಡಿಕೊಂಡಿದ್ದಾರೆ’ ಎಂದೂ ಮತ್ತೆ ಕೆಲವರು ‘ ಯಕ್ಷಿಣಿ ಸಿದ್ಧಿ ಪಡೆದಿದ್ದಾರೆ’ ಎಂದು ಮತ್ತೆ ಕೆಲವರು ‘ ಭೂತಗಳನ್ನು ವಶಮಾಡಿಕೊಂಡಿದ್ದಾರೆ’ ಎಂದು ನಾನಾ ತರಹ ಆಡಿಕೊಂಡರು.ಆದರೆ ನಾನು ಯೋಗಸಾಧಕನೇ ಹೊರತು ತಾಂತ್ರಿಕ ಸಾಧಕನಲ್ಲ.ಯೋಗಸಿದ್ಧಿಯಿಂದ ಪ್ರಕೃತಿಯ ಮೇಲೆ ಪ್ರಭುತ್ವವನ್ನು ಪಡೆದು ಅಸಾಧ್ಯವಾದುದನ್ನು ಸಾಧಿಸಬಲ್ಲ ಸಾಮರ್ಥ್ಯ ಪಡೆದಿರುವ ನನಗೆ ಕ್ಷುದ್ರವಿದ್ಯೆ,ಕ್ಷುದ್ರಸಿದ್ಧಿಗಳಿಂದ ಆಗಬೇಕಾದುದೇನು? ಶಿವನು ಅನುಗ್ರಹಿಸಿದ ಮೂರು ಮಹಾಮಂತ್ರಗಳಿಂದ ಜನರ ಸರ್ವವಿಧ ಸಮಸ್ಯೆಗಳನ್ನು ಪರಿಹರಿಸುತ್ತಿರುವ ನಾನು ಅವೇ ಮೂರು ಮಂತ್ರಗಳಿಂದ ವಿಭೂತಿ,ಲೋಬಾನ ಮಂತ್ರಿಸಿ ದಾರ ಕಟ್ಟುತ್ತೇನೆ.ಅಸಾಧ್ಯರೋಗಪೀಡಿತರುಗಳಿಗೆ ಮತ್ತು ಸಂತಾನದೋಷ ಉಳ್ಳವರಿಗೆ ಸಂತಾನ ಭಾಗ್ಯ ಕರುಣಿಸಲು ಮಾತ್ರ ನಾನು ಬೆಳ್ಳಿ ತಾಯತಗಳನ್ನು ಧರಿಸಲು ತಿಳಿಸುವೆ.ಅದು ಕೂಡ ಶಿವಶಕ್ತಿ ಮಂತ್ರ,ಗಾಯತ್ರಿ ಮಂತ್ರ ಮತ್ತು ಕುಂಡಲಿನೀಜಾಗ್ರತಗೊಳಿಸುವ ಮಂತ್ರಗಳನ್ನು ಉದ್ದೀಪನಗೊಳಿಸಿ ತಾಯತಗಳನ್ನು ಸಿದ್ಧಪಡಿಸುತ್ತೇನೆಯೇ ಹೊರತು ತಾಂತ್ರಿಕ ಯಂತ್ರ ಮಂತ್ರಗಳನ್ನು ಬಳಸುವುದಿಲ್ಲ.ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಅನುಗ್ರಹ ವಿಶೇಷದಿಂದ ಎಲ್ಲ ದೇವದೇವಿಯರ ಸಂಪರ್ಕಸಾಧಿಸಬಲ್ಲ ನಾನು ಆಯಾ ದೇವತೆಗಳಿಂದಲೇ ಪರಿಹಾರಪಡೆದು ಜನರ ಸಂಕಷ್ಟ ನಿವಾರಿಸುತ್ತಿದ್ದೇನೆ.ಜೊತೆಗೆ ಶಿವೋಪಶಮನ ಕಾರ್ಯವನ್ನು ನಾನು ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಶಿವನ ಸಾಕ್ಷಿಯಾಗಿ ನಡೆಸುತ್ತಿರುವುದರಿಂದ ಅಲ್ಲಿ ನನಗೆ ಯಾರ ಬಗ್ಗೆ ಪ್ರೀತಿಯಾಗಲಿ,ಯಾರ ಬಗ್ಗೆ ಭೀತಿಯಾಗಲಿ ಇರುವುದಿಲ್ಲ.ಇದ್ದುದನ್ನು ಇದ್ದಂತೆಯೇ,ಕಂಡುದುದನ್ನು ಕಂಡಂತೆಯೇ ಹೇಳಿಬಿಡುವೆ.ಶಿವನ ಸನ್ನಿಧಿಯಲ್ಲಿರುವ ನನಗೆ ನನ್ನವರು,ಬಂಧು ಬಾಂಧವರು,ಆತ್ಮೀಯರು ಎನ್ನುವ ಯಾವ ಭಾವನೆಯೂ ಉಂಟಾಗದೆ ಶಿವಸನ್ನಿಧಿಯಲ್ಲಿ ಸ್ಥಿತಪ್ರಜ್ಞದೃಷ್ಟಿಯಿಂದ ಎಲ್ಲರನ್ನೂ ನೋಡುತ್ತೇನೆ.ಭಕ್ತರಲ್ಲಿ ಶ್ರೀಮಂತರು- ಬಡವರು ಎನ್ನುವಭೇದವೆಣಿಸುವುದಿಲ್ಲ,ಮೇಲ್ಜಾತಿ ಕೀಳುಜಾತಿ ಎನ್ನುವ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ.ಎಲ್ಲ ಭಕ್ತರ ಜೊತೆಯೇ ಚಹಾ ಕುಡಿಯುತ್ತೇನೆ ಅವರೊಂದಿಗೆ‌ ಕುಳಿತು ಪ್ರಸಾದ ಸೇವಿಸುತ್ತೇನೆ.ನಾನು ಎಲ್ಲರೊಳಗೆ ಒಂದಾಗಿ ಇರುತ್ತೇನೆಯೇ ಹೊರತು ಒಣಪೊಗರು,ಹುಸಿ ಪ್ರತಿಷ್ಠೆ ಪ್ರದರ್ಶಿಸುವುದಿಲ್ಲ.ಈ ಲೇಖನದಲ್ಲಿ ಬಳಕೆಯಾಗಿರುವ ‘ ನಾನು’ ‘ನನ್ನ’ ಪದಗಳು ಆತ್ಮಪ್ರತ್ಯಯಗಳೇ ಹೊರತು ಅಹಂಕಾರವಾಚಕಗಳಲ್ಲ.

About The Author