ಬಸವಣ್ಣನವರನ್ನು ವೈಭವೀಕರಿಸದೆ ರಂಭಾಪುರಿ ಶ್ರೀಗಳನ್ನು ವೈಭವೀಕರಿಸಬೇಕಿತ್ತೆ ?

ಬಸವಣ್ಣನವರನ್ನು ವೈಭವೀಕರಿಸದೆ ರಂಭಾಪುರಿ ಶ್ರೀಗಳನ್ನು ವೈಭವೀಕರಿಸಬೇಕಿತ್ತೆ ? : ಮುಕ್ಕಣ್ಣ ಕರಿಗಾರ

ದಾವಣಗೆರೆಯಲ್ಲಿ ಮೊನ್ನೆ ನಡೆದ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ 24 ನೆಯ ಅಧಿವೇಶನದಲ್ಲಿ ‘ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಅಧಿಕೃತವಾಗಿ ಘೋಷಿಸಲು ಸರಕಾರವನ್ನು ಒತ್ತಾಯಿಸಲು ಅಂಗೀಕರಿಸಿದ ನಿರ್ಣಯವನ್ನು ಸಹಿಸಕೊಳ್ಳಲು ಆಗದ ರಂಭಾಪುರಿ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ವಿಶ್ವಗುರು ಬಸವಣ್ಣನವರ ಬಗೆಗಿನ ತಮ್ಮ ಅಸಹನೆಯನ್ನು ಮತ್ತೊಂದು ರೂಪದಲ್ಲಿ ಹೊರಹಾಕಿದ್ದಾರೆ.ಬಳ್ಳಾರಿಯ ಕುರುಗೋಡಿನ ಸಿದ್ಧರಾಂಪುರ ಕದಳಿವನ ಸಿದ್ಧೇಶ್ವರ ತಾತನವರ ಮಠದಲ್ಲಿ ನಡೆದ ಕಾರ್ಯಕ್ರಮ( ಪ್ರಜಾವಾಣಿ,ಡಿಸೆಂಬರ್ 26,2023ರ ಕಲ್ಬುರ್ಗಿ ಆವೃತ್ತಿಯ ಪುಟ 2 ರಾಜ್ಯ)ದಲ್ಲಿ ಮಾತನಾಡುತ್ತ ” ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಬಸವಣ್ಣನವರಿಗೆ ಲಿಂಗದೀಕ್ಷೆ ನೀಡಿದವರು ಜಾತವೇದ ಮುನಿಗಳು.ದೀಕ್ಷೆ ನೀಡಿ,ಸನ್ಮಾರ್ಗ ತೋರಿಸಿದವರನ್ನು ಬಿಟ್ಟು,ಕೆಲವರ್ಗದವರು ಬಸವಣ್ಣನವರನ್ನು ವೈಭವೀಕರಿಸುತ್ತಾರೆ” ಎಂದಿದ್ದಾರೆ.ಬಸವಣ್ಣನವರನ್ನು ರಾಜ್ಯದ ‘ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸುವ ಸಂಗತಿಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ರಂಭಾಪುರಿ ಜಗದ್ಗುರುಗಳಿಗೆ.ರಂಭಾಪುರಿ ಜಗದ್ಗುರುಗಳು ಸೇರಿದಂತೆ ಬಸವಣ್ಣನವರನ್ನು ವಿರೋಧಿಸುವ ಜಗದ್ಗುರುಪರಂಪರೆಯವರು ಒಂದು ಕಹಿಸತ್ಯವನ್ನು,ಇತಿಹಾಸ ಮರೆಮಾಚಿದ ಕಠೋರ ಸತ್ಯವನ್ನು ಅರ್ಥ ಮಾಡಿಕೊಳ್ಳಲೇಬೇಕು– ಬಸವಣ್ಣನವರು ಬರದೆ ಇದ್ದರೆ ಕರ್ನಾಟಕದಲ್ಲಿ ಇಂದು ವೀರಶೈವರೂ ಇರುತ್ತಿರಲಿಲ್ಲ,ಲಿಂಗಾಯತರೂ ಇರುತ್ತಿರಲಿಲ್ಲ.ಅವರೆಲ್ಲ ತಲೆಬೋಳಿಸಿಕೊಂಡು ‘ ಸವಣರು'( ಶ್ರಮಣ — ಜೈನಸಂನ್ಯಾಸಿಗಳು) ಆಗಬೇಕಿತ್ತು.ಬಿಜ್ಜಳನು ಶೈವ ವೀರಶೈವರನ್ನು ಜೈನಮತಕ್ಕೆ ಮತಾಂತರಿಸುತ್ತಿದ್ದನೆಂದೇ ಬಸವಣ್ಣನವರು ಬಿಜ್ಜಳನ ಅರಸೊತ್ತಿಗೆಗೆ ಪ್ರತಿಯಾಗಿ ಕಲ್ಯಾಣದಲ್ಲಿ ಅನುಭವಮಂಟಪವನ್ನು ಕಟ್ಟಿ ಇಷ್ಟಲಿಂಗದೀಕ್ಷೆಯ ಮೂಲಕ ಶರಣಗಣಸಂಘಟನೆ ಮಾಡಿದರು. ಬ್ರಾಹ್ಮಣ ಮಧುವರಸನ ಮಗಳನ್ನು ಮಾದಾರ ಹರಳಯ್ಯನ ಮಗನೊಂದಿಗೆ ಮದುವೆ ಮಾಡಿದ್ದೇ ಕಲ್ಯಾಣದ ಕ್ರಾಂತಿಯ ಕಾರಣವೆಂದು ತಥಾಕಥಿತ ಕ್ರಾಂತಿಯ ಕಾರಣವನ್ನು ಹೇಳುತ್ತಲೇ ಬರಲಾಗಿದೆ.ಮಧುವರಸ ಹರಳಯ್ಯರ ಮನೆತನಗಳ ಮದುವೆಯ ಸಂಬಂಧ ಕಲ್ಯಾಣಕ್ರಾಂತಿಯ ಕಾರಣಗಳಲ್ಲಿ ಒಂದು ಕಾರಣವಾಗಿರಬಹುದಷ್ಟೆ,ಆದರೆ ಅದೇ ಪ್ರಧಾನ ಕಾರಣವಲ್ಲ.ಬಿಜ್ಜಳನು ಶೈವಮತೀಯರನ್ನು ಬಲಾತ್ಕಾರದಿಂದ ಜೈನಮತಕ್ಕೆ ಮತಾಂತರಿಸುವುದನ್ನು ಬಸವಣ್ಣನವರು ತಡೆದದ್ದೇ ಶೈವ ವೀರಶೈವರು ಮತ್ತು ಬಿಜ್ಜಳನ ಅನುಯಾಯಿಗಳ ನಡುವಿನ ಹೋರಾಟದ ಕಾರಣ.ಬಿಜ್ಜಳನ ಕೊಲೆಯ ಕಾರಣ ಆತನ ಅತಿಯಾದ ಮತಾಂತರ ಧೋರಣೆ ಮತ್ತು ಕಾರ್ಯಾಚರಣೆ.ಜೈನರು ಶೈವಧರ್ಮೀಯರನ್ನು ಬಲವಂತವಾಗಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುತ್ತಿದ್ದುದು ಕನ್ನಡದ ಆದ್ಯವಚನಕಾರ ಜೇಡರ ದಾಸಿಮಯ್ಯ,ಸಗರದ ಬೊಮ್ಮಣ್ಣ ಮೊದಲಾದ ವಚನಕಾರರ ವಚನಗಳಲ್ಲಿ ಪ್ರಸ್ತಾಪವಾಗಿದೆ.ಬಸವಣ್ಣನವರ ನಂತರದ ವೀರಶೈವ ಲಿಂಗಾಯತ ಮಠಪೀಠಗಳು ಮತ್ತು ಕವಿಗಳು ಬಸವಣ್ಣನವರ ವ್ಯಕ್ತಿತ್ವಕ್ಕೆ ಕುಂದಾಗಬಹುದಾದ ಪ್ರಸಂಗವೆಂದು ಭಾವಿಸಿ ‘ಕಲ್ಯಾಣದಕ್ರಾಂತಿ’ ಗೆ ಬೇರೆಬೇರೆ ಆಯಾಮಗಳನ್ನು ನೀಡಿದ್ದಾರೆ.ಬಸವಣ್ಣನವರು ಲಿಂಗಾಯತಮತಸ್ಥಾಪಕರಲ್ಲದೆ ಇರಬಹುದು ಆದರೆ ಅವರು ‘ ವೀರಶೈವ ಮತೋದ್ಧಾರಕರು’ ಎನ್ನುವುದು ಐತಿಹಾಸಿಕ ಸತ್ಯ.ಬಸವಣ್ಣನವರ ಕಾರಣದಿಂದಾಗಿಯೇ ತಾವು ಕಲ್ಪಿಸಿಕೊಂಡ ಒಂದು ಜಗದ್ಗುರುಪೀಠದ ಮೇಲೆ ವಿರಾಜಮಾನರಾಗಿರಲು ಸಾಧ್ಯವಾಗಿದೆ ಎನ್ನುವ ಸಂಗತಿಯನ್ನು ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಅರ್ಥಮಾಡಿಕೊಳ್ಳಬೇಕು.ರಂಭಾಪುರಿ ಜಗದ್ಗುರುಗಳು ಮತ್ತು ಇತರ ಜಗದ್ಗುರುಗಳು ತಮ್ಮ ಪಂಚಪೀಠಪರಂಪರೆ ಅತಿಪ್ರಾಚೀನವಾದುದು ಎಂದು ಹೇಳುವ ಮಾತುಗಳಿಗೆ ಐತಿಹಾಸಿಕ ಆಧಾರಗಳಿಲ್ಲ.ಅಲ್ಲದೆ ಅವರದೆ ಬಾಳೆಹೊನ್ನೂರು ಜಗದ್ಗುರು ಪೀಠ ಸ್ಥಾಪಿಸಿದ್ದು ಬಸವಣ್ಣನವರ ಸಮಕಾಲೀನ ವಚನಕಾರ ರೇವಣಸಿದ್ಧರೇ ಹೊರತು ವೀರಸೋಮೇಶ್ವರ ಶಿವಾಚಾರ್ಯರು ಪ್ರತಿಪಾದಿಸುವಂತೆ ಕೊಲ್ಲಿಪಾಕಿಯಲ್ಲಿ ಉದಿಸಿದರೆನ್ನಲಾದ ಕಾಲ್ಪನಿಕ ರೇಣುಕರಲ್ಲ!

ಬಸವಣ್ಣನವರು ವೀರಶೈವ ಮತವನ್ನು ಉದ್ಧರಿಸಿ ಇಷ್ಟಲಿಂಗವನ್ನು ಸರ್ವಜನಸಮುದಾಯಗಳ ಕೈಯಲ್ಲಿಡುವ ಪೂರ್ವದಲ್ಲಿ ಕರ್ನಾಟಕದಲ್ಲಿ ವೀರಶೈವ ಮತ ಕೇವಲ ಪುಸ್ತಕಗಳಲ್ಲಿ ಉಲ್ಲೇಖಿಸಲ್ಪಟ್ಟ ಮತವಾಗಿತ್ತೇ ಹೊರತು ಅದು ಅನುಷ್ಠಾನದಲ್ಲಿದ್ದ ಮತವಾಗಿರಲಿಲ್ಲ ಎನ್ನುವ ಐತಿಹಾಸಿಕ ಸತ್ಯವನ್ನು ರಂಭಾಪುರಿ ಜಗದ್ಗುರುಗಳು ಅರ್ಥಮಾಡಿಕೊಳ್ಳಬೇಕು.ಬಸವಪೂರ್ವದಲ್ಲಿ ಕರ್ನಾಟಕದಲ್ಲಿ ಕಾಪಾಲಿಕ ಮತ್ತು ಕಾಳಾಮುಖ ನಾಥ ಸಂಪ್ರದಾಯಗಳು ಪ್ರಚಾರದಲ್ಲಿದ್ದವು.ಇದುವರೆಗೆ ದೊರೆತ ಧಾರ್ಮಿಕ ವಿಷಯದ ಕುರಿತ ನೂರಾರು ಶಿಲಾಶಾಸನಗಳು ಕರ್ನಾಟಕದಲ್ಲಿ ಕಾಪಾಲಿಕ,ಕಾಳಾಮುಖ ಶೈವ ಪರಂಪರೆಗಳು ಆಚರಣೆಯಲ್ಲಿದ್ದು ಜನಮನ್ನಣೆ ಪಡೆದಿದ್ದ ಸಂಗತಿಯನ್ನು ಸಾರುತ್ತಿವೆ.ಬಸವಣ್ಣನವರನ್ನು ಒಳಗೊಂಡಂತೆ ಹಲವು ಜನ ವಚನಕಾರರು ಕಾಪಾಲಿಕರ ಭೀಭತ್ಸ ಆಚರಣೆಗಳನ್ನು ಖಂಡಿಸಿದ್ದಾರೆ‌ ತಮ್ಮ ವಚನಗಳಲ್ಲಿ.ಕಾಳಾಮುಖ ಶೈವವು ಬಸವಣ್ಣನವರ ವೀರಶೈವಮತಪ್ರಭಾವಕ್ಕೊಳಗಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ವೀರಶೈವಮತದಲ್ಲಿ ಲೀನವಾಯಿತು.ಕಾಪಾಲಿಕ,ಕಾಳಾಮುಖ ಶೈವದ ಜೊತೆಗೆ ಬಸವಪೂರ್ವದಲ್ಲಿ ಕರ್ನಾಟಕದಲ್ಲಿ ಭೈರವಾರಾಧನೆಯು ವ್ಯಾಪಕವಾಗಿತ್ತು.ಮೈಲಾರ ,ಮೈಲಾರಿ ಎಂದು ಕುರುಬರಿಂದ ಪೂಜಿಸಿಕೊಳ್ಳುತ್ತಿರುವ ಮಲ್ಲಯ್ಯನು ಭೈರವನ ಒಂದು ರೂಪವಾದ ಮಾರ್ತಾಂಡಭೈರವನು.ಒಕ್ಕಲಿಗರ ಗುರುಪೀಠವಾದ ಆದಿ ಚುಂಚನಗಿರಿ ಮತ್ತು ಮಂಗಳೂರಿನ ಕದ್ರಿಗಳು ಕರ್ನಾಟಕದ ಪ್ರಸಿದ್ಧ ಭೈರವಾರಾಧನೆಯ ಕೇಂದ್ರಗಳು.ಇಂದಿನ ಕಲ್ಯಾಣ ಕರ್ನಾಟಕವು ಸೇರಿದಂತೆ ಇಡೀ ರಾಜ್ಯದಾದ್ಯಂತ ಭೈರವಾರಾಧನೆಯು ಪ್ರಚಲಿತವಾಗಿತ್ತು ಎನ್ನುವುದಕ್ಕೆ ಉತ್ತರಕನ್ನಡ ಜಿಲ್ಲೆಯ ಯಾಣದ ಪರ್ವತರೂಪಿ ಭೈರವನೇ ಸಾಕ್ಷಿ.ಭೈರವಾರಾಧನೆಯ ಜೊತೆಗೆ ಕಾಶ್ಮೀರದ ಪಾಶುಪತ ಶೈವವೂ ಕರ್ನಾಟಕದಲ್ಲಿ ಆಚರಣೆಯಲ್ಲಿತ್ತು.ಬಸವಣ್ಣನವರಿಗೆ ಇಷ್ಟಲಿಂಗ ದೀಕ್ಷೆ ನೀಡಿ ,ಉದ್ಧರಿಸಿದವರು ಎಂದು ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮಿಯವರು ಹೇಳುವ ಜಾತವೇದಮುನಿ ಪಾಶುಪತಶೈವರೇ ಹೊರತು ವೀರಶೈವರಲ್ಲ! ಇಷ್ಟಲಿಂಗೋಪಾಸಕರಲ್ಲದ ಪಾಶುಪತಶೈವರಾಗಿದ್ದ ಜಾತವೇದ ಮುನಿಗಳು ಬಸವಣ್ಣನವರಿಗೆ ಹೇಗೆ ಲಿಂಗಧಾರಣೆ ಮಾಡಿರಲು ಸಾಧ್ಯ? ಕಾಶ್ಮೀರ ಶೈವವು ‘ ತ್ರಿಕ’ ಎಂದು ಕರೆಯಲ್ಪಡುವ ಪಶು- ಪಾಶ- ಪತಿ ಎನ್ನುವ ಮೂರು ತತ್ತ್ವಗಳ ಶಿವಪಶುಪತಿತತ್ತ್ವವನ್ನು ಸಾರುವ ಶೈವಮತ.( ಇದನ್ನೇ ಮುಂದೆ ಪ್ರತ್ಯಭಿಜ್ಞಾನ ತತ್ತ್ವವನ್ನಾಗಿ ರೂಪಿಸಲಾಯಿತು)ಕಾಶ್ಮೀರ ಶೈವವು ಶಿವನನ್ನು ಸ್ಥಾವರಲಿಂಗರೂಪದಲ್ಲಿ ಆರಾಧಿಸುತ್ತದೆಯಲ್ಲದೆ ಕಾಶ್ಮೀರಶೈವಮತದಲ್ಲಿ ಭೈರವಾರಾಧನೆಗೆ ವಿಶಿಷ್ಟಸ್ಥಾನವಿದೆ.’ಕೂಡಲಸಂಗಮದಲ್ಲಿರುವ ಜಾತವೇದಮುನಿಗಳ ಗದ್ದುಗೆಯು ಮೂಲತಃ ಜಾತವೇದಮುನಿಗಳ ಸಮಾಧಿಯಾಗಿರದೆ ಅದು ಈಶ್ವರದೇವಸ್ಥಾನವೆಂದೂ ಕ್ರಿಶ ಹನ್ನೊಂದನೆಯ ಶತಮಾನದ ಅಚಲೇಶ್ವರ ದೇವಸ್ಥಾನ’ವೆಂದು ಖ್ಯಾತ ಸಂಶೋಧಕ ಡಾ. ಎಚ್ ಚಂದ್ರಶೇಖರ ಅವರು ಶಿಲಾಶಾಸನಗಳು,ಐತಿಹಾಸಿಕ ಸಂಗತಿಗಳ ಆಧಾರದ ಮೇಲೆ ನಿರೂಪಿಸಿದ್ದಾರೆ.ಬಸವಣ್ಣನವರಿಗೆ ಒಬ್ಬ ಗುರು ಇದ್ದರು,ಅವರಿಂದ ಬಸವಣ್ಣನವರಿಗೆ ಲಿಂಗಧಾರಣೆಯಾಯಿತು ಎನ್ನುವ ಕಥೆಕಟ್ಟಲು ಜಾತವೇದಮುನಿಗಳ ಸೃಷ್ಟಿಯೂ ಆಗಿರಬಹುದು ಕೊಲ್ಲಿಪಾಕಿಯ ರೇಣುಕರಂತೆ! ಬಸವಣ್ಣನವರು ಲಿಂಗಧಾರಿಗಳಲ್ಲದ ಅನ್ಯಕುಲೋದ್ಭವರೆನ್ನುವುದು ಸ್ಪಷ್ಟ.ಬಸವವಣ್ಣನವರೇ ಇಂದಿನ ವೀರಶೈವ ಲಿಂಗಾಯತ ಧರ್ಮಕ್ಕೆ ಒಂದು ಸ್ಪಷ್ಟ ರೂಪರೇಷೆಯನ್ನು ನೀಡಿದ ಮಹಾನುಭಾವರು,ಪುಣ್ಯಪುರುಷರು.ವೀರಶೈವ ಲಿಂಗಾಯತ ಮತಧರ್ಮಾನುಯಾಯಿಗಳು ಇಷ್ಟಲಿಂಗಪೂಜೆಯ ಮತಾಚಾರಣೆಯ ಭಾಗವಾಗಿರುವ ಷಟ್ ಸ್ಥಲಗಳು,ಅಷ್ಟಾವರಣಗಳು ಬಸವಣ್ಣನವರೇ ಅನುಷ್ಠಾನಕ್ಕೆ ತಂದ ಪರಿಕಲ್ಪನೆಗಳೇ ಹೊರತು ಅವು ಬಸವಪೂರ್ವದಲ್ಲಿ ಆಚರಣೆಯಲ್ಲಿರಲಿಲ್ಲ.ಅಲ್ಲಮಪ್ರಭುದೇವರು ಹಠಯೋಗಿಗಳಾಗಿದ್ದಂತೆ ಬಸವಣ್ಣನವರೂ ಯೋಗಸಾಧಕರಾಗಿದ್ದರು,ಕುಂಡಲಿನಿಯೋಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದರು.ಯೋಗಪರಂಪರೆಯ ಷಟ್ ಚಕ್ರಗಳನ್ನು ಬಸವಣ್ಣನವರು ಷಟ್ ಸ್ಥಲಗಳನ್ನಾಗಿಸಿದರು,ಅಷ್ಟಾವರಣಗಳು ಕೂಡ ಬಸವಣ್ಣನವರು ಯೋಗಪರಂಪರೆಯಿಂದ ಆಯ್ದು ರೂಪಿಸಿದ ವಿಶಿಷ್ಟ ಸಿದ್ಧಾಂತ,ದರ್ಶನ.ಬಸವಣ್ಣನವರು ಆಜ್ಞಾಚಕ್ರದ ಅತ್ಯಂತಸೂಕ್ಷ್ಮದಲ್ಲಡಗಿಹ ‘ಈತರಲಿಂಗ’ ವನ್ನೇ ಇಷ್ಟಲಿಂಗದ ಪರಿಕಲ್ಪನೆಯನ್ನಾಗಿಸಿದರು.ಯೋಗಸಾಧನೆಯ ದೃಷ್ಟಿಸಾಧನೆ ಮತ್ತು ಬಸವಣ್ಣನವರು ಬೋಧಿಸಿದ ಇಷ್ಟಲಿಂಗದಲ್ಲಿ ದೃಷ್ಟಿಯನ್ನಿಡುವ ಕ್ರಮಗಳೆರಡೂ ಒಂದೇ. ಈ ಎಲ್ಲ ಅಂಶಗಳು ಬಸವಣ್ಣನವರು ತಾವು ಸಿದ್ಧರೆನಿಸಿಕೊಂಡಿದ್ದ ಶೈವಯೋಗಕ್ರಮಗಳನ್ನು ಪರಿಷ್ಕರಿಸಿ ವೀರಶೈವಸಿದ್ಧಾಂತವನ್ನು ರೂಪಿಸಿದರು ಎನ್ನುವುದಕ್ಕೆ ಇರುವ ನಿದರ್ಶನಗಳು.ಕರ್ನಾಟಕದಲ್ಲಿ ವೀರಶೈವಮತವು ಕಂಗೊಳಿಸಲು,ಪ್ರವರ್ಧಮಾನಕ್ಕೆ ಬರಲು ಬಸವಣ್ಣನವರೇ ಕಾರಣರೇ ಹೊರತು ಖಂಡಿತವಾಗಿಯೂ ಪಂಚಾಚಾರ್ಯರುಗಳಲ್ಲ.

‘ ವೀರಶೈವ ಧರ್ಮದ ತಾಯಿಬೇರು ಪಂಚಪೀಠಗಳು’ ಎನ್ನುವ ವೀರಸೋಮೇಶ್ವರ ಶಿವಾಚಾರ್ಯರ ಮಾತಿಗೆ ಐತಿಹಾಸಿಕ,ಧಾರ್ಮಿಕ ಮನ್ನಣೆ ಇಲ್ಲ.ವೀರಶೈವವು ಆಗಮೋಕ್ತಮತವಾಗಿರಬಹುದು ಆದರೆ ಆಗಮಗಳು ವೇದೋಪನಿಷತ್ತುಗಳಷ್ಟು ಪ್ರಾಚೀನಗ್ರಂಥಗಳಲ್ಲ ಎನ್ನುವುದನ್ನು ಸಂಸ್ಕೃತವನ್ನು‌ ಓದಿ,ಬಲ್ಲ ಯಾರೂ ಅರ್ಥಮಾಡಿಕೊಳ್ಳಬಲ್ಲರು.ಒಂದು ವೇಳೆ ಪಂಚಾಚಾರ್ಯರು ಅಷ್ಟುಪುರಾತನರಾಗಿದ್ದರೆ ವೇದವ್ಯಾಸರಿಂದ ರಚಿಸಲ್ಪಟ್ಟವೆಂದು ಹೇಳುವ ಶಿವಮಹಾಪುರಾಣ,ಸ್ಕಂದ ಮಹಾಪುರಾಣ ಮತ್ತು ವಾಯುಪುರಾಣಗಳಲ್ಲಿ ಅವರ ಉಲ್ಲೇಖ ಏಕೆ ಇಲ್ಲ.ಶಿವಮಹಾಪುರಾಣ,ಸ್ಕಂದ ಮಹಾಪುರಾಣಗಳನ್ನು ಪ್ರಸಿದ್ಧ ಶಿವಕ್ಷೇತ್ರಗಳ ಹೆಸರುಗಳನ್ನುಳ್ಳ ಖಂಡಗಳನ್ನಾಗಿ( ಕಾಶಿಖಂಡ,ಆವಂತಿ ಖಂಡ,ರೇವಾಖಂಡ ಇತ್ಯಾದಿಯಾಗಿ) ವಿಂಗಡಿಸಲಾಗಿದೆಯೇ ಹೊರತು ಪಂಚಾಚಾರ್ಯರ ಹೆಸರುಗಳಲ್ಲಿ ಖಂಡಗಳನ್ನು ಹೆಸರಿಸಿಲ್ಲ.ಕ್ರಿಶ ಐದು ಆರನೇ ಶತಮಾನಗಳಿಂದಲೂ ಲಭ್ಯವಿರುವ ಯಾವ ಶಿಲಾಶಾಸನವೂ ಪಂಚಾಚಾರ್ಯರ ಹೆಸರುಗಳನ್ನು ಹೇಳುತ್ತಿಲ್ಲವಲ್ಲ! ಶಿಲಾಶಾಸನಗಳೇ ಇತಿಹಾಸದ ನಿರ್ಣಾಯಕ ದಾಖಲೆಗಳಾಗಿರುವಾಗ ಪಂಚಾಚಾರ್ಯರುಗಳು ಐತಿಹಾಸಿಕ ವ್ಯಕ್ತಿಗಳಾಗಿದ್ದರೆ ಶಿಲಾಶಾಸನಗಳು ಖಂಡಿತವಾಗಿಯೂ ಅವರ ಹೆಸರುಗಳನ್ನು ಉಲ್ಲೇಖಿಸುತ್ತಿದ್ದವು.ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರುಗಳ ಉಲ್ಲೇಖವಿರುವ ಮುವ್ವತ್ತಕ್ಕೂ ಹೆಚ್ಚು ಶಾಸನಗಳು ಕರ್ನಾಟಕ,ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ದೊರೆತಿವೆ.ತಮಿಳುನಾಡಿನಲ್ಲಿ ದೊರೆತ ಕನ್ನಡಶಾಸನಗಳಲ್ಲಿ ಕ್ರಿಶ ಹನ್ನೊಂದನೆಯ ಶತಮಾನದ ಕರೂರಿನ 6 ನೆಯ ಶಿಲಾಶಾಸನವು ಕೂಡಲಸಂಗಮದ ಬಗ್ಗೆ ಹೇಳುತ್ತದೆ.ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿರುವ ಕ್ರಿಶ 1160 ರ ಶಿಲಾಶಾಸನವು ಕೂಡಲಸಂಗಮದ ಬಗ್ಗೆ ವಿವರಗಳನ್ನು ನೀಡುತ್ತದೆ.ಆದರೆ ಇದುವರೆಗೆ ದೊರೆತಿರುವ ಯಾವ ಪ್ರಾಚೀನ ಶಿಲಾಶಾಸನವೂ ಪಂಚಾಚಾರ್ಯರನ್ನು ಉಲ್ಲೇಖಿಸಿಲ್ಲ ಎಂದ ಬಳಿಕ ಕರ್ನಾಟಕದಲ್ಲಿ ಬಸವಣ್ಣನವರ ಪೂರ್ವದಲ್ಲಿ ವೀರಶೈವ ಧರ್ಮವು ಪ್ರಭಾವಿಧರ್ಮವಾಗಿ ಪ್ರಚಾರದಲ್ಲಿತ್ತು ಎಂದು ಹೇಳಲು ಏನು ಆಧಾರವಿದೆ?

ಕೊನೆಯದಾಗಿ ಒಂದು ಮಾತು– ವೀರಸೋಮೇಶ್ವರ ರಾಜದೇಶೀಕೇಂದ್ರ ಸ್ವಾಮಿಗಳು ಅರ್ಥಮಾಡಿಕೊಳ್ಳಲೇಬೇಕಾದ ಮಾತು– ಬಸವತತ್ತ್ವವು ಕಾಲಮಾನದ ಅವಶ್ಯಕತೆಯಾಗಿ ಸರ್ವಜನಾದರಣೀಯವಾಗಿ ಎದ್ದು ಬರುತ್ತಿದೆ ಪರಶಿವನ ಸಂಕಲ್ಪದಂತೆ.ಪಂಚಾಚಾರ್ಯಪೀಠ ಪರಂಪರೆಯವರು ವಿರೋಧಿಸುತ್ತಿದ್ದಾರೆಂದು ಬಸವಣ್ಣನವರ ಮೇರು ವ್ಯಕ್ತಿತ್ವ ಸಣ್ಣದಾಗುವುದಿಲ್ಲ.ಬಸವಣ್ಣನವರಿಗೆ ಯಾರೂ ಸಮಾನರಾಗರು.ವಿಶ್ವವಿಭೂತಿಯಾದ ಬಸವಣ್ಣನವರನ್ನು ಒಪ್ಪದೆ ಇರುವ ನಿಮ್ಮನ್ನು ಜನರು ಕೈಬಿಡಬಹುದೇ ಹೊರತು ಬಸವಣ್ಣನವರನ್ನಂತೂ ಕೈ ಬಿಡಲಾರರು.ಬಸವಣ್ಣನವರು ನಡೆದ ಪಥದಲ್ಲಿಯೇ ಮುನ್ನಡೆದು ಯಶಸ್ಸು ಪಡೆಯಲಿದೆ ಮುಂಬರುವ ಜಗತ್ತು,ಜನಾಂಗ.ನೀವು ಅಪ್ರಸ್ತುತರಾಗುವಂತಿದ್ದರೆ ಬಸವಣ್ಣನವರನ್ನು ವಿರೋಧಿಸಿ,ಬೇಡವೆನ್ನಲಾರೆ.

About The Author