ನಾಡು-ನುಡಿ ಬೆಳೆಸುವ ಕಾರ್ಯಗಳು ಹೆಚ್ಚಾಗಲಿ-ರುದ್ರಗೌಡ

ಶಹಾಪುರ:ನಾಡು-ನುಡಿ ಬೆಳೆಸುವ ಕಾರ್ಯಚಟುವಟಿಕೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೆಚ್ಚಾಗಿ ನಡೆಯಬೇಕು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಕನ್ನಡ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಕನ್ನಡ ನೆಲ, ಜಲ, ಶಿಕ್ಷಣ, ಸಂಸ್ಕೃತಿ ಬೆಳೆಸಲು ಅವಿರತ ಶ್ರಮಿಸುತ್ತ ಬಂದಿರುವ ಕಾರ್ಯ ಶ್ಲಾಘನೀಯವಾದುದ್ದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ. ಗಾಳೆಪ್ಪ ಪೂಜಾರಿ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯ ಆಶಯಗಳನ್ನು ಇಟ್ಟುಕೊಂಡು ರಚನಾತ್ಮಕವಾಗಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಸ್ಥಳಿಯ ಹಿರಿಯ ಲೇಖಕರ, ಯುವ ಬರಹಗಾರರ ಸಾಹಿತ್ಯ ಕೃತಿಗಳ ಕುರಿತು ವಿಮರ್ಶಗಳಾಗಬೇಕು. ಉತ್ತಮವಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಾತಾವರಣ ನಿರ್ಮಿಸಲು ಪರಿಷತ್ತು ಶ್ರಮಿಸಬೇಕು ಎಂದು ತಿಳಿಸಿದರು.ನಿಕಟಪೂರ್ವ ಕ.ಸಾ.ಪ. ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು ಮತ್ತು ಬೆಳವಣಿಗೆ ಕುರಿತು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರನಾಥ ಹೊಸ್ಮನಿ ಅವರು ನಮ್ಮ ಪರಿಷತ್ತಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಹೊಸ ಸಾಧ್ಯತೆಗಳಿಗೆ ಅವಕಾಶ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ನಾರಾಯಣಚಾರ್ಯ ಸಗರ, ಡಾ. ನಾಗರಡ್ಡಿ ಗೋಗಿ, ಡಾ. ಗುತ್ತಪ್ಪ ಬಡಿಗೇರ, ಡಾ. ಸರೀತಾ ಎಮ್. ಸಿಂಘೆ ಮುಂತಾದ ಸಾಧಕರಿಗೆ ಪರಿಷತ್ತಿನ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸಣ್ಣನಿಂಗಪ್ಪ ನಾಯ್ಕೋಡಿ, ಸಾಯಿಬಣ್ಣ ಪರ‍್ಲೆ, ಬಸವರಾಜ ಹಿರೇಮಠ, ಹುಸನಪ್ಪ ಕಟ್ಟಿಮನಿ, ಶಕುಂತಲಾ ಹಡಗಲಿ, ಗುರುಬಸಯ್ಯ ಗದ್ದುಗೆ, ಸಾಯಿಬಣ್ಣ ಮಡಿವಾಳಕರ್, ಅಶೋಕ ಚೌದರಿ, ಡಾ. ನಾಗಣ್ಣಗೌಡ ಕನ್ಯಾಕೊಳುರ, ನಿರ್ಮಲಾ ತುಂಬಗಿ, ಕಾವೇರಿ ಪಾಟೀಲ, ಚಂದ್ರಕಲಾ ಗೂಗಲ್, ನಿಂಗಣ್ಣ ನಾಟೇಕಾರ, ಸಿದ್ಧಪ್ಪ ಮುಟ್ಟೂರು, ಬಿ.ಎಮ್. ಪೂಜಾರಿ, ಸತೀಶ ತುಳೇರ, ಸುರೇಶಬಾಬು ಅರುಣಿ, ರಾಘವೇಂದ್ರ ಹಾರಣಗೇರಾ, ಮಿನಾಕ್ಷಿ ಹೊಸ್ಮನಿ, ಗೌಡಪ್ಪಗೌಡ ಹುಲ್ಕಲ್, ರುದ್ರಪ್ಪ ತಳವಾರ, ಡಾ. ಸಂತೋಷ ಕಂಬಾರ ಮುಂತಾದವರು ಉಪಸ್ಥಿತರಿದ್ದರು.

About The Author