ಸರಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಬೇಕು

ಸರಕಾರವು ಬಸವಣ್ಣನವರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಬೇಕು:ಮುಕ್ಕಣ್ಣ ಕರಿಗಾರ

ದಾವಣಗೆರೆಯಲ್ಲಿ ನಿನ್ನೆ ಅಂದರೆ ಡಿಸೆಂಬರ್ 24 ರಂದು ನಡೆದ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ 24 ನೆಯ ಅಧಿವೇಶನದಲ್ಲಿ ಮಂಡಿಸಿ,ನಿರ್ಣಯಿಸಿದ ಎಂಟು ನಿರ್ಣಯಗಳಲ್ಲಿ ‘ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಬೇಕು ಎನ್ನುವ ಹಕ್ಕೊತ್ತಾಯದ ನಿರ್ಣಯವು ಮಹತ್ವದ ನಿರ್ಣಯ.ದುರಾದೃಷ್ಟವಶಾತ್ ಇದು ವೀರಶೈವ ಲಿಂಗಾಯತ ಮಹಾಸಭಾದಿಂದ ಬಂದಿದೆ.ಬೇರೆ ಸಮುದಾಯಗಳು ಈ ವಿಚಾರಕ್ಕಾಗಿ ಒತ್ತಾಯಿಸಬೇಕಿತ್ತು.ಬಸವಣ್ಣನವರು ಕರ್ನಾಟಕದ ಹೆಮ್ಮೆ,ಕನ್ನಡದ ಅಸ್ಮಿತೆಯ ಸಂಕೇತ.ಬಸವಣ್ಣನವರು ಬರಿ ವೀರಶೈವ -ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ,ಅವರು ಅಖಂಡ ಕರ್ನಾಟಕದ ಆಸ್ತಿ,ಅಸ್ಮಿತೆಯ ಸಂಕೇತ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ ನನಗೆ ಬಸವ ತತ್ತ್ವದಲ್ಲಿ ನಂಬಿಕೆ ಇದೆ,ನಾನು ಬಸವಣ್ಣನವರ ತತ್ತ್ವಗಳ ಅನುಯಾಯಿ’ ಎಂದು ಆಗಾಗ ಹೇಳುತ್ತಿರುತ್ತಾರೆ.ಈಗ ವೀರಶೈವ ಲಿಂಗಾಯತ ಸಮುದಾಯದಿಂದ ಇಂತಹದ್ದೊಂದು ಬೇಡಿಕೆ ಬಂದಿರುವುದರಿಂದ ಅವರು ತಡಮಾಡದೆ ಬರುವ ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯಿಸಿ ಬಸವಣ್ಣನವರನ್ನು ‘ ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಬೇಕು.ಇದರಿಂದ ಬಿ ಎಸ್ ಯಡಿಯೂರಪ್ಪನವರಾಗಲಿ ಅಥವಾ ಬಸವರಾಜ ಬೊಮ್ಮಾಯಿ ಅವರಾಗಲಿ ಮಾಡಿರದ ಒಂದು ಮಹಾನ್ ಕಾರ್ಯ ಮಾಡಿದ ಕೀರ್ತಿಯ ಗರಿ ಅನಾಯಾಸವಾಗಿ ಸಿದ್ಧರಾಮಯ್ಯನವರ ಮುಡಿಗೇರುತ್ತದೆ.

ಬಸವಣ್ಣನವರು ಕರ್ನಾಟಕದಲ್ಲಿ ಜನಿಸಿರಬಹುದು ಆದರೆ ಅವರು ವಿಶ್ವವಿಭೂತಿಗಳು,ಭಾರತದ ಇತಿಹಾಸವನ್ನು ರೂಪಿಸಿದ ಮಹಾನ್ ಚೈತನ್ಯಗಳಲ್ಲಿ ಅಗ್ರಗಣ್ಯರು.ವರ್ತಮಾನ ಭಾರತಕ್ಕೆ ಮಹಾತ್ಮ ಗಾಂಧೀಜಿಯವರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಬ್ಬರು ಮಹಾನ್ ನಾಯಕರುಗಳು.ಬಸವಣ್ಣನವರ ಪರೋಕ್ಷ ಪ್ರಭಾವ ಈ ಇಬ್ಬರು ಮಹಾನ್ ನಾಯಕರ ಮೇಲಾಗಿದೆ ಎನ್ನುವುದನ್ನು ಮರೆಯಲಾಗದು.ಬಸವಣ್ಣನವರನ್ನು ಅಂದಿನ ವೀರಶೈವ ಲಿಂಗಾಯತ ಮಠಮಾನ್ಯಗಳು ‘ ಬಂಧಿಸಿ ಇಡದಿದ್ದರೆ’ ಅದಾಗಲೇ ಬಸವತತ್ತ್ವವು ವಿಶ್ವಮಾನ್ಯವಾಗಿರುತ್ತಿತ್ತು.ಬಾಬಾ ಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರು ಬುದ್ಧಧರ್ಮವನ್ನು ಸ್ವೀಕರಿಸದೆ ಬಸವಧರ್ಮವನ್ನು ಸ್ವೀಕರಿಸುತ್ತಿದ್ದರು.ಅಳಿವಿನಂಚಿನಲ್ಲಿದ್ದ ಬೌದ್ಧ ಧರ್ಮವು ಡಾ.ಬಿ.ಆರ್.ಅಂಬೇಡ್ಕರ್ ಅವರಿಂದಾಗಿ ಭಾರತದಲ್ಲಿಂದು ಪ್ರವರ್ಧಮಾನಕ್ಕೆ ಬಂದಿದೆ.ನಮ್ಮ ವೀರಶೈವ ಲಿಂಗಾಯತ ಮಠ ಪೀಠಗಳು ಬಸವಣ್ಣನವರ ತತ್ತ್ವಗಳ ಬಗ್ಗೆ ಹಿಂದೆಯೇ ಪ್ರಚಾರಕಾರ್ಯ ಕೈಗೊಂಡಿದ್ದರೆ ಆ ಕಥೆಯೇ ಬೇರಾಗುತ್ತಿತ್ತು.ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ ಆರ್ ಅಂಬೇಡ್ಕರ್ ಅವರಿಬ್ಬರಿಗೂ ಬಸವಣ್ಣನವರ ಬಗ್ಗೆ ತಿಳಿದಿತ್ತು.ಆದರೆ ಅಂದಿನ ಜನ ಸಮುದಾಯದಲ್ಲಿ ಬಸವಣ್ಣನವರನ್ನು ಒಂದು ಸಮುದಾಯದ ನಾಯಕರು ಎಂದು ಮಾತ್ರ ಬಿಂಬಿಸುವ ಪ್ರಯತ್ನ ನಡೆದದ್ದರಿಂದ ಮತ್ತು ಪುರೋಹಿತ ಸಮುದಾಯವು ‘ ಸಿಡಿಲವ್ಯಕ್ತಿತ್ವ’ ದ ಕ್ರಾಂತಿಕಾರಿ ಬಸವಣ್ಣನವರ ವ್ಯಕ್ತಿತ್ವವನ್ನು ಒಳಗೊಳಗೆ ಆದರೂ ಪ್ರಬಲವಾಗಿ ವಿರೋಧಿಸುತ್ತಿದ್ದ ಪರಿಣಾಮವಾಗಿ ಗಾಂಧೀಜಿ ಮತ್ತು ಅಂಬೇಡ್ಕರ್ ಅವರಿಗೆ ಬಸವಣ್ಣನವರ ವಿಶ್ವವಿಭೂತಿ ವ್ಯಕ್ತಿತ್ವದ ಪೂರ್ಣ ಪರಿಚಯವಾಗಿರಲಿಲ್ಲ.ಈಗ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಒಂದು ಮಹತ್ವದ ಅವಕಾಶ ದೊರೆತಿದೆ.ಈ ಅವಕಾಶವನ್ನು ಬಳಸಿಕೊಂಡು ಸಿದ್ಧರಾಮಯ್ಯನವರು ‘ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸಬೇಕು.ಇದರಿಂದ ಬಸವಣ್ಣನವರ ವಿಭೂತಿವ್ಯಕ್ತಿತ್ವದ ಪ್ರಖರಪ್ರಭೆಯು ರಾಷ್ಟ್ರದಾದ್ಯಂತ ಪಸರಿಸಿ ಕಂಗೊಳಿಸುವಂತಾಗುವುದಲ್ಲದೆ ‘ ಹೂವಿನಿಂದ ನಾರೂ ಸ್ವರ್ಗಕ್ಕೆ ಹೋದಂತೆ’ ಸಿದ್ಧರಾಮಯ್ಯನವರ ವರ್ಛಸ್ಸು ವೃದ್ಧಿಸುತ್ತದೆ.

‘ ದ್ವಿತೀಯ ಶಂಭು’ ಅಂದರೆ ಎರಡನೆಯ ಶಿವ ಎನ್ನುವ ಅನನ್ಯ ಅಗ್ಗಳಿಕೆ ಬಸವಣ್ಣನವರದು.ಭಾರತದಲ್ಲಿ ಬಹಳಷ್ಟು ಜನರು ಸಮಾಜೋಧಾರ್ಮಿಕ ಸುಧಾರಕರುಗಳು ಬಂದಿರಬಹುದು ಆದರೆ ಜನತೆ ಅವರಾರನ್ನು ‘ಎರಡನೇ ಶಿವ’ ಎಂದು ಗೌರವಿಸಿಲ್ಲ ಎನ್ನುವುದು ಗಮನಾರ್ಹವಾದ ಸಂಗತಿ.ಶಿವನು ಅದ್ವಿತೀಯ,ಅವನಿಗೆ ಪ್ರತಿಯಿಲ್ಲ.ಶಿವನಿಗೆ ಪ್ರತಿಶಿವನೇನಾದರೂ ಇದ್ದರೆ ಅದು ಬಸವಣ್ಣನವರೇ ಎನ್ನುವಷ್ಟು ಭಕ್ತಿಭಾವದಿಂದ ಜನತೆ ಬಸವಣ್ಣನವರನ್ನು ಕಂಡಿದೆ,ಗೌರವಿಸಿದೆ.ಜನರಿಂದ ಇಂತಹ ಪ್ರೀತಿ,ಗೌರವಾದರಗಳಿಗೆ ಪಾತ್ರರಾಗಬೇಕಿದ್ದರೆ ಬಸವಣ್ಣನವರ ವ್ಯಕ್ತಿತ್ವ ಅದೆಷ್ಟು ಮಹೋನ್ನತವಾಗಿರಬೇಕು!.ಶಿವನ ಲೋಕಕಲ್ಯಾಣಗುಣಸ್ವಭಾವವೇ ಬಸವರೂಪದಲ್ಲಿ ಧರೆಯಲ್ಲಿ ಅವತರಿಸಿದ್ದ ಬೆಡಗೇ ಬಸವಣ್ಣನವರು.’ಶಿವ’ ಎಂದರೆ ಮಂಗಳ,ಕಲ್ಯಾಣ,ಅಶುಭನಿವಾರಕ ಎನ್ನುವ ಅರ್ಥಗಳಿವೆ.ಆ ಎಲ್ಲ ಶಿವಾರ್ಥಗಳಿಗೆ ಆಕಾರರೂಪವಾಗಿ ಬದುಕಿ, ಬಾಳಿದವರು ಬಸವಣ್ಣನವರು.’ಶಿವ’ ಎನ್ನುವ ಅವ್ಯಕ್ತ,ವಿಶ್ವಾತೀತ ತತ್ತ್ವದ ಸಾಕಾರರೂಪರೇ ಬಸವಣ್ಣನವರು.ಶಿವ ಮತ್ತು ಬಸವ ಬೇರೆಬೇರೆಯಲ್ಲ.ಅವೆರಡೂ ಒಂದೇ ಅವಿನಾಶಿತತ್ತ್ವದ ,ನಿರಾಕಾರ ಬ್ರಹ್ಮದ ಆಕಾರತತ್ತ್ವಗಳು.ಶಿವನು ಏನನ್ನು ಸಂಕಲ್ಪಿಸಿದ್ದನೋ ಅದನ್ನು ಬಸವಣ್ಣನವರು ಕಾರ್ಯರೂಪಕ್ಕೆ ತಂದರು.ಶಿವಸಮಾಜನಿರ್ಮಾಣ ಬಸವಣ್ಣನವರ ಬಹುದೊಡ್ಡಕಾರ್ಯ,ವಿಶ್ವಕ್ಕೆ ಬಸವಣ್ಣನವರ ಬಹುದೊಡ್ಡ ಕೊಡುಗೆ.

‘ ಶಿವಸಮಾಜ’ ಎಂದರೆ ಶೈವಮತಿಯರ ಸಂಕುಚಿತ ಜಾತಿ,ಸಮೂಹಗಳಲ್ಲ.ಶಿವನ ವಿಶ್ವಕಾರುಣ್ಯ ತತ್ತ್ವವೇ ಶಿವಸಮಾಜ.ಸಮಾನತೆ,ಸಹೋದರತೆ,ಸಮನ್ವಯ ಮತ್ತು ಸರ್ವರುನ್ನತಿಯ ತತ್ತ್ವರೂಪವೇ ಶಿವನಾಗಿದ್ದು ಆ ತತ್ತ್ವದ ಅನುಷ್ಠಾನವೇ ಶಿವಸಮಾಜ ನಿರ್ಮಾಣ.ಬಸವಣ್ಣನವರು ಇದನ್ನು ಸಾಧಿಸಿದರು.ಪಾಷಂಡಿಗಳ ಶುಷ್ಕಧರ್ಮೋಪದೇಶದಲ್ಲಿ ಅರ್ಥಕಳೆದುಕೊಂಡಿದ್ದ ಮರ್ತ್ಯಲೋಕಕ್ಕೆ ‘ ಮರ್ತ್ಯವೆಂಬುದು ಕರ್ತಾರನ ಕಮ್ಮಟ’ ಎನ್ನುವ ಮೂಲಕ ಬಸವಣ್ಣನವರು ಈ ಲೋಕವನ್ನೇ ಶಿವನ ದಿವ್ಯಕ್ಷೇತ್ರವನ್ನಾಗಿಸಿದರು. ಸಂನ್ಯಾಸವೆಂದು ಬಡಬಡಿಸುತ್ತ
ಸಂನ್ಯಾಸಿಗಳಿಗೆ ಮಾತ್ರಮೋಕ್ಷವೆಂದು ಬೊಗಳುತ್ತ ಜನಸಾಮಾನ್ಯರುಗಳನ್ನು ಅಧ್ಯಾತ್ಮ, ಮೋಕ್ಷಪಥದಿಂದ ದೂರವಿಟ್ಟಿದ್ದ ಕಪಟ ಸಂನ್ಯಾಸಿಗಳನ್ನು ‘ ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಂಗಳು,ಮುಂದೆ ಕಾಡುವವು ಪಂಚಮಹಾಪಾತಕಗಳು’ ಎಂದು ಖಂಡಿಸಿ ಸಂನ್ಯಾಸ,ಬ್ರಹ್ಮಚರ್ಯೆಗಳ ನಿರರ್ಥಕತೆಯನ್ನು ಬಯಲಿಗೆಳೆದರು.ಸ್ವತಃ ಬಸವಣ್ಣನವರೇ ಒಬ್ಬರನ್ನಲ್ಲದೆ ಇಬ್ಬರು ಹೆಂಡಿರನ್ನು ಮದುವೆ ಮಾಡಿಕೊಂಡು ಸಂಸಾರವು ಅಧ್ಯಾತ್ಮಿಕ ಸಾಧನೆಗೆ,ಮೋಕ್ಷ ಸಂಪಾದನೆಗೆ ಅಡ್ಡಿಯಲ್ಲವೆಂದು ನಿರೂಪಿಸಿದರು.ಜನರನ್ನು ವಂಚಿಸುತ್ತ ಬದುಕುತ್ತಿದ್ದ ಕಪಟ ಸಂನ್ಯಾಸಿ,ಮಠ ಪೀಠಗಳ ಗುರುಗಳನ್ನು ಖಂಡಿಸಿ,ಶಿವಭಾವವು ಜಾಗೃತಗೊಂಡ ಶಿವಶರಣನೇ ನಿಜವಾದ ಜಂಗಮ ಎಂದು ಸಾರಿದರು. ನಿತ್ಯಶೋಷಣೆಯ ವಸ್ತುವಾಗಿದ್ದ ಸ್ತ್ರೀಯರನ್ನು ಅವರ ಬಂಧನದಿಂದ ನರಕಮುಕ್ತರನ್ನಾಗಿಸಿ ಅವರಲ್ಲಿಯೂ ಪುರುಷರಲ್ಲಿರುವಷ್ಟೇ’ ಶಿವಬೆಳಕು’ ಇದೆ ಎನ್ನುವುದನ್ನು ಜಗತ್ತಿಗೆ ಪರಿಚಯಿಸಿ,ಅಕ್ಕಮಹಾದೇವಿ,ಮುಕ್ತಾಯಕ್ಕ,ಆಯ್ದಕ್ಕಿ ಲಕ್ಕಮ್ಮನವರಂತಹ ಅನರ್ಘ್ಯಸ್ತ್ರೀ ರತ್ನಗಳು ಬೆಳಕಿಗೆ ಬರಲು ಕಾರಣರಾದರು.ಶೋಷಣೆಯ ಸಾಧನವಾಗಿದ್ದ,ವ್ಯಾಪಾರದ ಸರಕು ಆಗಿದ್ದ ಧರ್ಮವನ್ನು ಪಟ್ಟಭದ್ರರ ಕಬಂಧಬಾಹುಗಳಿಸಿ ಬಿಡಿಸಿ ಹೊರಗೆ ತಂದು ಅಸ್ಪೃಶ್ಯರಾದಿ ಸರ್ವಜಾತಿಯ ಜನರ ಕೈಯಲ್ಲಿ ಕೂಡಲಸಂಗಮದೇವನೆಂಬ ‘ ಇಷ್ಟಲಿಂಗ’ ವನ್ನಿತ್ತರು. ಅಂತರ್ಜಾತೀಯ ವಿವಾಹಗಳಿಂದ ಮಾತ್ರ ಜಾತಿವ್ಯವಸ್ಥೆಯನ್ನು ಕೊನೆಗಾಣಿಸಬಹುದು ಎಂದು ಅಂದೇ ತಮ್ಮ ದಾರ್ಶನಿಕನ ನೋಟದಲ್ಲಿ ಕಂಡಿದ್ದ ಬಸವಣ್ಣನವರು ಬ್ರಾಹ್ಮಣರ ಮಧುವರಸನ ಮಗಳನ್ನು ಮಾದಾರ ಹರಳಯ್ಯನ ಮಗನೊಂದಿಗೆ ಮದುವೆ ಮಾಡಿಸಿದರು.ಕುಲಗೋತ್ರಗಳ ಒಣಪ್ರತಿಷ್ಠೆ ಬೇಡವೆಂದು ‘ ಮಾದಾರ ಚೆನ್ನಯ್ಯನ ಮಗ’ ನಾನೆಂದು ಕರೆದುಕೊಂಡರು,ಡೋಹಾರ ಕಕ್ಕಯ್ಯ ನಮ್ಮ ಚಿಕ್ಕಪ್ಪ ಎಂದರು; ಕಾಳಿದಾಸನ ಕುಲದವನು ನಾನು ಎಂದೂ ಹೇಳಿಕೊಂಡರು.ಶೂದ್ರ ದಲಿತ ಸಮುದಾಯಗಳ ಉದ್ಧಾರದ ಬಗೆಗಿದ್ದ ಬಸವಣ್ಣನವರ ಪ್ರಾಮಾಣಿಕ ಬದ್ಧತೆಯ ನಿದರ್ಶನಗಳಿವು. ಬಿಜ್ಜಳನ ಪ್ರಧಾನಿಯಾಗಿಯೂ ಶಿವನಿಗಲ್ಲದೆ,ಶಿವಲಾಂಛನಕ್ಕಲ್ಲದೆ ಅನ್ಯರಿಗೆ ಶರಣೆನ್ನಲಾರೆ ಎಂದು ‘ ಭವಿ ಬಿಜ್ಜಳನಿಗೆ ಆನಂಜುವೆನೆ?’ ಎಂದು ಧೈರ್ಯವಾಗಿ ನುಡಿದು,ದಕ್ಕಿಸಿಕೊಂಡರು.ಶಿವಶರಣರಿಗೆ,ಶಿವಮತಕ್ಕೆ ಮನ್ನಣೆ ಇಲ್ಲದ ಪ್ರಧಾನಮಂತ್ರಿಯ ಪಟ್ಟವೇ ಬೇಡವೆಂದು ಹೊನ್ನಕಿರೀಟವನ್ನು ಕೆಳಗಿಳಿರಿಸಿ ನಿರುಮ್ಮಳರಾಗಿ,ನಿರುದ್ವಿಗ್ನರಾಗಿ ಶಿವಾನಂದದಲ್ಲಿ ಮೈಮರೆತು ಬಿಜ್ಜಳನ ಅರಮನೆಯಿಂದ ಹೊರನಡೆದರು.’ಅನುಭವಮಂಟಪ’ ವೆನ್ನುವ ಆಧುನಿಕ ಜಗತ್ತಿನ ಮೊದಲ ಸಂಸತ್ತನ್ನು ಸ್ಥಾಪಿಸಿ ಕೆಳವರ್ಗದಿಂದ ಬಂದಿದ್ದ,ಶೂದ್ರಸಮುದಾಯದ ಮಹಾಯೋಗಿ ಅಲ್ಲಮ ಪ್ರಭುದೇವರನ್ನು ಶೂನ್ಯಸಿಂಹಾಸನದ ಅಧಿಪತಿಗಳನ್ನಾಗಿಸಿ ಅಂದೇ ಹಿಂದುಳಿದ ಜಾತಿ,ಜನಾಂಗಗಳಿಗೆ ಪ್ರಭುತ್ವದೊರಕಲಿ ಎಂದು ಕನಸುಕಂಡರು.ಹೊಸಿಲುದಾಟಿಬಾರದ ಮಹಿಳೆಯರಿಗೆ ಅನುಭವ ಮಂಟಪದಲ್ಲಿ ಮುಕ್ತಪ್ರವೇಶ ನೀಡಿ ಅವರನ್ನು ‘ಶಿವಪ್ರಣತೆ’ಗಳನ್ನಾಗಿಸಿ ಮಹಿಳಾ ಸ್ವಾತಂತ್ರ್ಯ,ಮಹಿಳಾ ಸಮಾನತೆಯನ್ನು ಎತ್ತಿಹಿಡಿದರು.ಒಂದೇ ಎರಡೇ ಬಸವಣ್ಣನವರ ಸಾಧನೆಗಳು! ಇಂದಿನ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ,ಶ್ರೇಷ್ಠ ಸಂವಿಧಾನವನ್ನು ಹೊಂದಿದ ಭಾರತದಲ್ಲಿ ವ್ಯಕ್ತಿಪೂಜೆಯು ರಾಜಕೀಯ ಸತ್ಸಂಪ್ರದಾಯವಾಗಿದೆ.ಹೈಕಮಾಂಡ್ ಸಂಸ್ಕೃತಿ ಎಲ್ಲ ರಾಜಕೀಯ ಪಕ್ಷಗಳಲ್ಲಿದೆ.ತಮ್ಮ ಪಕ್ಷದ ಮುಖಂಡರುಗಳ ತಪ್ಪು ನಿಲುವು- ನಿರ್ಧಾರಗಳನ್ನು ಖಂಡಿಸಲರಿಯದೆ ಬಾಲಬಡುಕರಾಗಿ,ತೆಪ್ಪನೆ ಬಾಲಮುದುರಿಕೊಂಡಿರುವ ‘ರಾಜಕಾರಣಿ ಕಣ್ಮಣಿಗಳು’ ಬಸವಣ್ಣನವರ ಧೀರೋದಾತ್ತ ವ್ಯಕ್ತಿತ್ವದಿಂದ ಕಲಿಯಬೇಕಾದುದು ಬಹಳಷ್ಟಿದೆ.ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿಯೂ ದೇಶದ ಸಮಸ್ತನಾಗರಿಕರೆಲ್ಲರೂ ಕಾನೂನಿನ ಮುಂದೆ ಸಮಾನರು,ಆತ್ಮಗೌರವದಿಂದ ಬದುಕುವ ಹಕ್ಕು ಎಲ್ಲರಿಗೆ ಇದೆ ಎನ್ನುವುದನ್ನು ಖಚಿತಪಡಿಸಿರುವ ಪ್ರಬುದ್ಧ ಸಂವಿಧಾನವನ್ನು ಹೊಂದಿಯೂ ಜಾತಿ,ಧರ್ಮಗಳ ನಡುವೆ ಜನರನ್ನು ವಿಭಜಿಸುತ್ತಿರುವ ಜನನಾಯಕರುಗಳು ಬಸವಣ್ಣನವರ ‘ ಇವನಾರವ ಇವನಾರವ ಇವನಾರವನೆನಿಸದಿರಯ್ಯ..ಕೂಡಲಸಂಗಮದೇವರ ಮನೆಯ ಮಗನೆನಿಸಯ್ಯ’ ಎಂದು ಸಾರಿದ ಸರ್ವೋದಯ ತತ್ತ್ವವನ್ನು ಅರ್ಥೈಸಿಕೊಳ್ಳಬೇಕು.ಉಳ್ಳವರ ಪರ ವಕಾಲತ್ತು ವಹಿಸುವ,ಕಾರ್ಪೋರೇಟ್ ಸಂಸ್ಥೆಗಳ ಹಿತಕಾಯುವ ,ಸಮಷ್ಟಿ ಹಿತವನ್ನು ಕಡೆಗಣಿಸಿ ಹತ್ತಾರುಜನ ಉದ್ಯಮಿಗಳ ಹಿತವೇ ದೇಶದ ಉನ್ನತಿ ಎಂದು ಬಿಂಬಿಸುವವರು ‘ ಕೋಳಿಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವೆಲ್ಲವ,ಕಾಗೆಯೊಂದಗುಳ ಕಂಡರೆ ಕೂಗಿ ಕರೆಯದ ತನ್ನ ಬಳಗವ… ಎನ್ನುವ ಬಸವ ವಚನಾಂತರ್ಗತ ಸತ್ಯವು,ದಾಸೋಹತತ್ತ್ವವು ಕೋಳಿ,ಕಾಗೆಗಳಿಂದ ಕರಕಷ್ಟರಾದ ಆಳುವ ಪ್ರಭುಗಳಿಗೆ ಅರ್ಥವಾಗಬಹುದೆ?

ಕನ್ನಡ ನುಡಿಯನ್ನು ಹರಲೋಕದ ಪ್ರವೇಶದ್ವಾರದ ಪಾಸ್ ಅನ್ನಾಗಿಸಿದ,ಕನ್ನಡವನ್ನು ಹರನುಡಿಯಾಗಿಸಿದ ಬಸವಣ್ಣನವರು ‘ದೇವಭಾಷೆ’ ಎಂದು ಬಣ್ಣಿಸಿಕೊಂಡು ಬೀಗುತ್ತಿದ್ದ
ಸಂಸ್ಕೃತವನ್ನು ಧಿಕ್ಕರಿಸಿ ಕನ್ನಡದಲ್ಲಿಯೇ ವಚನಗಳನ್ನು ರಚಿಸಿದರು;ವಚನಪರಂಪರೆಯನ್ನು ನಿರ್ಮಿಸಿ ಕನ್ನಡ ನುಡಿಯ ಮೂಲಕವೇ ಕೈಲಾಸಪ್ರಾಪ್ತಿ ಎಂದು ನಿರೂಪಿಸಿದರು.ಇಂತಹ ಕೆಚ್ಚಿನ ಬಸವಣ್ಣನವರಿಗಿಂತ ಮಿಗಿಲು ಕನ್ನಡಾಭಿಮಾನಿಗಳಿರಲು ಸಾಧ್ಯವೆ? ಕನ್ನಡಸಂಸ್ಕೃತಿಯು ವಿಶ್ವಸಂಸ್ಕೃತಿಯಾಗಲು ಕಾರಣರಾದ ಬಸವಣ್ಣನವರನ್ನು ಕನ್ನಡ,ಕರ್ನಾಟಕಕ್ಕಷ್ಟೇ ಸೀಮಿತರನ್ನಾಗಿಸದೆ ‘ ಭಾರತದ ಸಾಂಸ್ಕೃತಿಕ ನಾಯಕರು’ ಎಂದು ಘೋಷಿಸುವ ಅಗತ್ಯವಿದೆ.ಆದರೆ ಪ್ರಸ್ತುತದಿನಮಾನಗಳಲ್ಲಿ ಅದು ಸಾಧ್ಯವಿಲ್ಲದ ಸಂಗತಿ ಆಗಿರುವುದರಿಂದ ಕನ್ನಡಿಗರ ಸಂಸ್ಕೃತಿಯ ಪ್ರತೀಕವಾದ,ಕರ್ನಾಟಕದ ಆರುವರೆಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಕನ್ನಡಕುಲಕೋಟಿಯ ಹೆಮ್ಮೆಯ,ಅಭಿಮಾನದ ಸಂಗತಿಯಾಗಬಲ್ಲ ‘ ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕರು’ ಎನ್ನುವುದನ್ನು ಅಧಿಕೃತವಾಗಿ ಘೋಷಿಸುವ ಕೆಲಸ ಮಾಡಬೇಕು ಎಂದು ನಿರೀಕ್ಷಿಸುತ್ತೇನೆ.

About The Author