ಮುಕ್ಕಣ್ಣನವರ ಮುಕ್ತಕಗಳು : ನಂಬದಿರು ಜ್ಯೋತಿಷವಾದಿ ಶಾಸ್ತ್ರಗಳನ್ನು

ನಂಬದಿರು ನೀನು ನರರು ಬರೆದ ಶಾಸ್ತ್ರ ಪುರಾಣಗಳ ಹುಂಬಮಾನವರ ವಿಕೃತಿಗೇಕೆ ಮನ್ನಣೆ?

ನಂಬು ನೀಂ ನಿನ್ಮಾತ್ಮಬಲವನು.ಮತ್ತೆ
ಶಂಭುಸದಾಶಿವನನು ನಂಬು ಉದ್ಧಾರದ ಸೂತ್ರವಿದು ಮುಕ್ಕಣ್ಣ. ೦೧

ಋಷಿಗಳು ಬರೆಯಲಿಲ್ಲ ಕಥೆ ಪುರಾಣ ಶಾಸ್ತ್ರಗಳನು
ಋಷಿಗಳು ಸತ್ಯಸಾಕ್ಷಾತ್ಕಾರಿಗಳಲ್ಲದೆ ಹುಸಿಯ ನುಡಿಯರು
ವಿಷಯಾಸಕ್ತ ನರರು ಹೊಟ್ಟೆ ಹೊರೆಯಲು ಕಟ್ಟಿದ
ಹುಸಿ ಶಾಸ್ತ್ರಪುರಾಣಗಳೆಂತು ನಿರ್ಧರಿಸಬಲ್ಲವು ಜಗದ ಗತಿಯನು? ಮುಕ್ಕಣ್ಣ. ೦೬

ಒಬ್ಬನಿಹನು ಸೂರ್ಯ,ಒಬ್ಬನಿಹನು ಚಂದ್ರ
ಇಬ್ಬಿಬ್ಬರಿಲ್ಲ ಜಗವ ಬೆಳಗುವ ರವಿ ಚಂದ್ರರು
ಒಬ್ಬನೇ ಪರಮಾತ್ಮನಿಹನು ವಿಶ್ವನಿಯಾಮಕನಾಗಿ.ಜಗವ
ತಬ್ಬಿ ಆವರಿಸಿಹ ವಿಶ್ವನಿಯತಿಯೊಂದೇ,ಹಲವಿಲ್ಲ ಮುಕ್ಕಣ್ಣ . ೦೭

ನರರು ಬರೆದ ಕಥೆ ಪುರಾಣಗಳ ಸಿಲ್ಕಿಗೆ
ಪರಮಾತ್ಮನು ಸಿಲುಕನು.ಶಾಪ ಪಾಪಗಳಿಗರ್ಥವಿಲ್ಲ
ನರರ ಕಲ್ಪನೆಯಲ್ಲದೆ ಪಾಪ ಕರ್ಮಗಳ ಭೀತಿ
ಸರ್ವರೊಳಿಹ ಪರಮಾತ್ಮನೆಣಿಸನು ಭೇದವನು ಮುಕ್ಕಣ್ಣ. ೦೮

ಘಂಟೆಗೊಂದು ಘಳಿಗೆಗೊಂದು ಭವಿಷ್ಯ ಇರುವುದುಂಟೆ ?
ಎಂಟುದಿಕ್ಕು ಒಂಬತ್ತುಗ್ರಹಗಳ ಶಾಂತಿಮಾಡಿದರೆ ದೊರಕುವುದೆ ಸುಖ?
‘ಉಂಟು ಹೀಗೆ ನಿನ್ನ ಬಾಳೆಂದು’ ನಿಶ್ಚಯಿಸಿಹನು ಪರಮಾತ್ಮನು ಈ ಮೊದಲೆ
ಹೆಂಟೆಯಂದದಿ ಮಣ್ಣಾಗ್ವದು ವಿಧಿ ನೀ ಧೈರ್ಯದಿಂದಿರೆ ಮುಕ್ಕಣ್ಣ. ೦೯

ಮಿಗಿಲು ನಿರ್ಣಾಯಕರಾಗಿದ್ದರೆ ಗ್ರಹಗಳು
ಜಗಕೊಬ್ಬನಿಯಾಮಕನಾಗಿಹ ಪರಮಾತ್ಮನೇಕೆ ಬೇಕು?
ಹಗಲುದರೋಡೆಕಾರರವರು ಶಾಸ್ತ್ರಿ ಜ್ಯೋತಿಷಿಗಳು
ತೊಗಲುದೇಹಿ ನಿರ್ಣಯಿಸಬಲ್ಲನೆ ಜಗದಾಗುಹೋಗುಗಳ? ಮುಕ್ಕಣ್ಣ. ೧೦.

ಪರಮಾತ್ಮನ ಎಣಿಕೆಯಂತಲ್ಲದೆ ಜಗದಾಗು ಹೋಗುಗಳು
ನರರ ಕಲ್ಪನೆಯಂತಲ್ಲ.ಹುರುಳಿಲ್ಲ ಜ್ಯೋತಿಷ್ಯದೊಳು
ಹೊರೆದುಕೊಳ್ಳಲೆಂದು ತಮ್ಮ ಡೊಳ್ಳುಹೊಟ್ಟೆಗಳ ಬರೆದಿಹರು ನರಿಬುದ್ಧಿಯ ಜನರು ಜ್ಯೋತಿಷವಾದಿಶಾಸ್ತ್ರಗಳ ಮುಕ್ಕಣ್ಣ.೧೧.

About The Author