ಮುಕ್ಕಣ್ಣನ ಮುಕ್ತಕಗಳು

ಹೆಂಡ ಸಾರಾಯಿ ಬೀರು ಬ್ರಾಂಡಿಗಳ ಕುಡಿಯುತ್ತ ಮಾಂಸದ

ತುಂಡುಗಳ ಸೇವಿಸಿದರೆ ಕಾಣುವನೇನು ಪರಮಾತ್ಮನು?
ಖಂಡಿತದ ಮಾತಿದು ಕುಡುಕರಿಗಿಲ್ಲ ಪರಮಾತ್ಮದರ್ಶನ
ಬಂಡೆಯಂತೆ ಅಚಲ ಮನವಿರಬೇಕು ಪರಮಾತ್ಮನೊಲುಮೆಗೆ ಮುಕ್ಕಣ್ಣ.

ಆರು ಆದರೇನು ಕುಡಿದು ತಿನ್ನುವವರು ಆದರ್ಶರಲ್ಲ
ಸಾರಾಯಪಥಕೆ.ದುರ್ಬಲಜೀವಿಗಳವರು
ದಾರಿಯಾಗುವರೆ ಕುಡಿದು ತಿಂದು ಮೋಕ್ಷಪಥಕೆ?
ಧೀರಯೋಗಿಗಳಿಗಲ್ಲದೆ ದಾರಿಹೋಕರಿಗೆಟುಕದು ಪರಬೊಮ್ಮನೊಲವು ಮುಕ್ಕಣ್ಣ

ಚಟಕೆ ಕುಡಿದು ತಿನ್ನುವವರು ಚಟಮಾರಿಗಳಲ್ಲದೆ
ದಿಟಕೆದಿಟವಾದ ಪರಮಾತ್ಮನನ್ನು ಕಾಣಬಲ್ಲರೆ?
ಸಟೆಯಲ್ಲದೆ ದಿಟವಲ್ಲ ಮದ್ಯದಿಂದ ಮಹಾದೇವನೊಲುಮೆಯ ಮಾತು
ಘಟಪೂರ್ಣವಾದವರಿಗಲ್ಲದೆ ಚಟಪೀಡಿತರಿಗೆ ಒಲಿವನೆ ಪರಮಾತ್ಮ ? ಮುಕ್ಕಣ್ಣ

ದೇವದೇವಿಯರ ಹೆಸರಲ್ಲಿ ಕುರಿ ಕೋಳಿ ಕೋಣಗಳ
ಜೀವಹತ್ಯೆಗೈದು ತಿನ್ನುವವರಿಗೆತ್ತಣ ಸದ್ಗತಿ?
ತಾವು ತಿನ್ವ ಚಪಲಕೆ ದೇವರ ಹೆಸರಾಯಿತ್ತಲ್ಲದೆ
ದೇವರೇನು ಮಾಂಸವನುಣಲಿಲ್ಲ,ಮುಕ್ತಿಯನು ನೀಡಲಿಲ್ಲ ಮುಕ್ಕಣ್ಣ.

ಜೀವಿಗಳ ಬಲಿ ಕೇಳ್ವ ದೇವ ದೇವಿಯರೆತ್ತಣ ದೈವಗಳು?
ತಾವು ತಮಗೊಂದಗುಳ ಸಂಪಾದಿಸಲರಿಯದೆ
‘ನೋವುಂಟುಮಾಡಿಹೆನು,ತಂದು ನೀಡಿ’ ಎಂದು ಕಾಡ್ವ ಭಿಕ್ಷುಕದೈವಗಳ
ದೇವರದೇವ ಮಹಾದೇವ ಶಿವನೊಪ್ಪನು ಮುಕ್ಕಣ್ಣ.

ಹಾದಿಬೀದಿಯ ಕಲ್ಲು ಕಟ್ಟಿಗೆ ಮಣ್ಣಮೂರ್ತಿಗಳೆಲ್ಲ
ಮಾದೇವಿಯರೆ?ದಡ್ಡಜನರಿಗೆಟುಕದು ಪರಮಾರ್ಥ.
ಬಾಧಿಸಿ ಕಾಡುವ ಕ್ಷುದ್ರದೈವಗಳ ಒಪ್ಪದಿರು
ವೇದಕ್ಕತೀತ ಮಹಾದೇವಶಿವನೊಲುಮೆಯ ಸಾಧಿಸು ಮುಕ್ಕಣ್ಣ.

ಒಡಲು ಇಲ್ಲದ ಮೂಲೊಕದೊಡೆಯ ಮಹಾದೇವನು
ಕೊಡಲರಿತಿಹನಲ್ಲದೆ ಬೇಡಲರಿಯನು,ಕಾಡನು.
ಕೆಡಲು ಏಕೆ ಲೋಕದ ಕಾಡುವ ದೈವಗಳ ನಂಬಿ?
ಕೆಡಲು ಕ್ಷುದ್ರದೈವಗಳಲ್ಲದೆ ಉದ್ಧರಿಸಲಲ್ಲ ಮುಕ್ಕಣ್ಣ.

‌‌ ‌‌ 

About The Author