ಮುಕ್ಕಣ್ಣನವರ ಮುಕ್ತಕಗಳು : ಮದ್ಯೋದ್ಯಮಕ್ಕೆ ಬೇಡ ಸರಕಾರದ ಪ್ರೋತ್ಸಾಹ : ಮುಕ್ಕಣ್ಣ ಕರಿಗಾರ

ಮುಕ್ಕಣ್ಣನವರ ಮುಕ್ತಕಗಳು : ಮದ್ಯೋದ್ಯಮಕ್ಕೆ ಬೇಡ ಸರಕಾರದ ಪ್ರೋತ್ಸಾಹ : ಮುಕ್ಕಣ್ಣ ಕರಿಗಾರ 

೦೧.ಬರುವುದು ಸಹಜವೆಲ್ಲರಿಗು ಸಾವು
ಕರೆದು ಬರಮಾಡಿಕೊಂಬುವರು ಸಾವನು ಕೆಲವರು
ತಿರಿದುಂಡರೂ ಬಾಳ್ವಬಯಕೆ ಇರಬೇಕು.ಮದ್ಯಪಾನವ್ಯಸನಿಗರಾಗಿ
ಅರೆಯಾಯುಗಳಾಗುವವರೆತ್ತಣ ಧೀರರು? ಮುಕ್ಕಣ್ಣ.

೦೨.ಮದ್ಯವ್ಯಸನಿಗಳಿಗಿಲ್ಲ ಉತ್ತಮ ಬದುಕು ಭವಿಷ್ಯ
ಇದ್ದುದೆಲ್ಲವ ಮದ್ಯದಂಗಡಿಗೆ‌ ಇತ್ತು
ಮುದ್ದುಮಕ್ಕಳು ಮಡದಿಯರ ಗೋಳಿಗೆ ಕಾರಣರಾಗುವ
ಬುದ್ಧಿಗೇಡಿಗಳು ಪರೋಪದ್ರವಜೀವಿಗಳು ಮುಕ್ಕಣ್ಣ.

೦೩.ಉತ್ತೇಜನ ನೀಡಬಾರದು ಮದ್ಯಪಾನಕ್ಕೆ ಸರಕಾರ
ನಿತ್ಯನರಕವಾಗುತಿಹುದು ಬಡವರಬಾಳು ಮದ್ಯವ್ಯಸನಪೀಡಿತರಿಂದ.
ಉತ್ತಮ ಆದಾಯದಮೂಲವೆಂದು ಮದ್ಯಮಾರಾಟವನು ಬೆಂಬಲಿಪರು
ಉತ್ತಮ ಜನಪ್ರತಿನಿಧಿಗಳಲ್ಲ,ಜನತೆಯ ವಿರೋಧಿಗಳವರು ಮುಕ್ಕಣ್ಣ.

೦೪.ಹತ್ತುಹಲವು ಆದಾಯದ ಮೂಲಗಳಿರಲು ಬಡವರ
ತುತ್ತು ಅನ್ನ ಕಸಿವ ಮದ್ಯಪಾನಕ್ಕೇಕೆ ಬೆಂಬಲ?
ಅತ್ತುಕರೆವ ಗರತಿಯರ ಶಾಪ ತಟ್ಟದೇನು ಆಳುವವರಿಗೆ?
ಕತ್ತುಕೊಯ್ಯುವುದಕು ಮಿಗಿಲಧಮಕಾರ್ಯ ಮದ್ಯವ್ಯಾಪಾರೋತ್ತೇಜನ ಮುಕ್ಕಣ್ಣ.

೦೫.ಮದ್ಯದಂಗಡಿಗಳ ತೆರೆದು ಹೆಚ್ಚಿಸುವುದು ಜನರುದ್ಧಾರದ
ಬದ್ಧತೆಯ ಪ್ರಜಾಸರ್ಕಾರದ ಕಾರ್ಯವಲ್ಲ
ಶುದ್ಧಾತ್ಮರಾಜಕಾರಣಿಗಳು ಬೆಂಬಲಿಸಬಾರದು ಮದ್ಯೋದ್ಯಮವನು
ಹದ್ದಿನಂತಹ ಅಲ್ಪಬುದ್ಧಿಯ ರಾಜಕಾರಣಿಗಳಿಂದ ಕೇಡಿಹುದು ಜನತೆಗೆ ಮುಕ್ಕಣ್ಣ. ೦೫

******

About The Author