ಸಂವಿಧಾನ ಪ್ರಜ್ಞೆಯ ಪ್ರಸರಣಕಾರ್ಯ ಬದ್ಧತೆಯ ವಿಶಿಷ್ಟ ಚೇತನ ಬಸವರಾಜ ಬ್ಯಾಗವಾಟ

ಸಂವಿಧಾನ ಪ್ರಜ್ಞೆಯ ಪ್ರಸರಣಕಾರ್ಯ ಬದ್ಧತೆಯ ವಿಶಿಷ್ಟ ಚೇತನ ಬಸವರಾಜ ಬ್ಯಾಗವಾಟ : ಮುಕ್ಕಣ್ಣ ಕರಿಗಾರ

ಪ್ರಜಾಪ್ರಭುತ್ವ ಭಾರತದಲ್ಲಿ ಹಲವು ‘ಇಸಂ’ ಗಳಿವೆ.ಜನರು ತಮತಮಗೆ ಸರಿಕಂಡ ಮತ,ಧರ್ಮ,ನಂಬಿಕೆ,ಶಾಸ್ತ್ರ,ಕಲೆ,ಸಾಹಿತ್ಯಗಳ ‘ ಇಸಂ’ ಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.ಆದರೆ ಎಲ್ಲ ‘ ಇಸಂ’ ಗಳಿಗಿಂತಲೂ ವರ್ತಮಾನ ಭಾರತದ ತುರ್ತು ಅಗತ್ಯದ ಇಸಂ ಎಂದರೆ ಅದು ‘ ಸಂವಿಧಾನಿಸಂ'( constitutionalism)ಸಂವಿಧಾನಕ್ಕೆ ಬದ್ಧರಾಗಿ ಬದುಕುವುದೇ ‘ ಸಂವಿಧಾನಿಸಂ’.ಕೋರ್ಟ್ಗಳಲ್ಲಿ ನ್ಯಾಯಾಧೀಶರುಗಳಿಗೆ,ನ್ಯಾಯವಾದಿಗಳಿಗೆ ಸಂವಿಧಾನವೇ ನ್ಯಾಯನಿರ್ಣಯದ ಮೂಲಾಧಾರ,ಮೂಲತತ್ತ್ವ.ಕೋರ್ಟ್ ಗಳು,ವಕೀಲರುಗಳನ್ನು ಬಿಟ್ಟರೆ ವಿಶ್ವವಿದ್ಯಾಲಯಗಳ ರಾಜ್ಯಶಾಸ್ತ್ರದ ಪ್ರಾಧ್ಯಾಪಕರುಗಳು,ಪದವಿ ಸ್ನಾತಕೋತ್ತರ ಪದವಿಗಳ ರಾಜ್ಯಶಾಸ್ತ್ರದ ಉಪನ್ಯಾಸಕರುಗಳು,ಬೋಧಕರುಗಳಿಗೆ ಹೆಚ್ಚೆಂದರೆ ರಾಜ್ಯಶಾಸ್ತ್ರಾಭ್ಯಾಸಿಗಳಿಗೆ,ಕೆಲವು ಜನ ಕವಿ ಸಾಹಿತಿ ಪತ್ರಕರ್ತರುಗಳಿಗಷ್ಟೇ ಪರಿಚಯವಿರುವ ಭಾರತದ ಸಂವಿಧಾನದ ಪ್ರಜ್ಞೆಯು ಇತ್ತೀಚಿನ ದಿನಗಳಲ್ಲಿ ಕಾಲಮಾನದ ಅವಶ್ಯಕತೆಯಾಗಿ ಹೆಚ್ಚಿ,ವಿಸ್ತರಿಸುತ್ತಿದೆ.ದೇಶದಲ್ಲಿ ಸಂವಿಧಾನ ಬದ್ಧತೆಯ ಚೇತನಗಳು ಅಲ್ಲಲ್ಲಿ ಸಂವಿಧಾನದ ಜಾಗೃತಿಯನ್ನುಂಟು ಮಾಡಲು ಪರಿಶ್ರಮಿಸುತ್ತಿವೆ.ಕರ್ನಾಟಕದ ಅತಿಹಿಂದುಳಿದ ತಾಲೂಕು ಎಂದು ಹೆಸರಾದ ಕಲ್ಯಾಣ ಕರ್ನಾಟಕದ ದೇವದುರ್ಗದಲ್ಲಿ ಸಂವಿಧಾನಪ್ರಜ್ಞೆಯ ಪ್ರಸರಣಕಾರ್ಯವು ಸದ್ದಿಲ್ಲದೆ ನಿರಂತರವಾಗಿ ಸಾಗುತ್ತಿದೆ.ದೇವದುರ್ಗ ತಾಲೂಕಿನಲ್ಲಿ ಸಂವಿಧಾನ ಪ್ರಜ್ಞೆಯ ಹೊನ್ನ ಬೀಜಗಳನ್ನು ಬಿತ್ತಿಬೆಳೆಯುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ ಸಾಹಿತಿ,ಸಂಘಟಕ ಬಸವರಾಜ ಬ್ಯಾಗವಾಟ್ ಅವರು.

ಸಮಸಮಾಜ ನಿರ್ಮಾಣದ ಕನಸುಣಿಯಾಗಿರುವ ಬಸವರಾಜ ಬ್ಯಾಗವಾಟ್ ‘ ಸಮತಾ ಗ್ರಾಮೀಣಾಭಿವೃದ್ಧಿ ಸಂಸ್ಥೆ’ ಯ ಮೂಲಕ ತಾಲೂಕಿನ ಯುವ ಜನತೆಯಲ್ಲಿ ಸಂವಿಧಾನ ಪ್ರಜ್ಞೆಯನ್ನು ಪಸರಿಸುವ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ.ಕರ್ನಾಟಕ ಸರಕಾರವು ಸಂವಿಧಾನ ಪೀಠಿಕೆಯ ಓದನ್ನು ಕಡ್ಡಾಯಗೊಳಿಸಿ,ಆದೇಶಿಸಿದಾಗ ಸಂವಿಧಾನಪೀಠಿಕೆ ಫಲಕಗಳನ್ನು ಸಿದ್ಧಪಡಿಸಿ ಶಾಲೆ- ಕಾಲೇಜು,ಸರಕಾರಿ ಕಛೇರಿಗಳಿಗೆ ತಲುಪಿಸಿದ ಬಸವರಾಜ ಬ್ಯಾಗವಾಟ್ ಈಗ ‘ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ’ ಎನ್ನುವ ಅರ್ಥಪೂರ್ಣ,ಸಂವಿಧಾನ ಬದ್ಧತೆಯ ಕಾರ್ಯಕ್ರಮ ಒಂದನ್ನು ರೂಪಿಸಿಕೊಂಡು ಅವರ ಸ್ನೇಹಿತರು,ಸಮಾನಮನಸ್ಕ ಬಳಗದೊಂದಿಗೆ ತಾಲೂಕಿನ ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ಯುವಸಮುದಾಯದಲ್ಲಿ ಸಂವಿಧಾನ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ.ಬಸವರಾಜ ಬ್ಯಾಗವಾಟ್ ಅವರು ಆಯೋಜಿಸುವ ಸಂವಿಧಾನಪ್ರಜ್ಞಾಪ್ರಸಾರ ಕಾರ್ಯದಲ್ಲಿ ಅವರ ಸ್ನೇಹಿತ ಬಳಗವಷ್ಟೇ ಅಲ್ಲದೆ ತಾಲೂಕಿನ ನ್ಯಾಯಾಧೀಶರುಗಳು,ನ್ಯಾಯವಾದಿಗಳು,ಕವಿ- ಸಾಹಿತಿಗಳು,ಪತ್ರಕರ್ತರುಗಳನ್ನು ಪಾಲ್ಗೊಂಡು ಅವರನ್ನು ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ ಸಂಗತಿ.ದೇವದುರ್ಗದಂತಹ ತಾಲೂಕಿನಲ್ಲಿ ಸಂವಿಧಾನ ಪ್ರಜ್ಞೆಯನ್ನು ಬಿತ್ತಿ ಬೆಳೆಯುತ್ತಿರುವ ಬಸವರಾಜ ಬ್ಯಾಗವಾಟ್ ಅವರ ಪರಿಶ್ರಮ ಅನುಕರಣೀಯ ಆದರ್ಶ.ಅರ್ಪಣಾಭಾವದಿಂದ ಸಂವಿಧಾನಕ್ಕೆ ಸಮರ್ಪಿಸಿಕೊಂಡು ಸಂವಿಧಾನದ ಮಹತ್ವ ಆಶಯಗಳನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುತ್ತಿರುವ ಬ್ಯಾಗವಾಟ್ ಅವರ ಸಂವಿಧಾನ ಪ್ರೀತಿಯು ಅವರನ್ನು ಇತರರಿಗಿಂತ ಭಿನ್ನರನ್ನಾಗಿಸಿದೆ,ವಿಶಿಷ್ಟರನ್ನಾಗಿಸಿದೆ.ಸಂವಿಧಾನವನ್ನು ಹಚ್ಚಿಕೊಂಡು,ಅಂಬೇಡ್ಕರ್ ಅವರ ಆಶಯಗಳ ಈಡೇರಿಕೆಗೆ ಬದ್ಧಕಂಕಣರಾಗಿ ದುಡಿಯುತ್ತಿರುವುದು ಅದೂ ದೇವದುರ್ಗದಂತಹ ತಾಲೂಕಿನಲ್ಲಿ ಅದನ್ನು ಯಶಸ್ವಿಗೊಳಿಸುತ್ತಿರುವುದು ಬಸವರಾಜ ಬ್ಯಾಗವಾಟ್ ಅವರ ಹೆಗ್ಗಳಿಕೆ,ಅನನ್ಯತೆ.

ಶಾಲೆ ಕಾಲೇಜುಗಳಲ್ಲಿ ‘ ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ’ ಕಾರ್ಯಕ್ರಮವನ್ನು ಆಯೋಜಿಸಿ,ತಜ್ಞರುಗಳಿಂದ ಸಂವಿಧಾನದ ಪರಿಚಯವನ್ನು ಯುವಮನಸ್ಸುಗಳಿಗೆ ಮಾಡಿಸುವ ಮೂಲಕ ಯುವಕ ಯುವತಿಯರಲ್ಲಿ ಸಂವಿಧಾನದ ಬಗ್ಗೆ ಹೆಮ್ಮೆ ಅಭಿಮಾನಗಳನ್ನುಂಟು ಮಾಡುತ್ತಿರುವುದಲ್ಲದೆ ಅವರನ್ನು ‘ ಸಂವಿಧಾನಮುಖಿ’ ಗಳನ್ನಾಗಲು ಸ್ಫೂರ್ತಿ,ಪ್ರೇರಣೆಗಳನ್ನು ನೀಡುತ್ತಿರುವ ಬಸವರಾಜ ಬ್ಯಾಗವಾಟ ಅವರ ಸಂವಿಧಾನ ಬದ್ಧತೆ ಸಂವಿಧಾನಪ್ರಿಯರೆಲ್ಲರಿಗೂ ಹೆಮ್ಮೆಯ ಸಂಗತಿ. ದೇವದುರ್ಗ ತಾಲೂಕಿನಿಂದ ಪ್ರಾರಂಭಿಸಿ,ರಾಯಚೂರು ಜಿಲ್ಲೆಯಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂವಿಧಾನ ಪ್ರಜ್ಞೆಯ ಸತ್ತ್ವಯುತ ಬೀಜಗಳನ್ನು ಬಿತ್ತಿಬೆಳೆಯುವ ಕನಸು ಕಾಣುತ್ತಿರುವ ಬಸವರಾಜ ಬ್ಯಾಗವಾಟ್ ಅವರು ಈಗಾಗಲೆ ತಾಲೂಕಾ ಕೇಂದ್ರ ದೇವದುರ್ಗ ಸೇರಿದಂತೆ ತಾಲೂಕಿನ ಪ್ರಮುಖ ಗ್ರಾಮಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆಯೋಜಿಸಿ,ಯಶಸ್ವಿಯಾಗಿದ್ದಾರೆ.ಬ್ಯಾಗವಾಟ್ ಅವರ ಸಂವಿಧಾನ ಪ್ರೀತಿ ಮತ್ತು ಬದ್ಧತೆಯನ್ನು ಶೈಕ್ಷಣಿಕ ವಲಯ ಸೇರಿದಂತೆ ಪ್ರಜ್ಞಾವಂತರುಗಳೆಲ್ಲ ಬೆಂಬಲಿಸಬೇಕಿದೆ.ಸಂವಿಧಾನಪ್ರಜ್ಞೆಯ ವಿಸ್ತರಣೆಯಲ್ಲಿ ಅವರೊಂದಿಗೆ ಜೊತೆಯಾಗಿ ದುಡಿಯುತ್ತಿರುವ ಅವರ ಗೆಳೆಯರ ಬಳಗಕ್ಕೂ ನನ್ನ ಅಭಿನಂದನೆಗಳನ್ನು ತಿಳಿಸುತ್ತ ಸಂವಿಧಾನ ಭಾರತವನ್ನು ಕಟ್ಟುವ ನಿಮ್ಮೆಲ್ಲರ ಪ್ರಯತ್ನ ಯಶಸ್ವಿಯಾಗಲಿ,ನಾಡು- ದೇಶಕ್ಕೆ ಮಾದರಿಯಾಗಲಿ,ಸ್ಫೂರ್ತಿಯಾಗಲಿ ಎಂದು ಆಶಿಸುವೆ.

About The Author