ಪಡಿತರ ಅಕ್ಕಿ ನಾಪತ್ತೆ : ರೈತರ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟದ ಶಂಕೆ :  ಪ್ರಭಾವಿ ವ್ಯಕ್ತಿಗಳ ಕೈವಾಡ ! ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ : 

ಶಹಾಪುರ : ಬಡವರಿಗಾಗಿ,ಬಡವರ ಹಸಿವು ನೀಗಿಸಬೇಕಾಗಿದ್ದ 6077 ಕ್ವಿಂಟಾಲ್ ಪಡಿತರ ಅಕ್ಕಿ ನಾಪತ್ತೆಯಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ಕಿ ನಾಪತ್ತೆಯಾಗಿದ್ದರು ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಕಾಟಾಚಾರಕ್ಕಾಗಿ ತನಿಖೆ ನಡೆಸುವಂತಿದೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿ ಈ ಅಕ್ರಮ ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿದ ನಂತರ ಸಾಮಾಜಿಕ ಕಾರ್ಯಕರ್ತ ಬಸವರಾಜ ಅರುಣಿ ಮಾತನಾಡಿ, ಬಡವರಿಗೆ ಹಂಚಿಕೆ  ಮಾಡುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಬಂದ ಪಡಿತರ ಅಕ್ಕಿಯನ್ನು ಹಂಚಿಕೆ ಮಾಡದೆ, ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಕಾಣದ ಕೈಗಳು ಸೇರಿ ಸುಮಾರು 6077 ಕ್ವಿಂಟಲ್ ಅಕ್ಕಿಯನ್ನು ನಾಪತ್ತೆ ಮಾಡಿರುವುದನ್ನು ನೋಡಿದರೆ ಇದರಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ದೋ ನಂಬರ್ ವ್ಯಕ್ತಿಗಳ ಕೈವಾಡವಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಲ್ಲದೆ ಈ ಸಂಘದಲ್ಲಿ ಸುಮಾರು 15 ವರ್ಷಗಳಿಂದ ಪದಾಧಿಕಾರಿಗಳನ್ನು ಬದಲಾವಣೆ ಮಾಡದೆ ಇದ್ದವರೇ ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ. ಈ ಸಂಘವು ಸುಮಾರು ಹತ್ತು ವರ್ಷಗಳ ಹಿಂದೆ ಇಪ್ಕೋ ಕಂಪನಿಯ ಏಜೆನ್ಸಿ ಮೂಲಕ ರೈತರಿಗೆ ರಸಗೊಬ್ಬರ ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯವರೆಗೆ ರೈತರಿಗೆ ರಸಗೊಬ್ಬರ ನೀಡದೆ ಕಾಳ ಸಂತೆಯಲ್ಲಿ ಮಾರಾಟ ಮಾಡಿ, ಕೆಲವು ರೈತರ ಹೆಸರುಗಳನ್ನು ಬೋಗಸ್ ರಿಜಿಸ್ಟರ್ ನಲ್ಲಿ ನೋಂದಾಯಿಸಿದ್ದಾರೆ. ಈ ಅಕ್ರಮವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಆರೋಪಿಸಿದರು.

ಇದೆ ವೇಳೆ ಮಾತನಾಡಿದ ಅಡಿವೆಪ್ಪ ಜಾಕಾ, ಇದೆ ಟಿಎಪಿಸಿಎಂಎಸ್ ನವರು ಬಹುತೇಕ ಇದೊಂದೇ ಪ್ರಕರಣದಲ್ಲಿ ಭಾಗಿಯಾಗಿ ಇರುವುದಿಲ್ಲವೆನ್ನುವುದು ಅನುಮಾನ ಶುರುವಾಗಿದೆ.ಯಾಕೆಂದರೆ ರೈತರಿಂದ ತೊಗರಿಯನ್ನು ಸಂಘ ಸಂಸ್ಥೆಗಳ ಹೆಸರಿನಿಂದ ಖರೀದಿಸಿ ರೈತರಿಗೆ ಪಾವತಿಸಬೇಕಾದ ಹಣವನ್ನು ಇನ್ನೂ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಘವು ಅನೇಕ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಸಾರ್ವಜನಿಕರಲ್ಲಿ  ಹೆಚ್ಚು ಅನುಮಾನಗಳು ಮೂಡಿವೆ. ಸರ್ಕಾರ ಹಾಗೂ ಇತರೆ ಕಂಪನಿಗಳು ಇವರಿಗೆ ನೀಡಿದ ಎಲ್ಲಾ ಏಜೆನ್ಸಿಗಳನ್ನು ರದ್ದುಪಡಿಸಬೇಕು ಎಂದವರು ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಿದರು.ಇದೆ ವೇಳೆ ಡಾ. ಚಂದ್ರಶೇಖರ್ ಸುಭೇದಾರ್, ರಾಜಶೇಖರ್ ಗೂಗಲ್, ಉಮೇಶ್ ಗೋಗಿ, ಬಸವರಾಜ್ ಕೋರಿ, ಚನ್ನಬಸಯ್ಯ ಸ್ವಾಮಿ, ಚನ್ನಪ್ಪ ಚಿಂತಿ ಇದ್ದರು.