ಏಡ್ಸ್ ರೋಗ ಪೀಡಿತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು : ನ್ಯಾಯಾಧೀಶ ರವೀಂದ್ರ 

Yadagiri ವಡಗೇರಾ :  ಏಡ್ಸ್  ರೋಗದ ಬಗ್ಗೆ ಭಯ ಬೇಡ ಜಾಗೃತಿ ಇರಲಿ. ಏಡ್ಸ್  ರೋಗ ಪೀಡಿತರನ್ನು ಅವಮಾನಿಸುವ ಕೆಲಸ ಯಾರೂ  ಮಾಡಬಾರದು.ಸಮಾಜದಲ್ಲಿ ಬದುಕಲು ಅವರಿಗೂ ಕೂಡ ಹಕ್ಕಿದೆ ಎಂದು ಯಾದಗಿರಿಯ  ಹಿರಿಯ ಸಿವಿಲ್ ನ್ಯಾಯಾಧೀಶರಾದ  ರವೀಂದ್ರ ಎಲ್. ಹೊನೂಲೆ ಹೇಳಿದರು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ, ಜಿಲ್ಲಾ ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯೋಗದಲ್ಲಿ ವಿಶ್ವ ಏಡ್ಸ್ ದಿನ  ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು .ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಚ್ಐವಿ ಸೋಂಕಿತರು   ಎಂದಿಗೂ ಆತ್ಮಸ್ಥೈರ್ಯವನ್ನು  ಕಳೆದುಕೊಳ್ಳಬಾರದು. ಏಡ್ಸ್ ರೋಗಿಗಳಿಗೆ ಆರೋಗ್ಯ ಇಲಾಖೆಯು ಆಪ್ತ ಸಮಾಲೋಚನೆ ಮುಖಾಂತರ ಅವರ ಮಾನಸಿಕ ಒತ್ತಡವನ್ನು ತೊಲಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಕಾರ್ಯನಿರ್ವಹಿಸಬೇಕೆಂದು ಸಿಬ್ಬಂದಿಗಳಿಗೆ ತಿಳಿಸಿದರು.

ಏಡ್ಸ್ ಪಿಡಿತ ರೋಗಿಗಳಿಗೆ ಸರಕಾರದಿಂದ ಸಕಲ ಸೌಲಭ್ಯಗಳಿದ್ದು ಅದರ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಲು ಸಲಹೆ ನೀಡಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ  ಡಾ.ಜಗನ್ನಾಥರೆಡ್ಡಿ  ಮಾತನಾಡಿ, ಪ್ರತಿಯೊಬ್ಬರು ಎಚ್ಐವಿ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಯಾವುದೇ ರೀತಿಯ ಹಿಂಜರಿಕೆ ಬೇಡ.  ಅಸುರಕ್ಷತೆ ಲೈಂಗಿಕತೆ ಹಾಗೂ ಏಡ್ಸ್ ಪೀಡಿತರ ರಕ್ತವು ನಮ್ಮ ದೇಹದಲ್ಲಿ ಸೇರಿದಾಗ ಮಾತ್ರ ಈ ಕಾಯಿಲೆ ಹರಡುತ್ತದೆ. ಅವರ ಜೊತೆ ಕುಳಿತುಕೊಂಡರೆ, ಊಟ ಮಾಡಿದರೆ,ತಬ್ಬಿಕೊಂಡರೆ ಈ ಕಾಯಿಲೆ ಹರಡುವುದಿಲ್ಲ ಎಂದರು.

ಏಡ್ಸ್ ಪೀಡಿತ ರೋಗಿಗಳಿಗೆ ಸಕಾಲದಲ್ಲಿ ನಮ್ಮ ಆರೋಗ್ಯ ಇಲಾಖೆಯಿಂದ ಎಲ್ಲ  ರೀತಿಯ ಸಹಕಾರ ನೀಡಿ ಅಗತ್ಯ ಔಷಧೋಪಚಾರ ಮಾಡುತ್ತೇವೆ.ಏಡ್ಸ್ ರೋಗಿಗಳು ಉತ್ತಮ ಗುಣಮಟ್ಟದ ಆಹಾರ ಸೇವನೆ ಮಾಡಬೇಕು. ಯೋಗ ಧ್ಯಾನ ವ್ಯಾಯಾಮಗಳನ್ನು ಮಾಡುವಂತೆ ಹೇಳಿದರು.

ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಮಲ್ಲಿಕಾರ್ಜುನ ಮನಗನಾಳ,ವಕೀಲರಾದ ಕೃಷ್ಣವೇಣಿ,ಜಿ.ನಿರ್ಮಲ್ಕರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರ,ಮಕ್ಕಳ ವೈದ್ಯ ಡಾ. ಸುರೇಶ, ದಂತ ವೈದ್ಯರಾದ ಡಾ.ಭವಾನಿ, ಆಶಾ ಕಾರ್ಯಕರ್ತೆಯರು ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.ಆಸ್ಪತ್ರೆ ಸಿಬ್ಬಂದಿ ವೆಂಕಟೇಶ ನಿರೂಪಿಸಿ ವಂದಿಸಿದರು.