ಸಮಾಜಸುಧಾರಕ ಕನಕದಾಸರು : ಮುಕ್ಕಣ್ಣ ಕರಿಗಾರ

ಸಮಾಜಸುಧಾರಕ ಕನಕದಾಸರು 

ಮುಕ್ಕಣ್ಣ ಕರಿಗಾರ

ಸಮಾಜಸುಧಾರಕರು ತಮ್ಮ ಸಮಕಾಲೀನ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ,ನೇರ್ಪುಗೊಳಿಸುವ ಕಾರ್ಯ ಮಾಡುತ್ತಾರೆ.ಕನಕದಾಸರು ಸಹ ಮಧ್ಯಯುಗೀನ ಕರ್ನಾಟಕದ ಸಮಾಜದಲ್ಲಿ ರೂಢಿಯಲ್ಲಿದ್ದ ಮೂಢನಂಬಿಕೆ,ಅರ್ಥಹೀನ ಆಚರಣೆ,ವ್ಯಕ್ತಿಪೂಜೆ,ಉಳ್ಳವರು ಮತ್ತು ಪಟ್ಟಭದ್ರರ ಹುಸಿಪೊಗರಿನ ವಿರುದ್ಧ ಸಮರಸಾರಿದವರು.ತಮ್ಮ ವೈಚಾರಿಕ ನಡೆನುಡಿಗಳಿಂದ ಸಮಾಜಕ್ಕೆ ಆದರ್ಶಪ್ರಾಯರಾದರು.ಜಾತಿವ್ಯವಸ್ಥೆಯ ವಿರುದ್ಧ ಗುಡುಗಿದರು,ಡಂಭಾಚಾರದ ವಿರುದ್ಧ ಆರ್ಭಟಿಸಿದರು,ಶೋಷಣೆಯ ವಿರುದ್ಧ ರಣಕಹಳೆ ಮೊಳಗಿಸಿದರು.ಇತರ ದಾಸರು ಸಂಪ್ರದಾಯಕ್ಕೆ ಕಟ್ಟು ಬಿದ್ದು ಹೆಚ್ಚಾನುಹೆಚ್ಚು ದೇವರಸ್ತುತಿ ಕೀರ್ತನೆಗಳನ್ನೇ ರಚಿಸಿದರೆ ಕನಕದಾಸರು ತಮ್ಮ ನಂಬಿಕೆಯ ಮಾಧ್ವಸಿದ್ಧಾಂತದ ಟೊಳ್ಳು ಸಿದ್ಧಾಂತ,ಹುಸಿಪೊಗರಿನ ಆಚರಣೆಗಳನ್ನು ಖಂಡಿಸಲು ಹಿಂಜರಿಯಲಿಲ್ಲ.ಈ ಹಿನ್ನೆಲೆಯಲ್ಲಿ ಕನಕದಾಸರು ದಾಸಸಾಹಿತ್ಯದಲ್ಲಿ ತಮ್ಮದೆ ಆದ ವಿಶಿಷ್ಟತೆಯನ್ನು ಮೆರೆದಿದ್ದಾರೆ.

ಭಾರತೀಯ ಸಂಸ್ಕೃತಿ, ಸಮಾಜಕ್ಕಂಟಿದ ಬಹುದೊಡ್ಡ ಪಿಡುಗು ಜಾತಿಭೇದ.ಕುಲದಿಂದ ಹಿರಿಯರು,ಕುಲದಿಂದ ಕಿರಿಯರು ಎನ್ನುವ ಕೃತ್ರಿಮಭೇದದಡಿ ಸಿಕ್ಕು,ಹೊರಬರಲರಿಯದೆ ಒದ್ದಾಡುತ್ತಿದೆ ಸಮಾಜ.ಬ್ರಾಹ್ಮಣರು ಶ್ರೇಷ್ಠರು,ಅಸ್ಪೃಶ್ಯರು ಕನಿಷ್ಟರು ಎನ್ನುವುದಕ್ಕೆ ಯಾವುದೇ ಆಧಾರಗಳು ಇಲ್ಲದೆ ಇದ್ದರೂ ಈ ಜಾತಿವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಪೋಷಿಸಿಕೊಂಡು ಬರಲಾಗಿದೆ.ಆತ್ಮಾನುಭಾವಿಗಳಾದ ಶರಣರು,ಸಂತರುಗಳಿಗೆ ಕುಲಗೋತ್ರಗಳ ಹಂಗು- ಅಭಿಮಾನಗಳಿರುವುದಿಲ್ಲ.ಆತ್ಮಜ್ಞಾನಿಯಾಗಿದ್ದ ಕನಕದಾಸರು’ ಆತ್ಮಕ್ಕೆ ಯಾವ ಕುಲವಿದೆ? ಜೀವಕ್ಕೆ ಯಾವ ಜಾತಿ ಇದೆ? ಎಂದು ಪ್ರಶ್ನಿಸಿ,ಕುಲವ್ಯವಸ್ಥೆಯ ಕುಟಿಲವನ್ನು ಬಯಲಿಗೆಳೆದಿದ್ದಾರೆ ;

ಕುಲ ಕುಲ ಕುಲವೆನ್ನುತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ
ಕೆಸರೊಳು ತಾವರೆ ಪುಟ್ಟಲು ಅದ ತಂದು
ಬಿಸಜನಾಭನಿಗರ್ಪಿಸಲಿಲ್ಲವೆ
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣಲಿಲ್ಲವೆ (೧)
ಮೃಗಗಳ ಮೈಯಲಿ ಪುಟ್ಟಿದ ಕತ್ತುರಿಯ
ತೆಗೆದು ಪೂಸುವರು ದ್ವಿಜರೆಲ್ಲರು
ಒಗೆಯಿಂದ ನಾರಾಯಣನ್ಯಾವ ಕುಲ
ಅಗಜೆಯೊಲ್ಲಭನ್ಯಾತರ ಕುಲದವನು (೨)
ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವನು
ಆತನೊಲಿದ ಮೇಲೆ ಯಾತರ ಕುಲವಯ್ಯ!

ಕನಕದಾಸರು ಈ ಕೀರ್ತನೆಯಲ್ಲಿ ಕುಲದ ಹಿರಿಮೆಯ ಟೊಳ್ಳುತನವನ್ನು ಬಯಲಿಗೆಳೆದಿದ್ದಾರೆ.ಕುಲ ಕುಲ ಕುಲ ಎನ್ನುತ್ತಿದ್ದಾರಲ್ಲ ,ಸತ್ಯಸುಖ ಉಳ್ಳವರಿಗೆ ಅಂದರೆ ಪರಮಾತ್ಮನ ಪ್ರೀತಿಗೆ ಪಾತ್ರರಾದವರಿಗೆ ಯಾವಕುಲವಿದೆ ಎಂದು ಪ್ರಶ್ನಿಸುವ ಕನಕದಾಸರು ಕುಲಾಚಾರಣೆಯ ವ್ಯರ್ಥಪೊಗರಿನ ಅಜ್ಞಾನಿ ಮಾನವರುಗಳಿಗರ ಎಸೆವ ತೀಕ್ಷ್ಣ ಪ್ರಶ್ನೆಗಳ ಬಾಣಗಳು : ಕಮಲವು ಕೆಸರಿನಲ್ಲಿಯೇ ಹುಟ್ಟುತ್ತದೆ.ಕೆಸರಿನಲ್ಲಿ ಹುಟ್ಟಿದ ಕಮಲವನ್ನು ವಿಷ್ಣುವಿನ ವಿಗ್ರಹಕ್ಕೆ ಅರ್ಪಿಸುವುದಿಲ್ಲವೆ? ದೇವರು ಕಮಲ ಕೆಸರಿನಲ್ಲಿ ಹುಟ್ಟಿದೆ ಎಂದು ತಾವರೆಯಲ್ಲಿ ಕಳಂಕವನ್ನರಸಿದನೆ? ಇಲ್ಲ.ಹಾಲು ಹಸುವಿನ ಮಾಂಸದಲ್ಲಿ ಉತ್ಪತ್ತಿಯಾಗುತ್ತಿದೆ.ಆಕಳ ಮಾಂಸದಿಂದ ಹುಟ್ಟಿದ ಹಾಲನ್ನು ಬ್ರಾಹ್ಮಣರು ಉಣ್ಣುವುದಿಲ್ಲವೆ? ಉಣ್ಣುತ್ತಾರೆ.ಸುವಾಸನೆಭರಿತ ಕಸ್ತೂರಿಯು ಕಸ್ತೂರಿಮೃಗದ ಮೈಯಲ್ಲಿ ಹುಟ್ಟುತ್ತದೆ.ಅದನ್ನು ಬ್ರಾಹ್ಮಣರು ಸುಗಂಧದ್ರವ್ಯವನ್ನಾಗಿ ಬಳಸುತ್ತಾರೆ.ತಾತ್ತ್ವಕ ದೃಷ್ಟಿಯಿಂದ ಆರೈದು ನೋಡಲು ವಿಷ್ಣುವು ಯಾವ ಕುಲಕ್ಕೆ ಸೇರಿದವನು? ಪರ್ವತರಾಜನ ಮಗಳಾದ ಪಾರ್ವತಿಯನ್ನು ವರಿಸಿದ ಶಿವನಿಗೆ ಯಾವಕುಲವಿದೆ? ಆತ್ಮಕ್ಕೆ ಯಾವ ಕುಲವಿದೆ?ಜೀವನಿಗೆ ಕುಲವೆಲ್ಲಿಯದು? ಜ್ಞಾನೇಂದ್ರಿಯಗಳಿಗೆ ಕುಲದ ಸೋಂಕು ಇದೆಯೆ?ಎಲ್ಲರ ಅಂತರಾತ್ಮನಾದ ಆದಿಕೇಶವನಾಮದ ವಿಷ್ಣುವಿಗೆ ಯಾವಕುಲವಿದೆ?ಹರಿಯು ಒಲಿದ ಭಕ್ತರಲ್ಲಿ ನರರು ಕುಲವನರಸಿದರೆ ಫಲವೇನು?

ಕನಕದಾಸರು ಜಾತಿ ವ್ಯವಸ್ಥೆಯು ಮನುಷ್ಯ ನಿರ್ಮಿತವೇ ಹೊರತು ಅದು ಪರಮಾತ್ಮನ ಸೃಷ್ಟಿಯಲ್ಲ; ಪರಮಾತ್ಮನ ಮನುಷ್ಯರು ಹುಟ್ಟಿಸಿಕೊಂಡ ಜಾತಿಭೇದಗಳ ಕೃತ್ರಿಮತೆಗೆ ಒಳಗಾಗನು.ಪರಿಶುದ್ಧಾತ್ಮರನ್ನು,ಅಂತಃಕರಣ ಶುದ್ದಿಯುಳ್ಳವರನ್ನು ಒಲಿದು ಒಪ್ಪುವ ಪರಮಾತ್ಮನು ಮನುಷ್ಯರ ಕುಲ ಯಾವುದೆಂದು ನೋಡುವುದಿಲ್ಲ.ವಿಷ್ಣುವಿಗೆ ಕುಲವಿದೆಯೆ? ಶಿವನು‌ಕುಲದ ಮಿತಿಗೆ ಸಿಲುಕುವನೆ ಎಂದು ಪ್ರಶ್ನಿಸುವ ಕನಕದಾಸರು ಹುಟ್ಟು ಸಾವಿಲ್ಲದ ಆತ್ಮನಿಗೆ ಕುಲವೆಲ್ಲಿಯದು? ಜೀವ ಹೋದೊಡನೆ ಎಲ್ಲರೂ ಶವವೇ ಆಗುತ್ತಾರೆ.ಬ್ರಾಹ್ಮಣರ ಜೀವವೂ ಹೋಗುತ್ತದೆ,ಅಂತ್ಯಜರ ಜೀವವೂ ಹೋಗುತ್ತದೆ.ಶ್ರೇಷ್ಠತೆಯನ್ನು ಬೀಗುವ ಬ್ರಾಹ್ಮಣರೇನು ಸಾಯದೆ ಚಿರಂಜೀವಿಗಳಾಗಿ ಬದುಕುವುದಿಲ್ಲ; ಅಸ್ಪೃಶ್ಯರೆಂದು ತಿರಸ್ಕಾರಕ್ಕೆ ಒಳಗಾದ ಕಾರಣಕ್ಕೆ ಪ್ರಕೃತಿದತ್ತ ಉಸಿರಾಡುವ ಜೀವಿಸುವ ಹಕ್ಕನ್ನು ದಲಿತರು ಕಳೆದುಕೊಳ್ಳುವುದಿಲ್ಲ.ಉಸಿರಿರುವವರೆಗೆ ಬದುಕುವ ಮನುಷ್ಯರು ತಮ್ಮ ಜೀವದಕುಲ ಯಾವುದು ಎಂದು ಆಲೋಚಿಸಿ,ನಿರ್ಧರಿಸಿದ್ದಾರೆಯೆ? ಪರಮಾತ್ಮನು ಎಲ್ಲರ ಹೃದಯಗಳಲ್ಲಿ ಅಂತರಾತ್ಮನಾಗಿ ನೆಲೆ ನಿಂತಿಹನು. ಸರ್ವಾತ್ಮರಂತರಾತ್ಮನಾದ ಆ ಪರಮಾತ್ಮನಿಗೆ ಕುಲವಿದೆಯೆ? ಬ್ರಾಹ್ಮಣರ ದೇಹದಲ್ಲಿರುವ ಪರಮಾತ್ಮನು ಶೂದ್ರರು,ದಲಿತರ ದೇಹದಲ್ಲಿಯೂ ಇದ್ದಾನಲ್ಲ!ಪರಮಾತ್ಮನು‌ ಒಲಿದ ಉದ್ಧರಿಸಿದ ಪುಣ್ಯಪುರುಷರಿಗೆ ಕುಲ ಇರುವುದುಂಟೆ ಎಂದು ಪ್ರಶ್ನಿಸುವ ಕನಕದಾಸರು ಪರಮಾತ್ಮನ ಒಲುಮೆಯನ್ನು ಸಂಪಾದಿಸುವುದೇ ಜೀವನದ ಸಾರ್ಥಕತೆಯಲ್ಲದೆ ಕುಲದ ಹಿರಿಮೆಯನ್ನು ಎತ್ತಿಹಿಡಿಯುವುದರಿಂದ ಪ್ರಯೋಜನವೇನೂ ಇಲ್ಲ ಎನ್ನುತ್ತಾರೆ.

ಕುಲದ ಹುಸಿಪೊಗರನ್ನು ಮೈಗಂಟಿಸಿಕೊಂಡ ಜನರು ತಾವು ಶ್ರೇಷ್ಠರೆಂದು ಹುಸಿ ಪ್ರತಿಷ್ಠೆ ಪ್ರದರ್ಶಿಸುತ್ತಾರೆ.ನನ್ನ ಕುಲ ಶ್ರೇಷ್ಠ,ನಿನ್ನ ಕುಲ ಕನಿಷ್ಠ ಎಂದು ಪರಸ್ಪರ ದೂಷಿಸುತ್ತ,ದೋಷಾರೋಪ ಮಾಡುತ್ತ ಮನುಷ್ಯಪಶುಗಳಾಗಿ ಬಾಳುತ್ತಾರೆ.ಕುಲದ ಹಿರಿಮೆಗೆ ಯಾವ ಆಧಾರವಿದೆ? ಮನುಷ್ಯರಲ್ಲಿ ಕೆಲವರು ಶ್ರೇಷ್ಠರು ಮತ್ತು ಕೆಲವರು ಕನಿಷ್ಟರು ಎಂದು ಪರಮಾತ್ಮನೇನು ನಿಯತಿ ನಿಯಮವನ್ನು ರಚಿಸಿದ್ದಾನೆಯೆ ಎಂದು ಪ್ರಶ್ನಿಸುವ ಕನಕದಾಸರು ತಮ್ಮ ಮತ್ತೊಂದು ಕೀರ್ತನೆಯಲ್ಲಿ ಕುಲದ ಡಂಬವನ್ನು ಖಂಡಿಸಿದ್ದಾರೆ ;

ಕುಲಕುಲವೆಂದು ಹೊಡೆದಾಡುವಿರಿ.ನಿಮ್ಮ
ಕುಲದ ನೆಲೆಯನೇನಾದರು ಬಲ್ಲಿರಾ?
ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೇನು ಕಿರಿದೇನು ?
ನೆಟ್ಟನೆ ಸರ್ವಜ್ಞನ ನೆನೆ ಕಂಡ್ಯ ಮನುಜ (೧)
ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರು ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯನರಿತು ನೀ ನೆನೆ ಕಂಡ್ಯ ಮನುಜ (೨)
ಹರಿಯೆ ಸರ್ವೋತ್ತಮ ಹರಿಯೆ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿ ಕಾಗಿನೆಲೆಯಾದಿಕೇಶವರಾಯನ
ಚರಣ ಕಮಲವ ಕೀರ್ತಿಸುವವನೆ ಕುಲಜ (೩)

ಈ ಕೀರ್ತನೆಯಲ್ಲಿಯೂ ಸಹ ಕನಕದಾಸರು ಪರಮಾತ್ಮನ ಒಲುಮೆಗೆ ಪಾತ್ರರಾದವರೆ ಹಿರಿಯರು,ಅವರೇ ಸತ್ಕುಲರಲ್ಲದೆ ಮನುಷ್ಯರು ಸೃಷ್ಟಿಸಿದ ಕುಲದಿಂದ ಹಿರಿಮೆಯಿಲ್ಲ ಎನ್ನುತ್ತಾರೆ.ಮನುಷ್ಯರಲ್ಲಿ ಕೆಲವರು ತಾವು ಶ್ರೇಷ್ಠ ಕುಲದವರೆಂದು ಬೀಗುತ್ತ ಇತರ ಕುಲದವರನ್ನು ಕೀಳಾಗಿ ಕಾಣುತ್ತಾರೆ.ಇದರಿಂದ ಸಂಘರ್ಷವೇರ್ಪಟ್ಟು ತಿಳಿಗೊಳದಂತಿರಬೇಕಿದ್ದ ಸಾಮಾಜಿಕ ವ್ಯವಸ್ಥೆ ಕದಡುತ್ತದೆ,ಕೆಸರಾಗುತ್ತದೆ.ಕುಲಕುಲವೆಂದು ಪ್ರತಿಷ್ಠೆ ಮೆರೆಯುವವರು ತಮ್ಮ ಕುಲಪ್ರತಿಷ್ಠೆಗೆ ಪರಮಾತ್ಮನ ಸೃಷ್ಟಿಯಲ್ಲಿ ಏನಾದರೂ ಅರ್ಥವುಂಟೆಂದು ಸಾಧಿಸಿ ತೋರುವರೆ? ಎಂಬತ್ನಾಲ್ಕು ಲಕ್ಷಜೀವರಾಶಿಗಳಲ್ಲಿ ಮನುಷ್ಯಜನ್ಮಪೂರ್ವದಲ್ಲಿ ಎಲ್ಲ ಜೀವಿಗಳ ಯೋನಿಗಳಲ್ಲಿ ಹುಟ್ಟಿದ್ದಾನೆ ಮನುಷ್ಯ.ಅಖಂಡವಾದ ಜೀವನದಲ್ಲಿ ಒಂದೊಂದು ಜೀವಜನ್ಮವನ್ನು ಒಂದೊಂದು ನಿರ್ದಿಷ್ಟಭೂಭಾಗದಲ್ಲಿ ಸವೆಸಿದ್ದಾನೆ.ಆದಿಮಾನವನಿಂದ ಹಿಡಿದು ಭೂಸುರರೆಂದು ಸ್ವಯಂಘೋಷಿಸಿಕೊಂಡ ಹಿರಿಮೆಯ ಬ್ರಾಹ್ಮಣ ಜನ್ಮದವರೆಗೆ ನರರು ಅಸಂಖ್ಯಾತ ಜನ್ಮಗಳನ್ನು ಪಡೆದಿದ್ದಾರೆ.ಆಯಾ ಜನ್ಮಕ್ಕನುಗುಣವಾದ ಆಹಾರಪದ್ಧತಿಯನ್ನಳವಡಿಸಿಕೊಂಡು ಭೂಮಿಯ ಮೇಲೆ ಬೆಳೆಯುವ ಸಸ್ಯಹಾರ,ಮಾಂಸಹಾರವಾದಿ ಎಲ್ಲ ಬಗೆಯ ಆಹಾರವನ್ನು ಸೇವಿಸಿದ್ದಾರೆ.ಹೀಗಿರುವಾಗ ನನ್ನದು ಶ್ರೇಷ್ಠ ಜಾತಿ,ನಿನ್ನದು ಕೀಳುಜಾತಿ ಎನ್ನಲು ಏನಾದರೂ ಆಧಾರವಿದೆಯೆ? ಭೂಮಿಯ ಮೇಲೆ ಮನುಷ್ಯರು ಸೇರಿದಂತೆ ಎಲ್ಲ ಜೀವಿಗಳ ಬದುಕಿಗೆ ಅನಿವಾರ್ಯವಾದದ್ದು ಜಲ. ಕುಡಿಯುವ,ಬಳಸುವ ಈ ನೀರಿಗೆ ಯಾವ ಕುಲವಿದೆ? ಬ್ರಾಹ್ಮಣರು ಕುಡಿಯುವಂತೆ ಶೂದ್ರರೂ ನೀರನ್ನು ಕುಡಿಯುತ್ತಾರೆ.ಬ್ರಾಹ್ಮಣರ ಮೈಯನ್ನು ತೊಳೆಯುವ ನದಿಯು ದಲಿತರ ಮೈಯ ಕೊಳೆಯನ್ನು ಕಳೆಯುತ್ತದೆ.ನದಿಯ ನೀರು ಬ್ರಾಹ್ಮಣರು ಶ್ರೇಷ್ಠರು,ದಲಿತರು ಕನಿಷ್ಟರೆನ್ನುವ ಭೇದಭಾವವನ್ನು ತೋರ್ಪಡಿಸದೆ ತನ್ನಲ್ಲಿ ಮುಳುಗಿದ ಎಲ್ಲರ ಮೈಗಳನ್ನು ತೊಳೆಯುತ್ತದೆ.ನೀರಮೇಲಿನ ಗುರುಳೆಯಂತೆ ಕ್ಷಣಿಕವಾದ ಜೀವನವಿದು. ನೀರ ಮೇಲಿನ ಗುರುಳೆ ಯಾವ ಕ್ಷಣದಲ್ಲಾದರೂ ಕರಗಿ ನೀರಾಗಬಹುದು.ಹಾಗೆಯೇ ಕ್ಷಣಿಕ ಜೀವನ ಯಾವಾಗ ಕೊನೆಗಾಣುವುದೊ? ಇದನರಿಯದೆ ವ್ಯರ್ಥ ಕುಲದ ಹಿರಿಮೆಗಾಗಿ ಬಡಿದಾಡುವುದೇಕೆ ? ಪರಮಾತ್ಮನನ್ನು ನಂಬಿ,ಪರಮಾತ್ಮನ ಕರುಣೆಯನ್ನು ಪಡೆಯುವುದೇ ಜೀವನದ ಸಾರ್ಥಕತೆ ಎನ್ನುವ ಕನಕದಾಸರು ಪರಮಾತ್ಮನ ಪಾದಕಮಲದ ಸ್ಮರಣೆಯಲ್ಲಿರುವವನೇ ಶ್ರೇಷ್ಠಕುಲದವನು ಎಂದು ಸಾರಿದ್ದಾರೆ.ಮನುಷ್ಯ ಜೀವನಕ್ಕೆ ಧಾರ್ಮಿಕ ಆಚರಣೆ,ಆಧ್ಯಾತ್ಮಿಕ ಸಿದ್ಧಿಯಿಂದ ಶ್ರೇಷ್ಠತೆ ಪ್ರಾಪ್ತಿಯಾಗುವುದೇ ಹೊರತು ಜಾತಿ,ಮತ,ವ್ರತ- ಪಥಗಳ ಆಡಂಬರ,ಗೀಳಿನಿಂದ ಅಲ್ಲ.

‌ಮನುಷ್ಯಮತಿಯಮಿತಿಗಳೆಲ್ಲವ ಮೀರಿ ಬೆಲೆದು ಅತೀತತತ್ತ್ವವನ್ನಳವಡಿಸಿಕೊಂಡು ಪರಮಾತ್ಮನ ವಿಭೂತಿಗಳಾಗಿದ್ದರೂ ಕನಕದಾಸರನ್ನು ಮೇಲ್ವರ್ಗದವರು ನಿನ್ನದು ಯಾವ ಜಾತಿ? ಯಾತರವನು ನೀನು ಎಂದು ಕಟುಕಿ ನುಡಿಯುವುದನ್ನು ನಿಲ್ಲಿಸಲಿಲ್ಲ.ಜಾತಿಮದಪೀಡಿತ ಮರುಳರಿಗೆ ಕನಕದಾಸರು ‘ಯಾತರವನೆಂದುಸುರಲಿ,ಜಗನ್ನಾಥ ಮಾಡಿದ ಒಂದು ನರರೂಪವಯ್ಯ’ ಎಂದು ಉತ್ತರಿಸುತ್ತಾರೆ.ಪರಮಾತ್ಮನು ಹುಟ್ಟಿಸಿದ ಒಂದು ನರರೂಪದ ಮನುಷ್ಯನಲ್ಲದೆ ನನಗೆ ಅಂಟಿಸಿಕೊಂಡ ಕುಲಗೋತ್ರಗಳ ಹಂಗಿಲ್ಲ ಎನ್ನುವ ಕನಕದಾಸರ ತತ್ತ್ವಾರ್ಥ ಅಂದಿನ ಜಾತಿ ಜಡರಿಗೂ ಹೊಳೆಯಲಿಲ್ಲ,ಇಂದಿನ ಮತಿಮೂಢರಿಗೂ ತಿಳಿಯಲಿಲ್ಲ.ಕನಕದಾಸರು ಮೇಲ್ಜಾತಿಯವರು ಕೀಳು ಎಂದು ಭಾವಿಸಿದ್ದ ಕುರುಬರ ಕುಲದಲ್ಲಿ ಹುಟ್ಟಿದ್ದರಿಂದ ಬಹಳ ಹಿಂಸೆ,ಯಾತನೆ,ಅಪಮಾನವನ್ನು ಅನುಭವಿಸಿರಬೇಕು.ಅವರ ಕೀರ್ತನೆ,ಕಾವ್ಯಕೃತಿಗಳಲ್ಲಿ ಜಾತಿಯ ಖಂಡನೆ ಒಂದು ಸಾಮಾನ್ಯ ಲಕ್ಷಣ ಎನ್ನುವಂತೆ ಕಂಡುಬರುತ್ತದೆ.ಕುರುಬರಾಗಿದ್ದ ಕನಕದಾಸರನ್ನೇ ಕೀಳುಕುಲದವನು ಎಂದು ಬಗೆದಿದ್ದ ಬ್ರಾಹ್ಮಣರು ದಲಿತರನ್ನು ಬಳಿಬಿಟ್ಟುಕೊಳ್ಳುವರೆ? ಹೊಲೆಯರು ,ಮುಟ್ಟಿಸಿಕೊಳ್ಳಬಾರದವರು ಎಂದು ಅವರನ್ನು ಊರಹೊರಗಿಟ್ಟ ಜನರು ಅಪ್ಪಿತಪ್ಪಿ ದಲಿತರೇನಾದರು ಊರ ಒಳಗೆ ಬಂದಿದ್ದರೆ ಹಂದಿ ನಾಯಿಗಳನ್ನು ಅಟ್ಟಾಡಿಸಿ ಹೊಡೆಯುವಂತೆ ಅವರನ್ನು ಹೊಡೆದು ಬಡಿದು ಹೊರಗೆ ಅಟ್ಟುತ್ತಿದ್ದುದು ಅಂದಿನ ಸಾಮಾಜಿಕ ವಿಪರೀತ ಸ್ಥಿತಿಯಾಗಿತ್ತು.ಕನಕದಾಸರು ದಲಿತರನ್ನು ಹೊಲೆಯರೆನ್ನುವ ಅಜ್ಞಾನಿಗಳ ವಿಪರೀತದಾಚರಣೆಯನ್ನು ‘ ಹರಿಭಕ್ತಿಸಾರ’ದಲ್ಲಿ ವಿಡಂಬಿಸುವುದು ;

ತೊಲಗುವರು ಕಡೆಕಡೆಗೆ ತಾ ಹೊಲೆ
ಹೊಲೆಯೆನುತ ಕಳವಳಿಸಿ ಮೂತ್ರದ
ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು
ಜಲದೊಳಗೆ ಮುಳುಗಿದರೆ ತೊಲಗದು
ಹೊಲಗೆಲಸವೀ ದೇಹದೊಳು ನೀ
ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ.

ಹೊಲೆಯರು ಹೊಲೆಯರು ಎಂದು ಮೂದಲಿಸಿ ನುಡಿಯುವವರು ಕೊನೆಗೆ ತಾವು ಸಾಯದೆ ಬದುಕುಳಿಯುವರೆ? ಮೂತ್ರದ್ವಾರವಾದ ತಾಯಿಯ ಯೋನಿಯಿಂದ ಹೊರಬಂದ ತಾವೂ ಹೊಲೆಯರೆಂದರಿಯದೆ ಊರ ಹೊರಗಿನ ದಲಿತರನ್ನು ಹೊಲೆಯರು ಎಂದು ಟೀಕಿಸುವ ಜನರು ಮತಿಮೂಢರಲ್ಲವೆ ?ನೀರಿನಲ್ಲಿ ಮುಳುಮುಳುಗಿ ಎದ್ದರೆ ಹೊಲಸುದೇಹ ಶುದ್ಧಿಯಾಗುವುದೆ? ದಲಿತ ,ಬ್ರಾಹ್ಮಣ ಎಂದು ಭೇದವೆಣಿಸದೆ ಪರಮಾತ್ಮನು ಎಲ್ಲರ ಒಡಲುಗಳಲ್ಲಿ ಇರಲು ಮನುಷ್ಯರ ಶುಷ್ಕ ಆಡಂಬರ,ಹುಸಿಪ್ರತಿಷ್ಠೆಗೆ ಅರ್ಥವೇನು? ಪರಮಾತ್ಮನು ಕ್ಷೇತ್ರಜ್ಞನಾಗಿ ಎಲ್ಲರ ದೇಹಕ್ಷೇತ್ರಗಳಲ್ಲಿ ವಾಸಿಸುತಿರ್ಪನು ಎನ್ನುವ ಕನಕದಾಸರ ಉದಾತ್ತ ಚಿಂತನೆ ಅವರು ಏರಿದ ಎತ್ತರದ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯ ಕುರುಹು.

ಬ್ರಾಹ್ಮಣರಲ್ಲಿ ರೂಢಿಯಲ್ಲಿದ್ದ ಸತ್ತವರ ಸದ್ಗತಿಯ ಪಿಂಡಪ್ರದಾನ ಕ್ರಿಯೆಯ ಡಾಂಬಿಕತೆಯನ್ನು ಖಂಡಿಸದೆ ಬಿಡಲಿಲ್ಲ ಕನಕದಾಸರು ;

ಆವ ಕರ್ಮವೊ ಇದು ಆವ ಧರ್ಮವೊ
ಆವ ಕರ್ಮವೆಂದರಿಯೆ ಹಾರುವರಿವರು ಬಲ್ಲರೆ
ಸತ್ತವನು ಎತ್ತ ಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದೆ
ನುತ್ತ ಪಿಂಡವಿಕ್ಕುತ್ತೀರಿ
ಎಳ್ಳುದರ್ಭೆ ಕೈಲಿ ಪಿಡಿದು
ಪಿತರ ತೃಪ್ತಿ ಪಡಿಸುತ್ತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು

ಎನ್ನುವ ಈ ಕೀರ್ತನೆಯಲ್ಲಿ ಕನಕದಾಸರ ವೈಚಾರಿಕತೆಯು ತನ್ನ ಶಿಖರಾರೋಹಣಗೈದಿದೆ.ಬ್ರಾಹ್ಮಣರ ಅರ್ಥಹೀನ ಪಿಂಡಪ್ರದಾನ,ತರ್ಪಣಕ್ರಿಯೆಯ ಮೂಲಕ ಪಿತೃತೃಪ್ತಿ ಎನ್ನುವ ಅತಿರೇಕಗಳು ಮೌಢ್ಯವಲ್ಲದೆ ಅರ್ಥಪೂರ್ಣ ಆಚರಣೆಯಲ್ಲ ಎನ್ನುತ್ತಾರೆ ಕನಕದಾಸರು.

ಸತ್ತವರ ಹೆಸರಿನಲ್ಲಿ ಪಿಂಡವಿಕ್ಕುವ ಕ್ರಿಯೆಯು ಧರ್ಮದಾಚರಣೆಯೆ? ಅಥವಾ ಧರ್ಮಜ್ಞಾನವಿಲ್ಲದ ಅಜ್ಞಾನಿಗಳ ಪಾಪಕರ್ಮದ ಆಚರಣೆಯೆ? ನನಗರ್ಥವಾಗುತ್ತಿಲ್ಲ ಈ ವ್ಯರ್ಥ ಆಚರಣೆ ಎಂದು ವ್ಯಂಗಿಸುವ ಕನಕದಾಸರು ಪಿಂಡವನ್ನಿಕ್ಕುವುದು ಧಾರ್ಮಿಕ ಕ್ರಿಯೆ ಎನ್ನುವ ಭ್ರಮೆಗೊಳಗಾಗಿರುವ ಬ್ರಾಹ್ಮಣರೆ ಇದಕ್ಕೇನಾದರೂ ಆಧ್ಯಾತ್ಮಿಕ ಅರ್ಥ,ಮೌಲ್ಯ ಇದೆಯೆ ಎಂದು ಪ್ರಶ್ನಿಸುತ್ತಾರೆ.ಸತ್ತವನಿಗಾಗಿ ಪಿಂಡ ಇಕ್ಕುತ್ತೀರಲ್ಲ.ಸತ್ತವನು ನೀವಿಕ್ಕಿದ ಪಿಂಡ ತಿನ್ನಲು ಬದುಕಿರುತ್ತಾನೆಯೆ? ಸತ್ತವನು ಎಲ್ಲಿಗೆ ಹೋದ ? ನೀವೇನೋ ಪಿತೃಲೋಕ ಸೇರಿದ ಎಂದು ಭ್ರಮಿಸಿದ್ದೀರಿ.ಆದರೆ ಸತ್ತಬ್ರಾಹ್ಮಣನು‌ ಪಿತೃಲೋಕವನ್ನಾಗಲಿ,ಸತ್ಯಲೋಕವನ್ನಾಗಲಿ ಇಲ್ಲವೆ ವೈಕುಂಠವನ್ನಾಗಲಿ ಸೇರದೆ ತಾನು ಗೈದ ಕರ್ಮಾನುಸಾರ ಮರ್ತ್ಯಲೋಕದ ಯಾವುದೋ ಜೀವಿಯಾಗಿ ಇಲ್ಲವೆ ಮನುಷ್ಯನಾಗಿ ಮತ್ತೆ ಜನ್ಮವೆತ್ತಿದ್ದಾನೆ.ಕರ್ಮಾನುಸಾರ ಮರುಜನ್ಮಪಡೆದ ಮೃತಬ್ರಾಹ್ಮಣನು ಅವನ ಸಂಬಂಧಿಕರು ಅರ್ಪಿಸುವ ಪಿಂಡವನ್ನು ಉಣ್ಣಲಾರ.
ಪರಲೋಕದಲ್ಲಿರುವ ಪಿತೃಗಳ ತೃಪ್ತಿಗೆಂದು ಬ್ರಾಹ್ಮಣರು ಗೈವ ಪಿತೃತರ್ಪಣ ಕ್ರಿಯೆಯೂ ವ್ಯರ್ಥ ಆಚರಣೆ ಎನ್ನುವ ಕನಕದಾಸರು ಎಳ್ಳು ಮತ್ತು ಹುಲ್ಲನ್ನು ಹಿಡಿದು ಆಚಮನಾದಿ ಕ್ರಿಯೆಗಳ ಮಂತ್ರಗಳನ್ನು‌ ಪಠಿಸುತ್ತ ಎಳ್ಳು ಹುಲ್ಲುಗಳನ್ನು ನದಿಯಲ್ಲಿ ಹರಿಯಬಿಟ್ಟು ಪಿತೃಗಳು ತೃಪ್ತಿಗೊಂಡರು ಎಂದು ಭ್ರಮಿಸುತ್ತಾರೆ.ನೀರಿಗೆ ಹರಿಯಬಿಟ್ಟ ಎಳ್ಳು,ಹುಲ್ಲನ್ನು ಪಿತೃಗಳು ಸೇವಿಸಿದರೇನು ಎಂದು ಪ್ರಶ್ನಿಸುವ ಕನಕದಾಸರು ಮೀನುಗಳು ಎಳ್ಳನ್ನು ತಿಂದವು,ಹುಲ್ಲು ನದಿಯನೀರಲ್ಲಿ ಹರಿದು ಹೋಯಿತು ಎಂದು ಪಿತೃತೃಪ್ತಿ ಎನ್ನುವ ತರ್ಪಣಕ್ರಿಯೆಯು ಅರ್ಥವಿಲ್ಲದ ವ್ಯರ್ಥ ಆಚರಣೆ ಎಂದು‌ ಕೆಡೆನುಡಿದಿದ್ದಾರೆ.ಮುಂದುವರೆದು ಕನಕದಾಸರು ಹೇಳುವ ಮಾತು ಬಹು ಮೌಲಿಕವಾದುದು,ಜನತೆ ಮನದಿ ಮಥನ ಮಾಡುವ ಸಂದೇಶವದು ;

ಮಂತ್ರಾಕ್ಷತೆಯ ಕೈಗೆ ಕೊಟ್ಟು
ಮೋಕ್ಷವನು ಹಾರೈಸುವಿರಿ
ಮಂತ್ರವೆಲ್ಲೊ ಮರ್ತ್ಯವೆಲ್ಲೊ
ಹೇಳುವವನು ಅವಿವೇಕಿ
ಕೇಳುವವನು ಅಜ್ಞಾನಿ
ಎಂದು ಬ್ರಾಹ್ಮಣರು,ವೈದಿಕರು ಎಂದು ಕರೆಯಿಸಿಕೊಳ್ಳುವವರು ಮತ್ತು ಅವರ ಅನುಯಾಯಿಗಳು ಆಚರಿಸುತ್ತಿರುವ,ಅನುಸರಿಸುತ್ತಿರುವ ಆತ್ಮಜ್ಞಾನಕ್ಕೆ ಸಂಬಂಧವಿಲ್ಲದ ಅನರ್ಥಕಾರಿ ,ಶುಷ್ಕಕ್ರಿಯೆಯ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.ಭಕ್ತರುಗಳು ದೇವಸ್ಥಾನಗಳಿಗೆ ಹೋದಾಗ ಬ್ರಾಹ್ಮಣಪುರೋಹಿತರು ಮಂತ್ರಾಕ್ಷತೆಯನ್ನು ಹಾಕಿ ಮೋಕ್ಷವಾಗಲಿ,ಕಲ್ಯಾಣವಾಗಲಿ ಎಂದು ಹಾರೈಸುತ್ತಾರೆ.ಪುರೋಹಿತರು ನೀಡುವ ಮಂತ್ರಾಕ್ಷತೆಯನ್ನು ಸ್ವೀಕರಿಸಿದ ಮಾತ್ರದಿಂದಲೆ ಭಕ್ತನು ಉದ್ಧಾರವಾಗುವಂತಿದ್ದರೆ,ಮೋಕ್ಷವನ್ನು ಪಡೆಯುವಂತಿದ್ದರೆ ಆಧ್ಯಾತ್ಮಿಕ ಸಾಧನೆ,ಧ್ಯಾನ ತಪಸ್ಸುಗಳ ಅಗತ್ಯವಾದರೂ ಏನು?ಬರಿ ಶ್ಲೋಕ ಪಠಿಸಿ ಹಾರೈಸಿದರೆ ಮರ್ತ್ಯದ ಭವ ಬಂಧನ ಹರಿಯುವುದಿಲ್ಲ.ಅದನ್ನರಿಯದೆ ಅಕ್ಷತೆ ಹಿಡಿದು ಮಂತ್ರಪಠಿಸುವ ಪುರೋಹಿತ,ಅರ್ಚಕನು ಅವಿವೇಕಿಯಾದರೆ ಅರ್ಚಕನನ್ನು ನಂಬಿ,ಅನುಸರಿಸುವವನು ಅಜ್ಞಾನಿ ಎಂದು ವಿಡಂಬಿಸುವ ಕನಕದಾಸರ ಮಾತಿನ ಹಿಂದೆ ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಯಿಂದ ಮಾತ್ರ ಮೋಕ್ಷವೇ ಹೊರತು ಅದು ಅವರಿವರು ಮಂತ್ರೋಚ್ಚಾರಣೆಗೈದು ಕರುಣಿಸುವ ದಿನಸಿಯಂಗಡಿಯ ಸರಕಲ್ಲ ಎನ್ನುವ ಸತ್ಯದರ್ಶನವಿದೆ.

ದೇವರು,ಧರ್ಮಗಳ ಹೆಸರಿನಲ್ಲಿ ಸಮಾಜದಲ್ಲಿ ಶುಷ್ಕ ಧಾರ್ಮಿಕ ವಿಧಿ ವಿಧಾನಗಳೇ ವಿಜೃಂಭಿಸುತ್ತಿವೆಯೇ ಹೊರತು ಆತ್ಮಕಲ್ಯಾಣಕಾರಕ ವಿಚಾರಗಳನ್ನು ಜನರನ್ನು ಮೈಗೂಡಿಸಿಕೊಳ್ಳುತ್ತಿಲ್ಲ.ಮುಗ್ಧಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಪುರೋಹಿತಶಾಹಿ,ಅರ್ಚಕವರ್ಗವು ತನ್ನ ಹೊಟ್ಟೆಹೊರೆದುಕೊಳ್ಳಲು ಹಲವು ಕಟ್ಟುಕಥೆ ಪುರಾಣ,ಕಟ್ಟಲೆಗಳನ್ನು ಸೃಷ್ಟಿಸುತ್ತದೆ.ಜನರು ಇಂತಹ ಅಧಾರ್ಮಿಕ ವಿಚಾರಗಳ ಹಿಂದಿನ ರಹಸ್ಯವನ್ನು ಭೇದಿಸಲರಿಯದೆ ‘ ಇವು ಸತ್ಸಪ್ರಂದಾಯಗಳು,ಇವುಗಳನ್ನು ಪಾಲಿಸಿದರೆ ಮಾತ್ರಸದ್ಗತಿ ‘ ಎನ್ನುವ ಭ್ರಮೆಗೊಳಗಾಗಿ ಮೌಢ್ಯಪೀಡಿತರಾಗುತ್ತಾರೆ.ತಮ್ಮ ‘ ಎಳ್ಳು ಕಾಳಿನಷ್ಟು ಭಕ್ತಿ ಎನ್ನೊಳಗಿಲ್ಲ’ ಎನ್ನುವ ಕೀರ್ತನೆಯಲ್ಲಿ ಕನಕದಾಸರು ಇಂತಹ ಆತ್ಮಘಾತುಕ ಸಂಗತಿ,ಆಚರಣೆಗಳನ್ನು ಸೊಗಸಾಗಿ ವಿಡಂಬಿಸಿದ್ದಾರೆ ;

ಗಾಣದೆತ್ತಿನಂತೆ ಕಣ್ಣು ಮುಚ್ಚಿ ಪ್ರದಕ್ಷಿಣೆಯ ಮಾಡಿ
ಕಾಣದೆ ತಿರುಗುವೆನೆರಡು ಕಣ್ಣಿದ್ದು ನಾನು
************************
ಗುಂಡು ಮುಳುಗನ ಹಕ್ಕಿಯಂತೆ ಕಂಡ ಕಂಡ ನೀರ ಮುಳುಗಿ
ಮಂಡೆಶೂಲೆ ಬಾಹೋದಲ್ಲದೆ ಗತಿಯ ಕಾಣೆನು
ಮಂಡೂಕನಂದದಲಿ ನೀರ ತಡಿಯಲಿ ಕುಳಿತುಕೊಂಡು
ಮುಂಡೆ ಮುಸುಕನಿಕ್ಕಿ ಮೂಗು ಹಿಡಿದು ಬಿಡುವ ಭ್ರಮಿತನಯ್ಯ

ತೀರ್ಥಕ್ಷೇತ್ರಗಳೆಂದು ವ್ಯರ್ಥ ಸುತ್ತಿ ಬಳಲುವ ಜನರ ನಡೆಯನ್ನು ಖಂಡಿಸಿದ್ದಾರೆ ಕನಕದಾಸರು ಈ ಕೀರ್ತನೆಯಲ್ಲಿ.ಎಳ್ಳಿನ ಗಾಣಕ್ಕೆ ಕಟ್ಟಿದ ಎತ್ತು ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನರಿಯದೆ ತನ್ನ ಕರ್ಮ ಎನ್ನುವಂತೆ ಕಣ್ಣುಮುಚ್ಚಿಕೊಂಡು ಸುತ್ತುತ್ತದೆ.ಹಾಗೆಯೇ ಕಣ್ಣಿದ್ದೂ ಕುರುಡರಾದ ಅಜ್ಞಾನಿ ಮನುಷ್ಯರು ಅವರಿವರ ಮಾತು,ಶಾಸ್ತ್ರಗಳನ್ನು ಕೇಳಿ ತೀರ್ಥ- ಕ್ಷೇತ್ರಗಳೆಂದು ವ್ಯರ್ಥ ಸುತ್ತುತ್ತಾರೆ.ತೀರ್ಥಕ್ಷೇತ್ರಗಳ ಸುತ್ತಾಟದಿಂದ ಹಣದ ವ್ಯರ್ಥಖರ್ಚು,ದೇಹಶ್ರಮವಲ್ಲದೆ ಯಾವ ಪ್ರಯೋಜನವೂ ಇಲ್ಲ.ಕ್ಷೇತ್ರಗಳ ಪರ್ಯಟನೆ ಕೈಗೊಂಡ ಭಕ್ತ ಮಹಾಶಯರುಗಳು ಆಯಾ ಕ್ಷೇತ್ರಗಳ ತೀರ್ಥವೆಂದು ಸಾರಲ್ಪಟ್ಟ ನದಿ,ಹಳ್ಳ,ಸರೋವರಗಳಲ್ಲಿ ಮುಳುಮುಳುಗಿ ಏಳುತ್ತಾರೆ.ಗುಂಡುಮುಳುಗನ ಹಕ್ಕಿ ಆ ನೀರು ಈ ನೀರು ಎಂದು ಹುಡುಕಿ ಹುಡುಕಿ ಮುಳುಗುವಂತೆ ಕಂಡ ಕಂಡ ನೀರಿನಲ್ಲಿ ತೀರ್ಥವೆಂದು ಮುಳುಗುವ ಭಕ್ತರಿಗೆ ನೀರು ಮುಳುಗಿದ ಫಲವಾಗಿ ತಲೆನೋವು ಉಂಟಾಗುವುದಲ್ಲದೆ ಮೋಕ್ಷವೇನು ಲಭಿಸದು.ಕಪ್ಪೆಯ ನೀರಿರುವ ನದಿ,ಬಾವಿ,ಸರೋವರದ ದಡದಿ ಹುಳು ಹುಪ್ಪಡಿಗಳನ್ನು ಹಿಡಿದು ತಿನ್ನಲು ಹೊಂಚುಹಾಕಿ ಮೌನಿಯ ಸೋಗುಹಾಕಿ ಕುಳಿತುಕೊಂಡಂತೆ ಜನರು ತಲೆಯಮೇಲೆ ವಸ್ತ್ರವನ್ನು ಹೊದ್ದು ನದಿಯ ತಟದಿ ಮೂಗು ಹಿಡಿದು ಉಸಿರೆಳೆದು ಬಿಡುತ್ತಿದ್ದಾರೆಯೇ ಹೊರತು ಯೋಗ ,ಪ್ರಾಣಯಾಮವನ್ನು ಆಚರಿಸುತ್ತಿಲ್ಲ.ಒಣ ಆಚರಣೆಗಳಿಂದ ಆತ್ಮಶುದ್ಧಿಯಾಗದು.ತೊಳೆಯಬೇಕಾದದ್ದು ಮೈಯನ್ನಲ್ಲ,ಮನಸ್ಸನ್ನು.ಮನಸ್ಸನ್ನು ತೊಳೆಯಲರಿಯದವರು ಎಷ್ಟು ತೀರ್ಥಗಳಲ್ಲಿ ಮಿಂದು ಫಲವೇನು ?
ತೀರ್ಥಯಾತ್ರೆ,ಉಪವಾಸಾದಿ ವ್ರತಗಳು ಅರ್ಥಹೀನ ಎನ್ನುವುದನ್ನು ಕನಕದಾಸರು
ನೂರೆಂಟು ತಿರುಪತಿ ಯಾತ್ರೆಯನು ನಾನೊಲ್ಲೆ
ವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆ
ಎಂದು ಹಾಡುವ ಮೂಲಕ ಮೌಢ್ಯಪೀಡಿತ ಸಮಾಜವನ್ನು ಬಡಿದೆಬ್ಬಿಸಿದ್ದಾರೆ.ವ್ರತ- ನಿಯಮಗಳ ಹೆಸರಿನಲ್ಲಿ ವ್ಯರ್ಥದೇಹದಂಡನೆಯಾಗುವುದಲ್ಲದೆ ಅದರಿಂದ ಸಂಪಾದಿಸುವುದೇನೂ ಇಲ್ಲ ಎನ್ನುವುದನ್ನು ಕನಕದಾಸರು ಒಂದು ಕೀರ್ತನೆಯಲ್ಲಿ ವ್ಯಂಗಿಸಿದ್ದು ;

ನೇಮವಿಲ್ಲದ ಹೋಮವೇತಕೆ
ರಾಮನಾಮವಿರದ ಮಂತ್ರವೇತಕೆ
ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆ
ಡಂಭಕದ ವೃತ್ತಿಯಲಿ ಇರಲೇಕೆ

ಹೋಮ‌ಮಾಡಿ ಉಪಯೋಗವಿಲ್ಲ,ಸತ್ತ್ವ ನಿಯಮ ನಿಷ್ಠೆಯ ಜೀವನ ನಡೆಸಬೇಕು.ದೇವರ ನಾಮವಿರದ ಮಂತ್ರಗಳನ್ನು ಜಪಿಸಿದರೆ ಫಲವುಂಟೆ? ಸ್ವಾರ್ಥ ಲಾಲಸೆಯನ್ನು ತೊರೆಯದೆ ತೀರ್ಥಗಳಲ್ಲಿ ಮುಳುಗಿದರೆ ಫಲವೇನು? ಸಂಸಾರದಲ್ಲಿ ಸಾರವಿಹುದೆಂದರಿಯದೆ ಹೆಂಡಿರು ಮಕ್ಕಳು ಬಂಧನವೆಂದು ಹೆಂಡತಿಯನ್ನು ತೊರೆದ ಮಾತ್ರಕ್ಕೆ ಇಂದ್ರಿಯನಿಗ್ರಹ ಮಾಡಿದಂತಾಯಿತೆ?ಇಂತಹ ಆಡಂಬರದ,ಡಾಂಭಿಕ ಜೀವನದಿಂದ ಬದುಕಿನ ಪರಮಾರ್ಥವಾದ ಪರಮಾತ್ಮನ ಅನುಗ್ರಹವನ್ನು ಪಡೆಯಲು ಸಾಧ್ಯವಿಲ್ಲ.

ಸಮಾಜವು ರೂಢಿಸಿಕೊಂಡ ಹಲವು ಅಂಧ ನಂಬಿಕೆ,ಆಚರಣೆಗಳಲ್ಲಿ ‘ ಅಪುತ್ರ್ಯಂ ಗತಿರ್ನಾಸ್ತಿ’ ಎನ್ನುವುದೊಂದು.ಮಕ್ಕಳಿಲ್ಲದವರಿಗೆ ಅದರಲ್ಲೂ ಗಂಡುಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲವಂತೆ! ಮಕ್ಕಳಾಗುವುದಕ್ಕೂ ಮೋಕ್ಷಕ್ಕು ಎಲ್ಲಿಯ ಸಂಬಂಧ? ಪರಮಾತ್ಮನ ಅನುಗ್ರಹ ಇಲ್ಲವೆ ಮೋಕ್ಷವನ್ನು ಸ್ವಂತ ಸಾಧನೆ,ಪರಿಶ್ರಮದಿಂದ ಪಡೆಯಬೇಕಲ್ಲದೆ ಅದನ್ನು ಹೆರವರು ಕೊಡಲಾರರು ಎನ್ನುವುದನ್ನು ಕನಕದಾಸರು ಸ್ಪಷ್ಟಪಡಿಸಿದ್ದಾರೆ ;

ಮಗನಿಂದ ಗತಿಯುಂಟೆ ಜಗದೊಳಗೆ?
ನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ?
ತ್ರಿಗುಣರಹಿತ ಪರಮಾತ್ಮನ ಧ್ಯಾನದಿ
ಹಗಲಿರಳು ನಿತ್ಯಾನಂದದಿಂದ
ತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆ
ಮಗನಿದ್ದರೇನು ಇಲ್ಲದಿದ್ದರೇನು ?
ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು
ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನು
ಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆ
ಹೆತ್ತರೇನು ಇನ್ನು ಹೆರದಿದ್ದರೇನಯ್ಯ?
ಸುತರಿಲ್ಲದವಗರ ಸದ್ಗತಿ ಇಲ್ಲವೆಂತೆಂಬ
ಕೃತಕಶಾಸ್ತ್ರವು ಲೌಕಿಕಭಾವಕೆ
ಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ
ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ?

ಈ ಕೀರ್ತನೆಯು ಕನಕದಾಸರ ಸಮಾಜಪರ ಕಾಳಜಿಯ ಉತ್ತಮ ಕೀರ್ತನೆಗಳಲ್ಲೊಂದು.ಗಂಡು ಮಕ್ಕಳಾಗದಿದ್ದರೆ ಮೋಕ್ಷವಿಲ್ಲ ಎನ್ನುವ ಹುಸಿಶಾಸ್ತ್ರವನ್ನು ಸೃಷ್ಟಿಸಿದ ಮಂದಿ ಗಂಡುಮಕ್ಕಳಿಲ್ಲದವರ ಆಸ್ತಿಯನ್ನು ಗುರುಗಳು,ಪುರೋಹಿತರು,ಮಠಗಳ ಹೆಸರಿನಲ್ಲಿ ಕೊಳ್ಳೆಹೊಡೆಯಲು ಹೂಡಿದ ಸಂಚೇ ಹೊರತು ಅದು ಸತ್ಯವಲ್ಲ ಎನ್ನುವುದನ್ನು ‘ ಕೃತಕಶಾಸ್ತ್ರ’ ಎಂದು ಕರೆದಿದ್ದಾರೆ ಕನಕದಾಸರು.ಭಕ್ತಿಯು ಸಹಜ ಆಚರಣೆಯಾಗಿದ್ದು ಭಕ್ತಿಯಿಂದ ಮುಕ್ತಿಯನ್ನು ಪಡೆಯಬಹುದು.ದೇಹಸಂಜಾತ ಮಗನಿರದಿದ್ದರೂ ಚಿಂತೆಯಲ್ಲ ಆತ್ಮಸಂಜಾತ ಗುಣಸಂಭೂತ ಮಗನಿರಬೇಕು ಎನ್ನುವ ಕನಕದಾಸರು ಸತ್ಯ,ಶಾಂತಿ,ಸದಾಚಾರ ಮತ್ತು ಸಮಚಿತ್ತಗಳೆಂಬ ನಾಲ್ಕು ಸದ್ಗುಣಗಳನ್ನೇ ನಾಲ್ವರು ಸತ್ಪುತ್ರರೆಂದು ತಿಳಿದು ಗುಣಸಂಪನ್ನರಾಗಬೇಕು ಎನ್ನುತ್ತಾರೆ.ಸದ್ಗುಣಗಳಿಂದ ಸದ್ಗತಿಯಲ್ಲದೆ ವಂಶಕಂಟಕನಾದ ಮಗನಿಂದ ಮೋಕ್ಷವಿಲ್ಲ.ಕೀರ್ತನೆಯ ಕೊನೆಯಲ್ಲಿ ಕನಕದಾಸರು ಬಹುಮಹತ್ವದ ಸಂದೇಶವನ್ನು ಸಾರಿದ್ದಾರೆ.ಮಗನಿಲ್ಲದಿದ್ದರೆ ಮೋಕ್ಷ ಇಲ್ಲ ಎನ್ನುವುದು ದುರುದ್ದೇಶಪೂರಿತ ಮನಸ್ಸುಗಳ ‘ ಕೃತಕಶಾಸ್ತ್ರವಲ್ಲದೆ ಅದಕ್ಕೆ ಪರಮಾತ್ಮನ ಒಪ್ಪಿಗೆಯಿಲ್ಲ.ಜಗದೀಶ್ವರನ ಜಪ ಪೂಜೆಯಲ್ಲಿ ತಲ್ಲೀನನಾದವರಿಗೆ ಮಗನಿದ್ದರೇನು ಇರದಿದ್ದರೇನು ಮೋಕ್ಷ ಲಭಿಸುತ್ತದೆ.ಪರಮಾತ್ಮನ ನಾಮ ಜಪದಿಂಪ ಅನಂತಪುಣ್ಯಫಲಪ್ರಾಪ್ತಿಯಾಗುತ್ತದೆ ಎಂದ ಬಳಿಕ ಅನವರತ ಭಗವನ್ನಾಮ ಸ್ಮರಣೆಯೊಳಿರುವ ಭಕ್ತನಿಗೆ ಮೋಕ್ಷ ಲಭಿಸದೆ?

ಪರಮಾತ್ಮನೊಬ್ಬನಿದ್ದಾನೆ ಜಗತ್ತಿನ ನಿಯಾಮಕನಾಗಿ.ನಿಯತಿಪತಿಯಾಗಿರುವ ಪರಮಾತ್ಮನನ್ನು ಭಜಿಸಿ,ಪೂಜಿಸಬೇಕಲ್ಲದೆ ಲೋಕದ ನಾಡಾಡಿ ದೈವಗಳನ್ನು ಪೂಜಿಸಿ ಫಲವಿಲ್ಲ ಎನ್ನುವುದನ್ನು ಕನಕದಾಸರು ‘ಕಣಿಯ ಹೇಳಬಂದೆ’ ಕೀರ್ತನೆಯಲ್ಲಿ ಹೃದಯಸ್ಪರ್ಶಿಯಾಗಿ ವಿವರಿಸಿದ್ದಾರೆ ;

ಕಣಿಯ ಹೇಳಬಂದೆ ನಾರಾಯಣನಲ್ಲದೆ ಇಲ್ಲವೆಂದು– ಮಿಕ್ಕ
ಬಣಗು ದೈವದ ಗೊಡವೆ ಬೇಡ ನರಕ ತಪ್ಪದು
***************************
ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು
ಸುತ್ತಣವರ ಮಾತಕೇಳಿ ಗುತ್ತಿಯ ಎಲ್ಲಮ್ಮಗೊಲಿದು
ಬತ್ತಲೆಯ ದೇವರೆದುರು ಬರುವುದು ನೋಡಿರೊ
ಮತ್ತೆ ಬೇವಿನುಡುಗೆಯ ಅರ್ತಿಯಿಂದುಟುಗೊಂಡು
ಬಾಳುತಿಪ್ಪ ಕೋಣ ಕುರಿಯ ಏಳ ಬೀಳ ಕೊರಳ ಕೊಯ್ದು
ಬೀಳಬೇಡಿ ನರಕಕೆಂದು ಹೇಳ ಬಂದೆನೊ
************************
ಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳುಕೊಡನ ಬರಿದು ಮಾಡುವಂಥ
ಪೊಳ್ಳುದೈವದ ಗೊಡವೆ ಬೇಡ ನರಕ ತಪ್ಪದು

ಕಂಡಕಂಡ ದೈವಗಳನ್ನು ದೇವರೆಂದು ಭಜಿಸಿ ಕೆಡುವ ಜನರ ಮೌಢ್ಯದ ಮೇಲೆ ಬೆಳಕು ಚೆಲ್ಲುವ ಕನಕದಾಸರ ಈ ಕೀರ್ತನೆಯಲ್ಲಿ ನಾಡಾಡಿ ದೈವಗಳ ಪೂಜೆ ಸಲ್ಲದು,ಏಕೇಶ್ವರನಾದ ಪರಮಾತ್ಮನನ್ನು ಪೂಜಿಸಬೇಕು ಎನ್ನುವ ಆಧ್ಯಾತ್ಮಿಕ ಸಂದೇಶವಡಗಿದೆ.ಹಾದಿ ಬೀದಿಯ ಕಲ್ಲು ಕಟ್ಟಿಗೆಗಳ ದೇವರುಗಳೆಲ್ಲ ದೇವರಲ್ಲ,ಪರಮಾತ್ಮರಲ್ಲ.ಅವು ” ಠಕ್ಕುದೈವಗಳು” ಅಂದರೆ ಮೋಸಮಾಡುವ ಮೋಸದ ದೈವಗಳು ಎನ್ನುತ್ತಾರೆ ಕನಕದಾಸರು.ಅವರು ಮಾಡುತ್ತಾರೆ,ಇವರು ಮಾಡುತ್ತಾರೆ ಎಂದು ನೆರೆಹೊರೆಯವರ ಮಾತುಕೇಳಿ ಗುತ್ತಿಯ ( ಚಂದ್ರಗುತ್ತಿ) ಎಲ್ಲಮ್ಮನನ್ನು ಆದರಿಸಿ,ಬೆತ್ತಲೆ ಸೇವೆಯನ್ನಾಚರಿಸಿ ಬೇವಿನ ಉಡುಗೆಯನ್ನುಟ್ಟು ನಡೆಯುವುದು ತರ್ಕಹೀನ ಆಚರಣೆ.ಎಲ್ಲಮ್ಮ ತೃಪ್ತಿಗೊಳ್ಳುವಳೆಂದು ಬಾಳಿ ಬದುಕುವಾಸೆ ಕಂಡಿದ್ದ ಕುರಿ ಕೋಣಗಳ ಕತ್ತನ್ನು ಕತ್ತರಿಸುವುದು ಪಾಪಕಾರ್ಯವಲ್ಲದೆ ಅದರಿಂದ ಪುಣ್ಯವು ದೊರಕದು.ಮಾಂಸವನುಂಡು ಕೊಡಕೊಡ ಹೆಂಡ,ಮದ್ಯವನು ಕುಡಿದು ತೇಗಿದರೆ ಮೋಕ್ಷವಹುದೆ ಎಂದು ಪ್ರಶ್ನಿಸುವ ಕನಕದಾಸರು ಇಂತಹ ಹುಸಿದೈವಗಳ ಸಹವಾಸಬೇಡ; ಜಗಕ್ಕೊಬ್ಬನೇ ಇರುವ ಪರಮಾತ್ಮನನ್ನು ಪೂಜಿಸಿ ಎನ್ನುವ ಸಾರ್ವಕಾಲಿಕ ಸದ್ಗತಿಯ ಸೂತ್ರವನ್ನು ಸಾರಿದ್ದಾರೆ ಈ ಕೀರ್ತನೆಯಲ್ಲಿ.

‌ದೇವರು- ಧರ್ಮಗಳ ಹೆಸರಿನಲ್ಲಿ ಸಂಕೀರ್ತನೆ,ಹರಿನಾಮ ಸ್ಮರಣೆ,ಗೋಷ್ಠಿಗಳೆಂದು ದೊಡ್ಡ ದೊಡ್ಡ ಉಪನ್ಯಾಸ,ಪ್ರವಚನಗಳನ್ನು ನೀಡುವ ಮಂದಿ ದೊಡ್ಡವರು ಆಗಿರುವುದಿಲ್ಲ.ಅಶನ ವಸನಗಳಾಸೆ ತೊರೆಯದಣ್ಣಗಳು ಆಡುವ ಬಣ್ಣದ ಮಾತಿನಲ್ಲಿ ಲವಲೇಶವೂ ಅರ್ಥವಿರುವುದಿಲ್ಲ.ತಮ್ಮ ಗೇಣುಹೊಟ್ಟೆಹೊರೆಯಲು ಮತ್ತು ಆರಡಿಯ ದೇಹಮುಚ್ಚಿಕೊಳ್ಳುವ ಬಟ್ಟೆಯ ಆಸೆಗಾಗಿ ಎಷ್ಟೆಲ್ಲ ಬಂಢತನವನ್ನಾಚರಿಸುತ್ತಿದ್ದಾರೆ ಎನ್ನುವುದನ್ನು ಕನಕದಾಸರು ತಮ್ಮ ಬಹುಪ್ರಸಿದ್ಧ ಕೀರ್ತನೆಗಳಲ್ಲೊಂದಾದ ‘ ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವ ಕೀರ್ತನೆಯಲ್ಲಿ ಮನದುಂಬುವಂತೆ ಹಾಡಿದ್ದಾರೆ ;

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ವೇದಶಾಸ್ತ್ರ ಪಂಚಾಂಗ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ (೧)
ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (೨)
ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ (೩)
ಕುಂಟೆ ತುದಿಗೆ ಕೊರಡುಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (೪)
ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ (೫)
ತಾಳದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡು
ಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ (೬)
ಹಳ್ಳದಲ್ಲಿ ಕುಳಿತುಕೊಂಡು ಕಲ್ಲುದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ (೭)
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚೆಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ (೮)

‌ಈ ಕೀರ್ತನೆಯಲ್ಲಿ ಕನಕದಾಸರು ಲೋಕಜೀವರುಗಳು ಒಡಲಬೇಗೆಯನ್ನು ತಣಿಸಲೆಂದು ಕೈಗೊಳ್ಳುವ ವೃತ್ತಿ‌ಪ್ರವೃತ್ತಿ,ಆಟ- ನಾಟಕ,ಕಸರತ್ತು- ಮಸಲತ್ತುಗಳ ಬಗ್ಗೆ ಮನೋಜ್ಞವಾಗಿ ಬಣ್ಣಿಸಿದ್ದಾರೆ.ಒಡಲ ತಾಪ ಸಂತಾಪವನ್ನು ಮೀರಿ ನಡೆದವರಿಲ್ಲ ಜಗದಿ ಎನ್ನುವ ಸಂದೇಶ ಈ ಕೀರ್ತನೆಯಲ್ಲಿದೆ.

ಸಮಾಜೋಪಯೋಗಿ ಕೆಲಸ ಕಾರ್ಯಗಳಿಂದ ಬದುಕು ಸಾರ್ಥಕವಾಗುವುದಲ್ಲದೆ ಸಮಾಜಘಾತುಕ ಸಂಗತಿಗಳಿಂದ ಪ್ರಯೋಜನವಿಲ್ಲ ಎನ್ನುವ ಕನಕದಾಸರು ದಾನಧರ್ಮಗಳನ್ನು ಆಚರಿಸಬೇಕೇ ಹೊರತು ಹೀನದೈವಗಳನ್ನು ಪೂಜಿಸಬಾರದು ಎಂದಿದ್ದಾರೆ.

ದಾನಧರ್ಮವ ಮಾಡಿ ಸುಖಿಯಾಗು ಮನವೆ
ಹೀನ ವೃತ್ತಿಯಲಿ ಕೆಡಬೇಡ ಮನವೆ
ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿ ಚೌಡಿಯ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದು
ತಂಬಿಟ್ಟಿನಾ ದೀಪ ಹೊರಲೇತಕೆ
ಕೊಂಬು ಹೋತು ಕುರಿ ಕೋಣಗಳನು ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೆ
**********************
ನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನು
ಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ
**************************
ಜ್ಞಾನವಿಲ್ಲದೆ ಹೀನದೈವವ ಭಜಿಸಿದರೆ
ಏನುಂಟು ನಿನಗಿನ್ನು ಎಲೆ ಹುಚ್ಚುಮನವೆ/

ಕನಕದಾಸರು ಈ ಕೀರ್ತನೆಯಲ್ಲಿ ಸಮಾಜದಲ್ಲಿ ಹಸಿದವರ ಹೊಟ್ಟೆಗೆ ಅನ್ನವನ್ನಿಕ್ಕುವುದು ಪುಣ್ಯಕಾರ್ಯವೇ ಹೊರತು ಪಶುಬಲಿ ಬಯಸುವ ಕ್ಷುದ್ರದೈವಗಳ ಪೂಜೆ ಕೂಡದು ಎನ್ನುವ ಸಂದೇಶ ಸಾರಿದ್ದಾರೆ‌.ಒಡಲುಳ್ಳ ಜೀವರುಗಳ ಹಸಿವಡಗಿಸುವ ಅನ್ನದಾನ,ವಸ್ತ್ರದಾನ ಕಾರ್ಯಗಳಿಂದ ಪುಣ್ಯಬರುವುದಲ್ಲದೆ ಗುಡಿಯೊಳಗಿನ ಅಡಗಿನಾಸೆಯ ತುಡುಗುದೈವಗಳ ಪೂಜೆಯು ನಿಷ್ಪ್ರಯೋಜಕ ಎನ್ನುವ ಸಮಾಜಕಟ್ಟಲು ಸ್ಫೂರ್ತಿಯಾಗುವ ಹಿರಿಯ ತತ್ತ್ವವನ್ನು ಉಪದೇಶಿಸಿದ್ದಾರೆ.

‌ ಜಾತಿಪ್ರತಿಷ್ಠೆ,ಮತಮೌಢ್ಯತುಂಬಿದ ಸಮಾಜವನ್ನು ತಿದ್ದಿತೀಡಿ ಸ್ವಸ್ಥಸಮಾಜವನ್ನು ಕಟ್ಟಬೇಕು ಎನ್ನುವ ಬಹುದೊಡ್ಡ ಹೊಣೆಯನ್ನು ಹೊತ್ತು ಸಮರ್ಥವಾಗಿ ನಿರ್ವಹಿಸಿದ ಸಂತ ಕನಕದಾಸರು ಬಸವಣ್ಣನವರಂತೆಯೇ ಸಮಸಮಾಜ ನಿರ್ಮಾಣದ ಕನಸುಣಿಯಾಗಿದ್ದರು.ಬಸವಣ್ಣನವರಂತೆಯೇ ಅಸ್ಪೃಶ್ಯರು,ದಲಿತರಲ್ಲಿ ಪರಮಾತ್ಮನನ್ನು ಕಂಡರು.ಬಸವಣ್ಣನವರು ತಮ್ಮನ್ನು ತಾವು ‘ಮಾದಾರ ಚೆನ್ನಯ್ಯನ ಮಗ ನಾನು’ ‘ ಡೋಹಾರ ಕಕ್ಕಯ್ಯನ ಮಗ ನಾನು’ ಎಂದು ಬಣ್ಣಿಸಿಕೊಂಡು ಕುಲಹೀನರಾದರೂ ಶಿವಭಕ್ತರೇ ಹಿರಿಯರು ಎಂದಂತೆ ಕನಕದಾಸರು ಹರಿನಾಮಸ್ಮರಿಸುವ ದಾಸರ ಮಗ ನಾನು ಎಂದಿದ್ದಾರೆ ;
ದಾಸ ದಾಸರ ಮನೆಯ ದಾಸಿಯರ ಮಗ ನಾನು
ಸಾಸಿರ ನಾಮದೊಡೆಯ ರಂಗಯ್ಯನ ಮನೆಯ
*********************
ಹಲವು ದಾಸರ ಮನೆಯ ಹೊಲೆಯ ದಾಸನು ನಾನು
ಕುಲವಿಲ್ಲದ ದಾಸ ಕುರುಬದಾಸ
ಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸ
ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ

ಹರಿಯ ನಾಮವಿರುವ ನಾಲಗೆ ಇರುವವರೆ ಎನಗೆ ಪೂಜ್ಯರಲ್ಲದೆ ಅಡ್ಡದಿಡ್ಡವನ್ನಾಡುವ ದೊಡ್ಡವರುಗಳು ಪೂಜ್ಯರಲ್ಲ ಎನ್ನುವ ಕನಕದಾಸರು ಪರಮಾತ್ಮನ ಸೇವೆ,ಪೂಜೆಯಲ್ಲಿರುವವರೆ ಪಾವನಾತ್ಮರು ಎನ್ನುವ ಸಂದೇಶವನ್ನು ಲೋಕಸಮಸ್ತರಿಗೆ ಬಿತ್ತರಿಸಿದ್ದಾರೆ.

ಸಮಾಜದ ಕೆಳಸಮುದಾಯದ ಕುರುಬಕುಲದಲ್ಲಿ ಹುಟ್ಟಿ ಹರಿಯ ಪರಮಾನುಗ್ರಹವನ್ನುಂಡು ಧರೆಯನ್ನೇ ವೈಕುಂಠವನ್ನಾಗಿಸಿದ,ವೈಕುಂಠವನು ಧರೆಗಿಳಿಸಿದ ಮಹಾನ್ ತಪಸ್ವಿಗಳು,ದಾರ್ಶನಿಕರು ಕನಕದಾಸರು.ಸಮಾಜಕ್ಕಂಟಿದ್ದ ಕೊಳೆ ಕಶ್ಮಲಗಳನ್ನೆಲ್ಲ ತೊಳೆಯುತ್ತ ಸುಂದರ,ಸ್ವಸ್ಥ ಸಮಾಜವನ್ನು ಕಟ್ಟಬಯಸಿ ತಮ್ಮ ವೈಯಕ್ತಿಕ ನೆಲೆಯಲ್ಲಿ ಸಾಕಷ್ಟು ಯಶಸ್ಸನ್ನು ಕಂಡ ಕನಕದಾಸರ ಕನಸನ್ನು ನನಸು ಮಾಡುವುದು ಕನಕದಾಸರ ಭಕ್ತರ,ಅನುಯಾಯಿಗಳ ಕೆಲಸ.ಕನಕದಾಸರು ನಡೆದ ದಾರಿಯಲ್ಲಿ ನಡೆದು ಲೋಕಹಿತಾರ್ಥವಾಗಿ ಬಾಳಿದರದುವೆ ಅರ್ಥಪೂರ್ಣ ಕನಕಬದುಕು; ಅಂತಹ ಕನಕಬದುಕನ್ನು ಉಸಿರಾಡುವ ಕನಕಚೇತನರುಗಳ ಅಗತ್ಯವಿದೆ ಇಂದು.

About The Author