ಜೈನ ಬಸದಿ ಪುನರನಿರ್ಮಾಣಕ್ಕೆ ಧರ್ಮಸ್ಥಳ ಸಂಸ್ಥೆಯಿಂದ ಧನ ಸಹಾಯ

ಶಹಾಪುರಃ ದೇವಸ್ತಾನಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಪೀಠಾಧಿಪತಿಗಳಾದ ವೀರೇಂದ್ರ ಹೆಗ್ಗಡೆ ಅವರು ಸಹಾಯ ಹಸ್ತ ನೀಡುವ ಕಾರ್ಯದಿಂದಾಗಿ ರಾಜ್ಯದಲ್ಲಿ ಸುಮಾರು ದೇವಾಲಯಗಳು ಜೀರ್ಣೋದ್ಧಾರಗೊಂಡು ಕಂಗೊಳಿಸುವಂತಾಗಿ ಮರು ಜೀವಪಡೆದುಕೊಂಡಿವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ತಿಳಿಸಿದರು.

ತಾಲೂಕಿನ ಗೋಗಿ ಗ್ರಾಮದ ಜೈನ ಬಸದಿಯಲ್ಲಿ ಶಹಾಪುರದ ಶ್ರೀಧರ್ಮಸ್ಥಳ ಅಭಿವೃದ್ಧಿ ಯೋಜನಾ ಸಂಸ್ಥೆಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ,ಪೀಠಾಧಿಪತಿ ಶ್ರೀ ವೀರೇಂದ್ರ ಹೆಗ್ಗಡೆ ಶ್ರೀಗಳ ಸೂಚನೆ ಮೇರೆಗೆ ಎರಡುವರೆ ಲಕ್ಷ ರೂ. ಚಕ್‌ನ್ನು ವಿತರಿಸಿ ಮಾತನಾಡಿದರು.

ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸದಾಮುಂದಾಗಿರುವ ಧರ್ಮಸ್ಥಳ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ರಾಜ್ಯದಾದ್ಯಂತ ಧರ್ಮಸ್ಥಳ ಅಭಿವೃದ್ಧಿ ಯೋಜನಾ ಶಾಖೆಗಳನ್ನು ತೆರೆದು ಸಹಸ್ರಾರು ಜನರಿಗೆ ಉದ್ಯೋಗ ಲಭಿಸುವಂತೆ ಮಾಡಿದ್ದು, ಅಲ್ಲದೆ ಸಾರ್ವಜನಿಕವಾಗಿ ಸ್ವಾವಲಂಬಿಗಳಾಗಿ ಬದುಕಲು ಸಾಲ ವಿತರಣೆ ಸೇರಿದಂತೆ, ಮಹಿಳಾ ಸಬಲೀಕರಣ, ವಿವಿಧ ಕೌಶಲ್ಯ ಕಲೆ, ಕೆರೆಗಳ ಹೂಳೆತ್ತುವದು,ಹೈನುಗಾರಿಕೆ, ಪರಿಸರ ಸಂರಕ್ಷಣೆ, ಶಿಕ್ಷಣ ಸೇರಿದಂತೆ ಹಲವಾರು
ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿದ್ದು, ಜನರ
ಸಮಸ್ಯೆಗೆ ಪೂರಕ ಸಹಾಯ ಹಸ್ತ ನೀಡುವ ಮೂಲಕ ಜನ ಮಾನಸದಲ್ಲಿ ನಡೆದಾಡುವ ದೇವರೆಂದು ನೆಲೆಸಿದ್ದಾರೆ.ಸಮಸ್ಯೆಗೆ ಪರಿಹಾರ ಒದಗಿಸುವಂತ ಕೆಲಸ ಹೆಗ್ಗಡೆ ಗುರುಗಳು ಮಾಡುತ್ತಿದ್ದು, ನಾಗರಿಕರು ಸದುಪಯೋಗ ಪಡೆದುಕೊಂಡು ಉನ್ನತ ಬದುಕನ್ನು
ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.ಅವರ
ಕಾರ್ಯ ಸಾರ್ಥಕಥೆ ಪಡೆಯುವಂತೆ ಜೈನ ಬಸದಿ ನಿರ್ಮಾಣ ಜವಬ್ದಾರಿ ಹೊತ್ತ ಬಸದಿ ಜೀರ್ಣೋದ್ಧಾರ ಸಮಿತಿ ಕಾರ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಜೈನ ಬಸದಿ ಸಮಿತಿಯ ಅಧ್ಯಕ್ಷ ಗೌತಮ ಕಡಿಹಳ್ಳಿ ಅವರು ಚಕ್ ಸ್ವೀಕರಿಸಿದರು. ತಾಲೂಕು ಯೋಜನಾಧಿಕಾರಿ ಕಲ್ಲಪ್ಪ ಯಾವಗಲ್,
ವಲಯ ಮೇಲ್ವಿಚಾರಕ ಪಂಚಾಕ್ಷರಯ್ಯ ಮರಡಿಮಠ,ಶ್ರೀಕಾಂತ ಉಪಸ್ಥಿತರಿದ್ದರು. ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಶಿಕ್ಷಕ ಮಹಾವೀರ ಅಕ್ಕಿ ನಿರೂಪಿಸಿ ವಂದಿಸಿದರು.

About The Author