ಸಂತ ಕನಕದಾಸರು : ಮುಕ್ಕಣ್ಣ ಕರಿಗಾರ

ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ

ಎಂದು ಯೋಗಮಾರ್ಗವಿಡಿದು ಪ್ರಶ್ನಿಸುತ್ತ ನಡೆದ,ಪ್ರಶ್ನೆ ಮಾಡುವ ಮೂಲಕವೆ ಪರಮಾರ್ಥಸಿದ್ಧಿಯೆಂದು ತನ್ನಂತರಂಗದ ಹರಿಯನ್ನು ಪ್ರಶ್ನಿಸುತ್ತ,ಪ್ರಶ್ನಿಸುವ ಮನೋಭಾವವನ್ನು,ಮನೋಸ್ಥೈರ್ಯವನ್ನು ಜನಸಾಮಾನ್ಯರ ಅಸ್ತ್ರವನ್ನಾಗಿತ್ತು,ಎಲ್ಲರನ್ನೂ ಎಲ್ಲವನ್ನೂ ಕೊನೆಗೆ ತನ್ನ ಪ್ರೀತಿಯ ಹರಿಯನ್ನು ಪ್ರಶ್ನಿಸುತ್ತ ಜೀವ ಜಗತ್ತು ಜಗದೀಶ್ವರರ ಅಸ್ತಿತ್ವವನ್ನು ಪ್ರಶ್ನೆಯಿಂದಲೇ ಕಾಣಬೇಕು,ಈ ಜಗತ್ತಿನಲ್ಲಿ ಯಾರೂ ಪ್ರಶ್ನಾತೀತರಿಲ್ಲ ಎನ್ನುವ ಸ್ಪಷ್ಟಸಂದೇಶ ಸಾರಿದ ಮಹಾನ್ ಚೇತನರು ಕನಕದಾಸರು.ಕರ್ನಾಟಕದ ಮಹಾನ್ ಸಂತರಲ್ಲೊಬ್ಬರು.ಒಂದಾದ ನಡೆ ನುಡಿಗಳಿಂದ ತಮ್ಮ ಒಡಲನ್ನೆ ವೈಕುಂಠವಾಗಿರಿಸಿಕೊಂಡು ಸಾರ್ಥಕತೆ ಪಡೆದವರು‌.

ದಾಸ ಸಾಹಿತ್ಯದ ಅಶ್ವಿನಿದೇವತೆಗಳು ಎಂದು ಗುರುತಿಸಲ್ಪಟ್ಟವರು ಪುರಂದರ ದಾಸರು ಮತ್ತು ಕನಕದಾಸರು.ಪುರಂದರ ದಾಸರು ಕೀರ್ತನೆಗಳ ಮೂಲಕವೆ ಪ್ರಸಿದ್ಧರಾದರೆ ಕನಕದಾಸರು ಕೀರ್ತನೆಕಾರರಲ್ಲದೆ ಕವಿಯಾಗಿಯೂ ಪ್ರಸಿದ್ಧಿ ಪಡೆದವರು.ಕನ್ನಡದ ಆದಿಕವಿ ಪಂಪನಂತೆ ಕವಿಯೂ ಕಲಿಯೂ ಆಗಿದ್ದ ವಿಶಿಷ್ಟವ್ಯಕ್ತಿತ್ವ ಕನಕದಾಸರದು.ಕಲಿ,ಕವಿ,ಕೀರ್ತನಕಾರ ಮತ್ತು ದಾರ್ಶನಿಕರೆನ್ನುವುದು ಕನಕದಾಸರ ಹೆಗ್ಗಳಿಕೆ.ಇತರ ದಾಸರುಗಳು ಬರಿ ಕೀರ್ತನಕಾರರುಗಳಾದರೆ ದಾಸರಲ್ಲಿ ಕನಕದಾಸರೊಬ್ಬರೆ ಕವಿಗಳು.ಸಾಂಗತ್ಯ,ಚೌಪದಿ,ಷಟ್ಪದಿಗಳಲ್ಲಿ ಕಾವ್ಯವನ್ನು ರಚಿಸಿದ ಕವಿರಾಯ,ರಾಯಕವಿ.

ಕನಕದಾಸರ ಬದುಕಿನ ಕಾಲಾವಧಿಯ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ.ಕೆಲವರು ೧೪೯೫–೧೫೯೩ ಕನಕದಾಸರ ಕಾಲ ಎಂದರೆ ಮತ್ತೆ ಕೆಲವರು ಕನಕದಾಸರು ೧೫೦೮–೧೬೦೬ ರವರೆಗೆ ಜೀವಿಸಿದ್ದರು ಎನ್ನುತ್ತಾರೆ.ಕನಕದಾಸರ ಜೀವಿತಾವಧಿಗಿಂತ ಅವರ ಜೀವನದರ್ಶನವೇ ಮುಖ್ಯ.ಇಂದಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದ ಬೀರಪ್ಪ ಬಚ್ಚಮ್ಮ ಎನ್ನುವ ದಂಪತಿಗಳ ಕುರುಬರ ಮನೆತನದಲ್ಲಿ ಜನಿಸಿದ ಕನಕದಾಸರು ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಹುಟ್ಟಿದವರಾದ್ದರಿಂದ ಅವರ ಬಾಲ್ಯದ ಹೆಸರು ತಿಮ್ಮಪ್ಪ.ವಿಜಯನಗರ ಅರಸರ ಢಣಾಯಕನಾಗಿದ್ದ ತಂದೆ ಬೀರಪ್ಪನ ನಿಧನಾನಂತರ ತಿಮ್ಮಪ್ಪ ಢಣಾಯಕನಪಟ್ಟವೇರಿದ.ಭೂಶೋಧದ ಸಂದರ್ಭದಲ್ಲಿ ಬಂಗಾರ ದೊರೆತದ್ದರಿಂದ ಕನಕನಾಯಕನೆನಿಸಿಕೊಂಡ.ದೊರೆತ ನಿಧಿಯನ್ನು ಬಾಡದಲ್ಲಿ ಆದಿಕೇಶವ ಮೊದಲಾದ ದೇವಸ್ಥಾನಗಳ ನಿರ್ಮಾಣಕ್ಕೆ ಬಳಸಿದ್ದಲ್ಲದೆ ಬಡಬಗ್ಗರಿಗೆ ದಾನಮಾಡಿ,ಸತ್ಕಾರ್ಯಗಳಿಗಾಗಿ ನಿಧಿವ್ಯಯಿಸಿ ಧನ್ಯತೆಪಡೆದು ಕನಕರಾಯನಾದ.ತಂದೆಯ ನಿಧನ,ಬಳಿಕ ತಾಯಿಯ ಅಗಲಿಕೆ ಮತ್ತು ಕೆಲವೇ ವರ್ಷಗಳಲ್ಲಿ ಮೋಹದ ಮಡದಿಯನ್ನು ಕಳೆದುಕೊಂಡು ಕನಕರಾಯ ವಿಜಯನಗರದರಸರ ಪರವಾಗಿ ಯುದ್ಧ ಒಂದರಲ್ಲಿ ಭಾಗಿಯಾಗಿ ಶತ್ರುಗಳ ಅಸ್ತ್ರದೇಟಿಗೆ ಎಚ್ಚರತಪ್ಪಿ ಬಿದ್ದ‌.ಕನಕ ನಾಯಕ ಸತ್ತನೆಂದೇ ಶತ್ರುಗಳು ಮತ್ತು ಅವನ ಸೈನಿಕರು ತಿಳಿದರು.’ ಈಗಲಾದರೂ ದಾಸನಾಗು’ ಎಂದ ಹರಿಯವಾಣಿ ಕೇಳ್ದು ಮೂರ್ಛೆ ತಿಳಿದೆದ್ದ ಕನಕನಾಯಕ ಶಸ್ತ್ರುಗಳ ಅಸ್ತ್ರಪ್ರಯೋಗದಿಂದುಂಟಾಗಿದ್ದ ಗಾಯದ ಮೈಯನ್ನು ತೋರುತ್ತ ‘ ಈ ನೋವು ಪರಿಹರಿಸಿದರೆ ನಾನಿನ್ನ ದಾಸನಾಗುವೆ’ ಎಂದ.ಹರಿಯು ಮುಗುಳುನಗುತ್ತ ತನ್ನ ಅಮೃತಮಯ ಹಸ್ತದಿಂದ ಕನಕನಾಯಕನ ಮೈಸವರಿದ.ಆ ಕ್ಷಣವೆ ಶರೀರಕ್ಕುಂಟಾಗಿದ್ದ ಗಾಯ ಮತ್ತು ಗಾಯದ ನೋವು ಮರೆಯಾದವು.ಹರಿಹಸ್ತಸ್ಪರ್ಶದಿಂದ ಕನಕನಾಯಕನ ಮಾನವತನು ಮಹಾತನುವಾಗಿ ಮಾರ್ಪಟಿತು,ಪ್ರಾಣತನು ಪ್ರಣವತನುವಾಯಿತು. ಈ ಪ್ರಸಂಗವನ್ನು ಕನಕದಾಸರೇ ಹೇಳಿದ್ದಾರೆ ;

ಹೋದ ಜೀವಕೆ ವೈದ್ಯನ ಸ್ಮರಣೆಯಿಟ್ಟು
ವಾದಗುಣ ಬಿಡಿಸಿ ದಾಸನಮಾಡಿಕೊಂಡೆಯೊ //

ಕನಕದಾಸರಿಗೆ ತಮ್ಮ ಪೂರ್ವಜನ್ಮದ ಸ್ಮರಣೆ ಜಾಗೃತವಾಗಿತ್ತು.ಈ ಜನ್ಮದಲ್ಲಿ ಕುರುಬಕುಲದಲ್ಲಿ ಜನಿಸಿದ ತಾವು ಮಹಾಭಾರತದ ಕಾಲದಲ್ಲಿ ವಿದುರನಾಗಿದ್ದೆ ಎನ್ನುತ್ತಾರವರು ತಮ್ಮ ಉಗಾಭೋಗ ಒಂದರಲ್ಲಿ;

ಮೊದಲ ಜನುಮ ವಿದುರನಾಗಿ
ಬಳಿಕ ಕುರುಬರ ಕುಲದಲಿ
ಜನಿಸಿದೆನಗೀ ಜನುಮದಲಿ ಮುಕ್ತಿ ಎಂತು ಎಂಬೆ
ವಿದುರನಾಗಿ ಹುಟ್ಟಿ ಮೋಕ್ಷಕಾಣದೆ ಇದ್ದುದರಿಂದ ಈಗ ಮತ್ತೆ ಕುರುಬರ ಕುಲದಲ್ಲಿ ಕನಕದಾಸನಾಗಿ ಹುಟ್ಟಿದ ನಿನ್ನ ದಾಸನಾದ ನನಗೆ ಈ ಜನ್ಮದಲ್ಲಿಯಾದರೂ ಮೋಕ್ಷ ಕರುಣಿಸು ಎಂದು ಅವರು ಹರಿಯನ್ನು ಪ್ರಾರ್ಥಿಸಿದ್ದಾರೆ.ಕನಕದಾಸರ ಕುಲಮೂಲದ ಬಗ್ಗೆ ಅಪಸ್ವರ ಎತ್ತುವವರು ಕನಕದಾಸರ ಈ ಉಗಾಭೋಗವನ್ನು ಗಮನಿಸಬೇಕು.

ವಿಜಯನಗರದರಸರ ಸಾಮಂತಗಿರಿಯಿಂದ ಮುಕ್ತರಾದ ಅವರು ಯುದ್ಧಭೂಮಿಯಲ್ಲುಂಟಾದ ಹರಿಕರುಣೆಯ ಪ್ರಸಂಗದಿಂದ ಪ್ರಭುಮಾರ್ಗವನ್ನು ತ್ಯಜಿಸಿ ಹರಿಯ ದಾಸಮಾರ್ಗವನ್ನು ಹಿಡಿದು ದಾಸರಾಗುತ್ತಾರೆ,ಹರಿದಾಸಶ್ರೇಷ್ಠರು ಎನ್ನಿಸಿಕೊಳ್ಳುತ್ತಾರೆ.ಬಾಡವು ಅವರ ಹುಟ್ಟೂರಾದರೆ ಕಾಗಿನೆಲೆಯು ಅವರ ಕಾರ್ಯಕ್ಷೇತ್ರ.ಕಾಗಿನೆಲೆಯ ಆದಿಕೇಶವನಲ್ಲಿ ಹರಿಯನ್ನು ಕಂಡು ‘ ಕಾಗಿನೆಲೆಯಾದಿಕೇಶವ’ ಎನ್ನುವ ಅಂಕಿತದಲ್ಲಿ ಕೀರ್ತನೆಗಳನ್ನು ರಚಿಸಿದ ಕನಕದಾಸರು ಒಟ್ಟು ಮೂರುನೂರಾ ಹದಿನಾರು ಕೀರ್ತನೆಗಳನ್ನು ರಚಿಸಿದ್ದಾರೆ.ಕೀರ್ತನೆಗಳನ್ನಲ್ಲದೆ ಕನಕದಾಸರು ಬೃಹತ್ ಕಾವ್ಯವಾದ ‘ ಮೋಹನ ತರಂಗಿಣಿ’ ಹಾಗೂ ‘ ನೃಸಿಂಹಸ್ತವ’ ಗಳನ್ನು ಸಾಂಗತ್ಯದಲ್ಲಿ ,ಭಾಮಿನಿ ಷಟ್ಪದಿಯಲ್ಲಿ ‘ ನಳಚರಿತ್ರೆ’ , ‘ ರಾಮಧಾನ್ಯ ಚರಿತೆ’ ಮತ್ತು ‘ ಹರಿಭಕ್ತಿಸಾರ’ ಗಳನ್ನು ರಚಿಸಿದ್ದಾರೆ.ಕನ್ನಡ ಸಾಹಿತ್ಯಕ್ಕೆ ಕನಕದಾಸರ ಅನನ್ಯಕೊಡುಗೆ ‘ ಮುಂಡಿಗೆಗಳು’ ಎನ್ನುವ ಅವರೇ ಸೃಷ್ಟಿಸಿದ ಒಗಟಿನ ರೂಪದ ವಿಶಿಷ್ಟ ಸಾಹಿತ್ಯ ಪ್ರಾಕಾರ.ಕನಕದಾಸರ ‘ ಮೋಹನ ತರಂಗಿಣಿ’ ಮತ್ತು ‘ನಳಚರಿತ್ರೆ’ ಗಳು ಅವರೊಬ್ಬ ಮಹಾಕಲಿ ಮಾತ್ರವಲ್ಲ,ಮಹಾಕವಿಯೂ ಹೌದು ಎನ್ನುವುದನ್ನು ಸಾರುತ್ತವೆ.

ಕನಕದಾಸರ ಕೃತಿಗಳಲ್ಲೆಲ್ಲ ವಿಶಿಷ್ಟವಾದುದು ಅವರ ‘ ರಾಮಧಾನ್ಯ ಚರಿತೆ’. ಕನಕದಾಸರ ವೈಯಕ್ತಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ‘ ರಾಮಧಾನ್ಯ ಚರಿತೆ’ ಯು ಶೂದ್ರರು ಮತ್ತು ಬ್ರಾಹ್ಮಣರ,ಉಳ್ಳವರು ಮತ್ತು ಇಲ್ಲದವರ,ಶ್ರೇಷ್ಠರು ಮತ್ತು ಕನಿಷ್ಠರ ನಡುವಿನ ಹೋರಾಟದ ಕಥೆಯಾಗಿದ್ದು ಕೊನೆಗೆ ಶೂದ್ರರೇ ಗೆಲ್ಲುತ್ತಾರೆ ಎನ್ನುವುದನ್ನು ಸಮರ್ಥವಾಗಿ ವ್ಯಂಗಿಸುವ ವಿಶಿಷ್ಟ ಕಾವ್ಯ.ರಾಗಿ ಮತ್ತು ಭತ್ತ ಎನ್ನುವ ಎರಡು ಧಾನ್ಯಗಳನ್ನು ತಮ್ಮ ಕಾವ್ಯವಸ್ತುವನ್ನಾಗಿ ಸ್ವೀಕರಿಸಿ ನಾಡಜನಪದರ ಹೊಟ್ಟೆತುಂಬಿಸುವ ರಾಗಿಯ ಹಿರಿಮೆಯನ್ನು ಸಾರಿದ ಕನಕದಾಸರ ರಾಮಧಾನ್ಯ ಚರಿತೆಯು ಪದದುಳಿತರು ಮತ್ತು ಪಟ್ಟಭದ್ರರ ನಡುವಿನ ಸಾಮಾಜಿಕ ಅಂತರ,ಮೇಲು ಕೀಳುಗಳೆಂಬ ಮನುಷ್ಯ ನಿರ್ಮಿತ ಕೃತ್ರಿಮ ಜಾತಿ,ವರ್ಣವ್ಯವಸ್ಥೆಯ ವಿರುದ್ಧ ಪ್ರತಿರೋಧದ,ಪ್ರತಿಭಟನೆಯ ಧ್ವನಿಯನ್ನು ದಾಖಲಿಸಿದೆ ಎನ್ನುವುದು ಈ ಪುಟ್ಟಕಾವ್ಯದ ವೈಶಿಷ್ಟ್ಯ.
‘ರಾಮಧಾನ್ಯ ಚರಿತೆ’ ಯು ಒಂದು ನೂರಾ ಐವತ್ತೆಂಟು ಭಾಮಿನಿ ಷಟ್ಪದಿಗಳ ಖಂಡಕಾವ್ಯ.ರಾಮಾಯಣದ ಕಥೆಯೊಂದಿಗೆ ರಾಗಿಯ ಮಹತ್ವವನ್ನು ಎತ್ತಿಹಿಡಿಯುವಪುಟ್ಟ ಅಣಕುಕಾವ್ಯವಿದು.ಕಥೆಯ ವಸ್ತು ; ‘ ಕೌಮ್ಯಕ ಅರಣ್ಯವಾಸಿಗಳಾದ ಧರ್ಮಜ ಹಾಗೂ ಅವನ ಅನುಜರಿಗೆ ಹಿರಿಯ ಋಷಿ ಶಾಂಡಲ್ಯರು ಶ್ರೀರಾಮನ ವನವಾಸದ ಕಥೆಯನ್ನೂ ನರೆದಲೆಗ ವ್ರೀಹಿಯರ ಪ್ರಸಂಗವನ್ನು ಬಿತ್ತರಿಸುವರು.ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮನು ಪತ್ನಿಸಮೇತ ಲಕ್ಷ್ಮಣನೊಂದಿಗೆ ವನವಾಸಕ್ಕೆ ಹೊರಡುವನು. ರಾಮ ಮತ್ತು ಲಕ್ಷ್ಮಣರು ಮಾಯಾಮೃಗದ ಬೆನ್ನಟ್ಟಿ ಹೋದಾಗ ರಾವಣನು ಸೀತೆಯನ್ನು ಅಪಹರಿಸುತ್ತಾನೆ.ರಾಮನು ವಾನರ ಸೈನ್ಯದ ನೆರವಿನೊಂದಿಗೆ ಲಂಕಾಧಿಪತಿ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳುವ ಮಾರ್ಗಮಧ್ಯದಲ್ಲಿ ಗೌತಮಮುನಿಗಳಾಶ್ರಮದಲ್ಲಿ ತಂಗುತ್ತಾನೆ.ಆತಿಥ್ಯ ಸ್ವೀಕರಿಸುತ್ತ ಗೌತಮ ರಾಮರು ಮಾತನಾಡುತ್ತಿರುವಾಗ ಋಷಿಗೌತಮರು ನರೆದಲೆಗವನ್ನು ಪ್ರಶಂಸಿಸುತ್ತಾರೆ.ವ್ರೀಹಿ ಕೋಪಗೊಂಡು ವಾದಕ್ಕಿಳಿಯುತ್ತದೆ.ಶ್ರೀರಾಮ ಸಮೇತನಾಗಿ ದೇವತೆಗಳು ನರೆದಲೆಗ ಮತ್ತು ವ್ರೀಹಿಗಳ ವಾದವನ್ನು ಆಲಿಸುತ್ತಾರೆ.ಈ ಇಬ್ಬರಲ್ಲಿ ಯಾರು ಶ್ರೇಷ್ಠರು ಎಂದು ನಿಷ್ಕರ್ಷಿಸಲು ನರೆದಲೆಗ – ವ್ರೀಹಿಗಳನ್ನು ಆರು ತಿಂಗಳ ಕಾಲ ಸೆರೆಯಲ್ಲಿಟ್ಟು ಅಯೋಧ್ಯೆಯತ್ತ ಪ್ರಯಾಣಿಸುತ್ತಾರೆ.ರಾಮನ ಪಟ್ಟಾಭಿಷೇಕ ಸಂದರ್ಭದಲ್ಲಿ ಅವೆರಡನ್ನೂ ಕರೆಯಿಸಿ ಪರೀಕ್ಷಿಸಲಾಗಿ ವ್ರೀಹಿಯು ಕಳೆಗುಂದಿ ಸತ್ವಹೀನವಾಗಿದ್ದರೆ ನರೆದಲೆಗವು ಕೊಂಚವೂ ಕಳೆಗುಂದದೆ ನಳನಳಿಸುತ್ತಿರುತ್ತದೆ.ಸತ್ವ ಶೀಲಗುಣಗಳಲ್ಲಿ ರಾಗಿ( ನರೆದಲೆಗ) ಯೇ ಶ್ರೇಷ್ಠ ಎಂದು ದೇವತೆಗಳ ಸಮ್ಮುಖದಲ್ಲಿ ನಿರ್ಣಯಿಸುವ ರಾಮನು ರಾಗಿಗೆ ತನ್ನ ಪ್ರಿಯ ಹೆಸರಾದ ‘ ರಾಘವ’ ಎನ್ನುವ ಅಭಿದಾನವನ್ನಿತ್ತು ಸತ್ಕರಿಸುವನು.ಭತ್ತ( ವ್ರೀಹಿ) ವು ಸತ್ವಕಳೆದುಕೊಂಡು ನುಸಿಯಾಗಿತ್ತು.ರಾಗಿ ಮತ್ತು ಭತ್ತಗಳ ನಡುವಿನ ಸಂಘರ್ಷದಲ್ಲಿ ರಾಗಿಯೇ ಗೆದ್ದಿತು ತನ್ನ ಅಂತಃಸತ್ತ್ವವಿಶೇಷದಿಂದ.ಕನಕದಾಸರು ರಾಮಾಯಣ,ಮಹಾಭಾರತ,ಭಾಗವತಾದಿ ಯಾವ ಕೃತಿಗಳಲ್ಲಿಯೂ ಇಲ್ಲದ ಈ ಪ್ರಸಂಗವನ್ನು ತಮ್ಮ ಸೃಜನಶೀಲ ಪ್ರತಿಭೆಯಿಂದ ಸೃಷ್ಟಿಸಿ ತಮ್ಮ ದರ್ಶನಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

‘ರಾಮಧಾನ್ಯ ಚರಿತೆ’ ಯ ಮೂಲಕ ಕನಕದಾಸರು ಅಂದಿನ ಶಿಷ್ಟಸಮಾಜವು ಕುರುಬನಾಗಿ ಹುಟ್ಟಿದ್ದ ತಮ್ಮನ್ನು ಕೆಳಕುಲದವನೆಂದು,ಕೀಳೆಂದು ಮೂದಲಿಸಿದ್ದನ್ನು ರಾಗಿ ಮತ್ತು ನೆಲ್ಲುಗಳ ಉದಾಹರಣೆಯೊಂದಿಗೆ ಶೂದ್ರರೇ ಸತ್ತ್ವ ಶೀಲಸಂಪನ್ನರು,ಬ್ರಾಹ್ಮಣರಲ್ಲ,ಮೇಲ್ವರ್ಗದವರಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.ಬಹುಪುರಾತನ ಕಾಲದಿಂದಲೂ ಜನಸಾಮಾನ್ಯರು ತಿನ್ನುವ ಆಹಾರ ರಾಗಿಯಾದರೆ ಶ್ರೀಮಂತರು ಮತ್ತು ಮೇಲ್ವರ್ಗದವರ ಆಹಾರ ಭತ್ತ.ಭತ್ತ ಬಡವರ ಕೈಗೆಟುಕದ ಆಹಾರವಾಗಿತ್ತು ಹಿಂದೆ.ಶ್ರೀಮಂತರ ಮೆಚ್ಚಿನ ಆಹಾರವಾದ ಭತ್ತವು ಕೂಡಿಟ್ಟರೆ ಬಹುಕಾಲ ಬಾಳದೆ ಕೆಡುತ್ತದೆ,ನುಸಿಯಾಗುತ್ತದೆ.ಆದರೆ ರಾಗಿಯು ವರ್ಷಾನುಗಟ್ಟಲೆ ಕೆಡದೆ ಹಾಗೆಯೇ ಇರುತ್ತದೆ.ರಾಗಿಯು ಜನಪದರ ಸಂಸ್ಕೃತಿಯ ಪ್ರತಿನಿಧಿಯಾದರೆ ಭತ್ತವು ಶಿಷ್ಟಸಮಾಜದ ಪ್ರತೀಕ.ರಾಮಾಯಣದ ಕಥೆಯನ್ನು ಹೇಳುತ್ತಲೇ ಕನಕದಾಸರು ದೇವತೆಗಳ ಸಮ್ಮುಖದಲ್ಲಿಯೇ ರಾಮನಿಂದ ರಾಗಿಗೆ ಮಹಿಮಾಧಿಕ್ಯ ಪ್ರಾಪ್ತಿಯಾಗುವಂತೆ ಮಾಡುತ್ತಾರೆ.ದೇವತೆಗಳ ಸಮ್ಮುಖದಲ್ಲಿಯೇ ರಾಮನು ರಾಗಿಯ ಮಹತ್ವವನ್ನು ಎತ್ತಿಹಿಡಿಯುವ ಮೂಲಕ ನೆಲಮೂಲ ಸಂಸ್ಕೃತಿಯ ಸತ್ತ್ವವನ್ನು ಎತ್ತಿಹಿಡಿಯುತ್ತಾನೆ,ರಾಗಿಯನ್ನು ‘ ಪರಮಧಾನ್ಯ’ ಎಂದು ಕೊಂಡಾಡುತ್ತಾನೆ.ಶೂದ್ರರು- ಬ್ರಾಹ್ಮಣರು,ಉಳ್ಳವರು- ಬಡವರು,ಮೇಲ್ವರ್ಗದವರು- ಕೆಳವರ್ಗದವರ ನಡುವಿನ ಸಂಘರ್ಷ ನಿರಂತರವಾದುದಾದರೂ ಇಬ್ಬಣಗಳು ಪರಸ್ಪರ ಪ್ರೀತಿ,ವಿಶ್ವಾಸದಿಂದ ಬಾಳಿದರೆ ಮಾತ್ರ ಮರ್ತ್ಯದ ಬದುಕಿನಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ ಎನ್ನುವ ಕವಿಕನಕದಾಸರ ಸಂದೇಶವು ಕೃತ್ರಿಮ ಭೇದಗಳಡಿ ಸಿಕ್ಕು ಬಳಲುತ್ತಿರುವ ಮನುಕುಲಕ್ಕೆ ಪರಮಾದರ್ಶ ;

ದೇವರಿಗೆ ಪರಮಾನ್ನ ನೀ ಮನು
ಜಾವಳಿಗೆ ಪಕ್ವಾನ್ನಮೀತನು
ನೀವು ಧರೆಯೊಳಗಿಬ್ಬರತಿ ಹಿತದಲಿ ನೀವಿಹುದು

ಭತ್ತವು ದೇವರ ನೈವೇದ್ಯವಾದರೆ ರಾಗಿಯು ಬಡವರ ದುಡಿಯುವ ಹೊಟ್ಟೆ ರೆಟ್ಟೆಗಳಿಗೆ‌ ಕಸುವನ್ನುಂಟು ಮಾಡುವ ಆಹಾರ.ಆದ್ದರಿಂದ ನೀವಿಬ್ಬರು ಭೂಮಿಯಲ್ಲಿ ಪರಸ್ಪರ ಅನೋನ್ಯವಾಗಿರಬೇಕು ಎನ್ನುವ ಹಿತೋಪದೇಶ ನೀಡುವ ರಾಮಧಾನ್ಯಚರಿತೆಯು ಆಂತರಿಕ ಕಚ್ಚಾಟ,ಸಂಘರ್ಷಗಳನ್ನು ಬದಿಗೊತ್ತಿ ಸಮರಸದಿಂದ,ಸಮನ್ವಯದಿಂದ ಬದುಕಬೇಕು ಎನ್ನುವ ಸಂದೇಶವನ್ನು ಬಿತ್ತರಿಸುತ್ತದೆ.

( ಮುಂದುವರೆಯುತ್ತದೆ)

About The Author