ರಾಜಕೀಯಶಕ್ತಿ’ ಯಾಗಿ ಬೆಳೆಯಲು ಸರಕಾರಿ ಸೇವೆ ತೊರೆದಿದ್ದೇನೆಯೇ ಹೊರತು ಪಲಾಯನವಾದಿಯಾಗಿ ಅಲ್ಲ ! : ಮುಕ್ಕಣ್ಣ ಕರಿಗಾರ

 ರಾಜಕೀಯಶಕ್ತಿ’ ಯಾಗಿ ಬೆಳೆಯಲು ಸರಕಾರಿ ಸೇವೆ ತೊರೆದಿದ್ದೇನೆಯೇ ಹೊರತು ಪಲಾಯನವಾದಿಯಾಗಿ ಅಲ್ಲ ! : ಮುಕ್ಕಣ್ಣ ಕರಿಗಾರ

ಕಳೆದ ಮೂರ್ನಾಲ್ಕು ದಿನಗಳಿಂದ ಕೆಲವರು ನಾನು ಸರಕಾರಿ ಸೇವೆ ತೊರೆದ ಬಗ್ಗೆ ಚರ್ಚಿಸುತ್ತಿದ್ದಾರೆ.ಮೊನ್ನೆ ನವೆಂಬರ್ 27 ರಂದು ನಡೆದ ನನ್ನ 54 ನೆಯ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಕೆಲವರು ಮೆಲುದನಿಯಲ್ಲಿ ನನ್ನೆದುರು ಈ ವಿಷಯ ಪ್ರಸ್ತಾಪಿಸಿದರು.ಇನ್ನು ಆರು ವರ್ಷಗಳ ಸೇವಾ ಅವಧಿ ಇದ್ದು ಉನ್ನತ ಹುದ್ದೆಗಳನ್ನು ಪಡೆಯಬಹುದಿತ್ತು ಎನ್ನುವುದು ಅವರ ಹಿತಚಿಂತನೆ.ಸರಕಾರಿ ಸೇವೆಯಲ್ಲಿ ನನ್ನ ಆಧೀನದಲ್ಲಿ ಕೆಲಸ ಮಾಡಿದ ನನ್ನ ಆತ್ಮೀಯರುಗಳಿಗೆ ನನ್ನ ರಾಜೀನಾಮೆ ನಿರ್ಧಾರ ಬೇಸರವನ್ನುಂಟು ಮಾಡಿದ್ದರೆ ಸರಕಾರಿ ಸೇವೆಯಲ್ಲಿ ನನ್ನ ಸ್ವತಂತ್ರ,ನಿರ್ಭೀತ ನಿಲುವಿನ ವ್ಯಕ್ತಿತ್ವವನ್ನು ಕಂಡು ಅಸೂಯೆ ಪಡುತ್ತಿದ್ದ ಕೆಲವರು ಸಂಭ್ರಮಿಸಿ,ನನ್ನನ್ನು ನಿಂದಿಸುತ್ತಿದ್ದಾರೆ ಎನ್ನುವ ವಿಷಯವೂ ನನಗೆ ಗೊತ್ತಿದೆ.ಅಂತಹವರ ಅಜ್ಞಾನದ ಬಗ್ಗೆ ನನ್ನಲ್ಲಿ ಮರುಕವಿದೆ.ನಾನು ಸರಕಾರಿ ಸೇವೆಯನ್ನು ತೊರೆದು ಗುಡ್ಡ ಗುಹೆಗಳಲ್ಲಿ ತಪಸ್ಸು ಮಾಡಲು ಹೋಗುತ್ತಿಲ್ಲ ಎನ್ನುವುದನ್ನು ನನ್ನ ನಿರ್ಧಾರವು ಸರಿಯಲ್ಲ ಎಂದು ಟೀಕಿಸುವವರು ಅರ್ಥಮಾಡಿಕೊಳ್ಳಬೇಕು.ನಾನು ‘ ರಾಜಕೀಯ ಶಕ್ತಿ’ ಯಾಗಿ ಪ್ರಕಟಗೊಳ್ಳಲು ಸರಕಾರಿ ಸೇವೆಯನ್ನು ತೊರೆದಿದ್ದೇನೆಯೇ ಹೊರತು ಮತ್ತಾವ ಕಾರಣದಿಂದಲೂ ಸರಕಾರಿ ಸೇವೆಗೆ ‘ ಗುಡ್ ಬೈ’ ಹೇಳಿಲ್ಲ.ನನಗೂ ಗೊತ್ತಿದೆ ಇನ್ನು ಆರುವರ್ಷಗಳ ಅವಧಿಯಲ್ಲಿ ನಾನು ಸಿಇಒ ಆಗಬಹುದಿತ್ತು,ಡಿ.ಸಿ.ಆಗಬಹುದಿತ್ತು ಮತ್ತು ಇನ್ನು ಏನೇನೋ ಆಗಬಹುದಿತ್ತು.ಆದರೆ ಇದುವೆ ಜೀವನದ ಸಾರ್ಥಕ್ಯವೆ? ನಾನು ಅದಕ್ಕಿಂತ ಮಿಗಿಲಾದುದನ್ನು ಸಾಧಿಸಬೇಕಿದೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ನನ್ನ ವೃತ್ತಿಜೀವನದಲ್ಲಿ ಸಂಭವಿಸಿದ ‘ ಆಘಾತಕಾರಿ ಪ್ರಸಂಗಗಳು’ ನನ್ನ ರಾಜಕೀಯ ಜೀವನವನ್ನು ರೂಪಿಸಲು ಪ್ರೇರಕವಾದ ಪ್ರಸಂಗಗಳೇ ಹೊರತು ಅಂತಹ ಪ್ರತಿಕೂಲ ಪರಿಸ್ಥಿತಿಗಳಿಂದ ನನಗೆ ಕೆಟ್ಟದು ಏನೂ ಆಗಿಲ್ಲ.ನನ್ನ ವಿರೋಧಿಗಳು ಎಷ್ಟೇ ದೊಡ್ಡವರಿದ್ದರೂ ನನ್ನ ಹಿಂದೆ ಸಹಸ್ರಬಾಹುಗಳುಳ್ಳ ನನ್ನ ತಾಯಿ ದುರ್ಗಾದೇವಿ ಇದ್ದಾಳೆ.ವಿಶ್ವನಿಯಾಮಕಿಯಾಗಿರುವ ವಿಶ್ವೇಶ್ವರಿ ದುರ್ಗಾದೇವಿಯು‌ ‘ ವಿಜಯದುರ್ಗೆಯ ತನ್ನ ಲೀಲೆಯನ್ನಾಡುವ’ ಕಾಲ ಸಮೀಪಿಸಿದೆ.ಶಿವ ದುರ್ಗಾದೇವಿಯರ ಸಂಕಲ್ಪ ಮತ್ತು ನಿಯತಿಗನುಗುಣವಾದ ಪಥದಲ್ಲಿ ಚಲಿಸುತ್ತಿದೆ ನನ್ನ ಬದುಕೀಗ.ಮುಂಬರುವ ವರ್ಷಗಳಲ್ಲಿ ನನ್ನ ನಿರ್ಧಾರದ ಹಿಂದಿನ ದೈವದ ಸಂಕಲ್ಪ ಏನು ಎನ್ನುವುದನ್ನು ಎಲ್ಲರೂ ನೋಡಬಹುದು.

ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಉದ್ದೇಶಪೂರ್ವಕವಾಗಿಯೇ ನನ್ನ ಸ್ವಯಂನಿವೃತ್ತಿಯ ಮನವಿಯನ್ನು ಪುರಸ್ಕರಿಸಲಿಲ್ಲ.ರಾಜಕೀಯಶಕ್ತಿಯಾಗಿ ಬೆಳೆಯುವ ನನ್ನ ನಿರ್ಧಾರ ಅಚಲವಾಗಿದ್ದುದರಿಂದ ಕೊನೆಗೆ ನಾನು ರಾಜೀನಾಮೆ ಸಲ್ಲಿಸಿದೆ.ಸರಕಾರಿ ಸೇವೆಯಲ್ಲಿದ್ದುಕೊಂಡು ರಾಜಕೀಯ ಚಟುವಟಿಕೆಗಳನ್ನು ನಡೆಸುವುದು ಸರಿಯಾದುದಲ್ಲ ಎನ್ನುವ ಕಾರಣದಿಂದ ನಾನು ಸರಕಾರಿ ಸೇವೆಗೆ ರಾಜೀನಾಮೆ ಸಲ್ಲಿಸಿದ ಬಳಿಕವೆ ‘ ಶೂದ್ರ ಭಾರತ ಪಕ್ಷ’ ಎನ್ನುವ ಪ್ರಾದೇಶಿಕ ರಾಜಕೀಯ ಪಕ್ಷ ಒಂದನ್ನು ಕಟ್ಟಿ,ಕೇಂದ್ರ ಚುನಾವಣಾ ಆಯೋಗಕ್ಕೆ ಅದರ ನೊಂದಣಿಗಾಗಿ ಕಳಿಸಿದ್ದೇನೆ.’ಶೂದ್ರಭಾರತ ಪಕ್ಷ’ ವು ಕೇವಲ ನನ್ನ ಮಹತ್ವಾಕಾಂಕ್ಷೆಯ ಕಾರಣದಿಂದ ಹುಟ್ಟಿದ ಪಕ್ಷವಲ್ಲ,ವಿಶ್ವನಿಯಾಮಕನಾಗಿರುವ ಪರಶಿವನ ಲೋಕೋದ್ಧಾರ ಸಂಕಲ್ಪದ ಲೀಲೆಯಾಗಿ ಅವತರಿಸಿದೆ.ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ‘ ಶೂದ್ರಭಾರತ ಪಕ್ಷ’ ದ ಪ್ರಭೆಯಲ್ಲಿ ಬೆಳಗಲಿವೆ ರಾಜ್ಯ ಮತ್ತು ದೇಶ.ಯೋಗಿಯಾಗಿರುವ ನನಗೆ ಕಾಲಜ್ಞಾನದ ಸಾಮರ್ಥ್ಯವೂ ಸಿದ್ಧಿಸಿದ್ದು ಮುಂಬರುವ ದಿನಗಳ ರಾಜಕೀಯ ಸ್ಥಿತಿಗತಿಗಳನ್ನು ಅರಿತೇ ನಾನು ‘ ಶೂದ್ರ ಭಾರತ ಪಕ್ಷ’ ಎನ್ನುವ ಸ್ವಂತ ರಾಜಕೀಯ ಪಕ್ಷ ಒಂದನ್ನು ಕಟ್ಟಿದ್ದೇನೆ.

ನನ್ನಲ್ಲಿ ಹಣ ಇಲ್ಲ ಎನ್ನುವ ಕಾರಣದಿಂದ ಸ್ವಂತರಾಜಕೀಯ ಪಕ್ಷ ಕಟ್ಟಿ ಯಶಸ್ವಿಯಾಗಲು ಸಾಧ್ಯವೆ ಎಂದು ಪ್ರಶ್ನಿಸುತ್ತಿದ್ದಾರೆ ಕೆಲವರು.’ಹಣವಲ್ಲ,ಅದೃಷ್ಟವು ರಾಜಕೀಯ ಯಶಸ್ಸಿನ ನಿರ್ಧಾರಕಶಕ್ತಿ’ ಎಂದು ನಾನು ನಂಬಿದ್ದೇನೆ.ಹಣವಿದ್ದವರೇ ರಾಜಕೀಯ ಮಾಡಬೇಕು,ಹಣವಿದ್ದವರೇ ರಾಜಕೀಯದಲ್ಲಿ ಯಶಸ್ವಿಯಾಗುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ಸುಳ್ಳಾಗಲಿದೆ.ಮತದಾರರು ಪ್ರಬುದ್ಧರಾಗಿ ಆಲೋಚಿಸುವ,ಹೊಸತೊಂದು ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಕಾಲ ಬರಲಿದೆ.

ನನ್ನ ಸ್ವಯಂ ನಿವೃತ್ತಿಯ ಅರ್ಜಿಯನ್ನು ತಿರಸ್ಕರಿಸಿದ ಸರಕಾರವು ನನ್ನ ರಾಜೀನಾಮೆಯನ್ನು ಅಂಗೀಕರಿಸುವುದು ಕಷ್ಟ ಎಂದರಿತೇ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟೀಕಿಸಿ,ಅವರ ನಿಲುವನ್ನು ಪ್ರಶ್ನಿಸಿ ನಾಲ್ಕೈದು ಲೇಖನಗಳನ್ನು ಬರೆದಿದ್ದೇನೆ.ಸರಕಾರದಲ್ಲಿ ಹಿರಿಯ ಶ್ರೇಣಿಯ ಉಪಕಾರ್ಯದರ್ಶಿಯಾಗಿದ್ದ ನನ್ನ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರವು ಮುಖ್ಯಮಂತ್ರಿಯವರಿಗೆ ಮಾತ್ರ ಇರುವುದರಿಂದ ಅವರನ್ನು ‘ ಕೋಪೋದ್ರಿಕ್ತ’ ಗೊಳಿಸುವ ಕಾರಣದಿಂದಲೇ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟೀಕಿಸಿ ಲೇಖನಗಳನ್ನು ಬರೆದಿದ್ದೇನೆ.ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸುಲಭವಾಗಿ ಅಂಗೀಕರಿಸುವುದಿಲ್ಲವಾದ್ದರಿಂದ ನನ್ನ ಬರಹಗಳ ಸಿಟ್ಟಿನಲ್ಲಾದರೂ ನನ್ನ ರಾಜೀನಾಮೆ ಸ್ವೀಕರಿಸಲಿ ಎನ್ನುವುದು ನನ್ನ ಬಯಕೆ ಎಂದಬಳಿಕ ನನ್ನ ರಾಜಕೀಯ ನಿರ್ಧಾರ ದೃಢಚಿತ್ತದ ನಿರ್ಧಾರ ಎಂದೇ ಅರ್ಥವಲ್ಲವೆ ?

‌ಆರ್ಡಿಪಿಆರ್ ನಲ್ಲಿರುವ ನನ್ನ ವಿರೋಧಿಗಳು ನನ್ನ ವಿರುದ್ಧ ಏನೆಲ್ಲ ಷಡ್ಯಂತ್ರ ಮಾಡಬಹುದು ಎಂದು ನಾನು ಮೊದಲೇ ಆಲೋಚಿಸಿದ್ದೇನೆ.ಅವರ ಯಾವುದೇ ಕುಯುಕ್ತಿ,ಕುತಂತ್ರಗಳಿಗೆ ನಾನು ಬೆದರುವುದಿಲ್ಲ ಸರಕಾರಿಸೇವೆಯಿಂದ ಹೊರಹೋಗುವ ನನ್ನ ನಿರ್ಧಾರ ಕಲ್ಲುಬಂಡೆಯಷ್ಟೇ ಅಚಲವಾಗಿರುವುದರಿಂದ.ಒಂದಂತೂ ಸತ್ಯ ಆರ್ಡಿಪಿಆರ್ ನಲ್ಲಿ ಇರುವ ಕೆಲವರು ಸೇರಿದಂತೆ ನನ್ನ ಬದುಕಿನೊಂದಿಗೆ ಆಟವಾಡಿದ ಕೆಲವರು ಮುಂದಿನ ದಿನಗಳಲ್ಲಿ ಅನುಭವಿಸಬಾರದ್ದನ್ನೆಲ್ಲ ಅನುಭವಿಸುವ ದುಸ್ಥಿತಿ ಬಂದೊದಗುವುದು ಸೂರ್ಯಸತ್ಯ. ನನ್ನ ವಿ ಆರ್ ಎಸ್ ,ರಾಜೀನಾಮೆಗೆ ತೊಡರುಗಾಲನ್ನಿಕ್ಕಿದ ಆರ್ಡಿಪಿಆರ್ ನ‌ ಕೆಲವು ಅಧಿಕಾರಿ, ಸಿಬ್ಬಂದಿಯವರು ನನ್ನ ರಾಜೀನಾಮೆ,ವಿ ಆರ್ ಎಸ್ ಅಂಗೀಕರಿಸದೆ ತಮ್ಮ ಮಹಾಬುದ್ಧಿಕೆಯ ಹಿಂದಿನ ಅಸ್ತ್ರ ಸೇವೆಯಿಂದ ವಜಾಗೊಳಿಸುವ ಅಸ್ತ್ರಪ್ರಯೋಗಿಸಿದರೂ ಅದು ನನಗೆ ‘ ರೊಟ್ಟಿಜಾರಿ ತುಪ್ಪದಲ್ಲಿ ಬಿದ್ದಂತೆ’ ಅದೃಷ್ಟದ ಬಾಗಿಲನ್ನು ತೆರೆಯುತ್ತದೆಯೇ ಹೊರತು ಅದರಿಂದ ನನಗೇನು ತೊಂದರೆ ಆಗುವುದಿಲ್ಲ.ಆರ್ಡಿಪಿಆರ್ ನ ಅಧಿಕಾರಿ ಮಹಾನುಭಾವರುಗಳು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಖುಷಿಪಡುತ್ತೇನೆಯೇ ಹೊರತು ದುಃಖಿಸುವುದಿಲ್ಲ.ನಾನು ಸರಕಾರಿ ಸೇವೆಯಿಂದ ಹೊರಹೋಗಲು ಅವಕಾಶಕೊಟ್ಟರೆ ಅದೇ ನನಗೆ ಮಾಡುವ ಉಪಕಾರ.ಪ್ರತಿಕೂಲ ಪರಿಸ್ಥಿತಿಯನ್ನೇ ಅನುಕೂಲಕರ ಪರಿಸ್ಥಿತಿಯನ್ನಾಗಿ ಮಾರ್ಪಡಿಸಿಕೊಂಡು ಬೆಳೆಯುವ ‘ ಸಿದ್ಧಪುರುಷನ ವ್ಯಕ್ತಿತ್ವ’ ವನ್ನು ನಾನೀಗ ಸಂಪಾದಿಸಿಕೊಂಡಿರುವುದರಿಂದ ಯಾವುದಕ್ಕೂ ವಿಚಲಿತನಾಗುವುದಿಲ್ಲ.

About The Author