ಮುಸ್ಲಿಂ ಶಾಸಕಿ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುವುದಿಲ್ಲ ; ಹಿಂದೂಗಳು ವಿಕೃತಿ ಮೆರೆದಿದ್ದಾರೆ

ಮುಸ್ಲಿಂ ಶಾಸಕಿ ಪ್ರವೇಶಿಸಿದರೆ ದೇವಸ್ಥಾನ ಅಪವಿತ್ರವಾಗುವುದಿಲ್ಲ ; ಹಿಂದೂಗಳು ವಿಕೃತಿ ಮೆರೆದಿದ್ದಾರೆ : ಮುಕ್ಕಣ್ಣ ಕರಿಗಾರ

ಉತ್ತರಪ್ರದೇಶದಲ್ಲಿ ಒಂದು ನಾಚಿಕೆಗೇಡಿನ ಪ್ರಸಂಗ ನಡೆದಿದೆ. ಅಲ್ಲಿನ ಸಿದ್ಧಾರ್ಥ ನಗರ ಜಿಲ್ಲೆಯ ರಾಪ್ತಿ ನದಿಯ ದಂಡೆಯ ಮೇಲೆ ಇರುವ ಸಮಯ್ ಮಾತಾ ಹಿಂದೂ ದೇವಾಲಯಕ್ಕೆ ಮುಸ್ಲಿಂ ಸಮುದಾಯದ ಸಮಾಜವಾದಿ ಪಕ್ಷದ ಶಾಸಕಿ ಸಯೀದಾ ಖಾತೂನ್ ಪ್ರವೇಶಿಸಿದ್ದರಿಂದ ದೇವಸ್ಥಾನ ಮೈಲಿಗೆಯಾಯಿತೆಂದು ಬಿಜೆಪಿ ಹಾಗೂ ಹಿಂದೂಯುವವಾಹಿನಿಗೆ ಸೇರಿದ ಕಾರ್ಯಕರ್ತರು ಗಂಗಾನದಿಯಿಂದ ದೇವಸ್ಥಾನವನ್ನು ತೊಳೆದು,ಶುದ್ಧಿಗೊಳಿಸಿದ ‘ಬುದ್ಧಿಭ್ರಮೆಯ’ ಅಲ್ಪತನ ಹಾಗೂ ವಿಕೃತಿ ಮೆರೆದಿದ್ದಾರೆ.ಶಾಸಕಿ ಸಯೀದಾ ಖಾತೂನ್ ಅವರೇನು ಸ್ವಯಂಪ್ರೇರಣೆಯಿಂದ ಆ ದೇವಸ್ಥಾನಕ್ಕೆ ಹೋಗಿರಲಿಲ್ಲ.ಸ್ಥಳೀಯರ ಆಹ್ವಾನದ ಮೇರೆಗೆ ಸಮಯ್ ಮಾತಾ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆಯೋಜಿಸಿದ್ದ ‘ ಷಟ್ಚಂಡಿ ಹೋಮ’ ದಲ್ಲಿ ಪಾಲ್ಗೊಂಡು ಧಾರ್ಮಿಕ ಸಾಮರಸ್ಯ ಎತ್ತಿಹಿಡಿದಿದ್ದಾರೆ.ಮುಸ್ಲಿಂ ಸಮುದಾಯದ ಶಾಸಕಿಯಾಗಿದ್ದರೂ ಹಿಂದೂ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಂಡಿರುವ ಸಯೀದಾ ಖಾತೂನ್ ಅವರ ನೆರೆಹೊರೆಯಲ್ಲಿರುವ ಬ್ರಾಹ್ಮಣರು ಮತ್ತು ಸಂತರುಗಳ ಆಹ್ವಾನದ ಮೇರೆಗೆ ಸಮಯ್ ಮಾತಾ ದೇವಸ್ಥಾನಕ್ಕೆ ಭೇಟಿನೀಡಿದ್ದಾರೆ.ಶಾಸಕಿಯು ದೇವಸ್ಥಾನದಿಂದ ನಿರ್ಗಮಿಸಿದ ಬಳಿಕ ಬಧಾನಿ ಚಾಫಾನಗರ ಪಂಚಾಯತಿಯ ಮುಖ್ಯಸ್ಥ ಧರ್ಮರಾಜ್ ವರ್ಮಾ ಮತ್ತು ಆತನ ಬೆಂಬಲಿಗರು ಘಟನೆಯ ಬಗ್ಗೆ ಆಕ್ರೋಶವ್ಯಕ್ತಪಡಿಸಿ,ಗಂಗಾಜಲದಿಂದ ದೇವಾಲಯವನ್ನು ಸ್ವಚ್ಛಗೊಳಿಸಿ,ಮಂತ್ರಪಠಿಸಿದ್ದಾರಂತೆ.ಧರ್ಮರಾಜ್ ವರ್ಮಾ ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಮುಸ್ಲಿಂ ಸಮುದಾಯದ ಮಹಿಳಾ ಶಾಸಕಿಯ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದು ಖಂಡನೀಯ ಮಾತ್ರವಲ್ಲ,ಆತನ ಚುನಾಯಿತ ಪ್ರತಿನಿಧಿತ್ವವನ್ನು ರದ್ದುಪಡಿಸಬಹುದಾದ ಅಪರಾಧ.ಆತ ಬಿಜೆಪಿಯ ಮುಖಂಡನಾಗಿದ್ದಲ್ಲದೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿರುವ ಹಿಂದೂಯುವ ವಾಹಿನಿಯ ಸಕ್ರಿಯಕಾರ್ಯಕರ್ತನಂತೆ!

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಸ್ಲಿಂ ಸಮುದಾಯದ ಮಹಿಳಾ ಶಾಸಕಿಯ ಗೌರವಕ್ಕೆ ಚ್ಯುತಿಯನ್ನುಂಟು ಮಾಡಿದವರ ವಿರುದ್ಧ ಕ್ರಮಜರುಗಿಸಬೇಕು.ಸಂವಿಧಾನಕ್ಕೆ ಅಪಚಾರ ಎಸಗಿದ ಯಾರೇ ಆಗಿರಲಿ ದಂಡನಾರ್ಹರು.ಸಾರ್ವಜನಿಕ ದೇವಸ್ಥಾನ,ಆರಾಧನಾ ಸ್ಥಳಗಳಿಗೆ ಯಾರಿಗೂ ಪ್ರವೇಶ ನಿರ್ಬಂಧಿಸುವಂತಿಲ್ಲ.ಅದರಲ್ಲೂ ಜನಪ್ರತಿನಿಧಿಯಾಗಿರುವ ಶಾಸಕಿಯ ಪ್ರವೇಶವನ್ನು ಪ್ರಶ್ನಿಸುವುದು ಮೂರ್ಖತನ.ವರ್ಮಾ ಮುಸ್ಲಿಂಸಮುದಾಯದ ಶಾಸಕಿಯನ್ನು ಆಹ್ವಾನಿಸಿ ಹಿಂದೂಧರ್ಮಕ್ಕೆ ಅಪಚಾರವೆಸಗಲಾಗಿದೆ,ಮುಸ್ಲಿಂ ಶಾಸಕಿ ಗೋಮಾಂಸ ತಿನ್ನುತ್ತಾರೆ ಹಾಗೆ ಹೀಗೆ ಎಗರಾಡಿದ್ದಾನೆ.ಶಾಸಕರ ಹಕ್ಕುಚ್ಯುತಿಯ ಈ ಪ್ರಕರಣವು ನಾಗರಿಕ ಸಮಾಜಕ್ಕೊಂದು ಕಳಂಕ ,ಪ್ರಗತಿಶೀಲಮನಸ್ಸಿನ ಹಿಂದೂಗಳು ತಲೆತಗ್ಗಿಸುವ ವಿಚಾರ.

ಮುಸ್ಲಿಂಸಮುದಾಯಕ್ಕೆ ಸೇರಿದ ಶಾಸಕಿ ದೇವಸ್ಥಾನ ಪ್ರವೇಶಿಸಿದ ಮಾತ್ರಕ್ಕೆ ದೇವಸ್ಥಾನವೇನೂ ಮೈಲಿಗೆಯಾಗುವುದಿಲ್ಲ.ಅಲ್ಲಿ ಮೈಲಿಗೆ ಮನಸ್ಕರೇ ಇದ್ದಾರಲ್ಲ! ಅಂತಹ ಮಲಿನಮನಸ್ಕರುಗಳ ಪೂಜೆ,ಅರ್ಚನೆ ಸೇವೆಗಳಿಂದ ನಿತ್ಯಮಾಲಿನ್ಯತೆಯನ್ನು ಅನುಭವಿಸುತ್ತಿರುವ ದೇವಸ್ಥಾನವು ಅನ್ಯಮತಸಹಿಷ್ಣುಭಾವನೆಯಿಂದ ಬಂದಿದ್ದ ಮುಸ್ಲಿಂಶಾಸಕಿಯ ಪಾದಸ್ಪರ್ಶದಿಂದ ಪಾವನವಾಗಿದೆ,ಪರಿಶುದ್ಧಿಗೊಂಡಿದೆ.ಸಯೀದಾ ಖಾತೂನ್ ಅವರು ತಮ್ಮ ಸಮುದಾಯದ ಆಕ್ಷೇಪವನ್ನು ಕಡೆಗಣಿಸಿ ಹಿಂದೂ ದೇವಸ್ಥಾನಕ್ಕೆ ಆಗಮಿಸಿ ಧಾರ್ಮಿಕ ಸಾಮರಸ್ಯ,ಹಿಂದೂ ಮುಸ್ಲಿಂ ಸಹೋದರತ್ವ ಎತ್ತಿಹಿಡಿದಿದ್ದಾರೆ.ಹಿಂದೂ ಮುಸ್ಲಿಮರಲ್ಲಿ ರಾಜಕೀಯ ಲಾಭಕ್ಕಾಗಿ ಸದಾ ಬೆಂಕಿಹಚ್ಚುವ ಜನರಿಗೆ ಇದನ್ನು ಸಹಿಸಲಾಗಿಲ್ಲ.ಶುದ್ಧಿಗೊಳಿಸಬೇಕಾಗಿದ್ದು ಸಮಯ್ ಮಾತಾ ದೇವಸ್ಥಾನವನ್ನಲ್ಲ, ಈ ವಿಕೃತಮನಸ್ಕರ ಮೈ ಮನಸ್ಸುಗಳನ್ನು.ಇಂತಹ ವಿಕೃತಮನಸ್ಕರುಗಳ ಪೈಶಾಚಿಕ ನಡತೆಗಳಿಂದಲೇ ಹಿಂದೂ ಧರ್ಮವು ಜನಮಾನಸದಿಂದ ದೂರವಾಗುತ್ತಿದೆ.ಇದು ಅನಾಗರಿಕ ಆಚರಣೆಯೇ ಹೊರತು ಸುಸಂಸ್ಕೃತಮನಸ್ಕರು ಆಚರಿಸುವ ಧಾರ್ಮಿಕ ಸನ್ನಡತೆಯಲ್ಲ.

About The Author