ಭಾರತದ ಉಪರಾಷ್ಟ್ರಪತಿ ಹುದ್ದೆಗೆ ತಕ್ಕುದಲ್ಲದ ಜಗದೀಪ ಧನಕರ್ ಅವರ ಆಕ್ಷೇಪಾರ್ಹ ನಡೆ

ಭಾರತದ ಉಪರಾಷ್ಟ್ರಪತಿ ಹುದ್ದೆಗೆ ತಕ್ಕುದಲ್ಲದ ಜಗದೀಪ ಧನಕರ್ ಅವರ ಆಕ್ಷೇಪಾರ್ಹ ನಡೆ: ಮುಕ್ಕಣ್ಣ ಕರಿಗಾರ

ಭಾರತದ ಉಪರಾಷ್ಟ್ರಪತಿ ಜಗದೀಪ ಧನಕರ್ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ ಅವರು ನೀಡುತ್ತಿರುವ ವಿಚಿತ್ರ ಹೇಳಿಕೆಗಳಿಂದ.ಸುಪ್ರೀಂಕೋರ್ಟಿಗೆ ಸಂಬಂಧಿಸಿದ ವಿಷಯಗಳಲ್ಲಿಯೂ ಕೂಡ ಅವರು ತಮ್ಮ ಹುದ್ದೆಯ ಸಾಂವಿಧಾನಿಕ ಹೊಣೆಗಾರಿಕೆ ಮರೆತು ಮಾತನಾಡುತ್ತಾರೆ.ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಜಗದೀಪ್ ಧನಕರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮೆಚ್ಚಿಸಲು ಆಗಾಗ ವಿವಾದಾತ್ಮಕವಾದ,ಅವರ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲದ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.ನವೆಂಬರ್ 27 ರ ಸೋಮವಾರದಂದು ಅವರು ಇಂತಹದೆ ವಿಚಿತ್ರ ,ಆಕ್ಷೇಪಾರ್ಹ ಹೇಳಿಕೆ ಒಂದನ್ನು ನೀಡಿದ್ದಾರೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ‘ ಯುಗಪುರುಷ’ ಎಂದು ಬಣ್ಣಿಸಿ. ಅವರು ನಿನ್ನೆ ಮುಂಬೈಯಲ್ಲಿ ಜೈನಸಂತ ಮತ್ತು ತತ್ತ್ವಜ್ಞಾನಿ ಶ್ರೀಮದ್ ರಾಜಚಂದ್ರಜಿ ಮುನಿಯವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ‘ಮಹಾತ್ಮಗಾಂಧಿಯವರು ಶತಮಾನದ ‘ ಮಹಾಪುರುಷ’ ರಾದರೆ ಪ್ರಧಾನಿ ನರೇಂದ್ರ ಮೋದಿಯವರು ಈ ಶತಮಾನದ ‘ ಯುಗಪುರುಷ’ ಎಂದು ಬಣ್ಣಿಸಿದ್ದಾರೆ.ಅವರು ತಮ್ಮ ಮಾತುಗಳನ್ನು ಮುಂದುವರೆಸಿ ‘ ಮಹಾತ್ಮಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಗಳ ಮೂಲಕ ನಮ್ಮನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಿದರೆ ಮೋದಿಯವರು ‘ ನಾವು ಸದಾ ಎಲ್ಲಿರಬೇಕೆಂದು ಬಯಸುತ್ತಿದ್ದೆವೋ ಆ ಅಭಿವೃದ್ಧಿಪಥದತ್ತ ನಮ್ಮನ್ನು ಕರೆದೊಯ್ದಿದ್ದಾರೆ’ ಎಂದು ಹೇಳಿದ್ದಾರೆ.

ಜಗದೀಪ ಧನಕರ್ ಅವರು ಕುಳಿತಿರುವ ಉಪರಾಷ್ಟ್ರಪತಿ ಹುದ್ದೆಯು ದೇಶದ ಎರಡನೇ ಅತ್ಯಂತ ದೊಡ್ಡಹುದ್ದೆ ಮತ್ತು ಸಾಂವಿಧಾನಿಕವಾಗಿ ಪ್ರಧಾನಮಂತ್ರಿಗಿಂತ ಉನ್ನತ ಹುದ್ದೆ.ಭಾರತದ ರಾಷ್ಟ್ರಪತಿಯ ನಂತರದ ಎರಡನೇ ಉನ್ನತ ಹುದ್ದೆಯಾದ ಉಪರಾಷ್ಟ್ರಪತಿ ಸ್ಥಾನದಲ್ಲಿ ಕುಳಿತಿರುವ ಜಗದೀಪ ಧನಕರ್ ಅವರು ತಮ್ಮ ಹುದ್ದೆಯ ಬಲದಿಂದ ಸಂಸತ್ತಿನ ರಾಜ್ಯಸಭೆಯ ಅಧ್ಯಕ್ಷರೂ ಹೌದು.ಪ್ರಧಾನಮಂತ್ರಿಗಿಂತ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತವರು ಪ್ರಧಾನ ಮಂತ್ರಿಯ ಬಗೆಗಿನ ತಮ್ಮ ಗೌರವ,ಅಭಿಮಾನವನ್ನು ಖಾಸಗಿಯಾಗಿ ಪ್ರಸ್ತಾಪಿಸಬಹುದೇ ಹೊರತು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನರೇಂದ್ರ ಮೋದಿಯವರ ಮುಖಸ್ತುತಿ ಮಾಡಬಾರದು.ಬೇಕಿದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಅಭಿವೃದ್ಧಿಪಥದಲ್ಲಿ ಸಾಗುತ್ತಿರುವ ಸಂಗತಿಯನ್ನು ಶ್ಲಾಘಿಸಲಿ.ಆದರೆ ವೈಯಕ್ತಿಕವಾಗಿ ನರೇಂದ್ರ ಮೋದಿಯವರನ್ನು ಹಾಡಿ,ಹೊಗಳುವುದು ಸರಿಯಲ್ಲ.ಶಿಷ್ಟಾಚಾರದಂತೆ ಅವರು ತಮ್ಮ ಹುದ್ದೆಯ ಸಾಂವಿಧಾನಿಕ ಮಹತ್ವವನ್ನು ಎತ್ತಿಹಿಡಿಯಬೇಕು.

ಮಹಾತ್ಮಗಾಂಧಿ ಮತ್ತು ನರೇಂದ್ರ ಮೋದಿ ಇಬ್ಬರೂ ಗುಜರಾತಿನಿಂದಲೇ ಬಂದವರಾದರೂ ಅವರಿಬ್ಬರು ಪರಸ್ಪರ ವಿಭಿನ್ನ ನೆಲೆಯ ವ್ಯಕ್ತಿಗಳು.ಗಾಂಧೀಜಿಯವರೊಂದಿಗೆ ನರೇಂದ್ರ ಮೋದಿ ಅವರನ್ನು ಹೋಲಿಕೆ ಮಾಡುವುದು ಸರಿಯಲ್ಲ.ಹೆಚ್ಚೆಂದರೆ ದೇಶವನ್ನಾಳಿದ ಪ್ರಧಾನಮಂತ್ರಿಗಳಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರ ವಿಶೇಷತೆ ಏನು,ಹೆಚ್ಚುಗಾರಿಕೆ ಏನು ಎಂದು ಬಣ್ಣಿಸಬಹುದೇ ಹೊರತು ಮೋದಿಯವರನ್ನು ಮಹಾತ್ಮಗಾಂಧಿಯವರೊಂದಿಗೆ ಹೋಲಿಕೆ ಮಾಡಲಾಗದು. ಬಹುಶಃ ಯೇಸುಕ್ರಿಸ್ತನ ನಂತರ ಜಗತ್ತಿನಲ್ಲಿ ಅದ್ಭುತ ಎನ್ನುವಂತೆ ಬಾಳಿದ ಏಕೈಕ ವ್ಯಕ್ತಿ,ವಿಶ್ವನಾಯಕ ಎಂದರೆ ಮಹಾತ್ಮಗಾಂಧೀಜಿಯವರು ಮಾತ್ರ.ಮಹಾತ್ಮ ಗಾಂಧೀಜಿಯವರಿಗೆ ಸರಿದೊರೆಯಾಗಬಲ್ಲ ನಾಯಕರು ಮಧ್ಯಯುಗೀನೋತ್ತರ ಜಾಗತಿಕ ಇತಿಹಾಸದಲ್ಲಿಯೇ ಇಲ್ಲ ಎಂದ ಬಳಿಕ ಮೋದಿಯವರು ಗಾಂಧೀಜಿಯವರಿಗೆ ಸಮನಾಗಬಲ್ಲರೆ? ಗಾಂಧೀಜಿಯವರನ್ನು ಮೀರಿ ಮುನ್ನಡೆಯಬಲ್ಲರೆ?

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಲಮಾನದ ಅವಶ್ಯಕತೆಯಾಗಿ ದೇಶದ ರಾಜಕೀಯ ಚುಕ್ಕಾಣಿ ಹಿಡಿದ ಯಶಸ್ವಿನಾಯಕರು,ತಮ್ಮ ನಡೆ ನುಡಿಗಳಿಂದ ವಿಶ್ವದ ನಾಯಕರನ್ನು ಪ್ರಭಾವಿತಗೊಳಿಸಿದವರು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ.ಆದರೆ ‘ಯುಗಪುರುಷ’ ಎನ್ನುವುದನ್ನು ನಿರೂಪಿಸುವಂತಹ ಸಾರ್ವಕಾಲಿಕ,ಸರ್ವಜನಾದರಣೀಯ ವ್ಯಕ್ತಿತ್ವ ನರೇಂದ್ರ ಮೋದಿಯವರದ್ದಲ್ಲ.ನರೇಂದ್ರ ಮೋದಿಯವರು ‘ ಯುಗಪುರುಷ’ ರಾಗಿದ್ದರೆ ಅವರು ಅಜಾತಶತ್ರುಗಳಾಗಿರುತ್ತಿದ್ದರು,ಇಡೀ ದೇಶದ ಜನರ ಗೌರವಾದರಗಳಿಗೆ ಪಾತ್ರರಾಗುತ್ತಿದ್ದರು.ವಸ್ತುಸ್ಥಿತಿ ಹಾಗಿಲ್ಲವಲ್ಲ!ಪ್ರಧಾನಮಂತ್ರಿಯ ಸ್ಥಾನಬಲದಿಂದ ನರೇಂದ್ರಮೋದಿಯವರು ಎಲ್ಲರ ಗೌರವಾದರಗಳಿಗೆ ಪಾತ್ರರಾಗುತ್ತಿದ್ದಾರೆಯೇ ಹೊರತು ಮುಕ್ತಮನಸ್ಸಿನಿಂದ ಅವರನ್ನು ಆರಾಧಿಸುವವರ ಸಂಖ್ಯೆ ಬಿಜೆಪಿಯಲ್ಲಿಯೇ ಕಡಿಮೆ ಇದೆ! ಪ್ರಜಾಪ್ರಭುತ್ವ ಭಾರತದಲ್ಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನರೇಂದ್ರ ಮೋದಿಯವರು ನಡೆದುಕೊಂಡಿದ್ದು ಕಡಿಮೆ.ಅವರಲ್ಲಿ ಅರಸೊತ್ತಿಗೆಯ ಕಾಲದ’ ಸಾಮ್ರಾಟ’ ವಿಜೃಂಭಿಸುತ್ತಿದ್ದಾನೆಯೇ ಹೊರತು ಪ್ರಜಾಪ್ರಭುತ್ವ ಭಾರತದ ‘ ವಿನಮ್ರಜನಸೇವಕ’ ಪ್ರಕಟಗೊಂಡಿಲ್ಲ.ತಮ್ಮ ಸಚಿವ ಸಂಪುಟದ ಹಿರಿಯ ಸಚಿವರುಗಳನ್ನೇ ತಮ್ಮ ಸಾಮಂತರು ಎನ್ನುವ ಮನೋಭಾವನೆಯಿಂದ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಹ ಹತ್ತಿರಕ್ಕೆ ಬಿಟ್ಟುಕೊಳ್ಳದಷ್ಟು ಪ್ರಜಾಪ್ರಭುತ್ವ ಭಾರತಕ್ಕೆ ಶೋಭಿಸದ ಅಂತರವನ್ನು ಕಾಪಾಡಿಕೊಂಡಿದ್ದಾರೆ.ಸಾರ್ವಜನಿಕ ಸಭೆ ಸಮಾರಂಭಗಳ ವೇದಿಕೆಗಳಲ್ಲಿ ತಮ್ಮ ಪರಮಾಪ್ತರಾದ ಇಬ್ಬರು ಮೂವರು ಕೇಂದ್ರಸಚಿವರುಗಳು,ಆಯಾ ರಾಜ್ಯದ ರಾಜ್ಯಪಾಲರು ಮತ್ತು ಹೆಚ್ಚೆಂದರೆ ಮುಖ್ಯಮಂತ್ರಿಗಳನ್ನು ಮಾತ್ರ ಬಳಿಕೂಡಿಸಿಕೊಳ್ಳುವ ಪ್ರಧಾನಮಂತ್ರಿಯವರು ಇತರನಾಯಕರು,ಪ್ರಮುಖರುಗಳನ್ನು ವೇದಿಕೆಯ ಕೆಳಗಿನ ಮುಂಭಾಗದ ಸೀಟುಗಳಿಗಷ್ಟೇ ಸೀಮಿತರನ್ನಾಗಿಸುತ್ತಾರೆ.ದೇಶದ ಪ್ರಧಾನ ಮಂತ್ರಿಯಾಗಿಯೂ ಅವರ ಸಚಿವ ಸಂಪುಟದ ಹಿರಿಯ ಸಚಿವರುಗಳ ಭೇಟಿಗೆ ಸಿಗದ ನರೇಂದ್ರ ಮೋದಿಯವರು ಜನಸಾಮಾನ್ಯರ ಪ್ರಧಾನಮಂತ್ರಿಯಾಗಬಲ್ಲರೆ?

ನರೇಂದ್ರ ಮೋದಿಯವರದು ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಎನ್ನಬಹುದಾದರೂ ಅವರೇನು ಸರಳ ಜೀವನ ನಡೆಸುತ್ತಿಲ್ಲ.ಅವರ ಊಟ,ವಿಹಾರ,ಉಡುಗೆ- ತೊಡುಗೆ,ವಿಶ್ವಪರ್ಯಟನೆಗಳು ದೇಶದ ಬೊಕ್ಕಸಕ್ಕೆ ಭಾರಿ ಹೊರೆಯಾದ ಸಂಗತಿಗಳು.ಉದ್ಯಮಿಗಳು,ಕಾರ್ಪೋರೇಟ್ ಸಂಸ್ಥೆಗಳ ಪರ ಒಲವನ್ನುಳ್ಳ ನರೇಂದ್ರ ಮೋದಿಯವರು ಜನಸಾಮಾನ್ಯರ ಬದುಕು ಬವಣೆಗಳಿಗೆ ಸ್ಪಂದಿಸುವ ‘ಬಡವರಬಂಧು’ ವಾಗಿ ಗುರುತಿಸಿಕೊಳ್ಳಲಿಲ್ಲ.ಅದಾನಿ,ಅಂಬಾನಿ,ಟಾಟಾ ಅವರುಗಳಂತಹವರ ಹೆಗಲುಗಳ ಮೇಲೆ ಕೈಯನ್ನಿಡುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಂಜಾಬಿನ ರೈತರುಗಳು ನಡೆಯಿಸಿದ ದೀರ್ಘ ಹೋರಾಟದ ಸ್ಥಳಕ್ಕೆ ಸೌಜನ್ಯಕ್ಕಾದರೂ ಭೇಟಿ ನೀಡಲಿಲ್ಲ. ನೂರಾರು ಜನ ರೈತರು ಸತ್ತರೂ ಸಂತಾಪಸೂಚಿಸಲಿಲ್ಲ.ಚುನಾವಣೆಯನ್ನು ಲಕ್ಷ್ಯದಲ್ಲಿಟ್ಟುಕೊಂಡೇ ರೈತವಿರೋಧಿ ಕಾನೂನುಗಳನ್ನು ರದ್ದುಪಡಿಸಿದರೆ ವಿನಹ ರೈತರಪರ ಕಾಳಜಿಯಿಂದ ಅಲ್ಲ.ಒಕ್ಕೂಟ ವ್ಯವಸ್ಥೆಯ ಆರ್ಥಿಕ ವ್ಯವಸ್ಥೆಯ ನರನಾಡಿಗಳಾಗಬೇಕಿದ್ದ ರಾಜ್ಯಗಳ ರಕ್ತಸಂಚಾರದ ನರಗಳನ್ನೇ ಕತ್ತರಿಸಿದರು ಉದ್ಯಮಿಗಳು,ಶ್ರೀಮಂತರುಗಳಿಗೆ ಅದೃಷ್ಟದ ಬಾಗಿಲನ್ನು ತೆರೆಯುವ ಜಿ.ಎಸ್.ಟಿ ಯನ್ನು ಜಾರಿಗೊಳಿಸುವ ಮೂಲಕ.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ಸುಧಾರಣೆಗಳ ಲಾಭವನ್ನು ಅನುಭವಿಸುತ್ತಿರುವವರು ಗುಜರಾತಿನ ವ್ಯಾಪಾರೋದ್ಯಮಿಗಳು,ಮೋದಿಯವರ ಕೃಪಾಕಟಾಕ್ಷಕ್ಕೆ ಪಾತ್ರರಾದ ಕಾರ್ಪೋರೇಟ್ ಸಂಸ್ಥೆಗಳ ವ್ಯಾಪಾರಿಗಳು ಮತ್ತು ಬಿಜೆಪಿ,ಆರ್ ಎಸ್ ಎಸ್ ಸಖ್ಯದ ಸೌಖ್ಯವನ್ನು ಅನುಭವಿಸುತ್ತಿರುವ ವ್ಯಾಪಾರೋದ್ಯಮಿಗಳು ಮಾತ್ರ.ದೇಶದ ಕೋಟಿಕೋಟಿ ಜನರ ಆರ್ಥಿಕ ಸ್ಥಿತಿ ಏನೂ ಉತ್ತಮವಾಗಿಲ್ಲ.

ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕಿತ್ತು.ಬದಲಿಗೆ ಅವರು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹಾಗೆ ನಡೆದುಕೊಂಡರು.ತಮ್ಮ ರಾಜಕೀಯ ವಿರೋಧಿಗಳಿಗೆ ಎಲ್ಲಿಲ್ಲದ ತೊಂದರೆ ಕೊಟ್ಟರು.ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಸಿ.ಬಿ.ಐ,ಇ.ಡಿ ,ಐ ಟಿಗಳಂತಹ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರುಗಳು‌ ಕಂಗಾಲಾಗುವಂತೆ ಮಾಡಿದರು.ಬಿಜೆಪಿಯೇತರ ಸರಕಾರವಿದ್ದ ರಾಜ್ಯಗಳ ಆಡಳಿತವನ್ನು ಅಭದ್ರಗೊಳಿಸಲು ಪ್ರಯತ್ನಿಸಿದರು,ರಾಜ್ಯಪಾಲರುಗಳನ್ನು ಕೇಂದ್ರದ ಏಜೆಂಟರುಗಳಂತೆ ನಡೆಸಿಕೊಂಡರು.ದೆಹಲಿ‌ ರಾಜ್ಯದ ಆಮ್ ಆದ್ಮಿ ಪಕ್ಷದ ಚುನಾಯಿತ ಸರಕಾರವು ಯಾವುದೇ ಜನಪರ ಕಾರ್ಯಗಳನ್ನು ಕೈಗೊಳ್ಳದಂತೆ ಅದನ್ನು ಬಲಹೀನಗೊಳಿಸಿದ್ದಾರೆ ಮಾತ್ರವಲ್ಲದೆ ಸುಪ್ರೀಂಕೋರ್ಟಿನ ತೀರ್ಪಿಗೆ ವಿರುದ್ಧವಾಗಿ ಪ್ರಜಾಪ್ರಭುತ್ವದ ತತ್ತ್ವ,ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅಲ್ಲಿ ಲೆಫ್ಟಿನೆಂಟ್ ಗೌರ್ನರ್ ಮತ್ತು ಅಧಿಕಾರಿಶಾಹಿಯ ಸಾಮಂತ ಸಾಮ್ರಾಜ್ಯವನ್ನು ಸೃಷ್ಟಿಸಿದ್ದಾರೆ. ಬಿಜೆಪಿಯೇತರ ಸರಕಾರಗಳಿದ್ದ ರಾಜ್ಯಗಳಲ್ಲಿ ಪಕ್ಷಾಂತರ ಕಾರ್ಯಕ್ಕೆ ಎಲ್ಲಿಲ್ಲದ ಪ್ರೋತ್ಸಾಹ ನೀಡಿದರು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಅಸ್ತಿತ್ವವನ್ನೇ ಅಳಿಸಿಹಾಕುವ ಪ್ರಯತ್ನ ಮಾಡಿ ಬಿಜೆಪಿಯ ಬಹುಕಾಲದ ಮಿತ್ರ ಶಿವಸೇನೆಯ ಸ್ಥಾಪಕ ಬಾಳಾಠಾಕ್ರೆಯವರ ಮಗ ಉದ್ಧವ್ ಠಾಕ್ರೆಯವರನ್ನು ಮುಖ್ಯಮಂತ್ರಿಸ್ಥಾನ ತೊರೆಯುವಂತೆ ಮಾಡಿದರು. ಪತ್ರಿಕಾ ಸಂಸ್ಥೆಗಳು,ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿನಡೆಸಿ ಅವರು ಉಸಿರು ಎತ್ತದಂತೆ ಮಾಡಿದರು.ಕೆಲವರಂತೂ ಮೋದಿಯವರ ಹೆಸರು ಕೇಳಿ ಚಳಿಜ್ವರ ಬಂದು ಮಲಗುವಂತೆ ಆದದ್ದು ಪ್ರಜಾಪ್ರಭುತ್ವ ಭಾರತದ ವಿಪರೀತ ವಿದ್ಯಮಾನಗಳಲ್ಲೊಂದು.ನೂತನ ಸಂಸತ್ ಭವನದ ಅಡಿಗಲ್ಲು ಸಮಾರಂಭಕ್ಕೆ ದಲಿತ ಸಮುದಾಯಕ್ಕೆ ಸೇರಿದ ಅಂದಿನ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರನ್ನು ಆಹ್ವಾನಿಸಲಿಲ್ಲ.ಸಂಸತ್ ಭವನದ ಉದ್ಘಾಟನೆಗೆ ಬುಡಕಟ್ಟು ಜನಾಂಗಕ್ಕೆ ಸೇರಿದ ಇಂದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ಸುಪ್ರೀಂಕೋರ್ಟಿನ ಕೊಲಿಜಿಯಂ ಶಿಫಾರಸ್ಸು ಮಾಡಿದ ಜಡ್ಜುಗಳ ನೇಮಕಾತಿಯಲ್ಲಿಯೂ ಅನಗತ್ಯ ವಿಳಂಬ ಮಾಡುತ್ತ ದೇಶದ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಸಹ ಪ್ರಶ್ನಿಸುವಂತೆ ನಡೆದುಕೊಳ್ಳುತ್ತಿದ್ದಾರೆ‌.ಇವೆಲ್ಲವುಗಳು ನರೇಂದ್ರ ಮೋದಿಯವರಲ್ಲಿರುವ ಸರ್ವಶ್ರೇಷ್ಠತೆಯ ವ್ಯಸನದ ವೈಯಕ್ತಿಕ ದೌರ್ಬಲ್ಯಗಳೇ ಹೊರತು ಪ್ರಜಾಪ್ರಭುತ್ವದ ಭಾರತ ಸರ್ವಜನಾದರಣೀಯ ಪ್ರಧಾನಿ ಒಬ್ಬರು ನಡೆದುಕೊಳ್ಳಬೇಕಾಗಿದ್ದ ಇತರರನ್ನು ಬೆಳೆಸಿ,ಬೆಳೆಯುವ ನೇತಾರನ ಲಕ್ಷಣಗಳಲ್ಲ.
ಇಂತೆಲ್ಲ ಆಕ್ಷೇಪಾರ್ಹ ಗುಣ ಸ್ವಭಾವಗಳನ್ನುಳ್ಳ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ ಅವರು ಮಹಾತ್ಮಗಾಂಧಿಯವರ ಸಾಲಿನಲ್ಲಿ ಕೂಡಿಸಿದ್ದಲ್ಲದೆ ಆ ಸಾಲಿನ ಅಗ್ರಮಾನ್ಯ ನಾಯಕ ಎಂಬಂತೆ ಬಿಂಬಿಸುತ್ತಿದ್ದಾರೆ ಎನ್ನುವುದು ಆಲೋಚಿಸಬೇಕಾದ ಸಂಗತಿ.

About The Author