ಉದ್ದೇಶಪೂರ್ವಕವಾಗಿ ‘ ಉಪದ್ರವಕಾರಿ ವ್ಯಕ್ತಿತ್ವ’ ವನ್ನು ಅಳವಡಿಸಿಕೊಂಡರೆ ಎದೆ ಢವಢವ ಅನ್ನುವುದು ಸಹಜ !

ಉದ್ದೇಶಪೂರ್ವಕವಾಗಿ ‘ ಉಪದ್ರವಕಾರಿ ವ್ಯಕ್ತಿತ್ವ’ ವನ್ನು ಅಳವಡಿಸಿಕೊಂಡರೆ ಎದೆ ಢವಢವ ಅನ್ನುವುದು ಸಹಜ ! : ಮುಕ್ಕಣ್ಣ ಕರಿಗಾರ

ಬಹುತ್ವಸಮಾಜದ ಭಾರತದಲ್ಲಿ ಬದುಕುತ್ತಿದ್ದೇವೆ,ಎಲ್ಲರ ನಂಬಿಕೆ ಗೌರವವಗಳನ್ನು ಗೌರವಿಸುವ ‘ ಸಂವಿಧಾನ ಪ್ರಭುತ್ವ’ ದ ಕಾಲದಲ್ಲಿದ್ದೇವೆ ನಾವಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ನಿರ್ದಿಷ್ಟ ಸಮುದಾಯ ಒಂದರ ದೇವ ದೇವಿಯರನ್ನು ಟೀಕಿಸುವುದೇ ಜೀವನದ ಸಾರ್ಥಕ್ಯ ಎಂದು ಭ್ರಮಿಸಿರುವ ಬೈಲೂರು ನಿಜಗುಣಾನಂದ ಸ್ವಾಮೀಜಿ ಬಸವಕಲ್ಯಾಣದಲ್ಲಿ ‘ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿಯು ಆಯೋಜಿಸಿದ್ದ ಎರಡನೇ ದಿನದ ಅನುಭವ ಮಂಟಪ ಮತ್ತು ಮಹಿಳಾ ಮೀಸಲಾತಿಗೋಷ್ಠಿಯಲ್ಲಿ ಮಾತನಾಡುತ್ತ ” ಬಸವಣ್ಣನವರ ವೈಚಾರಿಕತೆ ಹೇಳುವವರ ಬಾಯಿಗೆ ಬೀಗ ಹಾಕುವ ಹುನ್ನಾರ ನಡೆಯುತ್ತಿದೆ.ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗಿದೆ.ಹೀಗಾಗಿ ಏನಾದರೂ ಹೇಳಬೇಕೆಂದರೆ ಎದೆ ಢವಢವ ಎನ್ನುತ್ತದೆ”ಎಂದು ಹೇಳಿದ್ದಾರೆ.ನಿಜಗುಣಾನಂದ ಸ್ವಾಮೀಜಿಯವರು ತಮ್ಮ ಉಪನ್ಯಾಸದಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಗಣೇಶನ ಪೂಜೆಯನ್ನು ವಿರೋಧಿಸಿದ್ದು ‘ ಲಿಂಗಾಯತರಲ್ಲಿ ಗಣೇಶನ ಪೂಜೆ ಇಲ್ಲ ಎಂದಿದ್ದಕ್ಕೆ ವಿರೋಧಿಸುತ್ತಿದ್ದಾರೆ’ ಎಂದು ಪಂಡಿತಾರಾಧ್ಯ ಶಿವಾಚಾರ್ಯರ ಸಮರ್ಥನೆ ಮಾಡಿದ್ದಲ್ಲದೆ ಎಂ ಎಂ ಕಲ್ಬುರ್ಗಿಯವರು ‘ ಕಲ್ಲು ದೇವರಲ್ಲ’ ಎಂದಿದ್ದಕ್ಕೆ ಅವರನ್ನು ಕೊಲೆ ಮಾಡಲಾಯಿತು ಎಂದು ಕಲ್ಬುರ್ಗಿಯರ ಕೊಲೆಯ ವ್ಯಾಖ್ಯಾನ ಮಾಡಿದ್ದಾರೆ.’ ನಾನು ಸಹ ತಪ್ಪು ಹೇಳದಿದ್ದರೂ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಅಲವತ್ತುಕೊಂಡಿದ್ದಾರೆ.

ವಿಶ್ವಕಂಡ ಮಹಾನ್ ವಿಭೂತಿಪುರುಷರಲ್ಲೊಬ್ಬರಾದ ಕನ್ನಡದ ಹೆಮ್ಮೆ ಬಸವಣ್ಣನವರ ವೈಚಾರಿಕ ವಿಚಾರಗಳನ್ನು ಪ್ರಸಾರಮಾಡಲು ಯಾರೂ ಆಕ್ಷೇಪಿಸುವುದಿಲ್ಲ ಆದರೆ ಬಸವಣ್ಣನವರ ಹೆಸರಿನಲ್ಲಿ ಮನಸ್ಸಿಗೆ ಬಂದದ್ದನ್ನು ಮಾತನಾಡಿ ಇತರರ ಮನಸ್ಸು ನೋಯಿಸಬಾರದು ಎನ್ನುವುದು ನಿಜಗುಣಾನಂದಸ್ವಾಮಿಯವರು ಅರ್ಥಮಾಡಿಕೊಳ್ಳಬೇಕು.ನಾನು ಅವರ ಬಹಳಷ್ಟು ಭಾಷಣ,ಉಪನ್ಯಾಸ( ಅವರ ಭಾಷಣಗಳು ‘ ಪ್ರವಚನ’ ಎಂದು ಕರೆಯಿಸಿಕೊಳ್ಳುವ ಅರ್ಹತೆ ಪಡೆದಿಲ್ಲವಾದ್ದರಿಂದ ನಾನು ಭಾಷಣ ಇಲ್ಲವೆ ಉಪನ್ಯಾಸ ಎಂದು ಮಾತ್ರ‌ಕರೆಯುತ್ತೇನೆ)ಗಳನ್ನು ಕೇಳಿದ್ದೇನೆ,ಪತ್ರಿಕೆಗಳಲ್ಲಿ ಆ ಕುರಿತ ವರದಿಗಳನ್ನು ಓದಿದ್ದೇನೆ.ಅವರ ಉಪನ್ಯಾಸಗಳಲ್ಲಿ ‘ ಮಂತ್ರಕ್ಕಿಂತ ಉಗುಳೇ ಜಾಸ್ತಿ’ ಇರುತ್ತದೆ.ಬಸವತತ್ತ್ವದ ವಿಚಾರಧಾರೆಗಿಂತ ನಿಜಗುಣಾನಂದಸ್ವಾಮಿಯವರ ವಿಕೃತ ಆಲೋಚನೆಗಳೇ ಹೆಚ್ಚು ವಿಜೃಂಭಿಸುತ್ತವೆ ಅವರ ಮಾತುಗಳಲ್ಲಿ.ಬಸವಣ್ಣನವರು ಏಕದೇವತೋಪಾಸನೆಯ ಪ್ರತಿಪಾದನೆಗಾಗಿ,ಇಷ್ಟಲಿಂಗದ ಮಹತ್ವದ ಪ್ರತಿಪಾದನೆಗಾಗಿ ಅಲ್ಲಲ್ಲಿ ,ಪ್ರಾಸಂಗಿಕವಾಗಿ ಇತರ ದೇವ ದೇವಿಯರನ್ನು ಟೀಕಿಸಿದ್ದಾರೆಯೇ ಹೊರತು ನಿಜಗುಣಾನಂದಸ್ವಾಮಿಯರಂತೆ ಇತರರ ನಂಬಿಕೆಯ ದೇವ ದೇವಿಯರನ್ನು ಟೀಕಿಸುವುದನ್ನೇ ಪುಣ್ಯದ ಕೆಲಸ ಎನ್ನುವ ಗೀಳಿಗೆ‌ ಒಳಗಾಗಿರಲಿಲ್ಲ.ಒಬ್ಬ ಮತಸ್ಥಾಪಕ ಮತ್ತು ಮತೋದ್ಧಾರಕರಾಗಿ ತಮ್ಮ ಮತದ ಸತ್ತ್ವ- ತತ್ತ್ವದ ಪ್ರತಿಪಾದನೆಗಾಗಿ ಬಸವಣ್ಣನವರು ಅನ್ಯದೈವಗಳನ್ನು ತೆಗಳಿದ್ದರೆ — ಎಲ್ಲ ಮತಾಚಾರ್ಯರುಗಳಂತೆ ಮತಾವೇಶದಿಂದ— ಅದು ಸಹಜ ಧಾರ್ಮಿಕ ಪ್ರಕ್ರಿಯೆ ಎಂದು ಅರ್ಥ ಮಾಡಿಕೊಳ್ಳಬಹುದು.ಆದರೆ ಉದ್ದೇಶಪೂರ್ವಕವಾಗಿಯೇ ಭಾರತೀಯ ಸಂಸ್ಕೃತಿಯ ದೇವ ದೇವಿಯರು ಮತ್ತು ಅವರ ಭಕ್ತರುಗಳನ್ನು ಟೀಕಿಸುವ ನಿಜಗುಣಾನಂದ ಸ್ವಾಮಿಯವರ ತೆವಳನ್ನು ಏನೆಂದು ಅರ್ಥೈಸುವುದು ?

ನಿಜಗುಣಾನಂದಸ್ವಾಮಿಯವರು ತಮ್ಮ ಮಾತಿನಭರದಲ್ಲಿ ಮೈಯಲ್ಲಿ ‘ದೆವ್ವಹೊಕ್ಕವರಂತೆ’ ಭಾರತೀಯ ಸಂಸ್ಕೃತಿಯಲ್ಲಿ ಬಸವಪೂರ್ವದ ಬಹುಕಾಲದಿಂದಲೂ ಪೂಜಿಸಲ್ಪಡುತ್ತಿರುವ ದೇವದೇವಿಯರ ಬಗ್ಗೆ ಮನಸ್ಸಿಗೆ ಬಂದಂತೆ ಟೀಕೆ ಮಾಡುತ್ತಾರೆ.ಪರರ ಮನಸ್ಸನ್ನು ನೋಯಿಸುವುದು ಪಾಪಕಾರ್ಯ ಎನ್ನುವುದು ಈ ಕಾಷಾಯಾಧಾರಿ ಸ್ವಾಮಿಯವರಿಗೆ ಅರ್ಥವಾಗಿಲ್ಲ.’ ಅನ್ಯರಿಗೆ ಅಸಹ್ಯಪಡಬೇಡ’ ಎನ್ನುವ ಬಸವಣ್ಣನವರ ಸರ್ವಧರ್ಮಸಮನ್ವಯ ತತ್ತ್ವಾರ್ಥವೂ ಹೊಳೆದಿಲ್ಲ ದಂಡ,ಕಾವಿಗಳನ್ನು ಧರಿಸಿ ‘ ಯಾವುದಕ್ಕೂ ಅಂಟದ ಅತೀತ ತತ್ತ್ವವನ್ನು ಎತ್ತಿಹಿಡಿಯುವುದೇ ಸಂನ್ಯಾಸಧರ್ಮ’ ಎಂದು ತಿಳಿದುಕೊಳ್ಳದ ನಿಜಗುಣಾನಂದರಿಗೆ ಬಸವಣ್ಣನವರ ‘ಸಮಷ್ಟಿಕಲ್ಯಾಣ ತತ್ತ್ವದರ್ಶನ’ ಅರ್ಥವಾಗದು.’ ಉಳ್ಳವರು ಶಿವಾಲಯವ ಮಾಡುವರು’ , ‘ ಕಲ್ಲನಾಗರ ಕಂಡರೆ ಹಾಲನೆರೆ ಎಂಬರು’ ಇವೇ ಮೊದಲಾದ ವಚನಗಳಲ್ಲಿ ಬಸವಣ್ಣನವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿತೀಡಿ ನೇರ್ಪುಗೊಳಿಸುವ ಸ್ವಸ್ಥಸಮಾಜ,ಶಿವಸಮಾಜವನ್ನು ಕಟ್ಟುವ ಗುರು,ದಾರ್ಶನಿಕ ಮತ್ತು ಸಮಾಜಸುಧಾರಕರಾಗಿದ್ದಾರೆಯೇ ಹೊರತು ವಿಪರೀತಮತಿಗಳು ಅರ್ಥೈಸಿಕೊಂಡಂತೆ ಗುಡಿಗುಂಡಾರಗಳನ್ನು ಕಟ್ಟಬೇಡಿ,ಇತರ ದೇವದೇವಿಯರನ್ನು ಪೂಜಿಸಬೇಡಿ ಎಂದು ಉಪದೇಶಿಸಲಿಲ್ಲ.ಅಂದಿನ ಸಮಾಜದಲ್ಲಿ ಶೂದ್ರರು,ಶೋಷಿತರು ಮತ್ತು ಮಹಿಳೆಯರು ಅನುಭವಿಸುತ್ತಿದ್ದ ಸಾಮಾಜಿಕ- ಧಾರ್ಮಿಕ ಶೋಷಣೆಯಿಂದ ಅವರನ್ನು ಮೇಲಕ್ಕೆತ್ತಿ ಉದ್ಧರಿಸುವ ಸದುದ್ದೇಶ ಬಸವಣ್ಣನವರದಾಗಿತ್ತೇ ಹೊರತು ನಿಜಗುಣಾನಂದ ಸ್ವಾಮಿಯವರಂತೆ ಅನ್ಯರ ಭಾವನೆಗಳನ್ನು ನೋಯಿಸುವುದೇ ಧರ್ಮೋದ್ಧಾರ ಎಂದು ಬಸವಣ್ಣನವರು ಭಾವಿಸಿರಲಿಲ್ಲ.ನಿಜಗುಣಾನಂದ ಸ್ವಾಮಿಯವರು ಬಸವಣ್ಣನವರ ಸಮಗ್ರ ವಚನಗಳನ್ನು ಒಂದಲ್ಲ, ಹತ್ತಾರು ಬಾರಿ ಓದಿ ಬಸವಣ್ಣನವರ ಮೇರು ವ್ಯಕ್ತಿತ್ವವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು.ವೀರಶೈವ ಲಿಂಗಾಯತ ವಿದ್ವಾಂಸರುಗಳು ಸಂಯೋಜಿಸಿದಂತೆ ಬಸವಣ್ಣನವರಾಗಲಿ ಅಥವಾ ಅವರ ಸಮಕಾಲೀನ ಯಾರೇ ವಚನಕಾರರಾಗಲಿ ‘ ಸ್ಥಲಕಟ್ಟುಗಳ’ ಆಧಾರದಲ್ಲಿ ವಚನಗಳನ್ನು ಬರೆದಿಲ್ಲ.ಅಂದಂದಿನ ಜೀವನದಲ್ಲಿ ಕಂಡುಂಡ ಸಂಗತಿಗಳಿಗೆ ವಚನರೂಪನೀಡಿ ಹಾಡಿದ್ದಾರೆ,ಉಪದೇಶಿಸಿದ್ದಾರೆ.ನಂತರದವರ ಸಂಯೋಜನೆಯಾದ ಷಟ್ ಸ್ಥಲಾಧಾರಿತ ‘ ಸ್ಥಲಕಟ್ಟು’ ಗಳ ಯೋಜನೆ ಬಸವಾದಿ ಪ್ರಮಥರನ್ನು ಒಂದು ವ್ಯವಸ್ಥೆಗೆ ಸೀಮಿತಗೊಳಿಸುವ,ಎಲ್ಲರ ಬಸವಣ್ಣನವರನ್ನು ಒಂದುಜನಸಮುದಾಯ ಆರಾಧ್ಯರನ್ನಾಗಿಸುವ ಸಂಕುಚಿತ ಮನಸ್ಸುಗಳ ಯೋಜಿತ ಆಲೋಚನೆ ಎನ್ನುವ ಕಹಿಸತ್ಯವನ್ನು ನಿಜಗುಣಾನಂದಸ್ವಾಮಿಯವರು ಅರ್ಥಮಾಡಿಕೊಂಡರೆ ಅವರು ‘ ಹೊಸಬೆಳಕಿನಲ್ಲಿ ಬಸವಣ್ಣನವರು ಅರ್ಥಮಾಡಿಕೊಳ್ಳಬಹುದು,ಬಸವದರ್ಶನ ಮಾಡಿಕೊಳ್ಳಬಹುದು.

ನಿಜಗುಣಾನಂದಸ್ವಾಮಿಯವರ ಭಾಷಣದ ಸಾಕಷ್ಟು ಸತ್ತ್ವಹೀನ ಸಂಗತಿಗಳನ್ನು ಹೇಳಬಹುದಾದರೂ ನನ್ನ ಅಂಕಣಬರಹದ ಮಿತಿಯಲ್ಲಿ ಅವುಗಳನ್ನೆಲ್ಲ ಪ್ರಸ್ತಾಪಿಸದೆ ಒಂದು ಸಂಗತಿಯನ್ನು ಮಾತ್ರ ಹೇಳುವೆ.ನಿಜಗುಣಾನಂದ ಸ್ವಾಮಿಯವರು ತಮ್ಮದೊಂದು ಭಾಷಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಿಗೆ ಗರಿಗರಿ ರೇಷ್ಮೇಸೀರೆ ನೀಡುವುದನ್ನು ಮೂಢನಂಬಿಕೆ ಎನ್ನುವಂತೆ ಬಿಂಬಿಸಿ,ಮಾತನಾಡಿದ ವಿಡಿಯೋ ನಾನು ನೋಡಿದ್ದೇನೆ.ಹೊರನಾಡು ಅನ್ನಪೂರ್ಣೇಶ್ವರಿಯು ಮಡಿಯಾದ,ಸಾವಿರಾರು ರೂಪಾಯಿಗಳ ಹೊಸ ರೇಷ್ಮೆ ಸೀರೆಗಳನ್ನೇನೂ ಉಡುವುದಿಲ್ಲ,ಒಪ್ಪೋಣ.ಆದರೆ ಸಾವಿರಾರು ರೂಪಾಯಿಗಳ ಸೀರೆ ಖರೀದಿಸಲು ಆ ಭಕ್ತರುಗಳಿಗೆ ನಿಜಗುಣಾನಂದ ಸ್ವಾಮಿಯವರೇನು ಹಣಕೊಟ್ಟಿಲ್ಲವಲ್ಲ.ಹಾಗಿದ್ದ ಬಳಿಕ ಅನ್ನಪೂರ್ಣೇಶ್ವರಿಯ ಭಕ್ತರುಗಳು ತಮ್ಮ ಸ್ವಂತಹಣದಲ್ಲಿ ದೇವಿಗೆ ಹೊಸಸೀರೆಯನ್ನರ್ಪಿಸಿ ಸಂತಸಪಟ್ಟರೆ,ಸಂಭ್ರಮಿಸಿದರೆ ನಿಜಗುಣಾನಂದರಿಗೆ ಏಕೆ ಸಂಕಟವಾಗಬೇಕು? ಅನ್ನಪೂರ್ಣೇಶ್ವರಿಗೆ ಸಾವಿರಾರು ರೂಪಾಯಿಗಳ ಸೀರೆ ನೀಡುವುದು ವ್ಯರ್ಥಖರ್ಚು ಎಂದು ಭ್ರಮಿಸುವ ನಿಜಗುಣಾನಂದರು ಬಗೆಬಗೆಯ ವಿನ್ಯಾಸದ ಸ್ಮಾರ್ಟ್ ಫೋನುಗಳು,ಬಣ್ಣಬಣ್ಣದ ಟಿ ವಿಗಳ ಗೀಳು ಜನರನ್ನು ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡುತ್ತಿದೆ ಎನ್ನುವ ಸಂಗತಿ ಗೊತ್ತಿಲ್ಲವೆ?ಮನೆಯಲ್ಲಿ ಊಟಕ್ಕಿಲ್ಲದಿದ್ದರೂ ನೂರಾರು ರೂಪಾಯಿಗಳ ಕರೆನ್ಸಿ ಹಾಕಿಸುವ ಗೀಳಿಗೆ ಹಳ್ಳಿಯ ಜನಸಾಮಾನ್ಯರು,ರೈತರುಗಳು ಅಂಟಿಕೊಂಡಿರುವ ಬಹುರಾಷ್ಟ್ರಿಯ ಕಂಪನಿಗಳ,ಉದ್ಯಮಿಗಳ ಮೋಸದಾಟದ ಸುಲಿಗೆಯ ವೃತ್ತಿಯನ್ನು ಅವರು ತಮ್ಮ ಭಾಷಣಗಳಲ್ಲಿ ಏಕೆ ಪ್ರಸ್ತಾಪಿಸುತ್ತಿಲ್ಲ? ಇಸ್ಪೀಟ್,ಕುದುರೆ ರೇಸು,ವಿವಿಧ ಪಂದ್ಯಗಳು ಸಮಾಜ ಜೀವನಕ್ಕೆ ಅಪಾಯಕಾರಿ ಎಂದು ನಿಜಗುಣಾನಂದರಿಗೆ ತಿಳಿದಿಲ್ಲವೆ ? ಬಸವಣ್ಣನವರು ಕೂಡ ಮಹಾತ್ಮ ಗಾಂಧೀಜಿಯವರಂತೆ ಮದ್ಯಪಾನ ವಿರೋಧಿಗಳಾಗಿದ್ದರು ಮದ್ಯವ್ಯಸನವು ಸಮಾಜವನ್ನು ಆರ್ಥಿಕದುಸ್ಥಿತಿಗೆ ತಳ್ಳುತ್ತದೆ ಎನ್ನುವ ಕಾರಣದಿಂದ.ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪರವಾಗಿರಬೇಕಾಗಿದ್ದ ಸರಕಾರ ಒಂದು ತನ್ನ ಆದಾಯ ಹೆಚ್ಚಿಸಿಕೊಳ್ಳಲು ಮದ್ಯಮಾರಾಟವನ್ನು ಇಮ್ಮಡಿಗೊಳಿಸುತ್ತದೆಯಲ್ಲದೆ ಗ್ರಾಮಪಂಚಾಯತಿ ಮಟ್ಟದಲ್ಲಿ ಒಂದುಸಾವಿರ ಹೊಸ ಮದ್ಯದಂಗಡಿಗಳನ್ನು ತೆರೆಯಲು ಆಲೋಚಿಸುತ್ತದೆ ಎನ್ನುವುದು ಸ್ವಸ್ಥಸಮಾಜ ನಿರ್ಮಾಣ ಕಟ್ಟುವ ಸರಕಾರದ ಜವಾಬ್ದಾರಿತ ನಡೆಯೆ? ಹಳ್ಳಿಹಳ್ಳಿಗೂ ಮದ್ಯವ್ಯಸನವನ್ನು ವ್ಯಾಪಿಸಿ,ಬಡಕುಟುಂಬಗಳು ದಿವಾಳಿಯಾಗಲು ಉತ್ತೇಜಿಸುವ ಸರಕಾರದ ಇಂತಹ ಕ್ರೂರ ಆಲೋಚನೆಗಳನ್ನು ಎಂದಾದರೂ ಖಂಡಿಸಿದ್ದಾರೆಯೆ ನಿಜಗುಣಾನಂದರು? ಉದ್ರೇಕಕಾರಿ ಭಾಷಣದಿಂದ ವಿಕೃತಮನಸ್ಕರುಗಳನ್ನು ರಂಜಿಸಿ ಸಮಾಜಕಟ್ಟುವ ಜವಾಬ್ದಾರಿಯಿಲ್ಲದ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದೇ ಸಾರ್ಥಕತೆ ಎಂದು ಭಾವಿಸುವ ನಿಜಗುಣಾನಂದಸ್ವಾಮಿಯವರಿಗೆ ಬಸವಣ್ಣನವರು ಸಮಾಜ‌ಕಟ್ಟುವ ಸುಧಾರಕರಾಗಿದ್ದರೇ ಹೊರತು ಸಮಾಜವನ್ನು ಒಡೆಯುವ,ಹಾಳುಮಾಡುವ ವಿಚ್ಛಿದ್ರಕಾರಿ ಪ್ರವೃತ್ತಿಯ ಸುಧಾರಕರು ಆಗಿರಲಿಲ್ಲ ಎನ್ನುವ ಸತ್ಯ ಗೋಚರವಾಗುವುದೇ ಇಲ್ಲ.ಅದು ನಿಜಗುಣಾನಂದರ ಮಿತಿಕೂಡ.

ಕೊನೆಯದಾಗಿ ನಿಜಗುಣಾನಂದ ಸ್ವಾಮಿ ಮತ್ತು ಬಸವಣ್ಣನವರ ಹತ್ತಾರು ವಚನಗಳನ್ನು ಮಾತ್ರ ಓದಿ ತಮ್ಮಮನಸ್ಸಿಗೆ ಬಂದಂತೆ ಬಸವಣ್ಣನವರನ್ನು ಅರ್ಥೈಸಿಕೊಳ್ಳುವ, ಲೇಬಲ್ ಅಂಟಿಸಿಕೊಂಡು ‘ ಬಸವವಾದಿಗಳು’ ಆದವರಿಗೆ ಒಂದು ವಿಷಯವನ್ನು ಹೇಳಿ ಈ ಅಂಕಣಲೇಖನ ಮುಗಿಸುವೆ.

ಬಸವಣ್ಣನವರು ತಮ್ಮ ಇಷ್ಟಲಿಂಗತತ್ತ್ವಪಾರಮ್ಯದ ಪ್ರತಿಪಾದನೆಗಾಗಿ ಅನ್ಯಮತಧರ್ಮಗಳ ದೇವರುಗಳ ಪೂಜೆಯನ್ನು ಖಂಡಿಸಿದಂತೆ ಮೈಲಾರನನ್ನು ಬಹಳಕಟುವಾಗಿ ಖಂಡಿಸಿದ್ದಾರೆ ತಮ್ಮ ವಚನಗಳಲ್ಲಿ.ಇಂದಿನ ಬೀದರ್ ಜಿಲ್ಲೆಯಲ್ಲಿದ್ದಾನೆ ಮೈಲಾರ ಮತ್ತು ಬಸವಪೂರ್ವಕಾಲದ ಸಾವಿರಾರು ವರ್ಷಗಳಿಂದ ಕುರುಬರ,ಹಾಲುಮತಸ್ಥರ ಆರಾಧ್ಯದೈವವಾಗಿ ಪೂಜೆಗೊಳ್ಳುತ್ತಿದ್ದಾನೆ.ಯಾದಗಿರಿಯ ಮೈಲಾಪುರದ ಮಲ್ಲಯ್ಯ,ಹಡಗಲಿ ತಾಲೂಕಿನ ಕಾರಣಿಕನುಡಿಯ ಮೈಲಾರ ಇವೇ ಮೊದಲಾದ ಕುರುಬರ ದೇವರುಗಳೆಲ್ಲ ಮೈಲಾರನ ರೂಪಗಳು.ಬಸವಣ್ಣನವರು ಬೀದರ ಜಿಲ್ಲೆಯ ಬಸವಕಲ್ಯಾಣವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸಮಾಜೋಧಾರ್ಮಿಕ ಸುಧಾರಣೆಯಲ್ಲಿ ತೊಡಗಿದ್ದಾಗ ಕರ್ನಾಟಕ ಮತ್ತು ಇಂದಿನ ಮಹಾರಾಷ್ಟ್ರದ ಗಡಿಜಿಲ್ಲೆಗಳ ಜನರು ಅದರಲ್ಲೂ ಕುರುಬರು ಬೀದರಿನ ಮೈಲಾರನಿಗೆ ನಡೆದುಕೊಳ್ಳುವುದು,ಭಂಡಾರ ಎರಚಿಕೊಂಡು ಸಂಭ್ರಮಿಸುವುದು,ಗೊರವಯ್ಯಗಳು ಕೊರಳಲ್ಲಿ ಕವಡೆಕಟ್ಟಿಕೊಂಡು ನಾಯಿಯಂತೆ ಅರಚುವುದು ಬಸವಣ್ಣನವರಿಗೆ ಅಸಹ್ಯವಾಗಿ ಕಾಣಿಸುತ್ತದೆ! ತಮ್ಮ ಮೂರ್ನಾಲ್ಕು ವಚನಗಳಲ್ಲಿ ಇದು ಕೀಳುಆಚರಣೆ,ಮೈಲಾರ ಕೀಳು ದೈವ ಎಂಬಂತೆ ಟೀಕಿಸಿದ್ದಾರೆ ಬಸವಣ್ಣನವರು.ಆದರೆ ಬಸವಣ್ಣನವರ ಕಾಲದಲ್ಲಿ ವೈಭವೋಪೇತವಾಗಿ ಪೂಜಿಸಲ್ಪಡುತ್ತಿದ್ದ ಬೀದರಿನ ಮೈಲಾರನು ಬಸವಣ್ಣನವರು ಕಾಲವಾಗಿ ಎಂಟುನೂರು ವರ್ಷಗಳಾಗಿದ್ದರೂ ಬಸವಕಾಲಕ್ಕಿಂತ ವೈಭವಯುತವಾದ,ಅದ್ದೂರಿ ಪೂಜೆ ಸೇವೆಗಳನ್ನು ಸ್ವೀಕರಿಸುತ್ತಿದ್ದಾನಲ್ಲ?ಬಸವಣ್ಣ ಹೇಳಿದರೆಂದು ಜನರು ಮೈಲಾರನ ಪೂಜೆಯನ್ನು ಬಿಡಲಿಲ್ಲ ಇಂದು ಬಸವಣ್ಣನವರ ಅನುಯಾಯಿಗಳು ಟೀಕಿಸುತ್ತಾರೆಂದೂ ಮೈಲಾರನ ಭಕ್ತರು ತಮ್ಮ ಪೂಜೆ ನಿಲ್ಲಿಸುವುದಿಲ್ಲ!ಬಸವಣ್ಣನವರಿಗಿಂತ ಸಾವಿರಾರು ವರ್ಷಗಳ ಹಿಂದಿನಿಂದಲೂ ‘ದೇವರು’ ಆಗಿ ಪೂಜೆಗೊಳ್ಳುತ್ತಿದ್ದ ‘ ಮೈಲಾರ’ ನು ಬಸವಣ್ಣನವರ ಖಂಡನೆಗೆ ಒಳಗಾಗಿಯೂ ಇಂದಿಗೂ ಬೆಳೆದು ನಿಂತಿದ್ದಾನೆ ಮುಂದೆಯೂ ಈ ಜಗತ್ತು ಇರುವವರೆಗೂ ಪೂಜೆಗೊಳ್ಳುತ್ತಾನೆ ತನ್ನ ಅಂತಃಶಕ್ತಿಯಿಂದ.ಇದು ಜನರ ಭಾವನೆ.ಜನರ ಭಾವನೆಯನ್ನು ಯಾರೊಬ್ಬರೂ ಹತ್ತಿಕ್ಕಲಾರರು ಎನ್ನುವುದಕ್ಕೆ ಬಸವಣ್ಣನವರ ಎದುರೇ ಎದೆಸೆಟೆದು ನಿಂತು ಇಂದಿಗೂ ಪೂಜೆಗೊಳ್ಳುತ್ತಿರುವ ಮೈಲಾರನೇ ಸಾಕ್ಷಿ.ಹಾಗೆಯೇ ನಿಜಗುಣಾನಂದರು ಕಣ್ಣು ತೆರೆದು ತೊಟ್ಟಿಲಲ್ಲಿ ಮಗುವಾಗಿ ಆಡುವ ಸಾವಿರಾರು ವರ್ಷಗಳ ಹಿಂದಿನಿಂದಲೂ ಜಗದಂಬೆಯಾಗಿ ಜಗದಮಕ್ಕಳ ತಾಯಿಯಾಗಿ ಜಗದ ತೊಟ್ಟಿಲು ತೂಗುತ್ತಿರುವ ಹೊರನಾಡು ಅನ್ನಪೂರ್ಣೇಶ್ವರಿಯ ಪೂಜೆ ನಿಲ್ಲುವುದಿಲ್ಲ,ಜಗತ್ತು ಇರುವವರೆಗೆ ನಡೆದೇ ಇರುತ್ತದೆ.ತಿಳಿನೀರಲಿನಲ್ಲಿ ಕಲ್ಲುಹಾಕಿ ರಾಡಿ ಎಬ್ಬಿಸುವ ನಿಜಗುಣಾನಂದಸ್ವಾಮಿಯವರಂತಹ ಎಷ್ಟೋಜನ ‘ ವಿಶೇಷ ಬುದ್ಧಿಜೀವಿಗಳನ್ನು’ ಕಂಡಿದ್ದಾಳೆ ಜಗನ್ಮಾತೆಯ ಲೀಲಾರೂಪಳಾದ ಅನ್ನಪೂರ್ಣೇಶ್ವರಿಯು.ಸಾಣೆಹಳ್ಳಿ ಪಂಡಿತಾರಾಧ್ಯರು ‘ ಲಿಂಗಾಯತರಲ್ಲಿ ಗಣಪತಿಯ ಪೂಜೆ ಇಲ್ಲ’ ಎಂದರೆ ಸಾಕಾಗುತ್ತಿತ್ತು.ಅವರು ‘ ಗಣಪತಿ ಕಾಲ್ಪನಿಕ ದೇವರು’ ಹಾಗೆ ಹೀಗೆ ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ ಎನ್ನುವುದನ್ನು ನಿಜಗುಣಾನಂದರು ಅರ್ಥಮಾಡಿಕೊಳ್ಳಬೇಕು.ಇದೇ ಕಾಲ್ಪನಿಕ ಗಣಪತಿಯೇ ಭಾರತದ ಸ್ವಾತಂತ್ರಸಂಗ್ರಾಮಕ್ಕೆ ಸ್ಫೂರ್ತಿಯಾಗಿದ್ದ ಎನ್ನುವುದನ್ನು ಸ್ವತಂತ್ರಭಾರತದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯವನ್ನು ಅನುಭವಿಸುತ್ತಿರುವ ನಿಜಗುಣಾನಂದರು ಅರ್ಥಮಾಡಿಕೊಳ್ಳುತ್ತಾರೆಯೆ? ಎಂ ಎಂ ಕಲ್ಬುರ್ಗಿಯವರ ಕೊಲೆಯನ್ನು ಯಾರೂ ಸಮರ್ಥಿಸಲಾರರು.ಕನ್ನಡನಾಡು ಕಂಡ ಅಪರೂಪದ ಪ್ರತಿಭಾವಂತರಲ್ಲಿ ಎಂ ಎಂ ಕಲ್ಬುರ್ಗಿಯವರು ಒಬ್ಬರು.ಅವರ ಸಾವಿನ ಕಾರಣ ಪೋಲೀಸರ ತನಿಖೆ ಮತ್ತು ನ್ಯಾಯಾಲಯದ ತೀರ್ಪಿನಿಂದ ನಿರ್ಣಯವಾಗುವ ವಿಷಯವೇ ಹೊರತು ‘ಕಲ್ಲುದೇವರಲ್ಲ’ ಎಂದು ಹೇಳಿದ್ದಕ್ಕೆ ಎಂ ಎಂ ಕಲ್ಬುರ್ಗಿಯವರ‌ ಕೊಲೆಯಾಯಿತು ಎಂದು ನಿರ್ಧರಿಸುವುದು ಅಪಕ್ವವಿಚಾರ.ಎಂ ಎಂ ಕಲ್ಬುರ್ಗಿಯವರು ಎಷ್ಟೇ ಬುದ್ಧಿವಂತರಿದ್ದರೂ ನಿಜಗುಣಾನಂದಸ್ವಾಮಿಯವರಂತೆ ಅವರಿಗೂ ಇತರರ ಧಾರ್ಮಿಕ ನಂಬಿಕೆಯನ್ನು ಕೆದಕುವ ತೆವಲೂ‌ ಇತ್ತು ಎನ್ನುವುದನ್ನು ಮರೆಯಬಾರದು.ಸಾಕಷ್ಟು ದೇವರುಗಳನ್ನು ಖಂಡಿಸಿದ್ದ ಎಂ ಎಂ ಕಲ್ಬುರ್ಗಿಯವರು ‘ ಗಣಪತಿಯ ಮೇಲೆ ಉಚ್ಛೆ ಒಯ್ಯಬೇಕು’ ಎನ್ನುವ ವಿದ್ವಜ್ಜನರಿಗೆ ಸಲ್ಲದ,ನಾಗರಿಕರ ಬಾಯಲ್ಲಿ ಬರಬಾರದ ಮಾತನ್ನು ಆಡಿದ್ದರು ಎನ್ನುವುದು ನಿಜಗುಣಾನಂದರಿಗೆ ನೆನಪಿಲ್ಲವೆ ? ನಿಜಗುಣಾನಂದರಾಗಲಿ,ಪಂಡಿತಾರಾಧ್ಯರಾಗಲಿ ಬಸವ ತತ್ತ್ವವನ್ನು ಪ್ರಚಾರ ಮಾಡುವ ಸ್ವಾತಂತ್ರ್ಯಪಡೆದಿದ್ದಾರೆ; ಆದರೆ ಅದೇ ವೇಳೆಗೆ ನಾವು ಬದುಕುತ್ತಿರುವುದು ಸ್ವತಂತ್ರಭಾರತದ ಗತಿನಿರ್ಧಾರಕಶಕ್ತಿಯಾದ ಸಂವಿಧಾನದ ಅಡಿಯಲ್ಲಿ ಎನ್ನುವುದನ್ನು ಮರೆಯಬಾರದು.ನಮ್ಮ ಪ್ರಬುದ್ಧ ಸಂವಿಧಾನವು ಭಾರತಕ್ಕೆ ಯಾವುದೇ ರಾಷ್ಟ್ರೀಯಧರ್ಮ ಇದೆ ಎಂದು ಪ್ರತಿಪಾದಿಸುವುದಿಲ್ಲ ಮಾತ್ರವಲ್ಲ ,ಈ ದೇಶದ ಪ್ರತಿಯೊಬ್ಬರಿಗೂ ಅವರವರ ಮತ,ಧರ್ಮ,ನಂಬಿಕೆಯ ದೇವರು- ದೈವಗಳನ್ನು ಪೂಜಿಸುವ ‘ ಉಪಾಸನಾ ಸ್ವಾತಂತ್ರ್ಯ’ ವನ್ನೂ ನೀಡಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ನಿಜಗುಣಾನಂದರಾಗಲಿ,ಪಂಡಿತಾರಾಧ್ಯರಾಗಲಿ ಬಸವತತ್ತ್ವದ ಹಿರಿಮೆ ಗರಿಮೆಗಳನ್ನು ಎತ್ತಿಹಿಡಿಯುವುದು ಅವರ ‘ ಉಪಾಸನಾ ಸ್ವಾತಂತ್ರ್ಯ’ ಎನ್ನಿಸಿಕೊಳ್ಳುತ್ತದೆ ಆದರೆ ಗಣಪತಿಯ ಪೂಜೆ ಸಲ್ಲದು,ಹೊರನಾಡು ಅನ್ನಪೂರ್ಣೇಶ್ವರಿಯ ಪೂಜೆ ಸಲ್ಲದು ಎನ್ನುವುದು ಸಂವಿಧಾನದ ಮೂಲಭಾಗವಾದ ಸಂವಿಧಾನದ ಪೀಠಿಕೆಯಲ್ಲಿಯೇ ಅಂತರ್ಗತವಾದ ‘ ಉಪಾಸನಾ ಸ್ವಾತಂತ್ರ್ಯ’ ಕ್ಕೆ ಧಕ್ಕೆ ತರುವ ಸಂಗತಿ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅವರಿಬ್ಬರಿಗೂ ಶ್ರೇಯಸ್ಕರ.

About The Author