ಶೂದ್ರ ಸಮುದಾಯಗಳ ಕಲ್ಯಾಣ ಕೇಂದ್ರ ಅಸ್ತಿತ್ವಕ್ಕೆ

ಗಬ್ಬೂರು.27 ನವೆಂಬರ್ 2023 : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನವೆಂಬರ್ 26 ರಂದು ‘ ಶೂದ್ರ ಸಮುದಾಯಗಳ ಕಲ್ಯಾಣ ಕೇಂದ್ರ’ ಎನ್ನುವ ಸಂಸ್ಥೆಯ ಪ್ರಾರಂಭೋತ್ಸವ ನೆರವೇರಿಸಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ಶೂದ್ರಸಮುದಾಯಗಳ ಕಲ್ಯಾಣ ಕೇಂದ್ರ’ ದ ಮಾಹಿತಿಪತ್ರವನ್ನು ಬಿಡುಗಡೆಗೊಳಿಸುವ ಮೂಲಕ ಸಂಸ್ಥೆಯ ಪ್ರಾರಂಭೋತ್ಸವ ನೆರವೇರಿಸಿದರು.

ಶೂದ್ರಭಾರತಪಕ್ಷದ ಜನಮುಖಿ ಕಾರ್ಯಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಉದ್ದೇಶದಿಂದ ಶೂದ್ರಭಾರತಪಕ್ಷದ ಸ್ಥಾಪಕ ಅಧ್ಯಕ್ಷರೂ ಆಗಿರುವ ಮುಕ್ಕಣ್ಣ ಕರಿಗಾರ ಅವರ 54 ನೆಯ ಹುಟ್ಟುಹಬ್ಬವಾದ ನವೆಂಬರ್ 27 ನೆಯ ದಿನದ ಗೌರಿಹುಣ್ಣಿಮೆಯಂದು ‘ ಶೂದ್ರಸಮುದಾಯಗಳ ಕಲ್ಯಾಣಕೇಂದ್ರ’ ದ ಸ್ಥಾಪನೆಯ ಬಗ್ಗೆ ವಿದ್ಯುಕ್ತವಾಗಿ ಘೋಷಿಸಲಾಯಿತು.

ಶೂದ್ರ ಸಮುದಾಯಗಳ ಕಲ್ಯಾಣಕೇಂದ್ರದ ಸ್ಥಾಪನೆಯ ಉದ್ದೇಶಗಳು : ಶೂದ್ರ ಭಾರತ ಪಕ್ಷದ ಸಾಮಾಜಿಕ ಬದ್ಧತೆಗನುಗುಣವಾಗಿ ಹತ್ತು ಉದ್ದೇಶಗಳೊಂದಿಗೆ ‘ ಶೂದ್ರ ಸಮುದಾಯಗಳ ಕಲ್ಯಾಣ ಕೇಂದ್ರ’ ವನ್ನು ಸ್ಥಾಪಿಸಲಾಗಿದೆ.ಅವು ;

1. ಶೂದ್ರ ಸಮುದಾಯಗಳ ವಿವಿಧ ಜಾತಿ,ಜನಾಂಗಗಳನ್ನು ಒಂದುಗೂಡಿಸಿ,ಒಂದೇ ಸಾಂಸ್ಥಿಕ ವೇದಿಕೆಯಲ್ಲಿ ಅವರನ್ನು ಒಗ್ಗೂಡಿಸುವುದು.
2. ಶೂದ್ರ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಮತ್ತು ರಾಜಕೀಯ ಪುರೋಭಿವೃದ್ಧಿಯನ್ನು ಸಾಧಿಸುವುದು.
3.ಶೂದ್ರ ಸಮುದಾಯಗಳ ಜೀವನ ನಿರ್ವಹಣೆಗೆ ಅನುಕೂಲಕರವಾದ ಆರ್ಥಿಕ ಅನುಕೂಲತೆಗಳನ್ನು ಒದಗಿಸಿಕೊಡುವುದು.
4.ಶೂದ್ರ ಸಮುದಾಯಗಳ ವಂಶಪಾರಂಪರ್ಯ ವೃತ್ತಿಕೌಶಲ್ಯಕ್ಕೆ ಪ್ರೋತ್ಸಾಹ ಮತ್ತು ಕುಲಕಸುಬುಗಳಿಗೆ ಉತ್ತೇಜನ ನೀಡುವುದು.
5.ಶೂದ್ರ ಸಮುದಾಯಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆ ಕಾಲೇಜುಗಳ ಸ್ಥಾಪನೆ,ವಸತಿ ನಿಲಯಗಳು,ಬೋರ್ಡಿಂಗ್ ಗಳ ಸ್ಥಾಪನೆ ಮತ್ತು ನಿರ್ವಹಣೆ,ವಿದ್ಯಾರ್ಥಿವೇತನ- ಪ್ರೋತ್ಸಾಹವೇತನಗಳಂತಹ ಶೈಕ್ಷಣಿಕ ಪ್ರೋತ್ಸಾಹದ ಕ್ರಮಗಳಿಂದ ಶೂದ್ರ ಸಮುದಾಯಗಳ ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವುದು.
6.ಶೂದ್ರ ಸಮುದಾಯಗಳ ಸಾಂಸ್ಕೃತಿಕ ಹಿರಿಮೆ ಗರಿಮೆಗಳನ್ನು ಪ್ರಚುರಪಡಿಸುವ ದೃಷ್ಟಿಯಿಂದ ಪತ್ರಿಕೆ,ನಿಯತಕಾಲಿಕೆಗಳನ್ನು ಮುದ್ರಿಸಿ,ಪ್ರಕಟಿಸುವುದು ಮತ್ತು ಪುಸ್ತಕಗಳು ,ಪತ್ರಿಕೆಗಳ ಮುದ್ರಣಕ್ಕಾಗಿ ‘ ಶೂದ್ರಸಮುದಾಯಗಳ ಕಲ್ಯಾಣ ಪ್ರಕಾಶನ’ ವನ್ನು ಪ್ರಾರಂಭಿಸುವುದು ಹಾಗೂ ಶೂದ್ರ ಸಮುದಾಯಗಳ ಸಾಂಸ್ಕೃತಿಕ ಜೀವನದ ಮೇಲೆ ಬೆಳಕುಚೆಲ್ಲುವ ಪರಂಪರೆ,ಉತ್ಸವ,ಸಂಪ್ರದಾಯಗಳಿಗೆ ಪ್ರೋತ್ಸಾಹ ನೀಡುವುದು.
7.ಶೂದ್ರ ಸಮುದಾಯಗಳ ಆರ್ಥಿಕ ಕಲ್ಯಾಣಕ್ಕಾಗಿ ವ್ಯಕ್ತಿಗಳು,ದಾನಿಗಳು,ಸರಕಾರ,ಸರಕಾರಿ ಸಂಸ್ಥೆಗಳು,ಗ್ರಾಮೀಣ ಮತ್ತು ನಗರಾಡಳಿತ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ನೆರವು,ದೇಣಿಗೆ,ಕೊಡುಗೆಗಳನ್ನು ಪಡೆದು “ಶೂದ್ರ ಸಮುದಾಯಗಳ ಕಲ್ಯಾಣ ನಿಧಿ” ಯನ್ನು ಸ್ಥಾಪಿಸುವುದು ಮತ್ತು ಸಂಗ್ರಹಗೊಂಡ ಹಣ,ಅನುದಾನವನ್ನು ಶೂದ್ರಕಲ್ಯಾಣಕೇಂದ್ರದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಶೂದ್ರ ಸಮುದಾಯಗಳ ಹಿತಸಂವರ್ಧನೆಗಾಗಿ ಬಳಸುವುದು.
8.ಶೂದ್ರ ಸಮುದಾಯಗಳ ಕಲ್ಯಾಣಕ್ಕಾಗಿ ವಿಶೇಷ ಆಸಕ್ತಿ,ಶ್ರಮ ವಹಿಸಿ ದುಡಿದ,ದುಡಿಯುತ್ತಿರುವ ವ್ಯಕ್ತಿ,ಸಂಘ – ಸಂಸ್ಥೆಗಳಿಗೆ ಪದವಿ- ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು.
9.ಶೂದ್ರ ಸಮುದಾಯಗಳ ಕುಲಕಸುಬು,ವೃತ್ತಿಕೌಶಲ್ಯಗಳ ಸಂವರ್ಧನೆಗಾಗಿ ಸಾಮುದಾಯಿಕ ವರ್ಕ್ ಶೆಡ್ಡುಗಳ ನಿರ್ಮಾಣ,ಕುಲಕಸುಬುಗಳ ಉತ್ತೇಜನಕ್ಕಾಗಿ ಶೂದ್ರಸಮುದಾಯಗಳ ಸಾಂಪ್ರದಾಯಿಕ ಕಸುಬುಗಳಿಗೆ ಮೂಲಭೂತ ಸೌಕರ್ಯಗಳ ನೀಡಿಕೆ ಮತ್ತು ಶೂದ್ರ ಸಮುದಾಯಗಳ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವುದು.
10.ಶೂದ್ರ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಮತ್ತು ರಾಜಕೀಯ ಉನ್ನತಿಗೆ ಅವಶ್ಯಕವಿರುವ ಇತರ ಎಲ್ಲ ಕಾರ್ಯಗಳು,ಕಾರ್ಯಕ್ರಮಗಳ ಅನುಷ್ಠಾನ.

ಶ್ರೀಕ್ಷೇತ್ರ ಕೈಲಾಸದಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಮುಕ್ಕಣ್ಣ ಕರಿಗಾರ ಅವರ 54 ನೆಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಲ್ಲಯ್ಯ ಹಿರೇಮಠ,ಜಗದೀಶರಾವ್ ಮತ್ತು ವೇಣುಕುಮಾರ ಅವರುಗಳ ಸನ್ಮಾನ ಉಡುಗೊರೆಗಳ ನೀಡಿಕೆಯಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ,ಶಿವಾನಂದ ಮಸೀದಪುರ, ಮೃತ್ಯುಂಜಯ ಯಾದವ,ಬಾಬುಗೌಡ ಯಾದವ,ಶರಣಪ್ಪ ಬೂದಿನಾಳ, ಪತ್ರಕರ್ತ ರಮೇಶ ಖಾನಾಪುರ,ಮಂಜುನಾಥ ಕರಿಗಾರ ಪತ್ರಕರ್ತರುಗಳಾದ ಪ್ರಭು ಯಾದವ,ಶಿವರಾಜ ಜಗಲಿ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ ಮೊದಲಾದವರು ಮುಕ್ಕಣ್ಣ ಕರಿಗಾರ ಅವರನ್ನು ಸನ್ಮಾನಿಸಿ,ಗೌರವಿಸಿದರು.ಹಾಗೂ ಇದೇ ಸಂದರ್ಭದಲ್ಲಿ ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಇತ್ತೀಚೆಗೆ ಉಜ್ಜಯನಿಗೆ ಭೇಟಿ ನೀಡಿದ್ದ ನೆನಪಿಗಾಗಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಗೆ ಮಹಾಕಾಲ ಮತ್ತು ಓಂಕಾರೇಶ್ವರ ಜ್ಯೋತಿರ್ಲಿಂಗಗಳ ಫೋಟೋಗಳ ಕಾಣಿಕೆ ನೀಡಿದರು.

ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನಸನ್ನಿಧಿಯಲ್ಲಿ ನಡೆದ ಶೂದ್ರ ಸಮುದಾಯಗಳ ಕಲ್ಯಾಣ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಗುರುಬಸವ ಹುರಕಡ್ಲಿ,ಶಿವಯ್ಯಸ್ವಾಮಿ ಮಠಪತಿ, ಉಮೇಶ ಸಾಹುಜಾರ ಅರಷಣಗಿ ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಶಹಾಪುರದ ಮಲ್ಲಯ್ಯ ಹಿರೇಮಠ,ವೇಣುಕುಮಾರ ,ಕಲ್ಬುರ್ಗಿಯ ಜಗದೀಶರಾವ್,ರಂಗನಾಥ ಮಸೀದಪುರ,ಪತ್ರಕರ್ತ ರಮೇಶ ಖಾನಾಪುರ,ವೆಂಕಟೇಶ ಮಸೀದಪುರ,ಆನಂದ ಬಾಡದ, ಬಸವಲಿಂಗ ಪೂಜಾರಿ ಅಮರಾಪುರ,ದೇವರಾಜ ಕರಿಗಾರ,ಶಿವಕುಮಾರ ಕರಿಗಾರ,ಬೂದಿಬಸವ ಕರಿಗಾರ ಹಾಗೂ ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

About The Author