ಪ್ರಜಾಪ್ರತಿನಿಧಿಗಳಿಗೆ ಬಸವೋಪದೇಶ’ ಕೀಳುವಾಂಛೆಯ ಪಕ್ಷಾಂತರ ಸಲ್ಲದು

ಪ್ರಜಾಪ್ರತಿನಿಧಿಗಳಿಗೆ ಬಸವೋಪದೇಶ’ ಕೀಳುವಾಂಛೆಯ ಪಕ್ಷಾಂತರ ಸಲ್ಲದು: ಮುಕ್ಕಣ್ಣ ಕರಿಗಾರ

ರಾಜಕಾರಣಿಗಳಿಗೆ ಅಧಿಕಾರವೇ ಸರ್ವಸ್ವ.ಶಾಸಕರುಗಳಾಗಿ ಆಯ್ಕೆಯಾದವರಿಗೆ ಮಂತ್ರಿಗಳಾಗಲೇಬೇಕು ಎನ್ನುವ ಹೆಬ್ಬಯಕೆ.ಮಂತ್ರಿಗಳಾಗುವ ಮಹದಾಸೆಗಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ ನಮ್ಮ ಶಾಸಕರುಗಳು,ರಾಜಕಾರಣಿಗಳು.ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪಕ್ಷಾಂತರ,ರೆಸಾರ್ಟ್ ರಾಜಕಾರಣಗಳು ರಾಜಕೀಯ ಗದ್ದುಗೆಯ ಹಪಾಹಪಿಯ ಕಸರತ್ತುಗಳು.

ರಾಜಕಾರಣದಲ್ಲಿ ನಿಯತ್ತು,ತತ್ತ್ವಗಳು ಮರೆಯಾಗುತ್ತಿವೆ.ಒಂದು ರಾಜಕೀಯ ಪಕ್ಷದಿಂದ ಆರಿಸಿಬಂದ ಶಾಸಕ ಆ ಪಕ್ಷಕ್ಕೆ ನಿಷ್ಠನಾಗಿರಬೇಕು.ಆ ಪಕ್ಷವು ಅಧಿಕಾರಕ್ಕೆ ಬರಲಿ,ಬರದೆ ಇರಲಿ ತನ್ನ ಶಾಸಕಸ್ಥಾನವಂತೂ ಐದುವರ್ಷಗಳವರೆಗೆ ಆಬಾಧಿತವಾಗಿರುತ್ತದೆ.ಶಾಸಕರಾಗಿದ್ದುಕೊಂಡೇ ತಮ್ಮ ಮತಕ್ಷೇತ್ರದ ಜನತೆಯ ಸೇವೆ ಮಾಡಬಹುದು.ಆದರೆ ನಮ್ಮ ಜನಪ್ರತಿನಿಧಿಗಳಿಗೆ ಇದು ಬೇಕಿಲ್ಲ.ಕ್ಷೇತ್ರದ ಜನಸೇವೆಯ ಹೆಸರಿನಲ್ಲಿ ಮಾತೃಪಕ್ಷವನ್ನು ತೊರೆದು ಆಡಳಿತದಲ್ಲಿರುವ ಪಕ್ಷವನ್ನು ಸೇರಿ ಮಂತ್ರಿಗಿರಿಯನ್ನು ಪಡೆಯಲು ಹವಣಿಸುತ್ತಾರೆ.ತಮ್ಮ ಸ್ವಾರ್ಥಸಾಧನೆಗಾಗಿ ಕ್ಷೇತ್ರಹಿತದ ಮಾತನ್ನಾಡುತ್ತಾರೆ.ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೇ ಆದ ಒಲವು- ನಿಲುವುಗಳಿರುತ್ತವೆ.ಒಂದು ರಾಜಕೀಯ ಪಕ್ಷದ ತತ್ತ್ವ- ಸಿದ್ಧಾಂತವನ್ನು ಒಪ್ಪಿಕೊಂಡು,ಆ ರಾಜಕೀಯ ಪಕ್ಷವನ್ನು ಸೇರಿ ಆ ಪಕ್ಷದ ಬಲದಿಂದ ಶಾಸಕರಾಗಿ ಆಯ್ಕೆಯಾದವರು ಆ ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ತದ್ವಿರುದ್ಧವಾದ ರಾಜಕೀಯ ಪಕ್ಷವನ್ನು ಸೇರಿ ಅಧಿಕಾರವನ್ನು ಅನುಭವಿಸುವುದು ‘ ರಾಜಕೀಯ ವ್ಯಭಿಚಾರ’.ಇಂತಹ ಕೀಳು ವಾಂಛೆಯ ರಾಜಕಾರಣಿಗಳನ್ನು ಬಸವಣ್ಣನವರು ಬಹುಸೊಗಸಾಗಿ ಕೆಡೆನುಡಿದಿದ್ದಾರೆ ;

ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು ;
ನಿಂದಲ್ಲಿ ನಿಲ್ಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು !
ಕೂಡಲಸಂಗಮದೇವಾ,ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿಸು,ನಿಮ್ಮ ಧರ್ಮ!

ಮರದ ಕೊಂಬೆಯ ಮೇಲೆ ಕುಳಿತ ಮಂಗವು ಕುಳಿತಲ್ಲಿಯೇ ಕುಳಿತುಕೊಳ್ಳದು.ಆ ಟೊಂಗೆಯಿಂದ ಈ ಟೊಂಗೆಗೆ,ಈ ಟೊಂಗೆಯಿಂದ ಮತ್ತೊಂದು ಟೊಂಗೆಗೆ ಸದಾ ಜಿಗಿಯುತ್ತಲೇ ಇರುತ್ತದೆ.ಪಕ್ವ,ರಸಭರಿತ ಹಣ್ಣುಗಳನ್ನುಳ್ಳ ಮಾವಿನಮರವನ್ನೇರಿಯೂ ಎಲ್ಲ ಕೊಂಬೆ ರೆಂಬೆಗಳಲ್ಲಿ ಒಂದೇ ತೆರನಾದ ಸವಿ,ಸ್ವಾದವನ್ನುಳ್ಳ ಮಾವಿನ ಹಣ್ಣುಗಳಿದ್ದರೂ ಮಂಗವು ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಜಿಗಿಯುತ್ತದೆ.’ ಈ ಕೊಂಬೆಯ ಹಣ್ಣುಗಳಿಗಿಂತ ಆ ಕೊಂಬೆಯ ಹಣ್ಣುಗಳು ರುಚಿಯಾಗಿರಬಹುದೆ?’ ‘ ಈ ಕೊಂಬೆಯ ಹಣ್ಣುಗಳಿಗಿಂತ ಆ ಕೊಂಬೆಯ ಹಣ್ಣುಗಳು ನನಗೆ ಹಿತಕರವಾಗಿರಬಹುದೆ ?’ ಎನ್ನುವ ಭ್ರಮೆಯಲ್ಲಿ ಮಂಗವು ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತ ಮಾವಿನ ಮರವನ್ನೆಲ್ಲ ಸುತ್ತುತ್ತದೆ.ಮಂಗನ ಈ ವಿಪರೀತದಾಟವು ‘ ಮಂಗಚೇಷ್ಟೆ’ ಎನ್ನಿಸಿಕೊಳ್ಳುತ್ತದೆ.

ರಾಜಕಾರಣಿಗಳಲ್ಲಿ ಕೆಲವರು ಮಂಗನಿಗಿಂತ ಕಡೆಯಾದ ‘ ಮಂಗಚೇಷ್ಟೆ’ ಯನ್ನು ಪ್ರದರ್ಶಿಸಿ,ತಮ್ಮ ಸ್ವಾರ್ಥಸಾಧನೆಗಾಗಿ ಪಕ್ಷಾಂತರ ಮಾಡುತ್ತಾರೆ.ಮಂಗಕ್ಕೆ ಕುಳಿತಲ್ಲಿ ಕುಳ್ಳಿರಲಾಗದ ಹುಟ್ಟುಗುಣವಿರುವಂತೆ ಕೆಲವು ರಾಜಕಾರಣಿಗಳಲ್ಲಿ ತಮಗೆ ಆಶ್ರಯಕೊಟ್ಟ ರಾಜಕೀಯಪಕ್ಷದಲ್ಲಿಯೇ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಬುದ್ಧಿ ಇಲ್ಲ.ಒಂದು ಪಕ್ಷದ ಶಾಸಕರಾಗಿ ರಾಜಕೀಯ ಲಾಭಕ್ಕಾಗಿ ಮತ್ತೊಂದು ಪಕ್ಷಕ್ಕೆ ಜಿಗಿಯಬಯಸುತ್ತಾರೆ ಕೊಂಬೆಯಿಂದ ಕೊಂಬೆಗೆ ಜಿಗಿಯುವ ಮಂಗನಂತೆ.
ಪರಮಾತ್ಮನ ಅನುಗ್ರಹದಿಂದ ಒಂದು ರಾಜಕೀಯ ಪಕ್ಷದಿಂದ ದೊರೆತ ಶಾಸಕಸ್ಥಾನದ ಬಲದಿಂದ ಮತಕ್ಷೇತ್ರದ ಜನತೆಯ ಹಿತಸಾಧನೆಗಾಗಿ ಶ್ರಮಿಸುವುದರಲ್ಲಿ ರಾಜಕಾರಣಿಗಳ ಶ್ರೇಯಸ್ಸು- ಪ್ರೇಯಸ್ಸುಗಳಿವೆ.ಪ್ರಾಮಾಣಿಕ ಬುದ್ಧಿಯಿಂದ ಜನಸೇವೆ ಮಾಡಿದರೆ ತಾವು ಪ್ರತಿನಿಧಿಸುತ್ತಿರುವ ರಾಜಕೀಯ ಪಕ್ಷಕ್ಕೂ ಒಳ್ಳೆಯ ಹೆಸರು ಬರುತ್ತದಲ್ಲದೆ ನಿಸ್ವಾರ್ಥಸೇವೆಯಿಂದ ಪರಮಾತ್ಮನ ಪ್ರೀತಿಗೂ ಪಾತ್ರರಾಗಬಹುದು.ಮಂಗ ಮರದಿಂದ ಮರಕ್ಕೆ ಜಿಗಿಯುವಂತೆ ವೈಯಕ್ತಿಕ ಸ್ವಾರ್ಥಸಾಧನೆಗಾಗಿ ಪಕ್ಷಾಂತರ ಮಾಡುವುದು ಮಾತೃಪಕ್ಷಕ್ಕೆ ಮಾಡುವ ಮೋಸ ಮಾತ್ರವಲ್ಲ,ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಮತದಾರರಿಗೂ ಮಾಡುವ ದ್ರೋಹ! ಮತದಾರರು ಒಂದು ರಾಜಕೀಯ ಪಕ್ಷದ ತತ್ತ್ವ ಸಿದ್ಧಾಂತವನ್ನು ಮೆಚ್ಚಿಕೊಂಡು ಆ ಪಕ್ಷದ ಅಭ್ಯರ್ಥಿಯಾಗಿರುವ ಕಾರಣದಿಂದ ಈ ವ್ಯಕ್ತಿಯನ್ನು ಗೆಲ್ಲಿಸಿರುತ್ತಾರೆ.ಸ್ವಂತ ವರ್ಛಸ್ಸಿನ ಬಲದಿಂದ ಶಾಸಕರಾಗಿ ಆಯ್ಕೆಯಾಗುವವರ ಸಂಖ್ಯೆ ತೀರ ವಿರಳ.ಒಂದು ರಾಜಕೀಯ ಪಕ್ಷದ ಬಲದಿಂದಲೇ ಶಾಸಕರು- ಸಂಸದರುಗಳು ಆಗುವವರು ನಂತರ ಮತ್ತೊಂದು ಪಕ್ಷಕ್ಕೆ ಜಿಗಿಯುವುದು ಪ್ರಜಾಪ್ರಭುತ್ವದ ಅಪಮೌಲ್ಯ ; ಜನಹಿತವನ್ನು ಧಿಕ್ಕರಿಸಿ ನಡೆಯುವ ವಕ್ರಬುದ್ಧಿ.

* ಅಡಿಟಿಪ್ಪಣಿ — ‘ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ಯಿಂದ ಜನಪ್ರತಿನಿಧಿಗಳಾಗಿ ಬಸವಣ್ಣನವರ ವಚನಗಳನ್ನು ರಾಜಕೀಯ ಅನ್ವಯಾರ್ಥದೊಂದಿಗೆ ವಿಶ್ಲೇಷಿಸಿ, ಸಿದ್ಧಪಡಿಸುತ್ತಿರುವ ” ಪ್ರಜಾಪ್ರತಿನಿಧಿಗಳಿಗೆ ಬಸವೋಪದೇಶ” ಪುಸ್ತಕದ ಆಯ್ದಭಾಗ.

About The Author