ಜಾತಿಗಣತಿಯ ವರದಿ ಬಿಡುಗಡೆಯನ್ನು ವಿರೋಧಿಸುವ ಡಿ.ಕೆ.ಶಿವಕುಮಾರ ಅವರಿಗೆ ಸರ್ಕಾರದಲ್ಲಿ ಮುಂದುವರೆಯುವ ನೈತಿಕಹಕ್ಕಿಲ್ಲ !

ಲೇಖಕರು : ಶೂದ್ರ ಭಾರತ ಪಕ್ಷ” ದ ರಾಜ್ಯಾಧ್ಯಕ್ಷರು ಮತ್ತು ‘ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯ ಅಧ್ಯಕ್ಷರು.

ಕರ್ನಾಟಕದಲ್ಲಿ ನಡೆದ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡದಂತೆ ಆಗ್ರಹಿಸಿ ಒಕ್ಕಲಿಗರ ಮುಖಂಡರುಗಳು ರಾಜ್ಯಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಿದ ಪತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಹಿ ಮಾಡಿದ ಸಂಗತಿ ಬಹಿರಂಗಗೊಂಡಿದೆ.ಡಿ.ಕೆ.ಶಿವಕುಮಾರ ಜೊತೆಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು,ಕುಮಾರಸ್ವಾಮಿಯವರು,ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಹಾಗೂ ಇತ್ತೀಚೆಗೆ ವಿರೋಧಪಕ್ಷದ ನಾಯಕರಾದ ಆರ್ ಅಶೋಕ ಸೇರಿದಂತೆ ಪಕ್ಷಾತೀತವಾಗಿ ಒಕ್ಕಲಿಗ ಮುಖಂಡರುಗಳು ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡದಂತೆ ಆಗ್ರಹಿಸಿದ ಪತ್ರಕ್ಕೆ ಸಹಿ ಮಾಡಿದ್ದಾಗಿ ತಿಳಿದು ಬಂದಿದೆ.ಒಕ್ಕಲಿಗ ಮುಖಂಡರುಗಳು ದೊಡ್ಡದೊಡ್ಡ ರಾಜಕೀಯ ಹುದ್ದೆಗಳನ್ನು ಅನುಭವಿಸಿಯೂ ತಮ್ಮ ಸುಳ್ಳು ಪ್ರತಿಷ್ಠೆ ಮೆರೆಯಲು ಹಿಂದುಳಿದ ವರ್ಗಗಳಿಗೆ ಅನ್ಯಾಯಮಾಡುತ್ತಿರುವುದು ದುಷ್ಕೃತ್ಯವೇ ಸರಿ.ಒಕ್ಕಲಿಗರನ್ನು ಹೊರತು ಪಡಿಸಿದ ಶೂದ್ರಸಮುದಾಯಗಳ ಜನತೆ ಒಕ್ಕಲಿಗ ಮುಖಂಡರ ಜಾತಿಪ್ರೇಮವನ್ನು ಗಮನಿಸಿ,ಚುನಾವಣೆಗಳಲ್ಲಿ ಅವರಿಗೆ ಪಾಠ ಕಲಿಸುವ ಬಗ್ಗೆ ಆಲೋಚಿಸಬೇಕು.

ಪತ್ರಕ್ಕೆ ಸಹಿಹಾಕಿದ ಒಕ್ಕಲಿಗ ಸಮುದಾಯದ ರಾಜಕೀಯ ಮುಖಂಡರುಗಳಲ್ಲಿ ಆರ್ ಅಶೋಕ ಅವರನ್ನು ಬಿಟ್ಟರೆ ಇತರರು ರಾಜಕೀಯ ಅಧಿಕಾರವನ್ನು ಅನುಭವಿಸದ ‘ಮಾಜಿ’ ಗಳು ಆಗಿದ್ದರಿಂದ ಅವರ ನಡೆಯನ್ನು ನಿರ್ಲಕ್ಷಿಸಬಹುದು.ಆದರೆ ಸರಕಾರದ ಭಾಗವಾಗಿ,ಉಪಮುಖ್ಯಮಂತ್ರಿಯಾಗಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸುತ್ತಿರುವ ಡಿ.ಕೆ.ಶಿವಕುಮಾರ ಅವರ ವರ್ತನೆ ಖಂಡನಾರ್ಹ.ಅವರು ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು ಇಡೀ ರಾಜ್ಯವನ್ನು ಪ್ರತಿನಿಧಿಸಬೇಕೇ ಹೊರತು ಕೇವಲ ಒಕ್ಕಲಿಗರ ಪ್ರತಿನಿಧಿಯಂತೆ ವರ್ತಿಸಬಾರದು.ಡಿ.ಕೆ.ಶಿವಕುಮಾರ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೂ ಹೌದು.ಕಾಂಗ್ರೆಸ್ ಪಕ್ಷವು ಹಿಂದುಳಿದವರು,ಅಲ್ಪಸಂಖ್ಯಾತರು ಮತ್ತು ದಲಿತರಪರವಾಗಿ ಇರುವ ಪಕ್ಷ.ಇಂತಹ ಪಕ್ಷದ ರಾಜ್ಯಾಧ್ಯಕ್ಷರಾಗಿ ಜಾತಿಪ್ರೇಮ ಮೆರೆದು ಹಿಂದುಳಿದ ವರ್ಗಗಳ ಹಕ್ಕು ಅವಕಾಶಗಳನ್ನು ಕಸಿದುಕೊಳ್ಳಬಯಸುವ ಡಿ.ಕೆ.ಶಿವಕುಮಾರ ಅವರಿಗೆ ರಾಜ್ಯಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯುವ ನೈತಿಕ ಹಕ್ಕು ಇಲ್ಲ; ಹಾಗೆಯೇ ಜಾತಿವ್ಯಾಮೋಹ ಪೀಡಿತ ಡಿ.ಕೆ.ಶಿವಕುಮಾರ ಅವರು ಹಿಂದುಳಿದ ವರ್ಗಗಳನ್ನು ತುಳಿಯುವ ಪ್ರಯತ್ನ ಮಾಡುತ್ತಿರುವುದರಿಂದ ಅವರ ನಡೆ ಸಂವಿಧಾನ ವಿರೋಧಿ ನಡೆಯಾಗಿದ್ದು ಅವರು ಉಪಮುಖ್ಯಮಂತ್ರಿ ಪದವಿಯಲ್ಲಿಯೂ ಮುಂದುವರೆಯುವ ನೈತಿಕಹಕ್ಕನ್ನು ಕಳೆದುಕೊಂಡಿದ್ದಾರೆ.ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಆ ಪಕ್ಷದ ಪ್ರಭಾವಿ ನಾಯಕ ರಾಹುಲ್ ಗಾಂಧಿಯವರು ಜಾತಿಗಣತಿಯ ಪರವಾಗಿ ಇದ್ದರೆ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಅವರು ಜಾತಿಗಣತಿಯ ವರದಿಯ ಬಿಡುಗಡೆಯನ್ನು ವಿರೋಧಿಸುತ್ತಿರುವುದು ವಿಪರ್ಯಾಸ.ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಬಾರದು ಎಂದು ಒತ್ತಾಯಿಸುವ ಡಿ.ಕೆ.ಶಿವಕುಮಾರ ಅವರು ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ — ಈ ಎರಡು ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರಬಂದು ಒಕ್ಕಲಿಗರಪರವಾಗಿ ಹೋರಾಟ ಮಾಡಲಿ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾತಿಗಣತಿಯ ವರದಿ ಬಿಡುಗಡೆ ಬದ್ಧರಿರುವ ತಮ್ಮ ನಿರ್ಧಾರ ಅಚಲವಾದುದು ಎಂದು ಹೇಳಿದ್ದಾರೆ x ನಲ್ಲಿ.ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಈ ನಿಲುವು ,ಬದ್ಧತೆ ಪ್ರಶಂಸನೀಯ ಮತ್ತು ಸ್ವಾಗತಾರ್ಹ.ಆದರೆ ಮುಖ್ಯಮಂತ್ರಿಯವರು ಒಕ್ಕಲಿಗರ ಮುಖಂಡರು ತಂದೊಡ್ಡಲಿರುವ ಕಾನೂನು ತೊಡಕುಗಳ ಬಗ್ಗೆಯೂ ವಿಚಾರಿಸಬೇಕು.ಒಕ್ಕಲಿಗರ ಮುಖಂಡರು ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡಬಾರದು ಎನ್ನುವ ಆಗ್ರಹಪತ್ರವನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ್ದು ಆ ಪತ್ರದ ಆಧಾರದ ಮೇಲೆ ರಾಜ್ಯಹೈಕೋರ್ಟ್ ಮೊರೆಹೋಗಿ ವರದಿಬಿಡುಗಡೆಯನ್ನು ವಿಳಂಬಿಸುವ ತಂತ್ರಗಾರಿಕೆ ಮಾಡುವ ಸಾಧ್ಯತೆಗಳಿವೆ.ಅಂತಿಮವಾಗಿ ಹೈಕೋರ್ಟ್ ಜಾತಿಗಣತಿಯ ವರದಿಯ ಬಿಡುಗಡೆಗೆ ಆದೇಶಿಸಬಹುದಾದರೂ ನ್ಯಾಯದಾನ ಪ್ರಕ್ರಿಯೆಯ ಸಹಜಭಾಗವಾಗಿ ಮೊದಲು ತಡೆಯಾಜ್ಞೆ ನೀಡಬಹುದು.ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಕೂಡಲೆ ಕರ್ನಾಟಕದ ಅಡ್ವೋಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ ಹೈಕೋರ್ಟಿನಲ್ಲಿ ಕೆವಿಯಟ್ ಅರ್ಜಿ ಸಲ್ಲಿಸುವುದು ಸೇರಿದಂತೆ ಇತರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.ರಾಜ್ಯ ಹೈಕೊರ್ಟಿನಲ್ಲಿ ಜಾತಿಗಣತಿಯ ವರದಿಯ ಬಿಡುಗಡೆ ಅವಶ್ಯಕತೆಯ ಬಗ್ಗೆ ಸಮರ್ಥವಾಗಿ ವಾದ ಮಂಡಿಸುವ ಹಿರಿಯ ವಕೀಲರುಗಳ ನೆರವು ಪಡೆಯಬೇಕು.ಜೊತೆಗೆ ಡಿ.ಕೆ.ಶಿವಕುಮಾರ ಅವರ ಹಿಂದುಳಿದ ವರ್ಗಗಳ ವಿರುದ್ಧದ ನೀತಿಯ ಬಗ್ಗೆ ಕಾಂಗ್ರೆಸ್ ವರಿಷ್ಠರಿಗೆ ಲಿಖಿತ ದೂರು ನೀಡಬೇಕು.ಕಾಂಗ್ರೆಸ್ ಹೈಕಮಾಂಡ್ ಕಿವಿಹಿಂಡಿದರೆ ಮಾತ್ರ ಡಿ ಕೆ ಶಿವಕುಮಾರ ತೆಪ್ಪಗೆ ಕೂಡುತ್ತಾರೆ.

ಹಿಂದುಳಿದ ವರ್ಗಗಳ ಸಂಘಟನೆಗಳು ಸಹ ಜಾತಿಗಣತಿಯ ವರದಿಯ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಸರಕಾರವನ್ನು ಒತ್ತಾಯಿಸಬೇಕು.ಸರಕಾರದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿರುವ ಸಚಿವರುಗಳು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಜಾತಿಗಣತಿಯ ವರದಿ ಬಿಡುಗಡೆಗಾಗಿ ಆಗ್ರಹಿಸಬೇಕು.ಹಿಂದುಳಿದ ವರ್ಗಗಳ ಶಾಸಕರುಗಳು ಪಕ್ಷಾತೀತವಾಗಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಮತ್ತು ಸರಕಾರವನ್ನು ಒತ್ತಾಯಿಸಬೇಕು.ಹಿಂದುಳಿದ ವರ್ಗಗಳು,ಅವಕಾಶ ವಂಚಿತ ಸಮುದಾಯಗಳು ಮುನ್ನಲೆಗೆ ಬರುವುದನ್ನು ತಪ್ಪಿಸಲು ಯತ್ನಿಸುತ್ತಿರುವ ಡಿ.ಕೆ.ಶಿವಕುಮಾರ ಅವರ ಹಿಂದುಳಿದ ವರ್ಗಗಳ ವಿರೋಧಿ ನಿಲುವನ್ನು ಪಕ್ಷಾತೀತವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಎಲ್ಲ ಶಾಸಕರುಗಳು ಖಂಡಿಸಬೇಕು.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಬೆಂಬಲ ಇರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾತಿಗಣತಿಯ ವರದಿ ಬಿಡುಗಡೆಯ ಪ್ರಸ್ತಾಪವನ್ನು ಕ್ಯಾಬಿನೆಟ್ ಮುಂದೆ ಇಡಬೇಕು.ಡಿ.ಕೆ.ಶಿವಕುಮಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ವಿರೋಧಿಸಿದರೆ ಡಿಸೆಂಬರ್ ನಾಲ್ಕರಿಂದ ಬೆಳಗಾವಿಯಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ‘ ಜಾತಿಗಣತಿಯ ವರದಿ ಬಹಿರಂಗಪಡಿಸುವ ನಿರ್ಣಯ’ ಮಂಡಿಸಬೇಕು.ಒಕ್ಕಲಿಗ ಸಮುದಾಯದ ಅದರಲ್ಲೂ ಡಿ.ಕೆ.ಶಿವಕುಮಾರ ಅವರ ಕಟ್ಟಾಬೆಂಬಲಿಗರಿರುವ ಕೆಲವೇ ಜನ ಒಕ್ಕಲಿಗ ಶಾಸಕರುಗಳು ನಿರ್ಣಯವನ್ನು ವಿರೋಧಿಸಬಹುದು.ಸದನದ ನಿರ್ಣಯಕ್ಕಾಗಿ ವಿಷಯವನ್ನು ಮಂಡಿಸಿದರೆ ಲಿಂಗಾಯತ ಸಮುದಾಯದ ಶಾಸಕರುಗಳು ಅದನ್ನು ವಿರೋಧಿಸುವ ಸಾಧ್ಯತೆ ಕಡಿಮೆ.ಯಾಕೆಂದರೆ ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಹಿಂದುಳಿದ ಜಾತಿಗಳಿವೆ.ಹಿಂದುಳಿದ ವರ್ಗಗಳಿಗೆ ಸೇರಿದ ಲಿಂಗಾಯತರ ಬೆಂಬಲ ಪಡೆಯದೆ ‘ ಲಿಂಗಾಯತಧರ್ಮ’ ಸ್ಥಾಪನೆ ಸಾಧ್ಯವಿಲ್ಲ.ಲಿಂಗಾಯತಧರ್ಮಸ್ಥಾಪನೆಗೆ ಒತ್ತಾಯಿಸುವವರು ಆ ಧರ್ಮದ ಭಾಗವಾಗಲಿರುವ ನೂರಕ್ಕೂ ಹೆಚ್ಚು ಸಣ್ಣಸಮುದಾಯಗಳ ಬೆಂಬಲಗಳಿಸಲೇಬೇಕಾಗುತ್ತದೆ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪಟ್ಟುಬಿಡದೆ ಜಾತಿಗಣತಿಯ ವರದಿಯ ಬಿಡುಗಡೆಗೆ ಅವಶ್ಯಕವಿರುವ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು.

‌ ‌

About The Author