ಎನ್ ವಿ ಪ್ರಸಾದ್ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು

ಎನ್ ವಿ ಪ್ರಸಾದ್ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸಬೇಕು : ಮುಕ್ಕಣ್ಣ ಕರಿಗಾರ

ಹಿಂದುಳಿದ ವರ್ಗಗಳು ಮತ್ತು ಅವಕಾಶವಂಚಿತ ಸಮುದಾಯಗಳು ಸಾರ್ವಜನಿಕ ಕ್ಷೇತ್ರದ ವಿವಿಧ ರಂಗಗಳಲ್ಲಿ ಮುನ್ನಲೆಗೆ ಬರಲು ಕಾರಣವಾಗುವ ‘ಕರ್ನಾಟಕ ಸಾಮಾಜಿಕ ,ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ಎನ್ನುವ ಹೆಸರಿನ ಜಾತಿಗಣತಿಯ ವರದಿಗೆ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಸದಸ್ಯಕಾರ್ಯದರ್ಶಿ ಎನ್ ವಿ ಪ್ರಸಾದ್ ಅವರು ಸಹಿ ಮಾಡಿಲ್ಲ ಎನ್ನುವ ವಿಷಯವು ಹಿಂದುಳಿದ ವರ್ಗಗಳ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಪ್ರಧಾನಕಾರ್ಯದರ್ಶಿ ಹುದ್ದೆಯ ಸ್ಥಾನಬಲದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಎನ್ ವಿ ಪ್ರಸಾದ್ ಅವರು ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಿದ್ಧಪಡಿಸಿದ್ದ ಜಾತಿಗಣತಿ ವರದಿಗೆ ಸಹಿ ಹಾಕುವುದು ತಮ್ಮ‌ಕರ್ತವ್ಯ ಎಂದು ತಿಳಿದುಕೊಳ್ಳಬೇಕಿತ್ತು.ಜಾತಿಗಣತಿ ವರದಿಗೆ ಸಹಿ ಹಾಕುವುದು ಪ್ರಸಾದ್ ಅವರ ಕರ್ತವ್ಯವಾಗಿತ್ತೇ ವಿನಃ ಸಹಿ ಹಾಕುವ ಮೂಲಕ ಅವರು ಯಾರಿಗೂ ಉಪಕಾರವನ್ನೇನೂ ಮಾಡುತ್ತಿರಲಿಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಹೇಳಿದಂತೆ ಜಾತಿಗಣತಿ ವರದಿಗೆ ₹162 ಕೋಟಿ ರೂಪಾಯಿಗಳ ವೆಚ್ಚ ತಗುಲಿದೆ.ಸಾವಿರಾರು ಜನ ಶಿಕ್ಷಕರು ಮತ್ತು ಇತರ ಇಲಾಖೆಯ ಸಿಬ್ಬಂದಿಯವರು ತಿಂಗಳಾನುಗಟ್ಟಲೆ ಪರಿಶ್ರಮವಹಿಸಿ ಸಂಗ್ರಹಿಸಿದ ದತ್ತಾಂಶಗಳನ್ನು ಕ್ರೋಢೀಕರಿಸಿ ಆಯೋಗವು ಅದಕ್ಕೊಂದು ವರದಿಯ ರೂಪ ನೀಡಿದೆ.ಆಯೋಗದ ಅಧ್ಯಕ್ಷರು,ಸದಸ್ಯರುಗಳು ಹಲವು ಸಭೆಗಳಲ್ಲಿ ಚರ್ಚಿಸಿ,ಅಂಗೀಕರಿಸಿ ಸಹಿ ಮಾಡಿದ ವರದಿಗೆ ಆಯೋಗದ ಸದಸ್ಯಕಾರ್ಯದರ್ಶಿಯಾಗಿದ್ದ ಎನ್ ವಿ ಪ್ರಸಾದ್ ಅವರು ಸಹಿ ಮಾಡಲು ನಿರಾಕರಿಸುತ್ತಾರೆ ಎಂದರೆ ಸಾರ್ವಜನಿಕ ಸೇವಕರಿಗೆ ‘ತಕ್ಕುದಲ್ಲದ ಅವಿಧೇಯತೆ’ ಎಂದರ್ಥವಲ್ಲವೆ? ಎನ್ ವಿ ಪ್ರಸಾದ್ ಜವಾಬ್ದಾರಿಯುತ ಅಧಿಕಾರಿಯಾಗಿ ವರದಿಯಲ್ಲಿ ಏನಾದರೂ ದೋಷಗಳಿದ್ದರೆ ಅದನ್ನು ಆಯೋಗದ ಗಮನಕ್ಕೆ ತರಬೇಕಿತ್ತು.ವರದಿಗೆ ಸಹಿ ಮಾಡಲು ಏನಾದರೂ ತೊಂದರೆ ತೊಡಕುಗಳಿದ್ದರೆ ಅದನ್ನು ಆಯೋಗ ಮತ್ತು ಸರಕಾರಕ್ಕೆ ಲಿಖಿತಮಾಹಿತಿಯ ರೂಪದಲ್ಲಿ ನೀಡಬೇಕಿತ್ತು.ಅದನ್ನೇನೂ ಮಾಡದೆ ಸುಮ್ಮನೆ ಸಹಿ ಮಾಡದೆ ಕುಳಿತ ಎನ್ ವಿ ಪ್ರಸಾದ್ ನಡೆ ತೀವ್ರ ಆಕ್ಷೇಪಾರ್ಹ.

ಜೊತೆಗೆ ಜಾತಿಗಣತಿ ವರದಿಯ ಮೂಲ ಪ್ರತಿ ಆಯೋಗದ ಕಛೇರಿಯಲ್ಲಿ ಲಭ್ಯವಿಲ್ಲವಂತೆ! ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಹಾಲಿ ಸದಸ್ಯ ಕಾರ್ಯದರ್ಶಿ ಕೆ.ವಿ.ದಯಾನಂದ ಅವರು 2022 ರ ಮಾರ್ಚ್ 05 ಮತ್ತು 2022 ರ ಅಗಸ್ಟ್ 12 ರಂದು ಹೀಗೆ ಎರಡು ಬಾರಿ ಬರೆದ ಪತ್ರಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದು ಎನ್ ವಿ ಪ್ರಸಾದ್ ಅವರ ‘ ಉದ್ಧಟತನದ ವರ್ತನೆ’. ಐಎಎಸ್ ಅಧಿಕಾರಿ ಆದ ಮಾತ್ರಕ್ಕೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಗೌರವ ನೀಡದೆ ಇರುವಷ್ಟು ಅಹಂ ಬೆಳೆಸಿಕೊಳ್ಳುವುದು ಉಚಿತವಲ್ಲ.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎನ್ ವಿ ಪ್ರಸಾದ್ ಅವರಿಂದ ಲಿಖಿತ ವಿವರಣೆ ಪಡೆಯಬೇಕು.

ಆಯೋಗದ ಸದಸ್ಯಕಾರ್ಯದರ್ಶಿಯ ಸಹಿ ಇಲ್ಲದೆ ವರದಿಯು ತಿರಸ್ಕೃತಗೊಳ್ಳುವಂತಾದರೆ ಅದಕ್ಕೆ ಎನ್ ವಿ ಪ್ರಸಾದ್ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು.₹ 162 ಕೋಟಿ ಹಣ ಸಾರ್ವಜನಿಕರ ಹಣ.ಯಾರೋ ಒಬ್ಬ ಅಧಿಕಾರಿಯ ಉದ್ಧಟತನದಿಂದ ಅಷ್ಟು ಬೃಹತ್ ಮೊತ್ತವನ್ನು ವ್ಯಯಿಸಿ,ಕೈಗೊಂಡ ಜಾತಿಗಣತಿಯ ವರದಿಯು ತಿರಸ್ಕೃತವಾದರೆ ಆ ವರದಿಗೆ ಸಹಿ ಮಾಡದೆ ಕರ್ತವ್ಯಲೋಪ ಎಸಗಿ,ಸಾರ್ವಜನಿಕರ ಹಣ ವ್ಯರ್ಥಪೋಲಾಗಲು ಕಾರಣರಾದ ಎನ್ ವಿ ಪ್ರಸಾದ್ ಅವರನ್ನೇ ಹೊಣೆಗಾರರನ್ನಾಗಿ ಮಾಡಿ,ಅವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ಸಾರ್ವಜನಿಕ ಹಣ ದುರ್ಬಳಕೆಯ ಪ್ರಕರಣ ದಾಖಲಿಸಿ, ಮೊಕದ್ದಮೆ ಹೂಡಬೇಕು ಇಲ್ಲವೆ ₹162 ಕೋಟಿಗಳ ಹಣವನ್ನು ಎನ್ ವಿ ಪ್ರಸಾದ್ ಅವರಿಂದ ವಸೂಲಿಗೆ ಕ್ರಮವಹಿಸಬೇಕು.ಸಾರ್ವಜನಿಕರ ತೆರಿಗೆಯ ಹಣದೊಂದಿಗೆ ಆಟ ಆಡುವ ಅಧಿಕಾರಿಗಳ ಉದ್ಧಟತನ ಕ್ಷಮಾರ್ಹವಲ್ಲ.

ಸಾಹಿತಿಗಳಾಗಿರುವ ಈ ಲೇಖನದ ಲೇಖಕರು ‘ ಶೂದ್ರ ಭಾರತ ಪಕ್ಷ’ ದ ರಾಜ್ಯಾಧ್ಯಕ್ಷರು ಹಾಗೂ’ ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆ’ ಯ ಅಧ್ಯಕ್ಷರು.

About The Author