ಸಿದ್ಧರಾಮಯ್ಯನವರು ದತ್ತಮಾಲೆ ಹಾಕಲಿ ಎಂದು ನಿರೀಕ್ಷಿಸುವುದು ಸಿ.ಟಿ.ರವಿಯವರ ಅತಿರೇಕದ ವರ್ತನೆ

ಸಿದ್ಧರಾಮಯ್ಯನವರು ದತ್ತಮಾಲೆ ಹಾಕಲಿ ಎಂದು ನಿರೀಕ್ಷಿಸುವುದು ಸಿ.ಟಿ.ರವಿಯವರ ಅತಿರೇಕದ ವರ್ತನೆ : ಮುಕ್ಕಣ್ಣ ಕರಿಗಾರ

ಎಚ್.ಡಿ.ಕುಮಾರಸ್ವಾಮಿಯವರ ದತ್ತಮಾಲೆ ಧರಿಸುವ ಹೇಳಿಕೆಯನ್ನು ಸ್ವಾಗತಿಸಿರುವ ಚಿಕ್ಕಮಗಳೂರಿನ ಮಾಜಿ ಶಾಸಕ ಸಿ.ಟಿ.ರವಿಯವರು ‘ ಎಚ್ ಡಿ ಕುಮಾರಸ್ವಾಮಿಯವರ ಹಾಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದತ್ತಮಾಲೆ ಹಾಕಿ ದತ್ತಪೀಠಕ್ಕೆ ಬರಲಿ’ ಎಂದಿದ್ದಾರಲ್ಲದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ‘ ನಾನೂ ಹಿಂದು ಅಲ್ವಾ? ನನ್ನ ಹೆಸರಿನಲ್ಲೇ ಸಿದ್ಧರಾಮ ಇದ್ದಾನೆ’ ಎನ್ನುವ ಹೇಳಿಕೆಯನ್ನು ಉದ್ಧರಿಸಿ ಸಿ.ಟಿ.ರವಿಯವರು ‘ ಹಿಂದು ಎನ್ನುವುದಕ್ಕೆ ಗರ್ವಪಡಬೇಕು.ಸಿದ್ಧರಾಮಯ್ಯ ದತ್ತಮಾಲೆ ಹಾಕಿದರೆ ಅವರ ಶಿಷ್ಯ ಜಮೀರ್ ಅಹಮದ್ ಕೂಡ ದತ್ತಮಾಲೆ ಧರಿಸುತ್ತಾರೆ’ ಎಂದಿರುವುದು ಪ್ರಜ್ಞಾವಂತರು ಒಪ್ಪುವ ಮಾತಲ್ಲ.ಜಮೀರ್ ಅಹ್ಮದ್ ಅವರಿಂದ ದತ್ತಮಾಲೆ ಧಾರಣೆಯನ್ನು ಸಿ.ಟಿ ರವಿಯವರು ಯಾವ ಕಾರಣಕ್ಕಾಗಿ ನಿರೀಕ್ಷಿಸುತ್ತಿದ್ದಾರೆ? ಮತ್ತೊಬ್ಬರ ಧಾರ್ಮಿಕ ನಂಬಿಕೆಯನ್ನು ಕೆಣಕುವುದು ಸಣ್ಣತನವಷ್ಟೇ ಅಲ್ಲ,ಸಂವಿಧಾನ ವಿರೋಧಿ ವರ್ತನೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾವೊಬ್ಬ ಹಿಂದೂ ಎಂದು ಹೇಳಿಕೊಂಡ ಮಾತ್ರಕ್ಕೆ ಅವರು ದತ್ತಮಾಲೆ ಹಾಕಬೇಕೆ? ಹಾಗೆಂದು ಹಿಂದೂ ಧರ್ಮದ ಯಾವ ಶಾಸ್ತ್ರ,ಸಂಹಿತೆಯಲ್ಲಿ ವಿಧಿಸಲಾಗಿದೆ? ದತ್ತಮಾಲೆ ಹಾಕುವುದು ಹಿಂದೂ ಧರ್ಮದ ಲಕ್ಷಣವೆ? ತಮ್ಮ ವೈಯಕ್ತಿನ ನಂಬಿಕೆಯನ್ನು ಹಿಂದೂಗಳ ಸಾರ್ವತ್ರಿಕ ಲಕ್ಷಣ ಎಂದು ಸಾರುತ್ತಿರುವ ಸಿ.ಟಿ.ರವಿಯವರ ಧಾರ್ಮಿಕ ಅಜ್ಞಾನಕ್ಕೆ ನನ್ನಲ್ಲಿ ಮರುಕವಿದೆ.ಹಿಂದೂ ಧರ್ಮದ ಅನುಯಾಯಿಗಳು ಬರಿ ದತ್ತಮಾಲೆಯನ್ನು ಮಾತ್ರ ಧರಿಸುವುದಿಲ್ಲ,ದತ್ತಮಾಲೆ ಧಾರಣೆ ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಮೂರ್ನಾಲ್ಕು ಜಿಲ್ಲೆಗಳ ಸೀಮಿತ ಸಂಖ್ಯೆಯ ಭಕ್ತರ ಆಚರಣೆ ಮಾತ್ರ.ಆದರೆ ಶಬರಿಮಲೆ ಅಯ್ಯಪ್ಪನ ಭಕ್ತರು ದೇಶದಾದ್ಯಂತ ಇದ್ದು ಅವರೆಲ್ಲರೂ ಅಯ್ಯಪ್ಪನ ಮಾಲೆ ಧರಿಸುವುದಲ್ಲದೆ ನಲವತ್ತೆಂಟು ದಿನಗಳ ಕಠಿಣ ವ್ರತಾಚರಣೆ ಕೂಡ ಮಾಡುತ್ತಾರೆ.ಎಲ್ಲ ಜಾತಿ ಜನಾಂಗಗಳಲ್ಲಿ ಅಯ್ಯಪ್ಪನ ಭಕ್ತರಿದ್ದಾರೆ.ಹಾಗಂತ ಅಯ್ಯಪ್ಪನ ಮಾಲೆ ಧರಿಸಿದವರೆಲ್ಲರೂ ಹಿಂದೂಗಳು ಎನ್ನಬಹುದೆ? ಇತ್ತೀಚಿನ ವರ್ಷಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಹೆಸರಿನಲ್ಲಿಯೂ ಭಕ್ತರು ಮಾಲೆಗಳನ್ನು ಧರಿಸುತ್ತಿದ್ದಾರೆ.ಮಲ್ಲಯ್ಯನ ಭಕ್ತರುಗಳನ್ನು ಹಿಂದುಗಳು ಎನ್ನಬಹುದೆ? ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರು ಶೈವರು- ವೀರಶೈವರೇ ಹೊರತು ಹಿಂದೂಗಳಲ್ಲ.ನಿಜ ನಿಷ್ಠೆಯ ಶಿವಭಕ್ತರು ಶಿವನನ್ನು ಕಡೆಗಣಿಸುವ ವೈಷ್ಣವರ ಪಾರಮ್ಯದ ಹಿಂದೂ ಧರ್ಮವನ್ನು ತಮ್ಮ ಧರ್ಮ ಎಂದು ಒಪ್ಪಿಕೊಳ್ಳುವುದಿಲ್ಲ ಎನ್ನುವ ಸಾಮಾನ್ಯಜ್ಞಾನವೂ ಸಿ.ಟಿ.ರವಿಯವರಿಗೆ ಇಲ್ಲದಿರುವುದು ಬೇಸರದ ಸಂಗತಿ.

ಮುಖ್ಯಮಂತ್ರಿ ಸಿದ್ಧರಾಮಯ್ಯನ ಹೆಸರಿನಲ್ಲಿರುವ ಸಿದ್ಧರಾಮ ವಚನಕಾರ ಸಿದ್ಧರಾಮನೇ ಹೊರತು ಸಿ.ಟಿ.ರವಿಯವರ ಹಿಂದೂ ಧರ್ಮದ ರಾಮನಲ್ಲ.ಹನ್ನೆರಡನೆಯ ಶತಮಾನದ ವಚನಕಾರ ಸಿದ್ಧರಾಮ ಕುರುಬಕುಲಸಂಜಾತನಾದ ಶರಣ ( ಸಿದ್ಧರಾಮನು ಕುಡು ಒಕ್ಕಲಿಗ ಎನ್ನುವುದು ಆಧಾರರಹಿತ,ಅವಾಸ್ತವಿಕ ಸಂಗತಿ.ಸಿದ್ದರಾಮ ಕುರುಬನಾಗಿದ್ದ ಎನ್ನುವುದಕ್ಕೆ ಐತಿಹಾಸಿಕ ಆಧಾರಗಳಿವೆ ಮಾತ್ರವಲ್ಲ ಸಿದ್ಧರಾಮನ ವಚನಗಳಲ್ಲಿಯೂ ಆತನ ಕುರುಬಕುಲಮೂಲವನ್ನು ಗುರುತಿಸಬಹುದು) ಸಿದ್ಧರಾಮ ತಮ್ಮ ಕುಲದವನು ಎನ್ನುವ ಹೆಮ್ಮೆಯಿಂದ ಕರ್ನಾಟಕದಾದ್ಯಂತ ಕುರುಬರಲ್ಲಿ ಸಿದ್ಧರಾಮನ ಹೆಸರನ್ನು ಇಡುವ ಪದ್ಧತಿ ಇದೆ.ಹಾಗೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತಂದೆ ತಾಯಿಗಳು ವಚನಕಾರ ಸಿದ್ಧರಾಮನ ಹೆಸರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಇಟ್ಟಿದ್ದಾರೆಯೇ ಹೊರತು ವೈಷ್ಣವರ ರಾಮನ ಹೆಸರನ್ನಲ್ಲ ಎನ್ನುವುದನ್ನು ಸಿ.ಟಿ.ರವಿಯವರು ಮೊದಲು ತಿಳಿದುಕೊಳ್ಳಬೇಕು.

ವಚನಕಾರ ಸಿದ್ಧರಾಮ ಅಲ್ಲಮಪ್ರಭುವಿನ ಪ್ರೇರಣೆಯಂತೆ ಕಲ್ಯಾಣಕ್ಕೆ ಬಂದು ಬಸವಣ್ಣನವರ ಸಮಾಜೋ ಧಾರ್ಮಿಕ ಚಳುವಳಿಯಲ್ಲಿ ಬಸವಣ್ಣನವರಿಗೆ ಹೆಗಲೆಣೆಯಾಗಿ ದುಡಿಯುತ್ತಾರೆ.ಕಲ್ಯಾಣದ ಕ್ರಾಂತಿಯ ದಿನಗಳಲ್ಲಿ ಚೆನ್ನಬಸವಣ್ಣನವರು ವಚನಗಳ ಕಟ್ಟುಗಳೊಂದಿಗೆ ಉಳವಿಯತ್ತ ಪ್ರಯಾಣಿಸಿದಾಗ ಸಿದ್ಧರಾಮ ಶೂನ್ಯ ಸಿಂಹಾಸನದ ಮೂರನೇ ಅಧಿಪತಿಯಾಗಿ ಕೆಲಕಾಲ ಕಾರ್ಯನಿರ್ವಹಿಸುತ್ತಾರೆ.ಬಸವಣ್ಣನವರ ನೇತೃತ್ವದಲ್ಲಿನ ವಚನ ಚಳುವಳಿ ವೈಷ್ಣವರ,ವೈದಿಕರ ಹುಸಿಪ್ರತಿಷ್ಠೆ,ಅಂಧಾನುಕರಣೆಗಳ ವಿರುದ್ಧ ಬಂಡೆದ್ದ ಸಾಮಾಜಿಕ ಆಂದೋಲನ ಎನ್ನುವುದನ್ನು ಸಿ.ಟಿ.ರವಿಯವರು ಅರ್ಥ ಮಾಡಿಕೊಳ್ಳಬೇಕು.

ಸಿ.ಟಿ.ರವಿಯವರು ವಿಧಾನಸಭಾ ಚುನಾವಣೆಯಲ್ಲಿ ಸೋತು ಮಾಡಲು ಕೆಲಸವಿಲ್ಲದಂತೆ ಇದ್ದಾರೆ.ಅವರು ಬೇಕಿದ್ದರೆ ಹಿಂದೂ ಧರ್ಮದ ವಕ್ತಾರರಾಗಿ ಕಾರ್ಯನಿರ್ವಹಿಸಲಿ.ಆದರೆ ಸಂವಿಧಾನದ ಜಾತ್ಯಾತೀತ ತತ್ತ್ವಗಳನ್ನು ಒಪ್ಪಿ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಲ್ಲಿ ಒಬ್ಬ ಹಿಂದೂವನ್ನು ಹುಡುಕುವುದು ಬೇಡ.ಸಿದ್ಧರಾಮಯ್ಯನವರು ಸಹ ತಾವು ಬಸವಣ್ಣನವರ ನೇತೃತ್ವದಲ್ಲಿ ನಡೆದ ಮಾನವತೆಯ ಮಹಾಕ್ರಾಂತಿಯಿಂದ ಸ್ಫೂರ್ತಿಗೊಂಡ ಬಗ್ಗೆ ಹೆಮ್ಮೆ ಪಡಬೇಕೇ ಹೊರತು ಹಿಂದೂ ಎಂದು ಹೆಮ್ಮೆ ಪಡಬಾರದು.ಶೈವ ಧರ್ಮವು ಭಾರತದ ಮೂಲಧರ್ಮ,ಶೈವ ಸಂಸ್ಕೃತಿಯು ಭಾರತದ ಮೂಲಸಂಸ್ಕೃತಿ.ಶಿವನ ಪರಮೇಶ್ವರ ತತ್ತ್ವಕ್ಕೆ ಅಪಚಾರ ಎಸಗುವ ವೈಷ್ಣವರ ಹಿಂದೂ ಧರ್ಮವನ್ನು ಶೈವ – ವೀರಶೈವ- ಮಹಾಶೈವ ಮತಪರಂಪರೆಗಳು ಧಿಕ್ಕರಿಸುತ್ತವೆ ಎನ್ನುವುದನ್ನು ಸಿ.ಟಿ.ರವಿಯವರು ಅರ್ಥಮಾಡಿಕೊಳ್ಳಬೇಕು.

ಭಾರತದ ಸಂವಿಧಾನವು ಯಾವುದೇ ಧರ್ಮವು ಭಾರತದ ರಾಷ್ಟ್ರೀಯ ಧರ್ಮ ಎನ್ನುವುದನ್ನು ಮಾನ್ಯ ಮಾಡದೆ ‘ ಜಾತ್ಯಾತೀತ‌ ತತ್ತ್ವ’ ವನ್ನು ಪ್ರತಿಪಾದಿಸುವ ಮೂಲಕ ಸರ್ವಧರ್ಮ ಸಮನ್ವಯ ತತ್ತ್ವವನ್ನು ಎತ್ತಿಹಿಡಿದಿದೆ.ಸಿ ಟಿ ರವಿಯವರು ಭಾರತದ ರಾಷ್ಟ್ರೀಯಗ್ರಂಥವಾದ ಸಂವಿಧಾನವನ್ನು ಒಪ್ಪಿ,ನಡೆಯಬೇಕೇ ಹೊರತು ಅವರ ವೈಯಕ್ತಿಕ ನಂಬಿಕೆ- ನಡಾವಳಿಗಳು ದೇಶದ ಸಂಸ್ಕೃತಿ ಎನ್ನುವಂತೆ ಬಿಂಬಿಸಬಾರದು.ಸಿದ್ಧರಾಮಯ್ಯನವರು ದತ್ತಮಾಲೆ ಹಾಕಲಿ ಎಂದು ನಿರೀಕ್ಷಿಸುವುದು ಸಿ.ಟಿ.ರವಿಯವರ ಅತಿರೇಕದ ವರ್ತನೆ.

About The Author