ಕನಕನ ಕಿಂಡಿ– ಜಡತ್ವವನ್ನು ನಿರಾಕರಿಸಿದ ಚೈತನ್ಯದ ಬೆಡಗು : ಮುಕ್ಕಣ್ಣ ಕರಿಗಾರ

ಕನಕದಾಸರು ಭಾರತೀಯ ಸಂತಪರಂಪರೆಯ ಸರ್ವಶ್ರೇಷ್ಠರಾದ ಸಂತರುಗಳಲ್ಲಿ ಒಬ್ಬರು.ಆದರೆ ಅವರು ಜಾತಿಯಿಂದ ಕುರುಬರಾಗಿದ್ದ ಕಾರಣದಿಂದ ಮಲಿನಮನಸ್ಕರುಗಳು ಇಂದಿಗೂ ಕನಕದಾಸರ ಪೂರ್ಣಸಿದ್ಧವ್ಯಕ್ತಿತ್ವವನ್ನು ಒಪ್ಪಿಕೊಳ್ಳುತ್ತಿಲ್ಲ.ಹೊರಗೆ ತೊಳೆದುಕೊಂಡು ಮಡಿ ಎಂದು ಭ್ರಮಿಸುವ ಮತಿಮಂದರುಗಳಿಗೆ ಒಳಗನ್ನು ತೊಳೆದುಕೊಂಡು ನಿರ್ಮಲಾತ್ಮರಾಗಿದ್ದ,ಬೆಳಕು ಆಗಿದ್ದ ಕನಕದಾಸರ ನಿತ್ಯಶುಭ್ರಸಂತ ವ್ಯಕ್ತಿತ್ವ ಅರ್ಥವಾಗದು.ಶರಣರು,ಸಂತರುಗಳು ಜ್ಯೋತಿಸ್ವರೂಪರಾಗಿ ಲೋಕವನ್ನು ಬೆಳಗುತ್ತಾರೆ.ಕತ್ತಲೆಯಕೂಪದಲ್ಲಿ ಬಿದ್ದು ಹೊರಳಾಡುವ ಕ್ಷುದ್ರಜೀವಿಗಳು ಶರಣರು,ಸಂತರು,ದಾರ್ಶನಿಕರುಗಳಲ್ಲಿ ಕುಲವನ್ನು ಅರಸುತ್ತಾರೆ.ಬೆಳಕಿನಲ್ಲಿಯೂ ಕತ್ತಲೆಯನ್ನು ಹುಡುಕುವ ಮಂದಿ ಎಂದಾದರೂ ಪರಮಾತ್ಮನ ಅನುಗ್ರಹವನ್ನು ಪಡೆಯಲು ಸಾಧ್ಯವೆ ?

ಕನಕದಾಸರ ಬದುಕಿನಲ್ಲಿ ನಡೆದ ‘ಕನಕನಕಿಂಡಿ’ ಯ ಪವಾಡವು ಕನಕದಾಸರ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಲು,ಜಡಜೀವರುಗಳಿಗೆ ಚೈತನ್ಯತತ್ತ್ವವನ್ನುಪದೇಶಿಸಲು ಕೃಷ್ಣನು ತೋರಿದ ಲೀಲೆ.ಕನಕದಾಸರ ಪೂರ್ಣಯೋಗಿಯ,ಪೂರ್ಣಸಿದ್ಧನ ವ್ಯಕ್ತಿತ್ವವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದಲೇ ಶ್ರೀಕೃಷ್ಣನು ಈ ಲೀಲೆಯನ್ನು ಎಸಗಿದ್ದಾನೆ.ಜಾತಿಗೆ ಅಂಟಿಕೊಂಡಿದ್ದ ಬ್ರಾಹ್ಮಣರು ಉಡುಪಿಯ ಕೃಷ್ಣನಲ್ಲಿ ಶಿಲೆಯ ಮೂರ್ತಿಯನ್ನು ಮಾತ್ರ ಕಂಡಿದ್ದರೆ ಕನಕದಾಸರು ಕೃಷ್ಣನಲ್ಲಿ ಚಿನ್ಮಯನನ್ನು ಕಂಡಿದ್ದರು.ಹೊರಗೆ ತೊಳೆದುಕೊಂಡು ಮಡಿಯಾಗುತ್ತಿದ್ದ ಬ್ರಾಹ್ಮಣರು ಕೃಷ್ಣನ ಮೂರ್ತಿಗೆ ಷೋಡಶೋಪಚಾರ ಪೂಜೆ ಮತ್ತಿತರ ಸೇವೆಗಳನ್ನು ಮಾಡಿ ಕೃಷ್ಣನ ‘ ವಿಗ್ರಹ’ ಕ್ಕೆ ನಮಸ್ಕರಿಸಿ ಧನ್ಯತೆ ಮೆರೆಯುತ್ತಿದ್ದರು.ಮಡಿವಂತರಿಗೆ ಶ್ರೀಕೃಷ್ಣನು ಗುಡಿಯಲ್ಲಿ ಮಾತ್ರ ಇದ್ದುದರಿಂದ ಅವರು ಗುಡಿಯನ್ನು ಮಡಿಯಾಗಿ ಇಡುವುದು ಪೂಜೆ ಎನ್ನುವ ಭಾವಭ್ರಮೆಯ ಬಳಲಿಕೆಗೆ ಒಳಗಾಗಿದ್ದರು.ಕನಕದಾಸರು ಜಗದ ಎಲ್ಲೆಡೆ ಶ್ರೀಕೃಷ್ಣನ ದಿವ್ಯ ಬೆಳಕನ್ನು ಕಂಡವರು.ಎಲ್ಲ ಜೀವರುಗಳ ಎದೆಯಲ್ಲಿ ಶ್ರೀಕೃಷ್ಣನಿದ್ದಾನೆ,ಎಲ್ಲದರ ಹಿಂದೆಯೂ ಶ್ರೀಕೃಷ್ಣನಿದ್ದಾನೆ ಎಂದು ನಂಬಿದವರು.ಜೀವರುಗಳ ಎದೆಯಲ್ಲಿರುವ ಜಗದೀಶ್ವರನನ್ನು ಕಾಣುವುದೇ ಜೀವನದ ಸಾರ್ಥಕತೆ ಎಂದು ನಂಬಿದ್ದ ಕನಕದಾಸರು ಮನುಷ್ಯನಿರ್ಮಿತ ಕುಲಗೋತ್ರಗಳ ಹಂಗು ಅಭಿಮಾನಗಳಿಗೆ ಒಳಗಾಗದೆ ಸರ್ವರಲ್ಲಿಯೂ ವಿಶ್ವಭರಿತನಾದ ತಮ್ಮ ಪ್ರೀತಿಯ’ ಕಾಗಿನೆಲೆಯ ಆದಿಕೇಶವ’ನನ್ನೇ ಕಾಣುತ್ತಿದ್ದರು.ಭಕ್ತನು ಪೂರ್ಣನಾಗದೆ ಭಗವಂತನ ದರ್ಶನ ಸಾಧ್ಯವಿಲ್ಲ.ಸೃಷ್ಟಿಯ ಪೂರ್ಣತತ್ತ್ವದಲ್ಲಿ ಅಪೂರ್ಣತೆಯನ್ನು ಅರಸುವವರು,ಕೃತ್ರಿಮಭೇದಗಳ ಬಲೆಯಲ್ಲಿ ಸಿಲುಕಿಕೊಂಡ ಕರ್ಮದೇಹಿಗಳು ತಾವು ನಂಬಿದ ಶುಷ್ಕಪೂಜಾಡಂಬರಗಳಿಗೆ ಕಟ್ಟಿಬೀಳುವುದರಿಂದ ಅವರಲ್ಲಿ ಜ್ಞಾನಚಕ್ಷು ತೆರೆದುಕೊಳ್ಳುವುದಿಲ್ಲ.ಅಂತರಂಗದ ಕಣ್ಣು ತೆರೆಯದ ಹೊರತು ಪರಮಾತ್ಮನ,ಪೂರ್ಣಸ್ವರೂಪನ ದರ್ಶನ ಸಾಧ್ಯವಾಗದು.ಕನಕದಾಸರಲ್ಲಿ ಅಂತರಂಗದ ಕಣ್ಣು,ಯೋಗದ ಕಣ್ಣು ತೆರೆದಿತ್ತು; ಮಡಿವಂತಿಕೆಯ ಬ್ರಾಹ್ಮಣರು ಚರ್ಮಚಕ್ಷುವಿನ ಇತಿಮಿತಿಯಲ್ಲಿಯೇ ವ್ಯವಹರಿಸುತ್ತಿದ್ದರು.

ಜಡದೇಹಿಗಳು ದೇಹವೇದೇಗುಲವಾಗಿದ್ದ ಕನಕದಾಸರ ಒಡಲಬೆಡಗನನ್ನು ಅರಿಯದಾದರು‌.ಶ್ರೀಕೃಷ್ಣನ ದರ್ಶನಕ್ಕೆ ಭಾವಪರವಶರಾಗಿ ಬರುತ್ತಿದ್ದ ಕನಕದಾಸರಲ್ಲಿ ‘ ಕುರುಬ’ ನನ್ನು ಕಂಡ ಬ್ರಾಹ್ಮಣರು ಕನಕದಾಸರ ಎದೆಯಲ್ಲಿ ಮೂರ್ತಿಗೊಂಡಿದ್ದ ಶ್ರೀಕೃಷ್ಣನ ಚಿನ್ಮಯಬೆಡಗಿನ’ ಕುರುಹ’ ನ್ನು ಕಾಣಲಿಲ್ಲ.ಕಣ್ಣಿದ್ದೂ ಕುರುಡರಾದವರು ಪರಮಪ್ರಭೆಯನ್ನು ಗುರುತಿಸಲು ಸಾಧ್ಯವೆ? ಜಾತಿಯಿಂದ ಕನಕನನ್ನು ಗುರುತಿಸಿದ ಬ್ರಾಹ್ಮಣರು ಅವರನ್ನು ಶ್ರೀಕೃಷ್ಣ ಮಂದಿರದತ್ತ ಬಿಡಲಿಲ್ಲ,ಕೆಟ್ಟದಾಗಿ ನಿಂದಿಸಿದರು,ಕೋಲುಗಳಿಂದ ಹೊಡೆದು ಮೈ ಕೈ ರಕ್ತವಾಗುವಂತೆ ಮಾಡಿದರು.ನಾಯಿಗಳನ್ನು ಛೂ ಬಿಟ್ಟರು.’ ಶೂದ್ರಕುನ್ನಿಯೆ,ತೊಲಗಾಚೆ’ ಎಂದು ಹಂದಿ ನಾಯಿಗಳನ್ನು ಅಟ್ಟುವಂತೆ ಅಟ್ಟಿದರು.ಬ್ರಾಹ್ಮಣರ ಅಜ್ಞಾನಕ್ಕೆ ಮರುಕಪಟ್ಟ ಕನಕದಾಸರು ತಮ್ಮ ದೇಹಕ್ಕಾದ ಪೆಟ್ಟುಗಳನ್ನು ಭಗವಂತನ ಉಡುಗೊರೆ ಎಂದೇ ಭಾವಿಸಿದರು.ದೇಹಕ್ಕಾದ ನೋವಿನ ಪರಿತಾಪದಲ್ಲಿ ಶ್ರೀಕೃಷ್ಣ ಮಂದಿರದ ಹಿಂಭಾಗಕ್ಕೆ ಬಂದು ಶ್ರೀಕೃಷ್ಣನನ್ನು ಭಕ್ತಿಯಿಂದ ನಮಿಸಿದರು,ವಂದಿಸಿದರು ‘ ಓ ನನ್ನ ತಂದೆಯೆ,ಲೋಕಬಂಧುವೆ,ಏಕಿಂತು ಈ ಶಿಕ್ಷೆ? ನಿನಗೂ ಬೇಡವಾದೆನೆ ನಾನು?’ ಎಂದು ಪರಿಪರಿಯಲ್ಲಿ ದುಃಖಾರ್ತರಾಗಿ ಪ್ರಾರ್ಥಿಸಿದರು.ಹೊತ್ತು ಮುಳುಗಿತ್ತು,ಕತ್ತಲಾಯಿತು. ಶ್ರೀಕೃಷ್ಣನ ಗುಡಿಗೆ ಬೀಗ ಜಡಿದು ಬ್ರಾಹ್ಮಣರು ತಮ್ಮ ಮನೆಗಳಿಗೆ ತೆರಳಿದರು.ನೋವು,ನಿರಾಶೆಯಲ್ಲಿ ಬಳಲುತ್ತಿದ್ದ ಕನಕದಾಸರು ಶ್ರೀಕೃಷ್ಣ ಮಂದಿರದ ಹಿಂಬದಿಯ ಪಶ್ಚಿಮ ದಿಕ್ಕಿನ ಒಂದು ಮೂಲೆಯಲ್ಲಿ ಕಂಬಳಿಯನ್ನು ಹೊದ್ದು ‘ ಕೃಷ್ಣ ಕೃಷ್ಣ ‘ ಎನ್ನುತ್ತ ಮಲಗಿದ್ದರು.

ಬೆಳಗಿನ ಬ್ರಾಹ್ಮೀಮುಹೂರ್ತದ ಸಮಯ .’ ಮಗು ಕನಕ,ಏಳು’ ಎಂದ ಧ್ವನಿಯೊಂದು ಮಲಗಿದ್ದ ಕನಕದಾಸರನ್ನು ಎಚ್ಚರಿಸಿತು.ತಟ್ಟನೆ ಎದ್ದು ನೋಡಿದರು‌. ಯಾರೂ ಇಲ್ಲ ! ದಿವ್ಯಧ್ವನಿಯದು ಶ್ರೀಕೃಷ್ಣನ ಧ್ವನಿಯಲ್ಲದೆ ಮತ್ತಾರದೂ ಅಲ್ಲ ಎಂದರಿತು ಕನಕದಾಸರು ಎದ್ದು ದೇಗುಲದ ಬಳಿ ಬಂದು ‘ ಕೃಷ್ಣ ಕೃಷ್ಣ ‘ ಎಂದು ಎದೆತುಂಬಿ ಹಾಡಿದರು,ಭಕ್ತಿಪರವಶರಾಗಿ ಕುಣಿದರು.ಭಕ್ತನ ಭಾವೋನ್ಮಾದಕ್ಕೆ ಮಂದಿರದೊಳಗಿದ್ದ ಶ್ರೀಕೃಷ್ಣನು ಕುಣಿದಂತೆ ಭಾಸವಾಗಿ ತಟ್ಟನೆ ಸಿಡಿಲುಹೊಡೆದಂತೆ ದೇಗುಲದ ಪಶ್ಚಿಮ ದಿಕ್ಕಿನ ಗೋಡೆಯ ಕಲ್ಲು ನೆಲಕ್ಕುರುಳಿ ಬಿದ್ದಿತು.ಆಶ್ಚರ್ಯ,ಬೆರಗುಗಳಿಂದ ನೋಡುತ್ತಿದ್ದ ಕನಕದಾಸರಿಗೆ ‘ ಮಗು ಕನಕ,ಇಗೋ ನಾನು ನೋಡಿಲ್ಲಿ’ ಎನ್ನುವ ಶ್ರೀಕೃಷ್ಣನ ಧ್ವನಿ ಕೇಳಿ ಕನಕದಾಸರು ಕಿಂಡಿಯಲ್ಲಿ ಕಣ್ಣಿಟ್ಟು ನೋಡಿದರು.ಶಿಲಾಮೂರ್ತಿ ಇದ್ದಲ್ಲಿ ಶ್ರೀಕೃಷ್ಣನೇ ಎದ್ದು ನಿಂತಿದ್ದ.ಪರಮಪ್ರಭೆಯಿಂದ ಬೆಳಗುತ್ತಿದ್ದ ಮುಗುಳುನಗೆಯ,ದಿವ್ಯವದನಾರವಿಂದ,ಕೃಷ್ಣನ ಭವ್ಯಾಧ್ಭುತ ದರ್ಶನವನ್ನು ಪಡೆದರು ಕನಕದಾಸರು.’ ಧನ್ಯನಾದೆ ತಂದೆ,ಸಾರ್ಥಕವಾಯಿತು ನನ್ನ ಜನ್ಮ’ ಎಂದು ಭಕ್ತಿಯಿಂದ ನಮಿಸಿದರು,ನೆಲಕ್ಕುರುಳಿ ದಿಂಡುಗಡೆದರು.’ ಏಳು ಮಗು ಕನಕ,ನಿನ್ನಂತಹ ಭಕ್ತನನ್ನು ಪಡೆದ ನಾನೂ ಧನ್ಯನಾದೆ’ .ಭಗವಂತನನ್ನು ಕಣ್ಣಾರೆ ಕಂಡ ಆನಂದಾತಿರೇಕದಲ್ಲಿ ಮಾತೇ ಹೊರಡುತ್ತಿಲ್ಲ ಕನಕದಾಸರ ಬಾಯಿಂದ.ಕರಗಳನ್ನು ಜೋಡಿಸಿ,ಆ ದಿವ್ಯಬೆಳಕಿನ ಬೆಡಗನ್ನು ನೋಡುತ್ತ ನಿಂತಿದ್ದರು.ಬೆಣ್ಣೆಕದಿಯುವ ಬಾಲಕೃಷ್ಣನೊಮ್ಮೆ,ಕಂಸಾದಿ ದುಷ್ಟರನ್ನು ಸಂಹರಿಸುವ ವೀರ ಕೃಷ್ಣನೊಮ್ಮೆ,ಗೋಪಿಕಾಸ್ತ್ರೀಯರೊಂದಿಗೆ ವಿಹರಿಸುವ ಗೋಪಿಕಾಸ್ತ್ರೀಯರ ಮನೋವಲ್ಲಭ ಕೃಷ್ಣನೊಮ್ಮೆ,ಅರ್ಜುನನಿಗೆ ವಿರಾಟ್,ವಿಶ್ವ ರೂಪ ದರ್ಶನ ನೀಡಿದ್ದ ಕೃಷ್ಣನೊಮ್ಮೆ ಕಂಡನು ಕನಕದಾಸರ ಯೋಗಚಕ್ಷುಗಳಿಗೆ.ಭಕ್ತಿ,ಭಾವೋನ್ಮಾದದ ಕಡಲಲ್ಲಿ ತೇಲುತ್ತಿದ್ದ ಕನಕದಾಸರನ್ನು ಉದ್ದೇಶಿಸಿ ಶ್ರೀಕೃಷ್ಣನು ನುಡಿದನು , ‘ ಮಗು ಕನಕ,ಇಂದಿನಿಂದ ನಾನು ನನ್ನ ಭಕ್ತರಿಗೆ ನಿನಗೆ ದರ್ಶನವಿತ್ತ ಈ ಕಿಂಡಿಯ ಮೂಲಕವೇ ದರ್ಶನ ನೀಡಿ,ನಿನ್ನ ಭಕ್ತಿ,ಯೋಗದ ಮಹಿಮೆಯನ್ನು ಜಗಕ್ಕೆ ಸಾರುತ್ತೇನೆ’ ಎಂದು ಅಭಯವಿತ್ತು ಅದೃಶ್ಯನಾದನು.ಕೃಷ್ಣನನ್ನು,ತನ್ನ ಪರಮಾತ್ಮನನ್ನು ಕಂಡ ಕನಕದಾಸರು ಕಂಬಳಿಯನ್ನು ಹಾಸಿ,ಅಲ್ಲಿಯೇ ಪದ್ಮಾಸನದಲ್ಲಿ ಕುಳಿತು ಕೃಷ್ಣನಿಗೆ ಕೃತಜ್ಞತೆಯನರ್ಪಿಸುತ್ತ ಧ್ಯಾನಾಸಕ್ತರಾದರು,ಸಮಾಧಿಸ್ಥಿತಿಗೇರಿದರು.

ಬೆಳಗಾಯಿತು.ಅರ್ಚಕ ಬ್ರಾಹ್ಮಣರು ಮಂದಿರದ ಬಾಗಿಲು ತೆರೆದು ಒಳ ಬರುತ್ತಾರೆ.ಆಶ್ಚರ್ಯ,ಪೂರ್ವಾಭಿಮುಖವಾಗಿದ್ದ ಶ್ರೀಕೃಷ್ಣನ ಮೂರ್ತಿಯು ಪಶ್ಚಿಮಕ್ಕೆ ಮುಖಮಾಡಿ ನಿಂತಿದೆ.ಕಿಂಡಿಯಲ್ಲಿ ಸಮಾಧಿಸ್ಥಿತಿಯಲ್ಲಿ ಕುಳಿತ ಕನಕದಾಸರನ್ನು ಕಂಡ ಅರ್ಚಕರಿಗೆ ‘ ಇದು ಕನಕನ ಮಹಿಮೆ’ ಎಂದು ತಿಳಿಯಿತು.ಅರ್ಚಕರು ಓಡೋಡುತ್ತ ಬಂದು ಶ್ರೀಕೃಷ್ಣನ ಮಠಾಧೀಶರಿಗೆ ವಿಷಯವನ್ನು ಅರಿಕೆ ಮಾಡಿಕೊಂಡರು.ಅವರು ಓಡೋಡುತ್ತ ಬಂದು ಈ ಕೌತುಕವನ್ನು ಕಣ್ತುಂಬಿಕೊಂಡರು.ಕೃಷ್ಣನ ಭಕ್ತವತ್ಸಲ ಲೀಲೆಯನ್ನು ಹಾಡಿ ಹೊಗಳಿ,ಕನಕದಾಸರ ಬಳಿ ಬಂದು,ಯೋಗನಿದ್ದೆಯೊಳಿದ್ದ ಕನಕದಾಸರನ್ನು ಎಬ್ಬಿಸಿ,ಅವರನ್ನು ಅಪ್ಪಿ,ಆಲಂಗಿಸಿ ಮಂದಿರದೊಳಗೆ ಕರೆದುಕೊಂಡು ಹೋಗಿ ಶ್ರೀಕೃಷ್ಣನ ಬಳಿ ಕೂಡಿಸಿ ಹೂಮಾಲೆಗಳಿಂದ ಸನ್ಮಾನಿಸಿ,ಸತ್ಕರಿಸಿದರು.’ ಶ್ರೀಕೃಷ್ಣನ ದರ್ಶನ ಪಡೆದ ನೀವೇ ಧನ್ಯರು,ಧರೆಗೆ ದೊಡ್ಡವರು’ ಎಂದು ಹಾಡಿ ಹೊಗಳಿದರು.ಕನಕದಾಸರನ್ನು ನೋಯಿಸಿದ ತಪ್ಪಿಗೆ ಬ್ರಾಹ್ಮಣ ಅರ್ಚಕರುಗಳು ಅವರ ಕ್ಷಮೆ ಕೇಳಿದರು.’ ಇಲ್ಲ,ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ.ಎಲ್ಲವೂ ಭಗವಂತನ ಲೀಲೆ.ನಿಮ್ಮಿಂದಾಗಿಯೇ ನಾನು ನನ್ನ ಒಡೆಯ,ನನ್ನ ಪರಮಾತ್ಮ ಶ್ರೀಕೃಷ್ಣನನ್ನು ಕಾಣುವಂತಾಯಿತು.ಈ ಭಾಗ್ಯವನ್ನು ಕರುಣಿಸಿದ ನೀವೂ ನನಗೆ ಪೂಜ್ಯರು’ ಎಂದು ಕನಕದಾಸರು ವಿನಯದಿಂದ ಬ್ರಾಹ್ಮಣ ಅರ್ಚಕರುಗಳಿಗೆ ಕೈಮುಗಿದರು.’ ಓ! ಇದಲ್ಲವೆ ದೊಡ್ಡವರ ದೊಡ್ಡಸ್ತಿಕೆ! ಉದ್ಗರಿಸಿದರು ಶ್ರೀಕೃಷ್ಣ ಮಠದ ಯತಿಗಳು.

ಇದು ಕನಕದಾಸರ ಮಹಿಮೆ,ಅವರ ತಪೋಸಾಧನೆಯ ಹಿರಿಮೆ.ಶ್ರೀಕೃಷ್ಣನ ಭಕ್ತವತ್ಸಲ ಲೀಲೆ! ಭಕ್ತ ಕನಕದಾಸರಿಗಾಗಿ ಶ್ರೀಕೃಷ್ಣನು ಪಶ್ಚಿಮಾಭಿಮುಖವಾಗಿ ತಿರುಗಿ ತಾನು ಭಕ್ತವತ್ಸಲನು ಎನ್ನುವುದನ್ನು ತೋರಿದ.ಬ್ರಾಹ್ಮಣರ ಪೊಗರು- ಪ್ರತಿಷ್ಠೆಗಳನ್ನು ಅಲ್ಲಗಳೆದು ಶ್ರೀಕೃಷ್ಣನು ತನ್ನ ಭಕ್ತಕನಕದಾಸರು ವಿಶ್ವವಂದ್ಯ ವಿಭೂತಿಗಳೆಂದು ಜಗಕೆ ಸಾರಿದ.ಶುಷ್ಕ,ಆಡಂಬರದ ಪೂಜೆಯಿಂದ ಪರಮಾತ್ಮನನ್ನು ಒಲಿಸಲು ಸಾಧ್ಯವಿಲ್ಲ,ಮುಗ್ಧಭಕ್ತಿಯಿಂದ ಮಾತ್ರ ಪರಮಾತ್ಮನನ್ನು ಗೆಲ್ಲಲು ಸಾಧ್ಯ ಎನ್ನುವ ಪಾರಮಾರ್ಥಿಕ ಪಥವನ್ನು ಕನಕದಾಸರ ಮೂಲಕ ಜಗತ್ತಿಗೆ ಪರಿಚಯಿಸಿದ ಶ್ರೀಕೃಷ್ಣ.ಒಣ ಮಂತ್ರ ಪಠಣೆಯಿಂದ ಪರಮಾತ್ಮನ ಒಲುಮೆ ಸಾಧ್ಯವಿಲ್ಲ; ಮಾತುಸತ್ತ ಮೌನದ ಎಡೆಯಲ್ಲಿ ಭಾಷಾತೀತನಾದ ಭಗವಂತನ ಅನುಗ್ರಹಸಾಧ್ಯ ಎನ್ನುವುದು ಕನಕದಾಸರು ಲೋಕಕ್ಕೆ ತೋರಿಸಿದ ಪರಮಾತ್ಮನ ಪಥ,ದಾರ್ಶನಿಕ ದಾರಿ.ಉಟ್ಟಮಡಿಬಟ್ಟೆಯಿಂದ ಪರಮಾತ್ಮನ ಅನುಗ್ರಹ ಸಾಧ್ಯವಿಲ್ಲ,ಬಾಳ ಬಟ್ಟೆ ಪರಿಶುಭ್ರವಾಗಿರಬೇಕು,ಮನಸ್ಸನ್ನು ತೊಳೆದು ಮನದ ಮಡಿಯನ್ನು ಆಚರಿಸಿರಬೇಕು.ವಿಷಯಾಸಕ್ತ ಮನಸ್ಸಿನ ಕೊಳೆ ,ಕಶ್ಮಲಗಳನ್ನು ತೊಳೆದುಕೊಂಡು ಮಲಮುಕ್ತರಾಗಿರಬೇಕು ಎನ್ನುವ ಪಾರಮಾರ್ಥಿಕ ಪಥವನ್ನು ಜಗತ್ತಿಗೆ ತೋರಿದ ಲೋಕಪೂಜ್ಯ,ವಿಶ್ವವಂದಿತ ಸಂತರು ಕನಕದಾಸರು.

ಶ್ರೀಕೃಷ್ಣನು ಕನಕದಾಸರಿಗಾಗಿ ಪಶ್ಚಿಮಾಭಿಮುಖವಾಗಿ ತೋರಿದ್ದು ಸಾಮಾನ್ಯ ಸಂಗತಿಯಲ್ಲ.ಲೋಕದಲ್ಲಿ ಅಸಾಮಾನ್ಯ ಘಟನೆ.ಪ್ರಹ್ಲಾದನಿಗಾಗಿ ಕಲ್ಲುಕಂಭದಲ್ಲಿ ಪ್ರತ್ಯಕ್ಷನಾದ ಹರಿಯು ಕನಕದಾಸರಿಗಾಗಿ ತನ್ನ ದೇಗುಲದ ಗೋಡೆ ಒಡೆದು ಪಶ್ಚಿಮಾಭಿಮುಖನಾಗಿ ನಿಂತು ದರ್ಶನ ನೀಡಿದ. ಪೂರ್ವಾಭಿಮುಖವಾಗಿದ್ದ ಶ್ರೀಕೃಷ್ಣನು ಕನಕದಾಸರಿಗಾಗಿ ಪಶ್ಚಿಮಕ್ಕೆ ತಿರುಗುವ ಮೂಲಕ ತಾನು ಶಾಸ್ತ್ರ,ಸಂಪ್ರದಾಯಗಳಿಗೆ ಅತೀತನು ಎನ್ನುವುದನ್ನು ಬಿತ್ತರಿಸಿದ.ಜಡತ್ವವನ್ನು ನಿರಾಕರಿಸಿ ಶಾಸ್ತ್ರ ಸಂಪ್ರದಾಯಗಳಲ್ಲಿ ತಾನು ಆಸಕ್ತನಿಲ್ಲವೆಂದು ಮುಖತಿರುಗಿ ಪೂರ್ವಕ್ಕೆ ಬೆನ್ನು ತೋರಿಸಿದ.ಪೂರ್ವವು ‘ ಪ್ರತಿಷ್ಠೆ’ ಯ ದಿಕ್ಕು ಆದರೆ ಪಶ್ಚಿಮವು ‘ ಆತ್ಮೋನ್ನತಿಯ ಶಕ್ತಿವಿಶಿಷ್ಟ’ ದಿಕ್ಕು.ಗುಡಿಗಳಲ್ಲಿ ದೇವರ ಮೂರ್ತಿ,ವಿಗ್ರಹಗಳನ್ನು ಪ್ರತಿಷ್ಠಾ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.ಪ್ರತಿಷ್ಠೆಗೊಂಡ ಮೂರ್ತಿಗೊಂದು ಪೂಜಾಪರಂಪರೆ,ಆರಾಧನಾ ಸಂಪ್ರದಾಯ ಉಂಟಾಗುತ್ತದೆ.ಇದೇ ದೇವರ ದರ್ಶನ ಕ್ರಮ ಎನ್ನುವ ಕಟ್ಟುಕಟ್ಟಳೆ ಏರ್ಪಡುತ್ತದೆ.ದೇವರಿಗೆ ‘ ಬೇಕಾದವರು’ ‘ ಬೇಡವಾದವರು’ ಎನ್ನುವ ಕೃತಕಭೇದ ಕಲ್ಪಿಸಲಾಗುತ್ತದೆ.ಹುಟ್ಟಿನಿಂದ ಶ್ರೇಷ್ಠರು,ಕನಿಷ್ಟರು ಎನ್ನುವ ಅರ್ಥಹೀನ ತರ್ಕ ಮೇಲುಗೈ ಪಡೆಯುತ್ತದೆ.ಕಥೆ,ಪುರಾಣ,ಶಾಸ್ತ್ರ,ಸಿದ್ಧಾಂತಗಳೇ ಸತ್ಯ ಎನ್ನುವ ಸುಳ್ಳು ವೇದಪ್ರಾಮಾಣ್ಯ ಪಡೆಯುತ್ತದೆ‌.ಇದೆಲ್ಲ ಸುಳ್ಳು,ಮನುಷ್ಯರ ಕಪಟ ಎನ್ನುವುದನ್ನು ಸಾರಿ ಹೇಳಲೆಂದೇ ಶ್ರೀಕೃಷ್ಣನು ಕನಕದಾಸರತ್ತ ಮುಖ ತಿರುಗಿ ನೋಡಿ,ಪಶ್ಚಿಮಾಭಿಮುಖನಾಗಿ ನಿಂತು ತನ್ನ ಅನುಪಮ,ಅಪೂರ್ವ ಲೀಲೆ ಮೆರೆದ ಉಡುಪಿಯಲ್ಲಿ.ಉಡುಪಿಯಲ್ಲಿ ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನ ಪಡೆಯಬೇಕು.ಜಡತ್ವವನ್ನು‌ ಕೊಡಹಿಕೊಂಡು ಬಂದಾಗಲೇ ತನ್ನ ದಿವ್ಯತ್ವದ ದರ್ಶನ ಎನ್ನುತ್ತಿದ್ದಾನೆ ಪಶ್ಚಿಮಾಭಿಮುಖನಾಗಿ ನಿಂತ ಶ್ರೀಕೃಷ್ಣ.ಕನಕನ ಕಿಂಡಿಯ ಮೂಲಕವೇ ತನ್ನ ದರ್ಶನ ಮಾಡುವ ನಿಯತಿಯನ್ನುಂಟು ಮಾಡಿರುವ ಉಡುಪಿಯ ಕೃಷ್ಣನು ಶ್ರೀಕೃಷ್ಣ ಮಾರ್ಗಕ್ಕೆ,ವೈಕುಂಠ ಪಥಕ್ರಮಣಕ್ಕೆ ಕನಕದಾಸರೇ ಗುರು,ಪರಮಾದರ್ಶ ಎನ್ನುವ ಸಂದೇಶವನ್ನು ಸಾರಿದ್ದಾನೆ.

About The Author