ಬಾಯ್ತಪ್ಪಿ ಆಡಿದ ಮಾತಿಗೆ ಇಷ್ಟೊಂದು ‘ ಬಣ್ಣಕಟ್ಟಿ ಆಡುವ ‘ ಅಗತ್ಯವಿರಲಿಲ್ಲ : ಮುಕ್ಕಣ್ಣ ಕರಿಗಾರ

ಬಾಯ್ತಪ್ಪಿ ಆಡಿದ ಮಾತಿಗೆ ಇಷ್ಟೊಂದು ‘ ಬಣ್ಣಕಟ್ಟಿ ಆಡುವ ‘ ಅಗತ್ಯವಿರಲಿಲ್ಲ

ಮುಕ್ಕಣ್ಣ ಕರಿಗಾರ

ಎ .ಐ .ಸಿ. ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ ಭಾಷಣ ಒಂದರಲ್ಲಿ ಬಾಯ್ತಬ್ಬಿ ಆಡಿದ ಮಾತೊಂದನ್ನು ಬಿಜೆಪಿ ಪಕ್ಷವು ಮಹಾ ಅಪರಾಧ ಎಂಬಂತೆ ಬಿಂಬಿಸುತ್ತಿದೆ.ಚುನಾವಣಾ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ರಾಜೀವಗಾಂಧಿಯವರ ಕೊಡುಗೆಯನ್ನು ಸ್ಮರಿಸುತ್ತ ‘ ರಾಜೀವಗಾಂಧಿಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ’ ಎಂದು ಹೇಳುವ ಬದಲು ‘ ರಾಹುಲ್ ಗಾಂಧಿಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ’ ಎಂದಿರುವುದನ್ನೇ ಬಿಜೆಪಿಯು ದೊಡ್ಡದಾಗಿ ಬಿಂಬಿಸುತ್ತಿದೆ.ಮಾತನಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಬಾಯಿತಪ್ಪಿ ‘ ರಾಹುಲ್ ಗಾಂಧಿಯವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ’ ಎಂದಿದ್ದಾರೆಯೇ ಹೊರತು ಅದೇನು ಉದ್ದೇಶಪೂರ್ವಕವಾಗಿ ಆಡಿದ ಮಾತಲ್ಲ.ರಾಜ್ಯ ಬಿಜೆಪಿಗರು ಕನಿಷ್ಟ ಮಲ್ಲಿಕಾರ್ಜುನ ಖರ್ಗೆಯವರ ವಯಸ್ಸಿಗಾದರೂ ಬೆಲೆಕೊಟ್ಟು ಸುಮ್ಮನಿರಬೇಕಿತ್ತು.ಇಂತಹ ಬಾಯ್ತಪ್ಪಿನ ಮಾತುಗಳನ್ನು ದೊಡ್ಡದು ಮಾಡಿ ಆಡುವುದು ಪ್ರಬುದ್ಧ ರಾಜಕೀಯ ವರ್ತನೆಯಲ್ಲ,ಜವಾಬ್ದಾರಿಯುತ ವಿರೋಧ ಪಕ್ಷದ ಸನ್ನಡತೆಯಲ್ಲ.

ಮಲ್ಲಿಕಾರ್ಜುನ ಖರ್ಗೆಯವರನ್ನು ಟೀಕಿಸುವ ಭರದಲ್ಲಿ ಬಿಜೆಪಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಮ್ಮೆ ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅವರ ಭಾಷಣದ ಎಲೆಕ್ಟ್ರಾನಿಕ್ ಯಂತ್ರವು ಕೈಕೊಟ್ಟಿದ್ದರಿಂದ ಗಲಿಬಿಲಿಗೊಂಡು ‘ ನನ್ನ ಮಾತು ಕೇಳಿಸುತ್ತದೆಯೆ?’ ಎಂದು ಮಾತನಾಡಿದ್ದನ್ನು ಮರೆತಂತೆ ಕಾಣಿಸುತ್ತದೆ.ಮಲ್ಲಿಕಾರ್ಜುನ ಖರ್ಗೆಯವರಾಗಲಿ,ನರೇಂದ್ರ ಮೋದಿವರಾಗಲಿ ಎಲ್ಲರಂತೆ ಮನುಷ್ಯರು,ಮಾತನಾಡುವಾಗ ಬಾಯ್ತಪ್ಪುವುದು,ಮುಗ್ಗರಿಸುವುದು ಸಹಜ.ಇಂತಹ ಸಂಗತಿಗಳನ್ನು ಮನುಷ್ಯ ಸಹಜವರ್ತನೆಗಳು ಎಂದು ಭಾವಿಸಬೇಕೇ ಹೊರತು ಇಂತಹ ಸಂಗತಿಗಳನ್ನೇ ರಾಜಕೀಯ ಅಸ್ತ್ರ ಎಂದು ಭಾವಿಸಬಾರದು.ಯುದ್ಧಭೂಮಿಯಲ್ಲಿ ನಿಜವಾದ ಶೂರ ತನ್ನಸಮಬಲರಾದ ಶತ್ರುಗಳೊಂದಿಗೆ ಹೋರಾಡುತ್ತಿದ್ದನಂತೆ.ರಾಜಕಾರಣದಲ್ಲಿಯೂ ಕೂಡ ವಿರೋಧಿಗಳ ದೊಡ್ಡತಪ್ಪು,ದುರ್ನಡತೆಗಳನ್ನು ಎತ್ತಿ ತೋರಿಸಬೇಕೇ ಹೊರತು ದೈನಂದಿನ ಬದುಕಿನ ಸಣ್ಣಪುಟ್ಟ ಸಂಗತಿಗಳನ್ನೆಲ್ಲ ದೊಡ್ಡತಪ್ಪು ಎನ್ನುವಂತೆ ಬಿಂಬಿಸುವ ಅಗತ್ಯ ಇಲ್ಲ.

‌ ಮಲ್ಲಿಕಾರ್ಜುನ ಖರ್ಗೆಯವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹೆಮ್ಮೆಯ ಕನ್ನಡಿಗರು,ಏಕೈಕ ಕನ್ನಡಿಗರು ಎನ್ನುವುದನ್ನು ರಾಜ್ಯ ಬಿಜೆಪಿಯವರು ಮರೆಯಬಾರದು.ದಲಿತ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆಯವರು ಮಹಾತ್ಮಗಾಂಧಿ,ಸುಭಾಶ್ಚಂದ್ರ ಬೋಸ್,ಜವಾಹರಲಾಲ್ ನೆಹರೂ ಅವರಂತಹ ದಿಗ್ಗಜರುಗಳು ಕುಳಿತಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಎನ್ನುವುದು ಹೆಮ್ಮೆಯ,ಅಭಿಮಾನದ ಸಂಗತಿ.ಬಿಜೆಪಿಯ ವರಿಷ್ಠರು ತಮ್ಮನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ distance maintain ಮಾಡುತ್ತಿದ್ದಾರೆ,ತಮ್ಮನ್ನು ತೀರ ನಿಕೃಷ್ಟರಾಗಿ ಕಾಣುತ್ತಿದ್ದಾರೆ ಎನ್ನುವುದನ್ನು ರಾಜ್ಯ ಬಿಜೆಪಿ ನಾಯಕರುಗಳು ಮರೆಯಬಾರದು.

ವಿರೋಧ ಪಕ್ಷದಲ್ಲಿದ್ದವರು ಬಾಯಿಚಪಲದಿಂದ ದೊಡ್ಡವರಾಗುವುದಿಲ್ಲ,ಪ್ರಬುದ್ಧ ನಡುವಳಿಕೆಯಿಂದ ದೊಡ್ಡವರು ಆಗುತ್ತಾರೆ.

About The Author