ಕರ್ನಾಟಕ ಮಾದರಿ’ ಸರ್ಕಾರದ ಸಾಧನೆಯಲ್ಲಿ ಎಲ್ಲವೂ ‘ಮಾದರಿ’ ಅಲ್ಲ ! : ಮುಕ್ಕಣ್ಣ ಕರಿಗಾರ

ಕರ್ನಾಟಕ ಮಾದರಿ’ ಸರ್ಕಾರದ ಸಾಧನೆಯಲ್ಲಿ ಎಲ್ಲವೂ ‘ಮಾದರಿ’ ಅಲ್ಲ ! ಮುಕ್ಕಣ್ಣ ಕರಿಗಾರ

ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಎಲ್ಲ ಪ್ರಮುಖ ದಿನಪತ್ರಿಕೆಗಳ ಇಂದಿನ ಮುಖಪುಟಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ‘ ಮಾದರಿ ಸರಕಾರ’ ಎಂದು ಬಿಂಬಿಸಿಕೊಂಡ ‘ 6 ತಿಂಗಳ ಅನನ್ಯಸಾಧನೆ’ ಎನ್ನುವ ಜಾಹೀರಾತು ಪ್ರಕಟಗೊಂಡಿದೆ.ಈ ಜಾಹೀರಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾದರಿಸರಕಾರವು ತನ್ನ ಸಾಧನೆಗಳನ್ನು ಬಿಂಬಿಸಿಕೊಳ್ಳುವಲ್ಲಿ ಮಾದರಿಯಾಗಿಲ್ಲ ಎನ್ನುವುದು ಗೊತ್ತಾಗುತ್ತದೆ.ಕೇಂದ್ರಸರ್ಕಾರದ ಯೋಜನೆಗಳನ್ನು ತನ್ನ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ಮತ್ತು ಇನ್ನೂ ಪ್ರಾರಂಭವಾಗದೆ ಇರುವ ಯೋಜನೆ,ಕಾರ್ಯಕ್ರಮಗಳನ್ನು ಸಾಧನೆ ಎಂಬಂತೆ ಬಿಬ್ಬಿಸಿಕೊಂಡಿದ್ದು ಸರಿಯಲ್ಲ.

ಶಕ್ತಿಯೋಜನೆಯಡಿ ಪ್ರತಿನಿತ್ಯ 60 ಲಕ್ಷ ಮಹಿಳಾ ಪ್ರಯಾಣಿಕರು,ಇದುವರೆಗೆ 97.30 ಕೋಟಿ ಟ್ರಿಪ್, ಗೃಹಜ್ಯೋತಿ ಯೋಜನೆಯಡಿ1.56 ಕೋಟಿಗೂ ಅಧಿಕ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಿಕೆ,ಅನ್ನಭಾಗ್ಯ ಯೋಜನೆಯಡಿ 3.92 ಕೋಟಿ ಫಲಾನುಭವಿಗಳಿಗೆ ₹2444 ಕೋಟಿ ರೂಪಾಯಿ ವರ್ಗಾವಣೆ,ಗೃಹಲಕ್ಷ್ಮೀ ಯೋಜನೆಯಡಿ 99.52 ಲಕ್ಷ ಖಾತೆಗಳಿಗೆ ನಗದು ವರ್ಗಾವಣೆ ಈ ನಾಲ್ಕು ಸಾಧನೆಗಳು ಮಾತ್ರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ನೈಜ ಸಾಧನೆಗಳು.ಕಾಂಗ್ರೆಸ್ ಪಕ್ಷದ ಚುನಾವಣಾ ಗ್ಯಾರಂಟಿಗಳನ್ನು ಲೋಕಸಭಾ ಚುನಾವಣೆಯನ್ನು ಲಕ್ಷ್ಯದಲ್ಲಿರಿಸಿಕೊಂಡು ಅನುಷ್ಠಾನಗೊಳಿಸುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ‌.

‘ಮಾದರಿ ಸರ್ಕಾರ’ ದ ಸಾಧನೆಯಲ್ಲಿ 40 ಸಾವಿರ ಕೃಷಿಹೊಂಡಗಳ ನಿರ್ಮಾಣ ಮತ್ತು 10 ಕೋಟಿ ಮಾನವದಿನಗಳ ಸೃಜನೆ ರಾಜ್ಯಸರ್ಕಾರದ ಸಾಧನೆ ಎಂಬಂತೆ ಬಿಂಬಿಸಲಾಗಿದೆ.ಕೇಂದ್ರಸರ್ಕಾರದ ‘ಮಹಾತ್ಮಗಾಂಧಿ ನರೆಗಾ’ಯೋಜನೆಯ ಈ ಸಾಧನೆಯನ್ನು ‘ ಮಾದರಿ ಸರ್ಕಾರ’ ತನ್ನ ಸಾಧನೆ ಎಂದು ಬಿಂಬಿಸಿಕೊಂಡಿದೆ.ಮನರೆಗಾ ಯೋಜನೆಯ ಸಂಪೂರ್ಣ ಅನುದಾನವನ್ನು ಕೇಂದ್ರಸರಕಾರವೇ ಭರಿಸುತ್ತಿದೆ.ರಾಜ್ಯಸರಕಾರವು ತನ್ನ ಅಧಿಕಾರಿ ಸಿಬ್ಬಂದಿಗಳನ್ನು ಒದಗಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸುವುದನ್ನು ಬಿಟ್ಟರೆ ಮನರೆಗಾ ಯೋಜನೆಯಲ್ಲಿ ಕರ್ನಾಟಕ ಸರಕಾರದ ಪಾತ್ರ ಏನೂ ಇಲ್ಲ! ತಾಲೂಕಾ ಪಂಚಾಯತಿಗಳಲ್ಲಿ ಸೃಷ್ಟಿಸಿರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೂ ಕೇಂದ್ರಸರಕಾರದ ಅನುದಾನದಲ್ಲಿಯೇ ಸಂಬಳ ನೀಡಲಾಗುತ್ತಿದೆ. ಮನರೆಗಾ ಯೋಜನೆಯಡಿ ಬಹುದೊಡ್ಡ ಸಂಖ್ಯೆಯಲ್ಲಿರುವ ಹೊರಗುತ್ತಿಗೆ ಆಧಾರದ ಸಮಾಲೋಚಕ ಅಧಿಕಾರಿ,ಸಿಬ್ಬಂದಿಯವರಿಗೆ ಸಂಬಳವನ್ನು ಸಹ ಕೇಂದ್ರದ ಅನುದಾನದಲ್ಲಿಯೇ ನೀಡಲಾಗುತ್ತಿದೆ.40 ಸಾವಿರ ಕೃಷಿಹೊಂಡಗಳನ್ನು ಮನರೆಗಾ ಯೋಜನೆಯಡಿ ಸಾಧಿಸಲಾಗಿದೆ.ಇದರಲ್ಲಿ ಕರ್ನಾಟಕ ಸರಕಾರದ ಪಾತ್ರವೇನು? ಅದೂ ಹೋಗಲಿ ಮುಖ್ಯಮಂತ್ರಿಯವರನ್ನು ಒಳಗೊಂಡಂತೆ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಾಗಿರುವ ಸರಕಾರದ ಎಷ್ಟುಜನ ಸಚಿವರುಗಳು ಜಿಲ್ಲಾ ಮಟ್ಟದಲ್ಲಿ ಮನರೆಗಾ ಯೋಜನೆಯ ಪ್ರಗತಿ ಪರಿಶೀಲನೆ ಮಾಡಿದ್ದಾರೆ? ಎಷ್ಟುಜನ ಸಚಿವರುಗಳು ಮನರೆಗಾ ಯೋಜನೆಯಡಿ ಕಾಮಗಾರಿಗಳು ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.ಹೆಚ್ಚೆಂದರೆ ಜಿಲ್ಲಾ,ತಾಲೂಕಾ ಕೇಂದ್ರಗಳಿಗೆ ಭೇಟಿ ನೀಡುವ ಕಾಂಗ್ರೆಸ್ ಸರಕಾರದ ಸಚಿವರುಗಳು ಇದುವರೆಗೂ ಮನರೆಗಾ ಯೋಜನೆಯ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿಲ್ಲ,ಅಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರ ಕಷ್ಟ ಸುಖಗಳನ್ನು ವಿಚಾರಿಸಿಲ್ಲ.ಸಚಿವರುಗಳು ಬೇಡ,ಎಷ್ಟು ಜನ ಕಾಂಗ್ರೆಸ್ ಪಕ್ಷದ ಶಾಸಕರುಗಳು ಮನರೆಗಾ ಕೆಲಸ ನಡೆಯುತ್ತಿರುವ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿದ್ದಾರೆ? ಸರಕಾರಿ ಅಧಿಕಾರಿಗಳು ಮತ್ತು ಸಮಾಲೋಚಕ ಸಿಬ್ಬಂದಿಯವರ ಆಸಕ್ತಿ ಮತ್ತು ಪರಿಶ್ರಮದಿಂದ ಕರ್ನಾಟಕದಲ್ಲಿ ಮನರೆಗಾ ಯೋಜನೆಯಡಿ ಅತ್ಯುತ್ತಮ ಪ್ರಗತಿ ಆಗುತ್ತಿದೆಯೇ ಹೊರತು ಅದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಮಾದರಿ ಸರಕಾರದ ಕೊಡುಗೆ ಏನೂ ಇಲ್ಲ!

‘ ಮಾದರಿಸರಕಾರವು’ 18,240 ಸ್ವಸಹಾಯ ಗುಂಪುಗಳಿಗೆ ಬಡ್ಡಿ ಸಾಲ ನೀಡಿದ್ದು ತನ್ನ ಸಾಧನೆ ಎಂದು ಬಿಂಬಿಸಿಕೊಂಡಿದೆ.ಆದರೆ ಅದು ಕೇಂದ್ರಸರ್ಕಾರದ Livelyhood Mission ಯೋಜನೆಯಡಿ ರಾಜ್ಯ ಸರಕಾರದ ಅಧಿಕಾರಿಗಳ ನೆರವಿನೊಂದಿಗೆ ಅನುಷ್ಠಾನಗೊಳಿಸುತ್ತಿರುವ ‘ಸಂಜೀವಿನಿ ಜೀವನೋಪಾಯ’ ಯೋಜನೆಯ ಸಾಧನೆ.ಇದಕ್ಕೂ ಕೂಡ ಕೇಂದ್ರಸರಕಾರವೇ ಪೂರ್ತಿ ಅನುದಾನ ನೀಡುತ್ತದೆ.ರಾಜ್ಯಸರಕಾರವು ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕಾಗಿ ಅವಶ್ಯಕತೆ ಇರುವೆಡೆ ಸರಕಾರಿ ಭೂಮಿ‌ ಒದಗಿಸುವುದನ್ನು ಬಿಟ್ಟರೆ ಸಂಜೀವಿನಿ ಯೋಜನೆಗೆ ರಾಜ್ಯಸರಕಾರದ ಕೊಡುಗೆ ಏನೂ ಇರುವುದಿಲ್ಲ.

ರಸ್ತೆ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರದ ಸ್ಥಾಪನೆ,ಕರ್ನಾಟಕ ರಾಜ್ಯ ಶಿಕ್ಷಣ ನೀತಿ ರೂಪಿಸಲು ಆಯೋಗ,ಪರೀಕ್ಷೆಗಳು ಪಾರದರ್ಶಕವಾಗಿ ನಡೆಸಲು ಕಾಯ್ದೆ ರಚನೆ ಮತ್ತು 185.74 ಕೋಟಿ ರೂ.ವೆಚ್ಚದಲ್ಲಿ ಅನಿಮಿಯಾ ಮುಕ್ತ ರಾಜ್ಯವನ್ನಾಗಿಸಲು ಪೌಷ್ಟಿಕ ಕರ್ನಾಟಕ ಯೋಜನೆಗೆ ಸಿದ್ಧತೆ– ಇವುಗಳು ಕೂಡ ‘ಮಾದರಿಸರಕಾರದ’ ಸಾಧನೆಗಳಂತೆ.’ ಕೂಸು ಹುಟ್ಟುವ ಮುನ್ನವೆ ಕುಲಾವಿ ಹೊಲಿಸಿದ’ ಗಾದೆಯಂತೆ ಈ ಸಾಧನೆಗಳು.ಇನ್ನು ಕನಸಿನ ಹಂತದಲ್ಲಿಯೇ ಯೋಜನೆಗಳು ರೂಪುಗೊಳ್ಳುತ್ತಿರುವುದನ್ನು ಸರಕಾರ ತನ್ನ ಸಾಧನೆ ಎಂದು ಬಿಂಬಿಸಿಕೊಂಡಿದೆ.ಕಾರ್ಯಕ್ರಮ ಅಥವಾ ಯೋಜನೆಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡು ಲೋಕಾರ್ಪಣೆಯಾಗಿ ಜನರ ಉಪಯೋಗಕ್ಕೆ ಲಭ್ಯವಾಗಿದ್ದರೆ ಮಾತ್ರ ಅದು ಸಾಧನೆ ಎನ್ನಿಸಿಕೊಳ್ಳುತ್ತಿದೆ ಎನ್ನುವುದು ಮಾದರಿ ಸರಕಾರದ ಜಾಹೀರಾತು ರೂಪಿಸಿದ think tank ಅಧಿಕಾರಿಗಳಿಗೆ ಅರ್ಥವಾಗಿಲ್ಲ ಎನ್ನುವುದು ಸೋಜಿಗ.

ಪ್ರತಿ ತಿಂಗಳು ತಾಲೂಕು,ಜಿಲ್ಲಾ ಮತ್ತು ರಾಜ್ಯಮಟ್ಟದ ಜನತಾದರ್ಶನವೂ ಸರಕಾರದ ಸಾಧನೆಯಂತೆ! ಇದುವರೆಗೂ ಒಂದು ಬಾರಿ ಮಾತ್ರ ಸರಕಾರದ ಎಲ್ಲ ಉಸ್ತುವಾರಿ ಸಚಿವರುಗಳು ಅವರವರಿಗೆ ವಹಿಸಿಕೊಟ್ಟ ಜಿಲ್ಲೆಗಳಲ್ಲಿ ಕಾಟಾಚಾರಕ್ಕೆ ಜನತಾದರ್ಶನದಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಯಾವ ಸಚಿವರೂ ಜನತಾದರ್ಶನ ಕಾರ್ಯಕ್ರಮದ ಬಗ್ಗೆ ನೈಜ ಆಸಕ್ತಿ,ಕಳಕಳಿಯನ್ನು ಹೊಂದಿಲ್ಲ.ಜಿಲ್ಲಾ ಉಸ್ತುವಾರಿ ಸಚಿವರುಗಳ ಅಧ್ಯಕ್ಷತೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಎಷ್ಟು ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ? ಎಷ್ಟುಜನ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ? ಎಷ್ಟು ಜನರ ಸಮಸ್ಯೆಗಳು ಪರಿಹಾರಗೊಂಡಿವೆ? ಯಾರಲ್ಲಿವೆ ಅಂಕಿ ಸಂಖ್ಯೆಗಳು?

ಕೊನೆಯದಾಗಿ ರಾಜ್ಯದ ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳವರಿಗೆ ರಾಜ್ಯದ ಜನತೆಯ ಪರವಾಗಿ ಒಂದು ಸಲಹೆ– ಈಗಾಗಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯು ಕಳವಳಕಾರಿ ಸ್ಥಿತಿಗೆ ತಲುಪಲು ಕಾರಣರಾಗಿದ್ದೀರಿ.ಗ್ಯಾರಂಟಿ ಯೋಜನೆಗಳ ಫಲವನ್ನು ಜನಸಾಮಾನ್ಯರು ಅನುಭವಿಸುತ್ತಿದ್ದಾರೆ ಎನ್ನುವ ಕಾರಣದಿಂದ ಹೇಗೂ ಸಹಿಸಬಹುದು.ಆದರೆ ನಿಮ್ಮ ನೇತೃತ್ವದ ಮಾದರಿ ಸರಕಾರದ ಸಾಧನೆಗಳನ್ನು ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಮುದ್ರಿಸಲು ಲಕ್ಷಲಕ್ಷ ರೂಪಾಯಿಗಳ ಸಾರ್ವಜನಿಕ ಹಣವನ್ನು ವ್ಯರ್ಥಪೋಲು ಮಾಡಬೇಡಿ.ನಿಮ್ಮ ಸರಕಾರದ ಸಾಧನೆಗಳ ಜಾಹೀರಾತು ಹಣವನ್ನು ನಿಮ್ಮ ಸ್ವಂತಹಣದಿಂದಲಾದರೂ ಭರಿಸಿ ಇಲ್ಲವೆ ಕಾಂಗ್ರೆಸ್ ಪಕ್ಷದ ನಿಧಿಯಿಂದಲಾದರೂ ಪಾವತಿಸಿ.ನೀವೇ ಹೇಳಿಕೊಳ್ಳುವಂತೆ ‘ ಆರ್ಥಿಕ ಶಿಸ್ತಿಗೆ ಹೆಸರಾದ ನೀವು’ ಸಾರ್ವಜನಿಕರ ತೆರಿಗೆಯ ಹಣವನ್ನು ನಿಮ್ಮ ಸರಕಾರದ ಸಾಧನೆಗಾಗಿ ವ್ಯಯಿಸುವುದು Canons of Financial Proproity — ಆರ್ಥಿಕ ವಿವೇಚನಾ ತತ್ತ್ವಗಳಿಗೆ ವಿರುದ್ಧವಾದ ಸಂಗತಿ ಎನ್ನುವುದನ್ನು ಮರೆಯಬೇಡಿ.ಕಾಂಗ್ರೆಸ್ ಪಕ್ಷದ ಗ್ಯಾರಂಟಿಯೋಜನೆಗಳ ಅನುಷ್ಠಾನದ ಕಾರಣದಿಂದ ರಾಜ್ಯದ ಜನತೆಗೆ ಹೆಚ್ಚಿನ ಸಾಲಭಾರವನ್ನು ಹೊರಿಸಿದ ನೀವು ನಿಮ್ಮ ಸರಕಾರದ ಸಾಧನೆಗಳನ್ನು ಬಿಂಬಿಸಿಕೊಳ್ಳುವುದಕ್ಕೆ ಸಾರ್ವಜನಿಕರ ಹಣವನ್ನು ಬಳಸುವುದು ಖಂಡಿತ ಆರ್ಥಿಕ ಶಿಸ್ತು ಅಲ್ಲ.

About The Author