ಶಹಪುರ : ಪ್ರತಿ ಮೂರು ತಿಂಗಳಿಗೊಮ್ಮೆ ರಾಷ್ಟ್ರೀಯ ಲೋಕ ಅದಾಲತ್ತನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಾರಿಯೂ ಕೂಡ ಡಿಸೆಂಬರ್ 9ರಂದು ವರ್ಷದ ಕೊನೆಯ ಲೋಕ ಅದಾಲತ್ತನ್ನು ತಾಲೂಕು ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅದರ ಸದುಪಯೋಗವನ್ನು ಕಕ್ಷಿದಾರರು ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಸೇವಾ ಸಮಿತಿಯ ಅಧ್ಯಕ್ಷರಾದ ಸಿದ್ರಾಮ್ ಟಿ.ಪಿ ತಿಳಿಸಿದರು. ಇಂದು ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಲೋಕ ಅದಾಲತ್ ನಲ್ಲಿ ವ್ಯಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳನ್ನು ಅಂದು ಕಕ್ಷಿದಾರರು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು.
ಕಳೆದ ಬಾರಿಯ ಲೋಕ ಅದಾಲತ್ ನಲ್ಲಿ 3221 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ತೆಗೆದುಕೊಳ್ಳಲಾಗಿತ್ತು. ಅವುಗಳಲ್ಲಿ 2796 ಪ್ರಕರಣಗಳನ್ನು ಇತ್ಯರ್ಥ ಗೊಳಿಸಲಾಗಿದೆ. ಈ ಸಾರಿ 3000 ಪ್ರಕರಣಗಳನ್ನು ಇತ್ಯರ್ಥ ಮಾಡಬೇಕೆಂದಿದ್ದು, ಇಲ್ಲಿಯವರೆಗೆ 596 ಪ್ರಕರಣಗಳು ದಾಖಲಾಗಿವೆ.ನ್ಯಾಯಾಲಯದಲ್ಲಿ 5061 ಪ್ರಕರಣಗಳು ಬಾಕಿ ಇದ್ದು, ಪ್ರಕರಣಗಳನ್ನು ದಾಖಲಿಸಲು ಕಕ್ಷಿದಾರರಿಗೆ ಇನ್ನೂ ಕಾಲಾವಕಾಶ ಇದೆ ಎಂದರು.ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿರವರಾದ ಕು.ಶೋಭಾ ಕಿರಿಯ ಸಿವಿಲ್ ನ್ಯಾಯಾಧೀಶರು, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಭೀಮಣ್ಣ ಪಾಟೀಲ್ ದರಿಯಾಪುರ ಉಪಸ್ಥಿತರಿದ್ದರು.
ರಾಜಿಯಾಗುವ ಅಪರಾಧಿ ಪ್ರಕರಣಗಳು
* ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ
* ಮೋಟರ್ ಅಪಘಾತ ಪರಿಹಾರ ಪ್ರಕರಣ
* ವೈವಾಹಿಕ ಕೌಟುಂಬಿಕ ಪ್ರಕರಣ
* ಜೀವನಾಂಶ ಪ್ರಕರಣ