ವಿಧಾನಸಭೆಯ ಸ್ಪೀಕರ್ ಹುದ್ದೆ ಪಕ್ಷಾತೀತವಾದುದು ಮಾತ್ರವಲ್ಲ,ಜಾತ್ಯಾತೀತ ಹುದ್ದೆಯೂ ಹೌದು

ವಿಧಾನಸಭೆಯ ಸ್ಪೀಕರ್ ಹುದ್ದೆ ಪಕ್ಷಾತೀತವಾದುದು ಮಾತ್ರವಲ್ಲ,ಜಾತ್ಯಾತೀತ ಹುದ್ದೆಯೂ ಹೌದು

‌ ಮುಕ್ಕಣ್ಣ ಕರಿಗಾರ

ರಾಜ್ಯದ ವಿಧಾನಸಭೆಯ ಸ್ಪೀಕರ್ ಹುದ್ದೆಯ ಘನತೆಗೆ ಧಕ್ಕೆ ತರುವಂತಹ ಮಾತುಗಳನ್ನಾಡಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು.ತೆಲಂಗಾಣದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡುತ್ತ” ಮುಸ್ಲಿಂ ಸ್ಪೀಕರ್ ಗೆ ಬಿಜೆಪಿಯವರೂ ನಮಸ್ಕಾರ ಮಾಡುತ್ತಾರೆ” ಎಂದು ಹೇಳುವ ಮೂಲಕ ಜಮೀರ್ ಅಹ್ಮದ್ ಖಾನ್ ತಾವೊಬ್ಬ ಜವಾಬ್ದಾರಿಯುತ ಸಚಿವರಾಗಿ ತಮ್ಮ ಹುದ್ದೆಗೆ ತಕ್ಕುದಲ್ಲದ ಮಾತನಾಡಿ,ಸ್ಪೀಕರ್ ಹುದ್ದೆಯ ಘನತೆ- ಗೌರವಗಳಿಗೆ ಧಕ್ಕೆ ತಂದಿದ್ದಾರೆ.

ತೆಲಂಗಾಣದಲ್ಲಿ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಜಮೀರ್ ಅಹ್ಮದ್ ಖಾನ್ ಅವರು ಕರ್ನಾಟಕದ ಕಾಂಗ್ರೆಸ್ ಸರಕಾರದಲ್ಲಿ ಐದುಜನ ಮುಸ್ಲಿಮರು ಸಚಿವರಾಗಿಯೂ ವಿಪ್ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿಯೂ ಕೂಡ ಮುಸ್ಲಿಮರಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಸಮುದಾಯಗಳ ಬಗೆಗಿನ ಬದ್ಧತೆಯ ಬಗ್ಗೆ ಮಾತನಾಡಿ ” ಸ್ಪೀಕರ್ ಕೂಡ ಮುಸ್ಲಿಮರಿದ್ದಾರೆ.ಮುಸ್ಲಿಮ್ ಸ್ಪೀಕರ್ ಅವರಿಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರೂ ನಮಸ್ಕರಿಸುತ್ತಾರೆ” ಎನ್ನುವ ಅಪ್ರಬುದ್ಧ ಹೇಳಿಕೆಯನ್ನು ನೀಡಿದ್ದಾರೆ.ಜಮೀರ್ ಅಹ್ಮದ್ ಖಾನ್ ಅವರು ರಾಜ್ಯ ಸರಕಾರದ ಜವಾಬ್ದಾರಿಯುತ ಸಚಿವಸ್ಥಾನದಲ್ಲಿದ್ದು ಅವರು ಜವಾಬ್ದಾರಿಯುತವಾಗಿಯೇ ಮಾತನಾಡಬೇಕು.ಸ್ಪೀಕರ್ ಹುದ್ದೆಗೆ ಜಾತಿ,ಧರ್ಮಗಳ ಅಭಿಮಾನ ಕಟ್ಟಿ ಮಾತನಾಡಬಾರದು.

ಸ್ಪೀಕರ್ ಅವರಿಗೆ ಬಿಜೆಪಿಯ ನಾಯಕರು ಮಾತ್ರವಲ್ಲ ಮುಖ್ಯಮಂತ್ರಿ,ಉಪಮುಖ್ಯಮಂತ್ರಿಯಾದಿಯಾಗಿ ಸಚಿವರುಗಳು, ಎಲ್ಲ ಪಕ್ಷದ ವಿಧಾನಸಭೆಯ ಸದಸ್ಯರುಗಳು ನಮಸ್ಕರಿಸಬೇಕು ಅಧಿವೇಶನ ಸಭಾಂಗಣದಲ್ಲಿ. ರಾಜ್ಯದ ಮುಖ್ಯಮಂತ್ರಿಯವರು ಸಹ ವಿಧಾನಸಭೆಯಲ್ಲಿ ಮಾತನಾಡುವಾಗ ‘ ಮಾನ್ಯ ಅಧ್ಯಕ್ಷರೆ’ ಎಂದು ಸ್ಪೀಕರ್ ಅವರನ್ನು ಉದ್ದೇಶಿಸಿಯೇ ಮಾತನಾಡಬೇಕು.ರಾಜ್ಯದ ಮುಖ್ಯಮಂತ್ರಿಯವರಿಗೂ ಸಹ ಅಧಿವೇಶನ ಸಭಾಂಗಣದಲ್ಲಿ ಅಧಿಕಾರ ಚಲಾಯಿಸಲು ಆಗುವುದಿಲ್ಲ.ಸ್ಪೀಕರ್ ಅನುಮತಿಸಿದರೆ ಮುಖ್ಯಮಂತ್ರಿಯವರು ಮಾತನಾಡಬಹುದೆ ಹೊರತು ಅವರಾಗಿಯೇ ಮುಖ್ಯಮಂತ್ರಿಯವರು ಸದನದಲ್ಲಿ ಮಾತನಾಡಲಾಗದು.ಇದು ನಮ್ಮ ಸಂವಿಧಾನವು ಸ್ಪೀಕರ್ ಹುದ್ದೆಗೆ ನೀಡಿದ ಮಹತ್ವ.ಸಂವಿಧಾನವು ನೀಡಿದ ಶಕ್ತಿಯ ಬಲದಿಂದ ಯು.ಟಿ.ಖಾದರ್ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆಯೇ ಹೊರತು ಕಾಂಗ್ರೆಸ್ ಪಕ್ಷವು ಯು.ಟಿ.ಖಾದರ್ ಅವರಿಗಾಗಿ ಸ್ಪೀಕರ್ ಹುದ್ದೆಯನ್ನು ಸೃಷ್ಟಿಸಿಲ್ಲ ಎನ್ನುವುದನ್ನು ಜಮೀರ್ ಅಹ್ಮದ್ ಖಾನ್ ಅವರು ಅರ್ಥಮಾಡಿಕೊಳ್ಳಬೇಕು.ಅಲ್ಲದೆ ಕಾಂಗ್ರೆಸ್ಸಿನ ಆರ್ ವಿ ದೇಶಪಾಂಡೆ,ರಾಮಲಿಂಗಾರೆಡ್ಡಿ,ಎಚ್ ಕೆ ಪಾಟೀಲ್ ಅವರಂತಹ ಹಿರಿಯ ನಾಯಕರುಗಳು ಸ್ಪೀಕರ್ ಹುದ್ದೆಯನ್ನು ನಿರಾಕರಿಸಿದ ಕಾರಣದಿಂದಲೇ ರಾಜಕೀಯ ಅನಿವಾರ್ಯತೆಗಾಗಿ ಯು.ಟಿ.ಖಾದರ್ ಅವರನ್ನು ಮನವೊಲಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಯು.ಟಿ.ಖಾದರ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ಮಾಡಿದ್ದಾರೆ.ಜೊತೆಗೆ ಯು.ಟಿ.ಖಾದರ್ ಅವರು ಎರಡುವರೆ ವರ್ಷಗಳ ನಂತರ ತಮ್ಮನ್ನು ಪುನಃ ಮಂತ್ರಿಯನ್ನಾಗಿ ಮಾಡಬೇಕು ಎನ್ನುವ ಷರತ್ತಿನೊಂದಿಗೆ ಸ್ಪೀಕರ್ ಆಗಿದ್ದಾರೆ.

‘ ಪ್ರತಿಯೊಂದು ರಾಜ್ಯದ ವಿಧಾನಸಭೆಯು ತನ್ನ ಸದಸ್ಯರಲ್ಲಿ ಇಬ್ಬರನ್ನು ಅನುಕ್ರಮವಾಗಿ ಅದರ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ಆದಷ್ಟು ಬೇಗ ಆಯ್ಕೆ ಮಾಡತಕ್ಕದ್ದು’ ಎಂದು ವಿಧಿಸಿರುವ ಸಂವಿಧಾನದ 178 ನೆಯ ಅನುಚ್ಛೇದದಂತೆ ದೇಶದ ಪ್ರತಿ ರಾಜ್ಯದ ವಿಧಾನಸಭೆಯಲ್ಲಿ ಸ್ಪೀಕರ್ ಮತ್ತು ಡೆಪ್ಯೂಟಿ ಸ್ಪೀಕರ್ ಇರುತ್ತಾರೆ.ದೇಶದ ಇತರ ರಾಜ್ಯಗಳ ವಿಧಾನಸಭೆಯ ಸ್ಪೀಕರ್ ಆಗಿ ಮುಸ್ಲಿಂ ಸಮುದಾಯದವರು ಆಯ್ಕೆಯಾಗಿದ್ದಾರೆ.ಮುಸ್ಲಿಂ ಸಮುದಾಯದ ವ್ಯಕ್ತಿಗಳು ಸ್ಪೀಕರ್ ಹುದ್ದೆಗೇರುವುದು ಭಾರತದ ಪ್ರಜಾಪ್ರಭುತ್ವಪದ್ಧತಿಯಡಿ ನಮ್ಮ ಸಂವಿಧಾನವು ಕೊಡಮಾಡಿದ ಕೊಡುಗೆಯೇ ಹೊರತು ಅದೇನು ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ನೀಡಿದ ಇನಾಮ್ ಇಲ್ಲವೆ ಉಂಬಳಿಯಲ್ಲ.ಸರಕಾರದ ಜವಾಬ್ದಾರಿಯುತ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರು ಸಾರ್ವಜನಿಕ ಸಭೆ ಅದರಲ್ಲೂ ಚುನಾವಣಾ ಸಭೆಯಲ್ಲಿ ಸ್ಪೀಕರ್ ಹುದ್ದೆಯ ಬಗ್ಗೆ ಮಾತನಾಡುವಾಗ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಕೀಯ ದೂರದರ್ಶಿತ್ವ ಮತ್ತು ಸಂವಿಧಾನದ ಶಕ್ತಿಯ ಬಗ್ಗೆ ಮಾತನಾಡಬೇಕಿತ್ತೇ ಹೊರತು ಕಾಂಗ್ರೆಸ್ ಪಕ್ಷವು ಮುಸ್ಲಿಮರಿಗೆ ಸ್ಪೀಕರ್ ಹುದ್ದೆ ನೀಡಿದೆ ಎನ್ನುವ ಸಂವಿಧಾನಕ್ಕೆ ಅಪಚಾರ ಎಸಗುವಂತಹ ಸಂದೇಶ ನೀಡಬೇಕಿರಲಿಲ್ಲ.ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಜಮೀರ್ ಅಹ್ಮದ್ ಖಾನ್ ಅವರು ‘ ಕರ್ನಾಟಕದಲ್ಲಿ ಮುಸ್ಲಿಮರ ಮತಗಳಿಂದಲೇ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬಂದಿದೆ’ ಎಂದು ಆಡಿದ ಮಾತಿನಲ್ಲಿ ಸತ್ಯಾಂಶ ಇದ್ದುದರಿಂದ ಅದನ್ನು ಒಪ್ಪಬಹುದು.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಂ ಸಮುದಾಯವು ಬಿಜೆಪಿಯ ಅತಿರೇಕದ ನಡೆಗಳಿಂದಾಗಿ ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರಿಂದ ಮತ್ತು ಮುಸ್ಲಿಮರ ಮತಗಳು ಇತರ ಪಕ್ಷಗಳಿಗೆ ಹೋಗದೆ ಇದ್ದುದರಿಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಸಹಕಾರಿಯಾಯಿತು.ಈ ಕಾರಣದಿಂದ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕ್ಕೆ ಋಣಿಯಾಗಿರಬೇಕು ಎನ್ನುವುದು ಸಮಂಜಸವೇ ಹೊರತು ಮುಸ್ಲಿಂ ಸಮುದಾಯದ ಸ್ಪೀಕರ್ ಅವರಿಗೆ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ನಮಸ್ಕರಿಸುತ್ತಾರೆ ಎನ್ನುವುದು ಸರಿಯಲ್ಲ.

ಯು.ಟಿ.ಖಾದರ್ ಅವರು ಕಾಂಗ್ರೆಸ್ಸಿನ ಶಾಸಕರಿರಬಹುದು ಆದರೆ ಅವರು ವಿಧಾನಸಭೆಯ ಸ್ಪೀಕರ್ ಆದ ಕ್ಷಣದಿಂದಲೇ ರಾಜಕೀಯ ನಿರ್ಲಿಪ್ತತೆಯನ್ನು ಮೈಗೂಡಿಸಿಕೊಳ್ಳಬೇಕಾದ ಪಕ್ಷಾತೀತ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕಾದವರು. ಸ್ಪೀಕರ್ ಹುದ್ದೆಯಲ್ಲಿದ್ದವರಿಗೆ ಆಂತರಿಕವಾಗಿ ತಾವು ಪ್ರತಿನಿಧಿಸುತ್ತಿರುವ ರಾಜಕೀಯ ಪಕ್ಷದ ಬಗ್ಗೆ ಪ್ರೀತಿ ಇದ್ದರೂ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಕೆಲವೊಮ್ಮೆ ಆಡಳಿತ ಪಕ್ಷದಹಿತಕಾಯುವ ಅನಿವಾರ್ಯತೆಗೆ ಒಳಗಾಗಿದ್ದರೂ ಸ್ಪೀಕರ್ ಹುದ್ದೆಯಲ್ಲಿದ್ದವರು ಬಹುತೇಕ ಸಂದರ್ಭಗಳಲ್ಲಿ ರಾಜಕೀಯ ತಾಟಸ್ಥ್ಯವನ್ನು ಪ್ರದರ್ಶಿಸುತ್ತಾರೆ.ಯು.ಟಿ.ಖಾದರ್ ಅವರು ಸ್ಪೀಕರ್ ಆದ ದಿನದಿಂದಲೂ ಸ್ಪೀಕರ್ ಹುದ್ದೆಯ ಘನತೆ ಗೌರವಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರಲ್ಲದೆ ‘ ಕ್ರಿಯಾಶೀಲ ಸ್ಪೀಕರ್’ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಸಮರ್ಥ ನಾಯಕತ್ವವನ್ನು ಪ್ರದರ್ಶಿಸುವ ಜೊತೆಗೆ ವಿಧಾನಸೌಧವನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ.’ ಕರಾವಳಿ ಕನ್ನಡಿಗ’ ರಾಗಿರುವ ಯು.ಟಿ.ಖಾದರ್ ಅವರು ಕನ್ನಡಾಭಿಮಾನಿ ಆಗಿರುವ ಜೊತೆಗೆ ಎಲ್ಲ ಸಮುದಾಯಗಳೊಂದಿಗೆ ಅದರಲ್ಲೂ ವಿಶೇಷವಾಗಿ ಕರಾವಳಿಯ ಬ್ರಾಹ್ಮಣಸಮುದಾಯದೊಂದಿಗೆ ‘ ಇವ ನಮ್ಮವನು’ ಎಂದು ಗುರುತಿಸಿಕೊಳ್ಳುವಷ್ಟು ಆದರ್ಶಮಯವಾದ ಧಾರ್ಮಿಕ ಸಾಮರಸ್ಯವನ್ನು ಎತ್ತಿಹಿಡಿದವರು.ಜಮೀರ್ ಅಹ್ಮದ್ ಖಾನ್ ಅವರು ಆಡಿದ ಮಾತುಗಳು ಸ್ಪೀಕರ್ ಹುದ್ದೆಗೆ ಧಕ್ಕೆ ತಂದ ಮಾತುಗಳಲ್ಲದೆ ಯು.ಟಿ.ಖಾದರ್ ಅವರ ಸರ್ವಧರ್ಮಸಮನ್ವಯ ಮನೋಭಾವನೆಗೂ ಅಪಚಾರವೆಸಗಿದ ಮಾತುಗಳು.

ವಿಧಾನಸಭೆಯ ಅಧಿವೇಶನವನ್ನು ಸುಗುಮವಾಗಿ ನಡೆಯಿಸಿಕೊಡುವ,ಧನವಿಧೇಯಕದಂತಹ ಮಹತ್ವದ ಮಸೂದೆಗಳಿಗೆ ಸಹಿಹಾಕುವ,ವಿಧಾನಸಭೆಯು ಅಂಗೀಕರಿಸಿದ ನಿರ್ಣಯಗಳಿಗೆ ಅಂಕಿತಹಾಕಿ ರಾಜ್ಯದ ಶಾಸನಗಳನ್ನಾಗಿ ರೂಪಿಸಲು ನಿರ್ದೇಶಿಸುವ,ವಿಧಾನಸಭೆಯ ಸದಸ್ಯರ ಅರ್ಹತೆ ಅನರ್ಹತೆಯನ್ನು ನಿರ್ಧರಿಸುವ ಸ್ಪೀಕರ್ ಅವರು ಪಕ್ಷರಾಜಕಾರಣದ ಪರಿಧಿಯ ಆಚೆಗೆ ಇರುವವರು.ಸಂವಿಧಾನದ ಜಾತ್ಯಾತೀತ ತತ್ತ್ವದಂತೆ ಸ್ಪೀಕರ್ ಹುದ್ದೆಯನ್ನಲಂಕರಿಸುವವರಲ್ಲಿ ಜಾತಿ,ಧರ್ಮವನ್ನು ಹುಡುಕಬಾರದು.ಬಿಜೆಪಿಯ ದೊಡ್ಡದೊಡ್ಡ ನಾಯಕರು ಸ್ಪೀಕರ್ ಅವರಿಗೆ ನಮಸ್ಕರಿಸುವುದು ಸಂವಿಧಾನದ ಶಕ್ತಿಯೇ ಹೊರತು ಬೇರೇನೂ ಅಲ್ಲ ಎನ್ನುವುದನ್ನು ಜಮೀರ್ ಅಹ್ಮದ್ ಖಾನ್ ಅವರು ಮತ್ತು ಅದೇ ಮನೋಸ್ಥಿತಿಯಲ್ಲಿರುವ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು.

About The Author