ಭೂ ಸ್ವಾಧೀನ ರೈತರಿಗೆ ಅನ್ಯಾಯ ಗುರುಪಾಟೀಲ ಆರೋಪ

ಶಹಾಪುರಃ ತಾಲೂಕಿನ ಅಣಬಿ ಶಿರವಾಳ ಸೀಮಾಂತರ ಭೂಮಾರ್ಗದ ಮೂಲಕ ರಾಷ್ಟ್ರೀಯ ಷಟ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು ಇದು ಅಕ್ಕಲಕೋಟದಿಂದ (ಮಹಾರಾಷ್ಟ್ರ) ಕಲ್ಬುರ್ಗಿಯ ಕೆಲ ಹಳ್ಳಿಗಳ ಮೂಲಕ ಯಾದಗಿರಿ ಒಳಗೊಂಡು ರಾಯಚೂರ ಜಿಲ್ಲೆ ಮೂಲಕ ಆಂದ್ರಪ್ರದೇಶ ಹೆದ್ದಾರಿ ತಲುಪಲಿದೆ ಇದೊಂದು ಉತ್ತಮ ಯೋಜನೆ ಸರಿ ಆದರೆ ನಮ್ಮ ಭಾಗದಲ್ಲಿರುವ ಭೂಮಿಗಳ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು ಯಾವ ಮಾನದಂಡದ ಪ್ರಕಾರ ರೈತರಿಗೆ ಹಣ ನೀಡುತ್ತಿದ್ದೀರಿ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಮಾಜಿ ಶಾಸಕ ಗುರುಪಾಟೀಲ್ ಶಿರವಾಳ ತಿಳಿಸಿದ್ದಾರೆ.

ಈ ಭಾಗದ ಶಿರವಾಳ ಅಣಬಿ ಭೂಮಿಗಳಿಗೆ ಐದು ವರ್ಷದ ಹಿಂದಿನ ದರ ಆಧಾರದ ಮೇಲೆ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಾಲ್ಕು ಪಟ್ಟು ಹೆಚ್ಚಿನ ದರ ನೀಡಲಾಗುತ್ತಿದೆ. ಹಳೆ ಐದು ವರ್ಷದ ಹಿಂದೆ ಇದ್ದ ಜಮೀನಿನ ಬೆಲೆ ಆಧರಿಸಿದರೆ ಈ ಭಾಗದ ರೈತರಿಗೆ ತುಂಬಾ ಅನ್ಯಾಯವಾಗಲಿದೆ. ಈ ಭಾಗದ ಭೂಮಿ ತುಂಬಾ ಗುಣಮಟ್ಟದ್ದಾಗಿದೆ. ಅದರಲ್ಲೂ ಕೆಲವರದ್ದು ನೀರಾವರಿ ಉತ್ತಮ ಭೂಮಿ ಇದ್ದರೂ ಕುಷ್ಕಿ ಎಂದು ಬರೆಯಲಾಗಿದೆ. ನೀರಾವರಿ ಭೂಮಿಗಳನ್ನು ಸಮರ್ಪಕವಾಗಿ ಪರಿಗಣಿಸಿರುವದಿಲ್ಲ. ಕೆಲ ಜಮೀನುಗಳಲ್ಲಿ ಪ್ಲಾಂಟೇಷನ್ ಮಾಡಲಾಗಿದೆ ತೋಟಗಾರಿಕೆ ಇತರೆ ಹಣ್ಣಿನ ಗಿಡಗಳನ್ನು ಬೆಳೆಯಲಾಗಿದೆ. ಅಂತಹ ಭೂಮಿಗಳನ್ನು ಪರಿಶೀಲಿಸಿ ಹೆಚ್ಚಿನ ದರ ನೀಡಬೇಕಿದೆ.ಹಳೆಯ ದರ ಆಧರಿಸಿ ರೈತರ ಜಮೀನು ಪಡೆಯುವದು ಅನ್ಯಾಯವಾಗಲಿದೆ.

ನೂತನ ಭೂದರ ಆಧರಿಸಿ ಅದರ ನಾಲ್ಕು ಪಟ್ಟು ಹಣ ನೀಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ಮುಗ್ಧ ರೈತರಿಗೆ ತುಂಬಾ ಅನ್ಯಾಯವಾಗಲಿದೆ. ಈ ಕುರಿತು ಸಂಬಂಧಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರೈತರಿಗಾಗುತ್ತಿರುವ ಅನ್ಯಾಯ ಕುರಿತು ಮನವರಿಕೆ ಮಾಡಿದ್ದೇನೆ. ಆದಾಗ್ಯು ಅಧಿಕಾರಿಗಳು ಅದೇ ವರ್ತನೆ ಮುಂದುವರೆಸಿದ್ದು ಸರಿಯಲ್ಲ. ಭಾಗದ ಭೂಮಿಗಳನ್ನು ಸಮಗ್ರವಾಗಿ ಪರಿಶೀಲಿಸಿ ನೂತನ ಬೆಲೆ ಆಧರಿಸಿ ರೈತರಿಗೆ ಹಣ ನೀಡಬೇಕು. ಈ ಭಾಗದ ರೈತರ ಸಭೆ ಕರೆಯದೆ, ಈ ಕುರಿತು ಮಾಹಿತಿಯೂ ನೀಡದೆ ಏಕಾಕಿ ಭೂಸ್ವಾಧೀನಕ್ಕೆ ಮುಂದಾಗಿರುವ ಅಧಿಕಾರಿಗಳ ದುರ್ವರ್ತನೆ ಎದ್ದು ಕಾಣುತ್ತಿದೆ. ಕೂಡಲೇ ಈ ಭಾಗದ ಭೂಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಅವರ ಮನವಿಗೆ ಸ್ಪಂಧಿಸಿ ನಂತರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
————————

 

About The Author