ಹಾರ ತುರಾಯಿ ಹಾಕಿ,ಜೈ ಘೋಷ ಕೂಗುವುದಲ್ಲ ಬಸವ ಜಯಂತಿಯ ನಿಜ ಆಚರಣೆ!:ಮುಕ್ಕಣ್ಣ ಕರಿಗಾರ

ನಾಳೆ ಮೇ 03 ರಂದು ವಿಶ್ವಗುರು ಬಸವಣ್ಣನವರ ಜಯಂತಿ.ಬಸವಣ್ಣನವರ ಭಕ್ತರು,ಅನುಯಾಯಿಗಳು ಸಡಗರೋತ್ಸಾಹಗಳಿಂದ ಆಚರಿಸುತ್ತಾರೆ ಬಸವ ಜಯಂತಿಯನ್ನು.ಸರಕಾರಿ ಜಯಂತಿ ಆಗಿರುವುದರಿಂದ ರಾಜಕಾರಣಿಗಳು ಬಸವಣ್ಣನವರ ಮೂರ್ತಿ,ಫೋಟೋಗಳಿಗೆ ಉದ್ದುದ್ದನೆಯ ಹೂಮಾಲೆ ಅರ್ಪಿಸಿ,ಹುಸಿ ಭಕ್ತಿ ನಟಿಸಿ ಬಿಗಿಯುತ್ತಾರೆ ಅಮೋಘ ಭಾಷಣ!ಬಸವಣ್ಣನವರ ಫೋಟೋದಡಿ ತಮ್ಮ ಫೋಟೋ ಮೆರೆಯಿಸುವ ಫ್ಲೆಕ್ಸ್ ಪ್ರಿಯರ ಹಾವಳಿ ಮಿತಿ ಮೀರಿದೆ.ಬಸವಣ್ಣನವರ ಫೋಟೋಗಳನ್ನು ವಾಟ್ಸಾಪ್ ಡಿ ಪಿ,ಮೊಬೈಲ್ ಸ್ಟೇಟಸ್ ಇಟ್ಟುಕೊಂಡು ಬಸವಭಕ್ತಿಯನ್ನು ಮೆರೆಯುತ್ತಾರೆ ಸೋಶಿಯಲ್ ಮೀಡಿಯಾಗಳ ಆಧುನಿಕ ಭಕ್ತರುಗಳು.ಬಸವಣ್ಣನವರ ಫೋಟೋ,ವಚನಗಳು,ಅವರ ಜೀವನ ಚರಿತ್ರೆ ಮೊದಲಾದವುಗಳನ್ನು ಫಾರ್ವಾರ್ಡ್ ಮಾಡಿದ್ದೇ ಮಾಡಿದ್ದು.ಮೇ ೦೪ ರಂದು ಮತ್ತೆ ಯಥಾಸ್ಥಿತಿ! ತಮ್ಮ ದಿನನಿತ್ಯದ ‘ ಕರ್ಮಕ್ರಿಯೆ’ ಗಳು ಅಭಾದಿತ.ಸೋಗಿನ ಬಸವ ಭಕ್ತರ ಆಡಂಬರ ಗೌಜು ಗದ್ದಲಗಳಿಗಿಂತ ಬಸವಣ್ಣನವರ ನಿಜ ನಿಷ್ಠಾವಂತರ ಅಗತ್ಯ ಹೆಚ್ಚಿದೆ ಇಂದು.ಬಸವಣ್ಣನವರ ಮೂರ್ತಿ,ಫೋಟೋಗಳಿಗೆ ಹಾರ ತುರಾಯಿ ಹಾಕಿ, “ಜೈ ಜಗಜ್ಯೋತಿ ಬಸವೇಶ್ವರ” “,ಅಣ್ಣ ಬಸವಣ್ಣನವರಿಗೆ ಜಯವಾಗಲಿ” ಎಂದು ಜೋರಾಗಿ ಜಯಘೋಷ ಕೂಗಿದರೆ ಸಾಲದು,ಬಸವಣ್ಣನವರು ಬೋಧಿಸಿದ ಉದಾತ್ತ ತತ್ತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು.ಬಸವ ಭಕ್ತಿ ಫ್ಯಾಶನ್ ಆಗಬಾರದು; ಅಂತರಂಗದ ಕರೆ ಆಗಬೇಕು.ಬಸವಣ್ಣನವರ ಮೂರ್ತಿ,ಫೋಟೋಗಳನ್ನು ಪೂಜಿಸಿದರೆ ಸಾಲದು ಬಸವ ತತ್ತ್ವದ ಬೆಳಕನ್ನು ಕಂಡುಂಡು ಪಸರಿಸಬೇಕು ಸುತ್ತ ಮುತ್ತ,ಜಗದಗಲ.

ಬಸವಣ್ಣನವರಲ್ಲಿ ನಿಜ ನಿಷ್ಠೆ ಇರುವುದಾದರೆ ಶಿವ ಇಲ್ಲವೆ ಲಿಂಗದೇವರನ್ನು ಮಾತ್ರ ಪೂಜಿಸಬೇಕು,ಅನ್ಯದೇವರಿಗೆ ಶರಣಾಗಬಾರದು! ಇದು ಸಾಧ್ಯವೆ ಬಸವ ಭಕ್ತಿಯು ಫ್ಯಾಶನ್ ಆದವರಿಗೆ ? ‘ ಪರಮಪತಿವ್ರತೆಗೆ ಗಂಡನೊಬ್ಬನೇ ಇರುವಂತೆ ಭಕ್ತನಿಗೆ ಶಿವನೊಬ್ಬನೇ ದೇವರು’ ಎಂದರು ಬಸವಣ್ಣ.’ ಗಂಡ ಶಿವಭಕ್ತ.ಹೆಂಡತಿ ಮಾರಿ ಮಸಣಿಯರ ಭಕ್ತೆ,ಗಂಡ ಕೊಂಬುದು ಪಾದೋದಕ ಪ್ರಸಾದ,ಹೆಂಡತಿ ಕೊಂಬುದು ಮದ್ಯ ಮಾಂಸ’ಎನ್ನುವ ಬಸವಣ್ಣನವರ ವಚನೋಕ್ತಿಗಳ ಸಂದೇಶವಾದರೂ ಏನು ? ಎಷ್ಟು ಜನ ಬಸವಣ್ಣನವರ ಭಕ್ತರು ಶಿವಸರ್ವೋತ್ತಮ ತತ್ತ್ವ ಪಾಲಿಸುತ್ತಾರೆ? ಎಷ್ಟು ಜನ ಬಸವಣ್ಣನವರ ಭಕ್ತರು ಅಂಗದ ಲಿಂಗಕ್ಕಲ್ಲದೆ ಮತ್ತೊಂದಕ್ಕೆ ಶರಣಾಗಲಾರೆ ಎಂದು ಲಿಂಗನಿಷ್ಠೆ ಮೆರೆಯುತ್ತಾರೆ ? ಲಿಂಗಾಯತರು,ಬಸವಣ್ಣನವರ ಭಕ್ತರು ,ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಲೆ ಕಂಡಕಂಡ ದೇವರುಗಳಿಗೆ ಅಡ್ಡ ಉದ್ದ ಬೀಳುವ ಜನರು ಬಸವ ತತ್ತ್ವವನ್ನು ಎತ್ತಿ ಹಿಡಿಯಬಲ್ಲರೆ ?

ಅರಸೊತ್ತಿಗೆಯ ಕಾಲದಲ್ಲಿ ಬಿಜ್ಜಳನ ಪ್ರಧಾನಮಂತ್ರಿಯ ಹುದ್ದೆಯಲ್ಲಿದ್ದೂ ‘ ಭವಿ ಬಿಜ್ಜಳನಿಗೆ ಆನಂಜುವೆನೆ’ ಎಂದ ಬಸವಣ್ಣನವರ ಶಿವನಿಷ್ಠೆ ಎತ್ತ ಭಗವದ್ಗೀತೆ ಪಠ್ಯಪುಸ್ತಕದಲ್ಲಿರಬೇಕು,ಹಿಂದಿ ರಾಷ್ಟ್ರ ಭಾಷೆ’ ಎನ್ನುವ ಸಲ್ಲದ ಮಾತುಗಳನ್ನು ಕೇಳಿಯೂ ಮೌನ ಸಮ್ಮತಿ ಸೂಚಿಸಿ,ಹಿಂದಿ ರಾಷ್ಟ್ರ ಭಾಷೆ ಎಂದೊಪ್ಪುವ ‘ ಖುರ್ಚಿನಿಷ್ಠರು’ ಗಳು ಎತ್ತ ?ಎಂತು ಎತ್ತಿ ಹಿಡಿಯಬಲ್ಲರು ಅಧಿಕಾರಕ್ಕಾಗಿ ಬಾಯಿಕಳೆದುಕೊಂಡವರು ಬಸವ ತತ್ತ್ವವನ್ನು ?ಬಸವಣ್ಣನವರ ನಿಷ್ಠೆ ಬಸವ ಜಯಂತಿಯ ಮಾಲಾರ್ಪಣೆ,ಭಾಷಣಗಳಿಗೆ ಮಾತ್ರ ಸೀಮಿತವಾಗಬಾರದು.ಬಸವಣ್ಣನವರು ಬ್ರಾಹ್ಮಣರ ಹುಸಿ ಪ್ರತಿಷ್ಠೆ,ಪುರೋಹಿತ ಶಾಹಿಯ ಮೌಢ್ಯ- ಕಂದಾಚಾರಗಳ ವಿರುದ್ಧ ಸಿಡಿದೆದ್ದರು.ಆ ನಿಷ್ಠೆ,ಆ ಕೆಚ್ಚು ಭಾಷಣಪ್ರಿಯ ಬಸವ ಭಕ್ತರಲ್ಲಿದೆಯೆ?ನಮ್ಮ ಮಕ್ಕಳಿಗೆ ಕಲಿಸಬೇಕಾದದ್ದು ಭಗವದ್ಗೀತೆಯಲ್ಲ, ಬಸವಗೀತೆ ಎಂದು ಯಾರಾದರೂ ಹೇಳಿದ್ದಾರೆಯೆ? ‘ ಅಕ್ಕಿಯ ಮೇಲೆ ಆಸೆ,ನೆಂಟರ ಮೇಲೆ ಪ್ರೀತಿ’ ಯ ರಾಜಕಾರಣಿಗಳು ಬಸವತತ್ತ್ವವನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ.

ಬಸವಣ್ಣನವರ ವಚನಗಳನ್ನು ಉಲ್ಲೇಖಿಸುತ್ತ ಜನರು ತಲೆತೂಗುವಂತೆ ಭಾಷಣ,ಪ್ರವಚನ ಬಿಗಿಯುವವರಿಂದಲೂ ಬೆಳೆಯದು ಬಸವ ತತ್ತ್ವ.’ ಇವನಾರವ ಇವನಾರವ ಇವನಾರವ ಎನಿಸದಿರಯ್ಯ,ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆನಿಸಯ್ಯ,ಕೂಡಲ ಸಂಗಮದೇವರ ಮನೆಯ ಮಗನೆನಿಸಯ್ಯ’ ಎಂದು ಎಲ್ಲರನ್ನೂ ತನ್ನವರೆಂದು ಒಪ್ಪಿ,ಅಪ್ಪಿಕೊಂಡ ಮಹಾನ್ ಮಾನವತಾವಾದಿ ಬಸವಣ್ಣನವರು.ಆದರೆ ಇಂದೇನಾಗಿದೆ? ಏನಾಗುತ್ತಿದೆ ? ಮನುಷ್ಯ ಮನುಷ್ಯರಲ್ಲಿ ಧರ್ಮದ ಆಧಾರದಲ್ಲಿ ನಿತ್ಯವೂ ಬೆಂಕಿಹಚ್ಚುತ್ತಿರುವವರ ಮಧ್ಯೆ ಮೂಕಪ್ರೇಕ್ಷಕರಾಗಿರುವವರು ಬಸವಣ್ಣನವರ ಮಹೋನ್ನತ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಬಲ್ಲರೆ? ‘ ‘ಕೋಳಿಯೊಂದಗುಳ ಕಂಡರೆ ಕೂಗಿ ಕರೆಯದೆ ತನ್ನ ಬಳಗವೆಲ್ಲವನು? ಕಾಗೆಯೊಂದು ಕುಟುಕ ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವನು? ಎಂದ ಬಸವಣ್ಣನವರ ದಾಸೋಹ ನೀತಿ,’ ನೀನು ಬದುಕು ಇತರರನ್ನು ಬದುಕ ಬಿಡು’ ( live and let live)ಎನ್ನುವ ಬಸವಣ್ಣನವರ ಮಾನವ ಧರ್ಮದ ಔನ್ನತ್ಯ ಹೇಗೆ ಅರ್ಥವಾಗುತ್ತದೆ ಬಡ ಮುಸ್ಲಿಂ ವ್ಯಾಪಾರಿಗಳ ಹೊಟ್ಟೆಬಟ್ಟೆಗಳೊಂದಿಗೆ ಆಟ ಆಡುವವರನ್ನು ಕಂಡೂ ಕಣ್ಮುಚ್ಚಿಕೊಂಡಿರುವ ಮಂದಿಗೆ ?’ ದಯವೇ ಧರ್ಮದ ಮೂಲವಯ್ಯಾ’ ಎಂದರು ಬಸವಣ್ಣನವರು.ಅನ್ಯಧರ್ಮೀಯರೆಂದು ನಿರ್ದಯಿಗಳಾಗಿ ವರ್ತಿಸುವವರ ಉದ್ಧಟತನವನ್ನು ಸಹಿಸಿಕೊಂಡಿರುವುದು ಬಸವ ಭಕ್ತರ ಲಕ್ಷಣವೆ ? ‘ಅವರು ಹಿಂದೆ ಹಾಗೆ ಮಾಡಿದ್ದಾರೆ,ಹೀಗೆ ಮಾಡಿದ್ದಾರೆ,ಇಂದು ನಾವು ಮಾಡುತ್ತಿದ್ದೇವೆ’ ಎಂದು ಸಂವಿಧಾನವಿರೋಧಿಯಾಗಿ ಉದ್ಧಟತನದಿಂದ ವರ್ತಿಸುತ್ತ ಹುಂಬಜನಸ್ತೋಮದ ಬೆಂಬಲದೊಂದಿಗೆ ಬೀಗುವವರ ಮುಂದೆ ಬಾಗುವವರಿಗೆ ‘ ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ? ಅವರಿಗಾದ ಆಗೇನು? ತನಗಾದ ಚೇಗೇನು ? ಎನ್ನುವ ಬಸವಣ್ಣನವರ ವಚನ ಅರ್ಥವಾಗುತ್ತದೆಯೆ ?

ಇಂತಹ ಸಾಕಷ್ಟು ವಿರೋಧಾಭಾಸದ, ವೈಪರಿತ್ಯದ ಪ್ರಸಂಗಗಳನ್ನು ಉಲ್ಲೇಖಿಸಿ,ವಿಶ್ಲೇಷಿಸಬಹುದು .ಅದು ಬೇಡವೆನ್ನಿಸಿ ಕೆಲವೇ ಮುಖ್ಯ ಮಾತುಗಳಲ್ಲಿ ಪ್ರಸ್ತಾಪಿಸಿದ್ದೇನೆ ‘ ನಿಷ್ಠೆಗಟ್ಟಿಗರಲ್ಲದ ಬಸವ ಭಕ್ತರ’ ವರ್ತನೆಯನ್ನು.ಬಸವಣ್ಣನವರ ಮಹೋಜ್ವಲ ವ್ಯಕ್ತಿತ್ವವನ್ನು ಇಡಿಯಾಗಿ ಅನುಸರಿಸುವುದಾಗಲಿ,ಬಸವಣ್ಣನವರ ದಿವ್ಯೋಜ್ವಲ ವ್ಯಕ್ತಿತ್ವವನ್ನು ಪೂರ್ಣವಾಗಿ ಅಳವಡಿಸಿಕೊಳ್ಳುವುದಾಗಲಿ ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ನಾನೂ ಬಲ್ಲೆ.ಆದರೆ ಅಷ್ಟಿಷ್ಟು ಆದರೂ ಬಸವಣ್ಣನವರ ತತ್ತ್ವಗಳನ್ನು ಅನುಸರಿಸಬಹುದಲ್ಲ? ತೀರ ಇತ್ತೀಚೆಗೆ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ ಅವರು ‘ ನನ್ನನ್ನೇ ದೇವಸ್ಥಾನಗಳಲ್ಲಿ ಬಿಟ್ಟುಕೊಳ್ಳುವುದಿಲ್ಲ.ಹೊರಗೆ ಮಂಗಳಾರತಿ ತಟ್ಟೆ ತರುತ್ತಾರೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.ಇಪ್ಪತ್ತೊಂದನೆಯ ಶತಮಾನದ ಸರ್ವೋತ್ಕೃಷ್ಟ ಸಂವಿಧಾನವನ್ನು ಹೊಂದಿದ ‘ ಪ್ರಕಾಶಿಸುತ್ತಿರುವ ಭಾರತ’ ದಲ್ಲಿ ಒಬ್ಬ ವಿದ್ಯಾವಂತ ,ಸುಸಂಸ್ಕೃತ ರಾಜಕಾರಣಿ ದಲಿತ ಎನ್ನುವ ಕಾರಣಕ್ಕೆ ಸರಕಾರಿ ಕೃಪಾಪೋಷಿತ ಮುಜರಾಯಿ ದೇವಸ್ಥಾನಗಳಲ್ಲಿಯೇ ಈ ತೆರನಾದ ಅಪಮಾನವನ್ನು ಅನುಭವಿಸಿದ್ದನ್ನು ಹೇಳಿದ್ದರು.ಅದನ್ನು ಕೇಳಿದ ಬಳಿಕವಾದರೂ ಹನ್ನೆರಡನೆಯ ಶತಮಾನದಲ್ಲೇ ‘ ಮಾದಾರ ಚೆನ್ನಯ್ಯ ಅಪ್ಪ,ಡೋಹಾರ ಕಕ್ಕಯ್ಯ ಚಿಕ್ಕಪ್ಪ’ ನೆಂದು ಒಪ್ಪಿ ಅಂತೆಯೇ ನಡೆದ ಬಸವಣ್ಣನವರು ದಲಿತರು,ಅಂತ್ಯಜರಿಗೆಲ್ಲ ಲಿಂಗಧಾರಣೆ ಮಾಡಿದ್ದರು .ಅವರ ಆದರ್ಶದಲ್ಲಿ ನಡೆಯುವ ನಾವು ‘ ದಲಿತರಿಗೆ ಲಿಂಗ ದೀಕ್ಷೆ ಮಾಡಿ,ನಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ ಬನ್ನಿ’ ಎಂದು ಹೇಳುವ ಗಟ್ಟಿಧ್ವನಿ ಬಸವಣ್ಣನವರಲ್ಲಿ ನಿಷ್ಠೆಯನ್ನಿಟ್ಟ ಮಠ ಪೀಠಗಳ ಸ್ವಾಮಿಗಳಿಂದಲೂ ಬರಲಿಲ್ಲವಲ್ಲ !ಸುಮ್ಮನೆ ಬಸವಣ್ಣನವರ ಭಕ್ತರು,ಬಸವ ತತ್ತ್ವ ಪರಿಪಾಲಕರು,ಬಸವಾನುಯಾಯಿಗಳು ಎಂದು ಹೇಳಿಕೊಂಡರೆ ಸಾಲದು,ಕೈಲಾದಷ್ಟು ಬಸವ ತತ್ತ್ವವೆನ್ನುವ ಅಮೃತವನ್ನು ಹಂಚಿಕುಡಿಯಬೇಕು ಸಹಜೀವರುಗಳೊಂದಿಗೆ.

ಮುಕ್ಕಣ್ಣ ಕರಿಗಾರ

02.05.2022

About The Author