ಜಿಲ್ಲೆಯಲ್ಲಿಯೆ ಮೊದಲ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಘಟಕದ ಸ್ಥಳ ಪರಿಶೀಲನೆ :  ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡಿ :  ಬಿ ಎಸ್ ರಾಠೋಡ

ಶಹಾಪೂರ : ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಇತರೆ ಯೋಜನೆಯ ಒಗ್ಗೂಡಿಸಿ ಪ್ರತಿ ತಾಲೂಕಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಘಟಕ ಸ್ಥಾಪನೆ ಮಾಡಲು ಸಗರ ಗ್ರಾಮದಲ್ಲಿ ಸ್ಥಳ ಗುರುತಿಸಲಾಗಿದ್ದು, ಇದು ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲನೇಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಘಟಕವಾಗಿದ್ದು,ಗ್ರಾಮೀಣ ಪ್ರದೇಶದ ಜನರು ನೈರ್ಮಲ್ಯ ಕಾಪಾಡಬೇಕೆಂದು
ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ಬಿ.ಎಸ್ ರಾಠೋಡ ಸಗರ ಗ್ರಾಮದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ತಾಲೂಕಿನ ಸಗರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಸ್ವಚ್ಛ ಸಂಕೀರ್ಣ ಘಟಕದಲ್ಲಿ ತ್ಯಾಜ್ಯ ವಿಂಗಡಣೆಯ ಕಾರ್ಯ ಮತ್ತು ಅದರ ಪಕ್ಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲು ಗುರುತಿಸಿರುವ ಸ್ಥಳ ವೀಕ್ಷಣೆ ಮಾಡಿ ಮಾತನಾಡಿದರು.
ಸ್ವಚ್ಛ ಸಂಕೀರ್ಣ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಘಟಕ  ನಿರ್ಮಿಸಲು ಗುರುತಿಸಿರುವ ಜಮೀನಿನಲ್ಲಿ ಸ್ವಚ್ಛತೆ ಮಾಡಿ ಬೇಕಾಗಿರುವ ಇತರೆ ಕಾಮಗಾರಿಗಳನ್ನು ಅನುಷ್ಠಾನಕ್ಕಾಗಿ ಮಾರ್ಗಸೂಚಿಯನುಸಾರ ಇತರೆ ಯೋಜನೆಗಳನ್ನು ಒಗ್ಗೂಡಿಸುವಿಕೆ,  ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲು ಸೂಚನೆ ನೀಡಿ, ಘಟಕಗಳ‌ದ ಬಗ್ಗೆ ಸಂಪೂರ್ಣ ಮಾಹಿತಿ ಕುರಿತು ಗ್ರಾಪಂ. ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಘಟಕ ಸ್ಥಾಪನೆಯಿಂದ ಗ್ರಾಮ ಪಂಚಾಯತಿಯಲ್ಲಿರುವ ಸ್ವಚ್ಛ ವಾಹಿನಿಯ ಘಟಕದಲ್ಲಿ ಸಂಗ್ರಹಣೆ ಮಾಡುವ ಕಚ್ಛಾವಸ್ತುಗಳ  ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ಘಟಕದಲ್ಲಿ ತಂದು ಶೇಖರಿಸಲು ಅನುಕೂಲವಾಗುತ್ತದೆ ಎಂದರು.
 ಮರುಬಳಕೆಯಾಗುವ ಕಚ್ಛಾವಸ್ತುಗಳನ್ನು ಉತ್ಫಾದನೆಯ ಘಟಕಕ್ಕೆ   ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕರಗಿಸಲು ಸಮೀಪದ ಸೀಮೆಂಟ್ ಕಾರ್ಖಾನೆಗೆ ಕಳುಯಿಸುವ ಉದ್ದೇಶ ಹೊಂದಿದೆ.ಗ್ರಾಮದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಂದಾಗುವ ಪರಿಣಾಮ  ಕುರಿತು ಸಾರ್ವಜನಿಕರಿಗೆ, ಅಂಗಡಿ, ಹೋಟಲ್ ಮಾಲೀಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ಸಾರ್ವಜನಿಕ ಸ್ಥಳದಲ್ಲಿ ಕಸಹಾಕುವುದನ್ನು ತಡೆಯಲು ಗ್ರಾಮಸ್ಥರಿಗೆ ಅರಿವು ಮೂಡಿಸಿಬೇಕು, ಗ್ರಾಮದಲ್ಲಿ ಚರಂಡಿ ಸ್ವಚ್ಛವಾಗಿಡುವಂತೆ ನೋಡಿಕೊಳ್ಳಬೇಕು.ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ತ್ವರಿವಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೆದಾರ, ಸಹಾಯಕ ನಿರ್ದೇಶಕರಾದ ಭಿಮಣ್ಣಗೌಡ ಬಿರೆದಾರ,
ಸ್ವ.ಭಾ.ಮಿ ಸಮಾಲೋಚಕರಾದ ಶ್ರೀ ವೆಂಕಟೆಶ, ಶಿವಕುಮಾರ ಸೇರಿದಂತೆ ಇಲಾಖಾ ಅಧಿಕಾರಿಗಳು ಇದ್ದರು.

About The Author