ಮಹಾಶೈವ ಧರ್ಮಪೀಠದ ಶ್ರೇಯೋಕಾಂಕ್ಷಿಗಳಾದ ಪೂಜ್ಯ ಶ್ರೀ ಗಿರಿಮಲ್ಲದೇವರು ಭೇಟಿ ನೀಡಿದರಿಂದು ಶ್ರೀಕ್ಷೇತ್ರ ಕೈಲಾಸಕ್ಕೆ:ಮುಕ್ಕಣ್ಣ ಕರಿಗಾರ

ರಾಯಚೂರು ಜಿಲ್ಲೆಯ ‘ಪ್ರಗತಿಪರಸ್ವಾಮೀಜಿ’ ಎಂದೇ ಹೆಸರಾದ ಪೂಜ್ಯ ಶ್ರೀ ಗಿರಿಮಲ್ಲದೇವರು ಅವರು ಇಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ್ದರು.ಇದರಲ್ಲಿ ಏನು ವಿಶೇಷ ಅನ್ನಿಸಬಹುದಲ್ಲವೆ ? ಹೌದು,ಅದರಲ್ಲಿ ಒಂದು ವಿಶೇಷವಿದೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾದ ನನ್ನ ಅನುಪಸ್ಥಿತಿಯಲ್ಲಿ ಅವರಿಂದು ನಮ್ಮ ಮಠಕ್ಕೆ ಆಗಮಿಸಿ ಮಹಾಶೈವ ಧರ್ಮಪೀಠದ ಮೇಲಣ ತಮ್ಮ ಪ್ರೀತಿ,ವಿಶ್ವಾಸ,ಅಭಿಮಾನಗಳನ್ನು ಮೆರೆದಿದ್ದಾರೆ.ಮೊದಲಿನಿಂದಲೂ ಮಹಾಶೈವ ಧರ್ಮಪೀಠದೊಂದಿಗೆ ನಿಕಟ ಮತ್ತು ಆತ್ಮೀಯ ಸಂಬಂಧ ಹೊಂದಿರುವ ದೇವರಗುಡ್ಡದ ಅಮಾತೇಶ್ವರ ಮಠ ಹಾಗೂ ಹತ್ತಿಗೂಡೂರಿನ ತಪೋವನ ಮಠದ ಪೀಠಾಧಿಪತಿಗಳಾಗಿರುವ ಶ್ರೀ ಗಿರಿಮಲ್ಲದೇವರು ಸ್ವಾಮಿಗಳು ಒಬ್ಬರೇ ಮಹಾಶೈವ ಧರ್ಮಪೀಠಕ್ಕೆ ಆಗಮಿಸುವ ಸ್ವಾಮಿಗಳು! ಬೇರೆ ಮಠ- ಪೀಠಗಳ ಸ್ವಾಮಿಗಳು,ಪೀಠಾಧಿಪತಿಗಳಿಗೆ ಅವಕಾಶವಿಲ್ಲ ನಮ್ಮ ಮಠದಲ್ಲಿ.ರಾಜಕಾರಣಿಗಳು ಮತ್ತು ಕಾವಿಧಾರಿಗಳನ್ನು ನಮ್ಮ ಮಠಕ್ಕೆ ಪೂಜ್ಯರನ್ನಾಗಿ ಇಲ್ಲವೆ ಅತಿಥಿಗಳನ್ನಾಗಿ ಕರೆಯುವುದಿಲ್ಲ ಜಗನ್ಮಾತಾಪಿತರುಗಳಾದ ಶಿವ ದುರ್ಗಾದೇವಿಯರು ಅಲ್ಲಿ ದಿವ್ಯಸಾನ್ನಿಧ್ಯ ಪ್ರಕಟಿಸಿರುವುದರಿಂದ.ಮಹಾಶೈವ ಧರ್ಮಪೀಠದ ಪ್ರಾರಂಭದ ವರ್ಷಗಳಲ್ಲಿ ಒಂದೆರಡು ಬಾರಿ ಮಾತ್ರ ರಾಜಕಾರಣಿಗಳನ್ನು ಕರೆದು ಸತ್ಕರಿಸಲಾಗಿತ್ತು.ಮಹಾಶೈವ ಧರ್ಮಪೀಠಕ್ಕೆ ರಾಜಕಾರಣಿಗಳು ಭಕ್ತರಾಗಿ ಬರಬೇಕೇ ಹೊರತು ಹುಸಿ ಪ್ರತಿಷ್ಠೆಯೊಂದಿಗೆ ಬರಲು ಅವಕಾಶವಿಲ್ಲ.ಮಹಾಶೈವ ಧರ್ಮಪೀಠವು ರಾಜಕಾರಣಿಗಳಿಗೆ ಭವಿಷ್ಯವನ್ನು ಅನುಗ್ರಹಿಸುತ್ತದೆಯಾಗಲಿ ಯಾವುದೇ ರಾಜಕಾರಣಿಯಿಂದ ಏನನ್ನೂ ನಿರೀಕ್ಷಿಸುವುದಿಲ್ಲ.ಸರಕಾರದ ಅನುದಾನವನ್ನು ಪಡೆಯದ ರಾಜ್ಯದ ಕೆಲವೇ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ಮಹಾಶೈವ ಧರ್ಮಪೀಠವೂ ಒಂದು.ಮಹಾಶೈವ ಧರ್ಮಪೀಠದ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ಧಕ್ಕೆ ಬಾರದಿರಲಿ ಎನ್ನುವ ಕಾರಣದಿಂದ ಸರಕಾರದ ಅನುದಾನ ಪಡೆಯುವುದಿಲ್ಲ.ಕೇವಲ ಭಕ್ತರ ಕೊಡುಗೆ ಕಾಣಿಕೆಗಳಿಂದ ಮಾತ್ರ ಮಠವನ್ನು ಕಟ್ಟಿ ಮುನ್ನಡೆಸುವ ಸಂಕಲ್ಪ ಮಾಡಲಾಗಿದೆ.

‌ಕಾವಿಧಾರಿಗಳನ್ನು ಕೂಡ ನಮ್ಮ ಮಠಕ್ಕೆ ಆಹ್ವಾನಿಸುವುದಿಲ್ಲ.ಆಧ್ಯಾತ್ಮಿಕ ಸಾಧಕರಲ್ಲದ ಯಾರಿಗೂ ಇಲ್ಲಿ ಗೌರವಾದರಗಳಿಲ್ಲ.ಮಠ ಪೀಠಗಳ ಸ್ವಾಮಿಗಳಾಗಿ,ಸ್ವಯಂಘೋಷಿತ ಬಿರುದು ಬಾವಲಿಗಳಿಂದ ದೊಡ್ಡವರಾಗುವ ಆಧ್ಯಾತ್ಮಶೂನ್ಯರಿಗಿಲ್ಲಿ ಮಾನ್ಯತೆ ಇಲ್ಲ! ಆತ್ಮಜ್ಞಾನವೇ ಇಲ್ಲದ ಉಟ್ಟಬಟ್ಟೆಯಿಂದಲೇ ದೊಡ್ಡವರು ಆದೆವು ಎಂದು ಭ್ರಮಿಸುವವರಿಗೆ ‘” ಮಾತನಾಡುವ ಮಹಾದೇವ” ಶಿವನ ಸನ್ನಿಧಿಗೆಂತು ಸಿಗುತ್ತದೆ ಪ್ರವೇಶಾರ್ಹತೆ ? ಆತ್ಮನಪರಿ ಎಂತು ಎಂದರಿಯದವರಿಗೆ ಶಿವಾದ್ವೈತ ರುಚಿಸುವುದೆಂತು ? ಆದರೆ ಗಿರಿಮಲ್ಲದೇವರು ಅವರು ಇತರ ಕಾವಿಧಾರಿಗಳಂತಲ್ಲದೆ ನಿತ್ಯ ಶಿವಯೋಗಾನುಷ್ಠಾನದ ಜೊತೆಗೆ ಯೋಗಾಭ್ಯಾಸ ಮಾಡುತ್ತಿರುವ ಅಪರೂಪದ ಸ್ವಾಮಿಗಳಾಗಿದ್ದರಿಂದ ಅವರಿಗೆ ಮಹಾಶೈವ ಧರ್ಮಪೀಠದೊಂದಿಗೆ ಆತ್ಮೀಯ ಸಂಬಂಧವಿದೆ.ಮಹಾಶೈವ ಧರ್ಮಪೀಠದ ಧಾರ್ಮಿಕ ಕಾರ್ಯಕ್ರಮ,ಚಟುವಟಿಕೆಗಳಲ್ಲಿ ಆಹ್ವಾನ ನಿರೀಕ್ಷಿಸದೆಯೂ ಪಾಲ್ಗೊಂಡು ಔದಾರ್ಯ ಮತ್ತು ಉನ್ನತಿಕೆ ಮೆರೆಯುತ್ತಾರೆ.ಪ್ರತಿವರ್ಷ ನನ್ನ ಶರನ್ನವರಾತ್ರಿ ಅನುಷ್ಠಾನ ಮಂಗಳವಾದೊಡನೆ ತಮ್ಮ ಶಿಷ್ಯಗಣ ಸಮೇತರಾಗಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ನನ್ನನ್ನು ಸನ್ಮಾನಿಸಿ ಗೌರವಿಸಿತ್ತಾರೆ.ಆಧ್ಯಾತ್ಮಿಕ ಸಾಧನೆಯಲ್ಲಿ ಯಾವುದೇ ಸಂದೇಹ,ಸಮಸ್ಯೆ ತಲೆದೋರಿದಲ್ಲಿ ನನ್ನೊಂದಿಗೆ ಚರ್ಚಿಸುತ್ತಾರೆ. ಅವರ ಮಠದ ಶಿಷ್ಯರಲ್ಲಿ ಯಾರಿಗಾದರೂ ತೀವ್ರ ಅನಾರೋಗ್ಯ ಇಲ್ಲವೆ ಮತ್ತಿತರ ಸಮಸ್ಯೆಗಳಿದ್ದರೆ ಅಂತಹವರನ್ನು ಮಹಾಶೈವ ಧರ್ಮಪೀಠಕ್ಕೆ ಕಳುಹಿಸುತ್ತಾರೆ.ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿಯೂ ಸರಳ,ಸಜ್ಜನಿಕೆಯ ವ್ಯಕ್ತಿತ್ವದ ಸ್ವಾಮೀಜಿಗಳು ಎಂದೆನಿಸಿಕೊಂಡಿದ್ದಾರೆ ಗಿರಿಮಲ್ಲದೇವರು ಸ್ವಾಮಿಗಳು.ಸಾಂಪ್ರದಾಯಿಕ ಮಠಪರಂಪರೆಯ ಪೂಜಾದಿ ಆಚಾರ ನಿಷ್ಠರಾಗಿಯೂ ಬಸವ ಪರಂಪರೆ,ಮುಕ್ತ ಆಧ್ಯಾತ್ಮಿಕತೆಯನ್ನು ಬೆಂಬಲಿಸುವ ಸ್ವಾಮಿಗಳಾಗಿದ್ದಾರೆ ಗಿರಿಮಲ್ಲದೇವರು.ಹಾಗಾಗಿ ಅವರಿಗೆ ಮಹಾಶೈವ ಧರ್ಮಪೀಠದಲ್ಲಿ ಸದಾ ಸ್ವಾಗತವಿರುತ್ತದೆ.

ಮೊನ್ನೆಯ ಅಕ್ಷಯತದಿಗೆ ಅಮವಾಸೆ ಮತ್ತು ನಿನ್ನೆ ರವಿವಾರದಂದು ಮಹಾಶೈವ ಧರ್ಮಪೀಠದ ಭಕ್ತಾದಿಗಳ ಸಂಕಷ್ಟಗಳನ್ನು ಆಲಿಸಲು ನಾನು ಶ್ರೀಕ್ಷೇತ್ರ ಕೈಲಾಸದಲ್ಲಿದ್ದೆ.ಇಂದು ಬೆಳಿಗ್ಗೆಯಷ್ಟೇ ಪ್ರಯಾಣಕೈಗೊಂಡಿದ್ದೆ.ನಾನು ಇದ್ದರೂ ಸರಿ ಇರದಿದ್ದರೂ ಸರಿ ಎಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ ಗಿರಿಮಲ್ಲದೇವರು ಸ್ವಾಮೀಜಿಯವರು ಶ್ರೀಕ್ಷೇತ್ರ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರಿಗೆ ಪೂಜೆ ಸಲ್ಲಿಸಿ, ವಾಟ್ಸಾಪ್ ನಲ್ಲಿ ಫೋಟೋ ಕಳಿಸಿದಾಗಲೇ ನನಗೆ ಗೊತ್ತಾಗಿದ್ದು ಅವರು ಅಲ್ಲಿಗೆ ಬಂದಿದ್ದು.ಗಿರಿಮಲ್ಲದೇವರು ಸ್ವಾಮಿಗಳವರು ಮಹಾಶೈವ ಧರ್ಮಪೀಠದ ಬಗೆಗೆ ಹೊಂದಿರುವ ಕಾಳಜಿ- ಕಳಕಳಿಗಳ ಔದಾರ್ಯಕ್ಕೆ ಶರಣುಗಳನ್ನು ಸಮರ್ಪಿಸುತ್ತ ಶ್ರೀಕ್ಷೇತ್ರ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರಲ್ಲಿ ಅವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವೆ.

‌ 02.05.2022

About The Author