ಕುಮಾರಸ್ವಾಮಿಯವರು ದೀಪಾಲಂಕಾರಕ್ಕೆ ಅನಧಿಕೃತ ವಿದ್ಯುತ್ ಪಡೆದದ್ದು ತಪ್ಪು; ಕಾಂಗ್ರೆಸ್ ನಡೆಯೂ ಸರಿಯಲ್ಲ !

ಕರುನಾಡು ವಾಣಿ (ಮೂರನೇ ಕಣ್ಣು)-15-11-2023

ಕುಮಾರಸ್ವಾಮಿಯವರು ದೀಪಾಲಂಕಾರಕ್ಕೆ ಅನಧಿಕೃತ ವಿದ್ಯುತ್ ಪಡೆದದ್ದು ತಪ್ಪು; ಕಾಂಗ್ರೆಸ್ ನಡೆಯೂ ಸರಿಯಲ್ಲ ! : ಮುಕ್ಕಣ್ಣ ಕರಿಗಾರ

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಜೆಪಿನಗರದ ನಿವಾಸಕ್ಕೆ ದೀಪಾವಳಿಯ ಹಬ್ಬದ ದೀಪಾಲಂಕಾರಕ್ಕೆ ವಿದ್ಯುತ್ ಕಂಬದಿಂದ ನೇರವಾಗಿ ವಿದ್ಯುತ್ ಪಡೆದ ವಿಷಯ ಈಗ ರಾಜ್ಯದಾದ್ಯಂತ ಚರ್ಚೆಯ ವಿಷಯವಾಗಿದೆ.ಎಚ್ ಡಿ ಕುಮಾರಸ್ವಾಮಿಯವರು ‘ ದೀಪಾಲಂಕಾರಕ್ಕೆ ಖಾಸಗಿ ಡೆಕೋರೇಟರ್ ಒಬ್ಬರಿಗೆ ವಹಿಸಿಕೊಡಲಾಗಿದ್ದು ಅವರು ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ದೀಪಾಲಂಕಾರ ಮಾಡಿದ್ದಾರೆ.ಆ ದಿನ ನಾನು ಬಿಡದಿಯ ತೋಟದ ಮನೆಯಲ್ಲಿದ್ದೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.ಕುಮಾರಸ್ವಾಮಿಯವರು ಏನೇ ಸ್ಪಷ್ಟೀಕರಣ ನೀಡಲಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದದ್ದು ತಪ್ಪು.ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ನಾಡಿನ ಜನತೆಗೆ ನಡೆ ನುಡಿಗಳಿಂದ ಆದರ್ಶರಾಗಿರಬೇಕಾಗಿದ್ದ ಜವಾಬ್ದಾರಿಯುತ ವ್ಯಕ್ತಿ ಕುಮಾರಸ್ವಾಮಿಯವರು.ಸಣ್ಣವಿಷಯಕ್ಕೆ ಕುಮಾರಸ್ವಾಮಿಯವರು ಮುಜುಗರಕ್ಕೆ ಈಡಾಗುವಂತೆ ಆಗಿದೆ.ಈ ಅನಧಿಕೃತ ವಿದ್ಯುತ್ ಸಂಪರ್ಕ ಪ್ರಕರಣವು ಜನರು ಕುಮಾರಸ್ವಾಮಿಯವರ ಬಗ್ಗೆ ಹಗುರವಾಗಿ ಮಾತನಾಡಲು ಕಾರಣವಾಗಿದೆ.

ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ಕುಮಾರಸ್ವಾಮಿಯವರ ವಿರುದ್ಧದ ರಾಜಕೀಯ ಅಸ್ತ್ರವನ್ನಾಗಿ ತೆಗೆದುಕೊಂಡು ಮಾಜಿ ಮುಖ್ಯಮಂತ್ರಿಯವರ ತೇಜೋವಧೆಗೆ ಇಳಿದಿದೆ.ಕುಮಾರಸ್ವಾಮಿಯವರ ಈ ವರ್ತನೆಯನ್ನು ಯಾರೂ ಸಮರ್ಥಿಸಲಾರರು.ಕಾಂಗ್ರೆಸ್ ಪಕ್ಷವು ಅದನ್ನು ಬೇಕಿದ್ದರೆ ಸಾರ್ವಜನಿಕರ ಮುಂದೆ ಇಡಲಿ.ಆದರೆ ಜೆಡಿಎಸ್ ಕಛೇರಿಗೆ ‘ ವಿದ್ಯುತ್ ಕಳ್ಳ’ ಎಂದು ಬೋರ್ಡ್ ಅಂಟಿಸಿದ್ದು ಸರಿಯಲ್ಲ.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಈ ನಡೆಯನ್ನು ಆ ಪಕ್ಷದ ಮುಖಂಡರುಗಳು ತಡೆಹಿಡಿಯಬೇಕಿತ್ತು.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಕಛೇರಿ ಮತ್ತಿತರ ಕಡೆ’ ಕುಮಾರಸ್ವಾಮಿ ವಿದ್ಯುತ್ ಕಳ್ಳ’ ‘ ಎರಡು ನೂರು ಯುನಿಟ್ ವಿದ್ಯುತ್ ಫ್ರೀ’ ಎಂಬಂತಹ ಬೋರ್ಡ್ ಗಳನ್ನು ಅಂಟಿಸಿದ್ದು ಆ ಪಕ್ಷದ ಕಾರ್ಯಕರ್ತರ ದುರ್ನಡತೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯನ್ನು ಕಳ್ಳ ಎಂದು ಕರೆಯುವುದು ,ಬೋರ್ಡ್ ಅಂಟಿಸುವುದು ಸುಸಂಸ್ಕೃತ ಲಕ್ಷಣವಲ್ಲ.

‌‌‌ಬೆಸ್ಕಾಂನ ವಿಚಕ್ಷಣದಳದ ಅಧಿಕಾರಿಗಳು ಈಗಾಗಲೇ ಕುಮಾರಸ್ವಾಮಿಯವರ ಮನೆಗೆ ಭೇಟಿ ನೀಡಿ,ಅನಧಿಕೃತ ವಿದ್ಯುತ್ ಸಂಪರ್ಕ ಪಡೆದ ಬಗ್ಗೆ ಪೋಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.ಮುಂದಿನದು ಕಾನೂನು ಪ್ರಕ್ರಿಯೆ.ಕುಮಾರಸ್ವಾಮಿಯವರು ಕಳ್ಳರೋ ಅಲ್ಲವೋ ಎನ್ನುವುದನ್ನು ನಿರ್ಧರಿಸುವುದು ಕೋರ್ಟ್,ಕಾಂಗ್ರೆಸ್ ಕಾರ್ಯಕರ್ತರಲ್ಲ.ಕಾನೂನಿನ ವಿಷಯದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಕರಣವನ್ನು ಬೆಸ್ಕಾಂ ಮತ್ತು ಇಂಧನ ಇಲಾಖೆಯ ಗಮನಕ್ಕೆ ತಂದು ಕುಮಾರಸ್ವಾಮಿಯವರ ಈ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಹಂಚಿಕೊಂಡಿದ್ದರೆ ಅದು ಪ್ರಬುದ್ಧನಡೆಯಾಗುತ್ತಿತ್ತು.ಆದರೆ ಮಾಜಿ ಮುಖ್ಯಮಂತ್ರಿ,ಜೆಡಿಎಸ್ ಪಕ್ಷದ ಅಧ್ಯಕ್ಷ ಮತ್ತು ರಾಜ್ಯದ ಪ್ರಭಾವಿ ಮುಖಂಡರಲ್ಲೊಬ್ಬರಾಗಿರುವ ಹೆಚ್.ಡಿ ಕುಮಾರಸ್ವಾಮಿಯವರನ್ನು ‘ ವಿದ್ಯುತ್ ಕಳ್ಳ’ ಎಂದು ಟೀಕಿಸಿ,ಬೋರ್ಡ್ಗಳನ್ನು ಅಂಟಿಸಿದ್ದು ಉತ್ತಮ ನಡೆಯೇನಲ್ಲ.’ ಕಾಂಗ್ರೆಸ್ ಪಕ್ಷದ ಈ ಸಣ್ಣತನದ ಬಗ್ಗೆ ಮರುಕವಿದೆ’ ಎನ್ನುವ ಕುಮಾರಸ್ವಾಮಿಯವರ ಮಾತಿನಲ್ಲಿ ಅರ್ಥವಿದೆ.ಇಂತಹ ಸಣ್ಣವಿಷಯವನ್ನೇ ದೊಡ್ಡ ರಗಳೆಯನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷವು ಸಂಪಾದಿಸುವುದಾದರೂ ಏನನ್ನು ?

About The Author