ಸಗರನಾಡಿನ ಧೀಮಂತ ನಾಯಕ ಬಾಪುಗೌಡ ದರ್ಶನಾಪುರರವರ 35ನೇ ಪುಣ್ಯ ಸ್ಮರಣೆ ದಿನೋತ್ಸವ ನಿಮಿತ್ತ ಈ ಲೇಖನ 

ಯಾದಗಿರಿ : ಕಲ್ಯಾಣ ಕರ್ನಾಟಕದ ಅಭಿವೃದ್ದಿ ಜನಕ ಸಜ್ಜನ ರಾಜಕಾರಣಿ ಹಿಂದುಳಿದ ವರ್ಗಗಳ, ಶೋಷಿತ ಸಮುದಾಯದ ನಾಡಿಮಿಡಿತ ಅರಿತ ದಿ.ಬಾಪುಗೌಡ ದರ್ಶನಾಪುರರ 35ನೇ ಪುಣ್ಯಸ್ಮರಣೆ ಇಂದು ಅವರದೆ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿದೆ.

ಹಿನ್ನೆಲೆ : ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದರ್ಶನಾಪುರ ಗ್ರಾಮದಲ್ಲಿ ಜನಸಿದ ಬಾಪುಗೌಡರು,ಜನಸಾಮಾನ್ಯರ ನಡುವೆ ಬಾಳಿಬದುಕಿದವರು.ಜನಸಾಮಾನ್ಯರ
ಮಾತುಗಳಿಂದ ಅವರ ಬೇಡಿಕೆಗಳಿಗೆ ಸ್ಪಂದನೆಗೆ ಸ್ಪಂದಿಸುತ್ತಿದ್ದರು.ಶಾಸಕರಾದ ನಂತರ ಶಹಾಪುರ ಕ್ಷೇತ್ರದ ಜನರ ನಾಡಿನ ಅಭಿವೃದ್ದಿಗಾಗಿ ಶ್ರಮಿಸಿದರು. ಜನಪರ ನಾಯಕರಾಗಿ ಬೆಳೆದವರು.

ಆರ್ಥಿಕ ಸಂಕಷ್ಟದ ಕಾಲದಲ್ಲಿ ಬಾಪುಗೌಡರು ಮಾಡಿದ ಕ್ಷೇತ್ರದ ಕಾರ್ಯಗಳು ಜಗಜನಿತವಾಗಿವೆ‌.ಗೋಗಿಯಲ್ಲಿ ಅಗ್ರಿಕಲ್ಚರ ಕ್ರೆಡಿಟ್ ಸೂಸೈಟಿ ಸ್ಥಾಪನೆ ಮಾಡುವದರ ಮುಖಾಂತರ ಸೊಸೈಟಿ ಅಧ್ಯಕ್ಷರಾದರು.ಇದರಿಂದ ಅನೇಕ ರೈತರಿಗೆ ವರದಾನವಾಯಿತು.ಅನೇಕ ಗಣ್ಯರ ಒಡನಾಟದಿಂದ ಸಹಕಾರ ಸಂಘ ಸ್ಥಾಪನೆ ಮಾಡಿಕೊಂಡು ೧೯೫೮-೫೯ರಲ್ಲಿ ನಾಯಕತ್ವದ ಸ್ಥಾನಮಾನದತ್ತ ವಾಲಿದರು.ಹಾಲಿನ ಸಹಕಾರ ಸಂಘ. ಮೀನುಗಾರರ ಸಹಕಾರ ಸಂಘ.ಕೋಳಿ ಸಾಕಾಣಿಕೆ ಸಹಕಾರ ಸಂಘ,ಗ್ರಾಹಕ ಸಹಕಾರ ಸಂಘ. ಪ್ರಾಥಮಿಕ ಕೃಷಿ ಹುಟ್ಟುವಳಿ ಸಹಕಾರ ಸಂಘಗಳಿಂದ ವಿವಿಧ ಕಸುಬುದಾರರಿಗೆ ಉಧ್ಯೋಗ ಸೃಷ್ಟಿಸಿಕೊಳ್ಳಲು ಆರ್ಥಿಕ ವ್ಯವಸ್ಥೆಯನ್ನು ಕಲ್ಪಿಸಿದರು.

ಪ್ರಥಮ ಜಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬಾಪುಗೌಡರು
೧೯೬೨ರಲ್ಲಿ ಪ್ರಥಮವಾಗಿ ಅಧ್ಯಕ್ಷರಾದರು.ಬಾಪುಗೌಡರು ನೇಮಕಗೊಂಡು ರೈತಪರ ಯೋಜನೆಗಳನ್ನು ರೂಪಿಸಿಕೊಂಡು ಸಮಪರ್ಕವಾಗಿ ಜಾರಿಗೊಳಿಸವಲ್ಲಿ ಯಶಸ್ವಿಯಾದರು.೧೯೫೨ರಲ್ಲಿ ಕಾಂಗ್ರೆಸ್ ಸಂಘಟಿಸುವಲ್ಲಿ ಬಾಪುಗೌಡರು ಮುಂದಾದರು. ಗೋಗಿಯಿಂದ ಪ್ರಾರಂಭಗೊಂಡ ಅವರ ಪಕ್ಷದ ಸಂಘಟಿತ ಶಕ್ತಿ ೧೯೬೦ರಲ್ಲಿ ತಾಲುಕಾಭಿವೃದ್ದಿ ಬೋರ್ಡಗೆ ಸದಸ್ಯರಾಗಿ ಆಯ್ಕೆಗೊಂಡ ಬಾಪುಗೌಡರು ಪ್ರಥಮ ಅಧ್ಯಕ್ಷರಾದರು.ಗ್ರಾಮೀಣ ರಸ್ತೆಗಳ ಸುಧಾರಣೆ,ಕುಡಿಯುವ ನೀರಿನ ವ್ಯವಸ್ಥೆ, ಆರೋಗ್ಯ ಕೆಂದ್ರಗಳ ಸ್ಥಾಪನೆ, ವಿದ್ಯುತ್ ವ್ಯವಸ್ಥೆ,ಬಸ್ ಸೌಕರ್ಯಗಳು, ವಸತಿ ಶಾಲೆಗಳ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳಿಂದ ಗ್ರಾಮಾಭಿವೃದ್ದಿಗೆ ಮುಂದಾದರು. ೮ ವರ್ಷಗಳ ಕಾಲ ಅಧ್ಯಕ್ಷರಾಗಿ ಪೂರೈಸಿದರು.

೧೯೬೭ ಮೇ ತಿಂಗಳಲ್ಲಿ ಮೊದಲು ಬಾರಿಗೆ ನೂತನ ಶಾಸಕರಾಗಿ ಆಯ್ಕೆಗೊಂಡರು. ಕೃಷ್ಣ ಮೆಲ್ದಂಡೆ ಯೋಜನೆಯನ್ನು ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು. ಅಂದಿನಿಂದ ರಾಜಕೀಯ ಪಯಣದ ಹಾದಿ ಮುಂದುವರೆಯಿತು. ಬಾಪುಗೌಡರು
೧೯೮೩ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಾಲದಲ್ಲಿ ಜನತಾ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದಾಗ ಅಂದು ಶಹಾಪುರ ಕ್ಷೇತ್ರದ ಬಾಪುಗೌಡರನ್ನು ಮುಖ್ಯ ಸಚೇತಕರಾಗಿ ಆಯ್ಕೆಯಾದರು. ೧೯೮೪ರಲ್ಲಿ ಬಾಪುಗೌಡರು ಸಚಿವ ಸಂಪುಟದ ಸಣ್ಣಕೈಗಾರಿಕೆ ಸಚಿವರಾದರು. ೧೯೮೫ರಲ್ಲಿ ಬಾಪುಗೌಡರು ಮತ್ತೆ ಕರ್ನಾಟಕ ಗ್ರಹ ನಿರ್ಮಾಣ ಮಂಡಳಿ ಅಧ್ಯಕ್ಷರಾದರು. ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅನೇಕ ಜನೋಪಯೋಗಿ ಕಾರ್ಯಗಳಾಗಿವೆ.

ಶಹಾಪುರ ತಾಲೂಕಿನ ದರ್ಶನಾಪೂರ ಗ್ರಾಮದ ಕೃಷಿಕ ಸಂಸ್ಕೃತಿಯ ಮನೆತನದ ರಾಯಪ್ಪಗೌಡ ಮತ್ತು ತಿಪ್ಪಮ್ಮಗೌಡ್ತಿ ಎಂಬ ದಂಪತಿಗಳ ಮಗನಾದ ಬಾಪುಗೌಡರು ಶಹಾಪುರ ತಾಲೂಕಿನ ವಿಧಾನಸಭೆ ಸಧಸ್ಯರಾಗಿ, ತಾಲೂಕು ಅಭಿವೃದ್ದಿ ಮಂಡಳಿಯ ಜಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಸರಕಾರದ ಮುಖ್ಯ ಸಚೇತಕರಾಗಿ, ಸಣ್ಣ ಕೈಗಾರಿಕಾ ಸಚಿವರಾಗಿ, ಗೃಹಮಂಡಳಿ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ವಿಧ್ಯಾರ್ಥಿಗಳಿಗೆ ವ್ಯಾಸಂಗದ ಕೊಡುಗೆ ನೀಡಿದರು.

ನಮ್ಮ ಭಾಗದ ರೈತರ ಸಮಸ್ಯೆಗಳು ಅರಿತುಕೊಂಡಿದ್ದ ಅವರು ಸರ್ಕಾರದ ಮಹತ್ವದ ಯೋಜನೆಯಾಗಿದ್ದ ಕೃಷ್ಣ ಮೇಲ್ದಂಡೆ ಯೋಜನೆಯ ಮುಖ್ಯ ಕಛೇರಿಯನ್ನು ಭೀಮರಾಯನಗುಡಿಯಲ್ಲಿ ಪ್ರಾರಂಭಿಸಿದರು. ಕೃಷಿಕ ಚಿಂತಕರಾಗಿದ್ದರು. ಈ ಯೋಜನೆಯ ಮೂಲಕ ಸಗರನಾಡಿಗೆ ನೀರಾವರಿ ಸೌಲಭ್ಯಗಳನ್ನು ನೀಡಿ ಹಸಿರು ಕ್ರಾಂತಿಯ ಹರಿಕಾರರಾದರು.

ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ದರಾಗಿದ್ದ ಬಾಪುಗೌಡರು ದೂರದೃಷ್ಟಿಯುಳ್ಳವರಾಗಿದ್ದು, ಜನಪರ ಕಾಳಜಿಗಳಿಂದ ಹಿಂದುಳಿದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಗ್ರಾಮೀಣ ಜನತೆಗೆ ಉನ್ನತ ಶಿಕ್ಷಣ ದೊರೆಯಬೇಕೆಂಬ ಕನಸಿನೊಂದಿಗೆ ಶಹಾಪುರದಲ್ಲಿ ಚರಬಸವೇಶ್ವರ ವಿಧ್ಯಾವರ್ಧಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಕಿರಿಯ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಚರಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜು, ಚರಬಸವೇಶ್ವರ ಗ್ರಾಮೀಣ ಬಾಲಕಿಯರ ವಿದ್ಯಾರ್ಥಿನಿಲಯ ಮುಂತಾದ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಿದರು. ಬಾಪುಗೌಡರ ನಿಧನದ ನಂತರ ಅವರ ಸಹೋದರ ಬಸವರಾಜಪ್ಪಗೌಡ ದರ್ಶನಾಪೂರ ಮತ್ತು ಶರಣಬಸಪ್ಪಗೌಡ ದರ್ಶನಾಪೂರವರು ದಿ. ಬಾಪುಗೌಡ ದರ್ಶನಾಪೂರ ಅವರ ಹೆಸರಿನಡಿ ಸ್ಮಾರಕ ಮಹಿಳಾ ಪದವಿ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಅವರು ಮಗನಾದ ಶರಣಬಸ್ಸಪ್ಪಗೌಡ ದರ್ಶನಾಪುರ ಅವರು ಪ್ರಸ್ತುತ ತಂದೆಯಂತೆ ಅವರು ಕೂಡ ಸಣ್ಣ ಕೈಗಾರಿಕೆ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author